ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಾಯೇ ಸ್ವೀಕರಿಸು ನಮ್ಮನಮಸ್ಕಾರ!

Last Updated 2 ಜನವರಿ 2014, 6:21 IST
ಅಕ್ಷರ ಗಾತ್ರ

ಆಲಮಟ್ಟಿ: ಹುಲ್ಲಲಿಗೋ...ಚಲಾಂಬರಿಗೋ... ಈ ಘೋಷಣೆ ಬುಧವಾರ ಎಲ್ಲೆಲ್ಲೂ ಮೊಳಗುತ್ತಿತ್ತು. ಒಂದೆಡೆ ರೈತರು ಸಂಭ್ರಮದಿಂದ ತಮ್ಮ ಎತ್ತು­ಗಳಿಗೆ ಸಂಗರಿಸಿ ಹೊಲಕ್ಕೆ ಹೊರಡಲು ಸಿದ್ಧರಾಗು­ತ್ತಿದ್ದರೆ, ಇನ್ನೊಂದೆಡೆ ಮಹಿಳೆಯರು ಈ ಹಬ್ಬಕ್ಕೆ ಭಕ್ಷ್ಯ ಭೋಜನಗಳ ಸಿದ್ಧತೆಯಲ್ಲಿ ತೊಡಗಿರು­ವುದು ಆಲಮಟ್ಟಿ ಸುತ್ತಮುತ್ತ ಎಲ್ಲೆಡೆಯೂ ಕಂಡು ಬಂತು. ಬಂಡಿಗಳ ಕಲರವವೂ ಸಾಮಾನ್ಯ­­ವಾಗಿತ್ತು. ತುಂಬಿದ ಕೃಷ್ಣೆಯಲ್ಲಿ ಸ್ನಾನ ಮಾಡು­ವವರ ಸಂಖ್ಯೆಯೂ ಹೆಚ್ಚಾಗಿತ್ತು. ಹೊಸ ವರ್ಷ­ದ ಸಂಭ್ರಮದೊಂದಿಗೆ ಚರಗವೂ ಬಂದಿದ್ದು ಖುಷಿ ಎಲ್ಲರಲ್ಲಿಯೂ ಮೂಡಿದ್ದು ವಿಶೇಷ. 

ಒಂದೆಡೆ ಮಳೆಯಿಲ್ಲದೇ ಕಂಗಾಲಾಗಿರುವ ರೈತರು, ಮತ್ತೊಂದೆಡೆ ಬಿದ್ದ ಅಲ್ಪ ಸ್ವಲ್ಪ ಮಳೆಯನ್ನೇ ಜೀವ ಹಿಡಿದು ಬೆಳೆದ ಬೆಳೆ, ಇನ್ನೊಂದೆಡೆ ಕಾಲುವೆಯಿಂದ ನೀರು ಬಂದು ಬೆಳೆದ ಬೆಳೆ ಈ ಭಾಗದಲ್ಲಿ ವ್ಯಾಪಕವಾಗಿದ್ದರೂ, ರೈತನ ಹಬ್ಬವಾದ ‘ಚರಗ’ ಚೆಲ್ಲುವ ಹಬ್ಬ ಮಾತ್ರ ಸಂಭ್ರಮ ಸಡಗರದಿಂದ ಜರುಗಿತು.

ಎಳ್ಳ ಅಮಾವಾಸೆ್ಯ  ರೈತರ ಹಬ್ಬ, ಬೆಳೆದು ನಿಂತ ಬೆಳೆಗೆ ಚರಗ ಚೆಲ್ಲುವ ಸಂಭ್ರಮ. ‘ಚರಗ’ ಎಂದರೇ ರೈತ ತಾನು ಮಾಡಿದ ವಿವಿಧ
ಭಕ್ಷ್ಯ, ಭೋಜನಗಳನ್ನು ಹೊಲದಲ್ಲಿ ಬೆಳೆದ ಪೈರಿಗೆ ಸಮರ್ಪಿಸುವ ಸಂಭ್ರಮ. ಜಮೀನನಲ್ಲಿರುವ ಬನ್ನಿ ಮರಕ್ಕೆ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸುವುದು, ನಂತರ ರೈತರು ತಂದ  ಭೋಜನಗಳ ಎಡೆ ಹಿಡಿದು, ಅವುಗಳನ್ನೆಲ್ಲಾ ತುಂಡು ಮಾಡಿ ಹೊಲದ ತುಂಬ ಎಸೆಯುತ್ತಾರೆ. 

ಭೂತಾಯಿ ಒಲಿದರೇ ಬಂಗಾರ ಬೆಳೆಯುವ ರೈತ, ಭೂತಾಯಿಗೆ ಪೂಜೆ ಸಲ್ಲಿಸುವ ಗ್ರಾಮೀಣ ಜನತೆಯ ಪರಿಪಾಠ ಈಗಲೂ ಮುಂದುವರೆದಿದೆ ಎನ್ನುತ್ತಾರೆ ಢೋಮನಾಳದ ಶಿವಪ್ಪ ನುಗ್ಲಿ. ಭೂತಾಯಿಗೆ ಈ ರೀತಿ ನಮನ ಸಲ್ಲಿಸಿದ ನಂತರ ತಂದ ಭಕ್ಷಗಳನ್ನು ಎಲ್ಲರೂ ಸಾಮೂಹಿಕವಾಗಿ ಕುಳಿತು ಊಟ ಮಾಡುವ ಸಂಭ್ರಮ ಹೆಚ್ಚಾಗಿತ್ತು. ಕೃಷಿ ಜಮೀನು ಇಲ್ಲದವರು ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಬುತ್ತಿ ಕಟ್ಟಿಕೊಂಡು ಊಟಕ್ಕೆ ಬಂದಿರುವ ದೃಶ್ಯವೂ ಸಾಮಾನ್ಯವಾಗಿತ್ತು.

ಚರಗದ ಸವಿ: ‘ಚರಗಕ್ಕಾಗಿಯೇ ವಿಶೇಷವಾಗಿ ಸಿದ್ಧ ಪಡಿಸಿದ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಹೂರ­ಣದ ಹೋಳಿಗೆ, ಬದನೆಕಾಯಿ ಪಲ್ಯೆ, ಮೊಸರು, ತುಪ್ಪ, ಹಿಂಡಿ, ಕಡಬು, ಕಾಳಿನ ಪಲ್ಯೆ, ಪುಂಡಿ ಪಲ್ಯೆ, ಹೊಲದಲ್ಲಿಯೇ ಸಿಗುವ ಹಾತರಕಿ ಹಾಗೂ ಮೆಂತ್ಯೆ ಪಲ್ಯೆ .......ಜವಾರಿ ಭಕ್ಷದ ಪಟ್ಟಿ ಹಾಗೆ ಬೆಳೆಯುತ್ತಲೇ ಸಾಗುತ್ತದೆ. ಅವನ್ನೆಲ್ಲಾ ಭೂತಾಯಿಗೆ ಅರ್ಪಿಸಿದ ನಂತರ ಸಾಮೂಹಿಕ ಭೋಜನ ಮಾಡುವ ಸಂಭ್ರಮವೇ ಸಂಭ್ರಮ’ ಎನ್ನುತ್ತಾರೆ ಕಟಗೂರ ಗ್ರಾಮದ ಮಹಾಂತೇಶ ಹೊಸಗೌಡರ.

‘ಹೊಲದಲ್ಲಿ ಬೆಳೆದ ಕಡಲೆ (ಸುಲಗಾಯಿ), ಬಾರಿಕಾಯಿ, ಸವತಿಕಾಯಿ ಮೊದಲಾದವು­ಗಳನ್ನು ಹರಿದು ತಿನ್ನುವ ಮಕ್ಕಳ ಸಂಭ್ರಮಕ್ಕೆ ಪಾರವೇ ಇಲ್ಲ’ ಎನುತ್ತಾರೆ ರಮೇಶ ರೊಟ್ಟಿ.  ನಂತರ ಸಂಜೆ ಎಲ್ಲ ಬಂಡಿಗಳು ಸಾಲಾಗಿ ಹಳ್ಳಿಗಳಲ್ಲಿ ಬರುತ್ತಿದ್ದ ದೃಶ್ಯ. ಎತ್ತಿನ ಕೊರಳಿಗೆ ಕಟ್ಟಿದ ಗಂಟೆಗಳ ನಿನಾದ, ಬಂಡಿಗಳನ್ನು ಹುರುಪಿನಿಂದ ಓಡಿಸುವ ರೈತನ ಪರಿ ನೋಡುವುದೇ ಒಂದು ಸಂಭ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT