ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಮಾಪಕರ ಮುಷ್ಕರ: ಜನರ ಪರದಾಟ

Last Updated 2 ಅಕ್ಟೋಬರ್ 2012, 4:25 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಪರವಾನಗಿ ಭೂ ಮಾಪಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಭೂ ಮಾಪಕರು ನಡೆಸುತ್ತಿರುವ ಮುಷ್ಕರದಿಂದಾಗಿ ರೈತರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ದಾಖಲೆಗಳು ಲಭ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ನೊಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾನ ಪತ್ರ, ಕ್ರಯ ಪತ್ರ, ವಿಭಾಗ ಪತ್ರ ಸೇರಿದಂತೆ ಮತ್ತಿತರ ದಾಖಲಾತಿಗಳ ನೋಂದಣಿಗಾಗಿ `11 ಇ~ ನಕ್ಷೆ ಅತ್ಯವಶ್ಯಕವಾಗಿ ಬೇಕಾಗಿದೆ. ಭೂ ಮಾಪಕರ ಪ್ರತಿಭಟನೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸಮಸ್ಯೆ ಬಗೆಹರಿಯದೆ ತಮಗೆ ಬೇಕಾದ ದಾಖಲಾತಿಗಳು ಸಿಗದೆ ಅನಗತ್ಯವಾಗಿ ಕಿರುಕುಳ ಅನುಭವಿಸುವಂತಾಗಿದೆ ಎಂದು ರೈತರು ತಮ್ಮ ಅಳಲು  ತೋಡಿಕೊಂಡಿದ್ದಾರೆ.

ಜಿಲ್ಲಾ ಭೂದಾಖಲೆಗಳ ಉಪ ನಿರ್ದೇಶಕ ವೇಣುಗೋಪಾಲ್ ಜಿಲ್ಲೆಯ ಬಹುತೇಕ ಪರವಾನಗಿ ಭೂಮಾಪಕರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ, ಪರವಾನಗಿಯನ್ನು ನವೀಕರಿಸಲು 4 ತಿಂಗಳ ಹಿಂದೆಯೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ್ದರೂ ಇಲ್ಲಿಯವರೆಗೆ ಪರವಾನಗಿ ನವೀಕರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ತತ್ಕಾಲ್, ಬ್ಯಾಕ್‌ಲಾಗ್, ಕೆರೆಗಳ ಅಳತೆ ಮಾಡಿರುವ ಸಂಭಾವನೆಯನ್ನು ಕಳೆದ ನಾಲ್ಕು ವರ್ಷಗಳಿಂದ ನೀಡಿಲ್ಲ. `11 ಇ~ ನಕ್ಷೆ ತಯಾರಿಸಲು ವಿತರಣೆಯಾಗುವ ಸಂಬಂಧಿಸಿದ ಜಮೀನಿನ ಮೂಲ ದಾಖಲೆಗಳನ್ನು ವಿತರಣೆ ಮಾಡುತ್ತಿಲ್ಲ. ಆದ್ದರಿಂದ 11 ಇ ಅರ್ಜಿಗಳ ವಿಲೇವಾರಿ ತಡವಾಗುತ್ತಿದ್ದು ಸಾರ್ವಜನಿಕರಿಂದ ನಾವು ನಿಂದನೆ ಕೇಳಬೇಕಾಗಿದೆ ಎಂದು ದೂರಿದ್ದಾರೆ.

ಅನೇಕ ಸಮಸ್ಯೆಗಳ ನಡುವೆಯೂ ಕೆಲಸ ಮಾಡುತ್ತಿರುವ ಭೂಮಾಪಕರಿಗೆ ಸ್ಪಂದಿಸಬೇಕಾದ ಜಿಲ್ಲಾ ಉಪ ನಿರ್ದೇಶಕರು ಕಿರುಕುಳ ನೀಡುತ್ತಿರುವುದರಿಂದ ಅನಿವಾರ್ಯವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಉಪ ನಿರ್ದೇಶಕರು ನಮ್ಮ ಸಮಸ್ಯೆಗಳಿಗೆ ಸ್ವಂದಿಸುವವರೆಗೂ ಹೋರಾಟ ಕೈಬಿಡುವುದಿಲ್ಲ.
ಇನ್ನಾದರೂ ಸರ್ಕಾರ ನಮ್ಮ ಸಮಸ್ಯೆಗಳತ್ತ ಗಮನ ಹರಿಸಿ ಪರಿಹರಿಸಬೇಕೆಂದು ಭೂಮಾಪಕರುಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT