ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಮತ ಪ್ರದರ್ಶನಕ್ಕೆ ಸಜ್ಜು

Last Updated 13 ಸೆಪ್ಟೆಂಬರ್ 2011, 8:35 IST
ಅಕ್ಷರ ಗಾತ್ರ

ಮಾನ್ವಿ: ಬಿಜೆಪಿಯ ತಾಲ್ಲೂಕು ಘಟಕಕ್ಕೆ ನೂತನ ಅಧ್ಯಕ್ಷರ ನೇಮಕವಾದ ನಂತರ ಬಹಿರಂಗಗೊಂಡಿದ್ದ ಮುಖಂಡರ ಭಿನ್ನಮತ  ತಾರಕಕ್ಕೇರಿದ್ದು ಸೆ.13 ಮಂಗಳವಾರದಂದು ಎರಡು ಬಣಗಳ ಮುಖಂಡರು ಪ್ರತ್ಯೇಕವಾಗಿ ಬಹಿರಂಗ ಸಭೆ ಆಯೋಜಿಸುವ ಮೂಲಕ  ಪರಸ್ಪರ ಶಕ್ತಿ ಪ್ರದರ್ಶನಕ್ಕೆ ಸಿದ್ದಗೊಂಡಿದ್ದಾರೆ.

ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡಿದ್ದ ಅಮರೇಶ ಹೊಸಮನಿ ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಸಹಕಾರಿ ಧುರೀಣ ಮಲ್ಲನಗೌಡ ನಕ್ಕುಂದಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಇದಕ್ಕೆ ಅಂದಿನ ಅಧ್ಯಕ್ಷ ಶೇಷರೆಡ್ಡಿ ಕವಿತಾಳ ಸೇರಿದಂತೆ ಹಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕೆಲವು ದಿನಗಳ ಹಿಂದೆ ಶೇಷರೆಡ್ಡಿ ಮತ್ತವರ ಬೆಂಬಲಿಗರು ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಿ ವರಿಷ್ಠರಿಗೆ ಎಚ್ಚರಿಕೆ ಸಂದೇಶ ಕೂಡ ನೀಡಿದ್ದರು. ಈ ಸಭೆಯಲ್ಲಿ ಶೇಷರೆಡ್ಡಿ ತಾಲ್ಲೂಕಿನ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸ್ವಯಂ ತೀರ್ಮಾನ ಕೈಗೊಂಡು ಬಿಜೆಪಿ ವರಿಷ್ಠರ ತೀರ್ಮಾನಕ್ಕೆ ಸವಾಲು ಹಾಕಿದ್ದರು.

ಏತನ್ಮಧ್ಯೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ನಕ್ಕುಂದಿ ಮಂಗಳವಾರ ಮಾನ್ವಿ ಪಟ್ಟಣದ ಶಾದಿಮಹಲ್‌ನಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ಎಂಬಂತೆ ಅದೇ ದಿನ ಶೇಷರೆಡ್ಡಿ ಕವಿತಾಳ ತಾವೇ ಬಿಜೆಪಿ ಅಧ್ಯಕ್ಷ ಎಂದು ಮಂಗಳವಾರ ತಾಲ್ಲೂಕಿನ ಸಿರವಾರದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿರುವ ಬಗ್ಗೆ ಪ್ರಕಟಣೆ ನೀಡಿದ್ದಾರೆ. ಸೆ.17ರಂದು ದೇವದುರ್ಗಕ್ಕೆ ಮುಖ್ಯಮಂತ್ರಿ ಸದಾನಂದಗೌಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪೂರ್ವಬಾವಿ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ. ಆದರೆ ಸದರಿ ಸಭೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಒಂದೇ ದಿನ ಎರಡು ಬಣಗಳು ಸಭೆ ನಡೆಸುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮಲ್ಲನಗೌಡ ನಕ್ಕುಂದಿ ಬಣಕ್ಕೆ ಮಾಜಿ ಶಾಸಕ ಗಂಗಾಧರ ನಾಯಕ ಹಾಗೂ ಶೇಷರೆಡ್ಡಿ ಬಣಕ್ಕೆ ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ ಬೆಂಬಲ ನೀಡುತ್ತಿರುವುದೇ ಈ  ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣ ಎನ್ನುವುದು ಬಿಜೆಪಿಯ ನಿಷ್ಠಾವಂತ  ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಮಂಗಳವಾರದಂದು ನಡೆಯಲಿರುವ ಎರಡು ಬಜೆಪಿ ಸಭೆಗಳ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಅಮರೇಶ ಹೊಸಮನಿ. ಶೇಷರೆಡ್ಡಿ ರಾಜೀನಾಮೆ ನೀಡಿದ ನಂತರ ಮಲ್ಲನಗೌಡ ನಕ್ಕುಂದಿ ಅವರನ್ನು ನೇಮಕ ಮಾಡಲಾಗಿದೆ. ಮಲ್ಲನಗೌಡ  ಬಿಜೆಪಿಯ ಅಧಿಕೃತ ತಾಲ್ಲೂಕು ಅಧ್ಯಕ್ಷ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಿರವಾರದಲ್ಲಿ ಆಯೋಜಿಸಿರುವ ಸಭೆ ಅನಧಿಕೃತ. ಮಾನ್ವಿಯಲ್ಲಿ ನಡೆಯುತ್ತಿರುವುದು ಬಿಜೆಪಿಯ ಅಧಿಕೃತ ಸಭೆಯಾಗಿದೆ. ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ಸಭೆಗೆ ಆಗಮಿಸಬೇಕು ಎಂದು ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ನಕ್ಕುಂದಿ ಕೋರಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮುಖಂಡರ ಧೋರಣೆಯನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು ಮಂಗಳವಾರದ ನಂತರ ಕಠಿಣ ಕ್ರಮಗಳನ್ನು ಜರುಗಿಸುವ ಸಂಭವ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT