ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಪಾಲ್ ದುರಂತ: ಯೂನಿಯನ್ ಕಾರ್ಬೈಡ್ ಷರತ್ತುಗಳಿಗೆ ತಲೆಬಾಗಿದ್ದ ಸರ್ಕಾರ..!

Last Updated 17 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಭೋಪಾಲ್ (ಐಎಎನ್ಎಸ್): 1984ರಲ್ಲಿ ಇಲ್ಲಿನ ಯೂನಿಯನ್ ಕಾರ್ಬೈಡ್ ಘಟಕದಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆ ದುರಂತದ ಕೆಲವೇ ತಿಂಗಳುಗಳ ಬಳಿಕ ಭಾರತ ಸರ್ಕಾರವು ಕಂಪೆನಿ ವಿಧಿಸಿದ ಷರತ್ತುಗಳಿಗೆ ಅನುಗುಣವಾಗಿ ಸಂತ್ರಸ್ತರಿಗೆ ಪರಿಹಾರ ನೀಡಲು ಒಪ್ಪಿಕೊಂಡಿತ್ತು ಎಂಬುದಾಗಿ ಮಾಹಿತಿ ಹಕ್ಕು (ಆರ್ ಟಿ ಐ) ಕಾರ್ಯಕರ್ತರೊಬ್ಬರು ಸೋಮವಾರ ಪ್ರತಿಪಾದಿಸಿದ್ದಾರೆ.

ಅಷ್ಟೇ ಅಲ್ಲ, ಸರ್ಕಾರವು ಜಗತ್ತಿನಲ್ಲೇ ಅತ್ಯಂತ ಬೀಕರ ದುರಂತವೆಂಬ ಕುಖ್ಯಾತಿ ಪಡೆದ ಈ ದುರಂತವನ್ನು ~ರೈಲ್ವೇ ದುರಂತ~ದ ರೀತಿಯಲ್ಲಿ ಪರಿಗಣಿಸಿತ್ತು ಎಂದೂ ಅವರು ಬಹಿರಂಗ ಪಡಿಸಿದ್ದಾರೆ.

~1985ರ ಫೆಬ್ರುವರಿ 28 ಮತ್ತು ಮಾರ್ಚ್ 5ರಂದು ನಾನು ಅತ್ಯಂತ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದೇನೆ. ಈ ದಾಖಲೆಗಳು ದುರಂತ ಸಂಭವಿಸಿದ ಮೂರು ತಿಂಗಳುಗಳ ಒಳಗಾಗಿ ಪರಿಹಾರ ಒಪ್ಪಂದವನ್ನು ಯೂನಿಯನ್ ಕಾರ್ಬೈಡ್ ಪ್ರಸ್ತಾಪಿಸಿತ್ತು ಎಂಬುದನ್ನು ತೋರಿಸುತ್ತವೆ~ ಎಂದು ಭೋಪಾಲ್ ಮಾಹಿತಿ ಮತ್ತು ಕಾರ್ಯಾಚರಣೆ ತಂಡದ (ಭೋಪಾಲ್ ಗ್ರೂಪ್ ಫಾರ್ ಇನ್ ಫಾರ್ಮೇಷನ್ ಅಂಡ್ ಆಕ್ಷನ್- ಬಿಜಿಐಎ) ಸಾಯಿನಾಥ್ ಸಾರಂಗಿ ಐಎಎನ್ ಎಸ್ ಗೆ ತಿಳಿಸಿದ್ದಾರೆ.

~ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದಿರುವ ದಾಖಲೆಗಳ ಪ್ರಕಾರ 1985ರ ಫೆಬ್ರುವರಿ 28ರಂದು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಯದರ್ಶಿ ಮತ್ತು ಯೂನಿಯನ್ ಕಾರ್ಬೈಡ್ ಕಂಪೆನಿಯ ಉನ್ನತ ಅಧಿಕಾರಿ ರೋಲ್ಫ್ ಎಚ್. ಟೊವೆ ಹಾಗೂ ಅದರ ಭಾರತೀಯ ಆಧೀನ ಸಂಸ್ಥೆಯ ಆಡಳಿತ ನಿರ್ದೇಶಕ ವಿ.ಪಿ. ಗೋಖಲೆ ಅವರ ಮಧ್ಯೆ ಒಪ್ಪಂದ ರೂಪಿಸಲಾಗಿತ್ತು.~

~ಯೂನಿಯನ್ ಕಾರ್ಬೈಡ್ ಕಂಪೆನಿಯು 1985ರಲ್ಲೇ ದುರಂತದಲ್ಲಿ ಮಡಿದ ಪ್ರತಿಯೊಬ್ಬನ ಕುಟುಂಬಕ್ಕೂ ಒಂದು ಲಕ್ಷ ರೂಪಾಯಿ ಪಾವತಿ ಮಾಡುವ ಪ್ರಸ್ತಾವ ಮುಂದಿಟ್ಟಿತ್ತು. ಆರು ವರ್ಷಗಳ ಬಳಿಕ ಇದೇ ಮೊತ್ತವನ್ನು ಸರ್ಕಾರ ಪರಿಹಾರವಾಗಿ ಭೋಪಾಲ್ ವಿಷಾನಿಲ ಸಂತ್ರಸ್ಥರಿಗೆ  ಪಾವತಿ ಮಾಡಿತು~ ಎಂದು ಸಾರಂಗಿ ಹೇಳಿದರು.

ವಿಪರ್ಯಾಸವೆಂದರೆ ರೈಲ್ವೇ ಕಾಯ್ದೆಯನ್ನು ಆಧರಿಸಿ ಯೂನಿಯನ್ ಕಾರ್ಬೈಡ್ ಈ ಪರಿಹಾರವನ್ನು ಲೆಕ್ಕ ಹಾಕಿತ್ತು. ಇದಕ್ಕೆ ಸರ್ಕಾರ ಆಕ್ಷೇಪವನ್ನೇ ವ್ಯಕ್ತ ಪಡಿಸಲಿಲ್ಲ ಮತ್ತು ತನ್ಮೂಲಕ ವಿಷಾನಿಲ ದುರಂತವನ್ನು ರೈಲ್ವೇ ಅಪಘಾತಕ್ಕೆ ಸಮಾನವಾಗಿ ಪರಿಗಣಿಸಿತು ಎಂದು ಅವರು ವಿವರಿಸಿದರು.

ಅಮೆರಿಕದ ಕಂಪೆನಿಗೆ ಷಾಮೀಲಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಗಾಯಾಳುಗಳ ವರ್ಗೀಕರಣ ಮಾಡಿತು ಮತ್ತು ಜೀವನ ಪರ್ಯಂತ ತೊಂದರೆ ಅನುಭವಿಸಿದ ಶೇಕಡಾ 93ರಷ್ಟು ಮಂದಿ ಸಂತ್ರಸ್ತರನ್ನು ತಾತ್ಕಾಲಿಕ ಗಾಯದ ವರ್ಗಕ್ಕೆ ಸೇರಿಸಿ ಅವರಿಗೆ ಕನಿಷ್ಠ 25,000 ರೂಪಾಯಿಗಳ ಪರಿಹಾರವನ್ನು ನಂತರ ನೀಡಿತು ಎಂದು ಅವರು ಹೇಳಿದರು.

1984ರ ಡಿಸೆಂಬರ್ 2-3ರ ನಡುವಣ ರಾತ್ರಿ ಭೋಪಾಲ್ ನಗರದ ಯೂನಿಯನ್ ಕಾರ್ಬೈಡ್ ಘಟಕದಲ್ಲಿ ಟನ್ನುಗಟ್ಟಲೆ ಮಿಥೈಲ್ ಐಸೋಸಯನೇಟ್ ಅನಿಲ ಸೋರಿಕೆಯಾದ ಪರಿಣಾಮವಾಗಿ 3000 ಜನ ಸ್ಥಳದಲ್ಲೇ ಮೃತರಾದರೆ, 25,000 ಮಂದಿ ನಂತರದ ವರ್ಷಗಳಲ್ಲಿ ಮೃತರಾಗಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಮಂದಿಗೆ ತೀವ್ರ ಸ್ವರೂಪದ ವಿವಿಧ ಅಂಗವೈಕಲ್ಯಗಳಿಗೆ ತುತ್ತಾಗಿದ್ದಾರೆ.

26 ವರ್ಷಗಳ ಬಳಿಕ ಕೂಡಾ ಸುಪ್ರೀಂಕೋರ್ಟಿನಲ್ಲಿ ಮಂಡಿಸಲಾದ ಸರ್ಕಾರದ ಅರ್ಜಿಯಲ್ಲಿ ದುರಂತದ ಭೀಕರತೆಯ ನೈಜ ಚಿತ್ರಣವನ್ನು ಮುಂದಿಡಲಾಗಿಲ್ಲ ಎಂದು ಕಾರ್ಯಕರ್ತರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT