ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಸಾಮರ್ಥ್ಯದವರ ಮ್ಯಾರಥಾನ್

Last Updated 23 ಮೇ 2012, 19:30 IST
ಅಕ್ಷರ ಗಾತ್ರ

`ನಾನು ವಿದ್ಯಾ ಎಸ್. ರಾವ್. ಮೊದಲ ಬಾರಿಗೆ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಇದಕ್ಕೆ ಕಾರಣ ಚೆಷೈರ್ ಡಿಸೆಬಿಲಿಟಿ ಟ್ರಸ್ಟ್. ನನಗೆ ಸರಿಯಾಗಿ ನಡೆಯಲು ಆಗುವುದಿಲ್ಲ. ಆದರೆ ಏನಾದರೂ ಮಾಡಬೇಕೆನ್ನುವ ಛಲವಿದೆ.

ನ್ಯೂನತೆಯನ್ನೇ ಸವಾಲಾಗಿಸಿಕೊಂಡು ಸಾಧನೆ ಮಾಡುತ್ತೇನೆ. ಆ ಆತ್ಮವಿಶ್ವಾಸ ನನ್ನಲ್ಲಿದೆ...~ ಹೀಗೆ ಮಾತನಾಡುತ್ತಾ ಸಾಗಿದ ಅವರ ಕಣ್ಣಂಚಿನಲಿ ಆತ್ಮವಿಶ್ವಾಸದ ಮಿಂಚು.

ಟಿಸಿಎಸ್ ವರ್ಲ್ಡ್ 10 ಕೆ ಮಜಾ ರನ್‌ನಲ್ಲಿ ಭಾಗವಹಿಸಲು ಸಜ್ಜಾಗಿ ಬಂದವರ ಸಾಲಿನ ನಡುವೆ ಇದ್ದವರು ವಿದ್ಯಾ. ಮೇ 27 ಭಾನುವಾರ ನಡೆಯಲಿರುವ ಈ ಮ್ಯಾರಥಾನ್ ಆಯೋಜಿಸಿರುವುದು ಚೆಷೈರ್ ಡಿಸೆಬಿಲಿಟಿ ಟ್ರಸ್ಟ್. `ಟೀಮ್ ರನ್ ಎಬಿಲಿಟಿ~ ಎಂದು ಕರೆಯಲಾಗುವ ಈ ಮ್ಯಾರಥಾನ್‌ನಲ್ಲಿ ಐವತ್ತು ಮಂದಿ ಓಡುತ್ತಿದ್ದು, ಅವರಲ್ಲಿ ಬಹಳ ಮಂದಿ ಅಂಗವಿಕಲರು. ಇದರ ಉದ್ದೇಶ `ಅಂಗವಿಕಲರಿಗೆ ಸಮಾನ ಅವಕಾಶಗಳು~ ಎಂಬ ಸಂದೇಶ ಸಾರುವುದು.

ಬ್ರಿಟನ್ ಚೆಷೈರ್ ನಟಿ ಆಯೇಷಾ ಅಲಿ ಈ ಟ್ರಸ್ಟ್‌ನ ನೆರವಿಗೆ ನಿಂತಿದ್ದಾರೆ. `ನಾನು ಹದಿನಾಲ್ಕನೇ ವಯಸ್ಸಿನಲ್ಲಿರುವಾಗ ನನ್ನಣ್ಣ ಲ್ಯುಕೇಮಿಯಾದಿಂದ ಬಳಲುತ್ತಿದ್ದ. ಅವನ ಜೀವ ಉಳಿಸಿದ್ದಕ್ಕಾಗಿ ನನಗೆ ಹೌಸ್ ಆಫ್ ಕಾಮನ್ಸ್‌ನಿಂದ ಪ್ರಶಸ್ತಿಯೂ ದೊರಕಿತು.

ಆದರೆ ಆ ಘಟನೆ ಮಾತ್ರ ನನ್ನ ಮನಸ್ಸನ್ನು ಕಲಕಿ ಬದಲಾವಣೆ ತಂದಿತು. ದುರ್ಬಲರ ಬಗ್ಗೆ ಸ್ಪಂದಿಸುವ ಮನೋಭಾವ ನನ್ನಲ್ಲಿ ಬೆಳೆಯಿತು~ ಎನ್ನುವ ಆಯೇಷಾ ಅಲಿ ಕಳೆದ ಎರಡು ವರ್ಷದಿಂದ ಬೆಂಗಳೂರಿನಲ್ಲಿಯೇ ವಾಸವಿದ್ದಾರೆ. ಇಲ್ಲಿರುವ ಮಾಲ್‌ಗೆ ಆಗಾಗ ಭೇಟಿ ನೀಡುವ ಅವರಿಗೆ ಕನ್ನಡ ಚಿತ್ರದ್ಲ್ಲಲಿ ಅವಕಾಶ ಸಿಕ್ಕರೆ ಅಭಿನಯಿಸುವ ಆಸೆ ಇದೆ.

`ನನಗೆ ದೃಷ್ಟಿ ಸಮಸ್ಯೆಯಿದೆ. ಎಲ್‌ಡಿಟಿಯ ಪ್ರಾಜೆಕ್ಟ್ ಯಂಗ್ ವಾಯ್ಸಸ್ ಅಡ್ವೋಕಸಿಯ ಸಂಯೋಜಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಮ್ಯಾರಥಾನ್‌ನಲ್ಲಿ ನಾನು ಭಾಗವಹಿಸುತ್ತೇನೆ. ಗೆಲ್ಲುವುದು, ಸೋಲುವುದು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ನಮಗೂ ಮನಸ್ಸಿದೆ, ಆಸೆಯಿದೆ. ಸಮಸ್ಯೆ ಕೆಲವರಿಗೆ ಬೇರೆ ರೀತಿ ಇದ್ದರೆ ನಮಗೆ ಈ ನ್ಯೂನತೆಗಳ ಮೂಲಕ ಬಂದಿದೆ. ಆದರೆ ನಾನು ಎದೆಗುಂದಲಿಲ್ಲ~ ಎಂದು ಆಶಾವಾದಿಯಾಗಿ ಮಾತನಾಡಿದವರು ಗಿರೀಶ್.

ಎಲ್ಲರಿಗೂ ಸಲ್ಲಬೇಕಾದ ಗೌರವ ಸಿಕ್ಕರೆ ಮಾತ್ರ ಅದು ಉತ್ತಮ ಸಮಾಜವಾಗುತ್ತದೆ ಎಂದು ಸಂದೇಶದ ಧಾಟಿಯ ಮಾತನ್ನಾಡಿದವರು ಅಮೆರಿಕಾದ ಕಲಿನರಿ ಇನ್ಸ್‌ಟಿಟ್ಟೂಟ್ ಆಫ್ ಅಮೆರಿಕಾದ ಪದವೀಧರ ಅಲೆಕ್ಸ್. ಮೇ 27ರಂದು ದೈಹಿಕ ಸಮಸ್ಯೆ ಇದ್ದರೂ ಓಟದ ಮೂಲಕ ತಮ್ಮ ಪ್ರತಿಭೆಯನ್ನು ಒರೆಗೆಹಚ್ಚಿಕೊಳ್ಳಲು ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಅವರ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT