ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ನಾಶದಿಂದ ಸಂಸ್ಕೃತಿ ಮರೆ

Last Updated 4 ಅಕ್ಟೋಬರ್ 2012, 9:05 IST
ಅಕ್ಷರ ಗಾತ್ರ

ಬೆಳಗಾವಿ: `ಒಂದು ಭಾಷೆಯ ಹಿಂದೆ ಜನರ ಬದುಕು, ಸಂಸ್ಕೃತಿ ಇರುತ್ತದೆ. ಆ ಭಾಷೆಯ ನಾಶದಿಂದ ಒಂದು ಸಂಸ್ಕೃತಿಯೇ ಕಣ್ಮೆಯಾಗುತ್ತದೆ. ಹೀಗಾಗಿ ಕರ್ನಾಟಕದ ಸಂಸ್ಕೃತಿಯ ಉಳಿವಿಗಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ನಗರದ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎರಡು ದಿನಗಳ `ಸೃಜನಾ-2012~ ಕೆಎಲ್‌ಇ ಅಂತರ ಕಾಲೇಜು ಯುವಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಎಲ್ಲ ಭಾಷೆಗಳು ಶ್ರೀಮಂತವಾಗಿದೆ. ಯಾವುದೇ ಭಾಷೆಯನ್ನೂ ದ್ವೇಷಿಸಬಾರದು. ಆದರೆ, ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಭಾಷೆಯ ವಿಷಯದಲ್ಲಿ ಹೊಡೆದಾಡುವಂತೆ ಮಾಡುತ್ತಿದ್ದಾರೆ. ಕರ್ನಾಟಕದ ನೆಲದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಇಂಗ್ಲಿಷ್ ತಿಳಿದಿಲ್ಲ ಎಂದು ವಿದ್ಯಾರ್ಥಿಗಳು ಕೀಳರಿಮೆ ಹೊಂದಬೇಕಾಗಿಲ್ಲ. ಕನ್ನಡ ಭಾಷೆಯಲ್ಲಿನ ವೈವಿಧ್ಯಮಯ ಜನಪದದ ಸೊಗಡನ್ನು ಉಳಿಸಿಕೊಂಡು ಹೋಗಬೇಕಾಗಿದೆ~ ಎಂದು ಹೇಳಿದರು.

`ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡಬೇಕು. ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು~ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಟ ಕೆ.ವಿ. ನಾಗರಾಜಮೂರ್ತಿ, `ಬೆಳಗಾವಿ ಕನ್ನಡಿಗರ ನೆಲೆಬೀಡು. ಇಲ್ಲಿನ ಜನರಿಗೆ ತೊಂದರೆಯಾದರೆ, ನಾವೆಲ್ಲ ಬಂಧುಗಳು ಸೇರಿಕೊಂಡು ಪ್ರತಿಭಟಿಸುತ್ತೇವೆ. ಅದೇ ರೀತಿ ಕಾವೇರಿ ನದಿ ವಿಷಯದಲ್ಲೂ ಈ ಭಾಗದ ಜನರು ಧ್ವನಿ ಎತ್ತಬೇಕು~ ಎಂದರು.

`ಕನ್ನಡದ ಅನ್ನ ತಿನ್ನುತ್ತಿರುವ ನಾವು, ಕನ್ನಡ ಭಾಷೆಯಲ್ಲಿ ಜೋಗುಳ ಕೇಳುತ್ತ ಬೆಳೆದಿದ್ದೇವೆ. ಭಾಷೆಯು ಸಂಸ್ಕೃತಿಯ ಅಭಿವ್ಯಕ್ತಿ~ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ- ಯುಎಸ್‌ಎಂ ವೈದ್ಯಕೀಯ ಕಾರ್ಯಕ್ರಮದ ನಿರ್ದೇಶಕ ಡಾ. ಎಚ್. ಬಿ. ರಾಜಶೇಖರ ವಹಿಸಿದ್ದರು. ಆರ್. ಎಲ್.ಎಸ್. ವಿಜ್ಞಾನ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಪ್ರೊ. ಸಿ.ಎನ್. ನಾಯ್ಕರ ಸ್ವಾಗತಿಸಿದರು. ಪ್ರೊ. ವಿ.ಜಿ. ಅಷ್ಟಗಿ ಅತಿಥಿಗಳನ್ನು ಪರಿಚಯಿಸಿದರು. ಸುಲಕ್ಷಣಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಂಭುಲಿಂಗ ಹಿರೇಮಠ ವಂದಿಸಿದರು. ಎಸ್.ಬಿ. ಬನ್ನಿಮಟ್ಟಿ ಹಾಗೂ ವಿದ್ಯಾಧರ ಸಿಂಗೇರಿ ನಿರೂಪಿಸಿದರು.

ಕೆಎಲ್‌ಇ ಸಂಸ್ಥೆಯ ವಿವಿಧ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎರಡು ದಿನಗಳ ಕಾಲ ನಡೆಯುವ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ, ನಾಟಕ, ಲಲಿತ ಕಲೆಗಳ ಪ್ರದರ್ಶನಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT