ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ತಲೆ ತಗ್ಗಿಸುವಂತಾಗಿದೆ

ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಪಾಲರ ವಾಗ್ದಾಳಿ
Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ವರ್ಷಗಳಲ್ಲಿ ಬಯಲಿಗೆ ಬಂದ ಭ್ರಷ್ಟಾಚಾರ ಮತ್ತು ಹಗರಣಗಳಿಂದ ದೇಶದ ಎದುರು ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಸಾರ್ವಜನಿಕರ ಹಣ ಸೋರಿಹೋಗಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸೋಮವಾರ ವಿಧಾನಸಭೆಯಲ್ಲೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ರಾಜ್ಯದ ಅಭಿವೃದ್ಧಿಗಾಗಿ ಕೆಲವು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಲಾದ ಕೆಲವು ನೀತಿಗಳನ್ನು ಕಾಂಗ್ರೆಸ್ ಸರ್ಕಾರ ಪುನರ್‌ಪರಿಶೀಲಿಸಲಿದೆ ಎಂದು ಘೋಷಿಸಿದರು.

ಸುದೀರ್ಘ 40 ನಿಮಿಷಗಳ ಕಾಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಭಾರದ್ವಾಜ್, ಭಾಷಣದ ಆರಂಭದಲ್ಲೇ `ಭ್ರಷ್ಟಾಚಾರ ಮತ್ತು ಹಗರಣಗಳಿಂದಾಗಿ ಜನರು ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜಕಾರಣದ ಬಗ್ಗೆ ಸಾರ್ವಜನಿಕರಲ್ಲಿ ತಿರಸ್ಕಾರ ಭಾವ ಬೆಳೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು' ಎಂದರು.

`ಆಡಳಿತದಲ್ಲಿ ಬಿಗಿ ತಪ್ಪಿದರೆ ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸ್ವಚ್ಛ ಮತ್ತು ಜನರಿಗೆ ಉತ್ತರದಾಯಿಯಾದ ಆಡಳಿತ ನೀಡುವ ಮೂಲಕ ಈಗಾಗಲೇ ಅಸಂತುಷ್ಟರಾಗಿರುವ ಜನರ ವಿಶ್ವಾಸವನ್ನು ಮರಳಿ ಗಳಿಸುವ ಪ್ರಯತ್ನವನ್ನು ಈ ಸರ್ಕಾರ ಮಾಡುತ್ತದೆ. ದಕ್ಷ ಮತ್ತು ಪಾರದರ್ಶಕ ಆಡಳಿತವೇ ಈ ಸರ್ಕಾರದ ಗುರಿ.

`ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಉಂಟಾದ ರಾಜಕೀಯ ಅಭದ್ರತೆ ಮತ್ತು ಭ್ರಷ್ಟಾಚಾರದ ಹಗರಣಗಳ ಪರಿಣಾಮವಾಗಿ ಕೈಗಾರಿಕಾ ಬೆಳವಣಿಗೆಯೂ ಕುಂಠಿತವಾಗಿದೆ. ಹೂಡಿಕೆದಾರರನ್ನು ಆಕರ್ಷಿಸುವಲ್ಲಿಯೂ ಹಿನ್ನಡೆ ಆಗಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಕೆಲಸವನ್ನು ಸರ್ಕಾರ ಮಾಡಲಿದೆ. ಹೂಡಿಕೆದಾರರಿಗೆ ಭೂಮಿ, ಇಂಧನ, ನೀರು ಮತ್ತು ಸಂಪರ್ಕ ವ್ಯವಸ್ಥೆಯನ್ನು ತ್ವರಿತವಾಗಿ ಒದಗಿಸಲಾಗುವುದು. 2014ರಲ್ಲಿ ಮೂರನೇ ವಿಶ್ವ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಅಷ್ಟರೊಳಗೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ನಿಶ್ಚಿತ.

`ಸೌಹಾರ್ದ ಜೀವನಕ್ಕೆ ಧಕ್ಕೆ ತರುವಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ. ಇದಕ್ಕೆ ಕಾರಣಗಳನ್ನು ಹುಡುಕಿ, ಹೊಣೆಗಾರರನ್ನು ಗುರುತಿಸಿ ದೋಷಾರೋಪ ಮಾಡುವ ಬದಲು ಆಗಿರುವ ಹಾನಿಯನ್ನು ಸರಿಪಡಿಸಬೇಕು. ಕರ್ನಾಟಕದ ಅಸ್ಮಿತೆಯನ್ನು ಪುನರ್ ಸ್ಥಾಪಿಸಿ, ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕು.

ಗ್ರಾಮಗಳಿಗೆ ಶುದ್ಧ ನೀರು: `ರಾಜ್ಯದ 5,875 ಗ್ರಾಮಗಳಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲ. ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್ ಮತ್ತಿತರ ವಿಷಕಾರಿ ರಾಸಾಯನಿಕ ಅಂಶಗಳನ್ನು ಹೊಂದಿರುವ ನೀರು ಪೂರೈಕೆಯಾಗುತ್ತಿದೆ. ಗದಗ ಜಿಲ್ಲೆಯ ಮಾದರಿಯಲ್ಲಿ ಈ ಎಲ್ಲ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು. `2014ರ ಜನವರಿ ತಿಂಗಳಿನಿಂದಲೇ ಒಂದು ಸಾವಿರ ಘಟಕಗಳಿಗೆ ಚಾಲನೆ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಕೇಂದ್ರ ಸರ್ಕಾರ 2013-14ರ ಬಜೆಟ್‌ನಲ್ಲಿ 1,400 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಯೋಜನೆಯ ನೆರವನ್ನೂ ಬಳಸಿಕೊಳ್ಳಲಾಗುವುದು.

ಕೃಷಿ ಬೆಲೆ ಆಯೋಗ: `ಕೃಷಿಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೃಷಿ ಬೆಲೆ ಆಯೋಗ ಸ್ಥಾಪಿಸಲಾಗುವುದು. ಜಲಾನಯನ ಯೋಜನೆಗಳನ್ನು ಎಲ್ಲಾ ಖುಷ್ಕಿ ಜಮೀನುಗಳಿಗೂ ವಿಸ್ತರಿಸಲಾಗುವುದು. ತೋಟಗಾರಿಕಾ ಬೆಳೆಗಾರರಿಗೆ ಅನುಕೂಲ ಆಗುವಂತೆ ಅತ್ಯಾಧುನಿಕ `ಕ್ಲಸ್ಟರ್'ಗಳನ್ನು ಸ್ಥಾಪಿಸಲಾಗುವುದು.

`ಪಶುಸಂಗೋಪನಾ ವಲಯವನ್ನು ಕೃಷಿ ಹಾಗೂ ತೋಟಗಾರಿಕೆಗೆ ಪೂರಕವಾದ ಅತಿ ಪ್ರಮುಖ ಕ್ಷೇತ್ರವನ್ನಾಗಿ ರೂಪಿಸಲಾಗುವುದು. ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ರಾಜ್ಯದ ಪಶು ವೈದ್ಯಕೀಯ ವಿವಿ ಗಳನ್ನು ಆಧುನೀಕರಣಗೊಳಿಸಲಾಗುವುದು.

ಸಾಮಾಜಿಕ ನ್ಯಾಯಕ್ಕೆ ಒತ್ತು: `ಸಾಮಾಜಿಕ ನ್ಯಾಯ ಪಾಲನೆಯಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಮೀಸಲಿರುವ ಹುದ್ದೆಗಳನ್ನು ಎರಡು ವರ್ಷಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ವಿಶೇಷ ಗಮನ ನೀಡಲಾಗುವುದು.

`ಪರಿಶಿಷ್ಟ ಪಂಗಡಗಳು ಮತ್ತು ಇತರೆ ಅರಣ್ಯ ನಿವಾಸಿಗಳು ಅರಣ್ಯ ಭೂಮಿಯಲ್ಲಿ ಸಾಗುವಳಿ ಹಕ್ಕು ಕೋರಿ `ಅರಣ್ಯ ಹಕ್ಕು ಕಾಯ್ದೆ-2006'ರ ಅಡಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನೂ ಒಂದು ವರ್ಷದೊಳಗೆ ವಿಲೇವಾರಿ ಮಾಡಲಾಗುವುದು.

ಮಹಿಳೆಯರಿಗೆ ಅಭಯ: `ಮಹಿಳೆಯರು ನಿರ್ಭೀತಿಯಿಂದ ಬದುಕುವಂತಹ ವಾತಾವರಣವನ್ನು ಈ ಸರ್ಕಾರ ನಿರ್ಮಿಸಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಸರ್ಕಾರ ರೂಪಿಸಿರುವ `ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆ-2012' ಮತ್ತು `ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ಪ್ರತಿಬಂಧ, ನಿಷೇಧ ಮತ್ತು ನಿವಾರಣೆ) ಕಾಯ್ದೆ-2013'ರ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಮತ್ತು ಅದಕ್ಕೆ ಪ್ರೇರಣೆ ನೀಡುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು.

`ಬಡವರಿಗೆ ಆರೋಗ್ಯ ಭದ್ರತೆ ಒದಗಿಸಲು ಇರುವ ಎಲ್ಲ ಆರೋಗ್ಯ ವಿಮಾ ಯೋಜನೆಗಳನ್ನು ಸಮಗ್ರ ಏಕೀಕೃತ ಯೋಜನೆಯ ಅಡಿಯಲ್ಲಿ ತರಲಾಗುವುದು. ಬಡವರಿಗೆ ನ್ಯಾಯಸಮ್ಮತವಾಗಿ ಔಷಧಿಗಳನ್ನು ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

`ಗುಡಿಸಲುರಹಿತ ರಾಜ್ಯವನ್ನು ಸ್ಥಾಪಿಸಲು ಕೇಂದ್ರೀಕೃತ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು. ರಾಜೀವ್ ಆವಾಸ್ ಯೋಜನೆಯನ್ನು ಬಳಸಿಕೊಂಡು ಕರ್ನಾಟಕವನ್ನು ಕೊಳೆಗೇರಿ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಲಾಗುವುದು. ವಸತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 2009ರ ವಸತಿ ನೀತಿಯನ್ನು ಪುನರ್ ಪರಿಶೀಲಿಸಲಾಗುವುದು. ಕೇಂದ್ರ ಸರ್ಕಾರ ನೀಡುವ ನೆರವನ್ನು ಬಳಸಿಕೊಂಡು 60 ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗುವುದು' ಎಂದು ರಾಜ್ಯಪಾಲರು ಹೇಳಿದರು.

ಭೂಗಳ್ಳರು, ತೆರಿಗೆ ವಂಚಕರಿಗೆ ಎಚ್ಚರಿಕೆ
ಸರ್ಕಾರಿ ಜಮೀನು ಕಬಳಿಸುವವರು ಮತ್ತು ತೆರಿಗೆ ವಂಚಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ ಎಂದು ಭಾರದ್ವಾಜ್ ತಮ್ಮ ಭಾಷಣದಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದರು.

ಸರ್ಕಾರಿ ಜಮೀನು ಕಬಳಿಕೆ ಕುರಿತು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ನೇತೃತ್ವದ ಕಾರ್ಯಪಡೆ ಸಲ್ಲಿಸಿರುವ ವರದಿಗಳ ಶಿಫಾರಸುಗಳನ್ನು ಅಧ್ಯಯನ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು. ಸರ್ಕಾರಿ ಜಮೀನು ಕಬಳಿಸುವವರು, ಕಬಳಿಕೆಗೆ ಪ್ರೇರಣೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರತ್ಯೇಕವಾದ ಭೂ ನೀತಿಯನ್ನು ಸಿದ್ಧಪಡಿಸಲಾಗುವುದು. ಸರ್ಕಾರಿ ಜಮೀನು ಮಂಜೂರಾತಿ ಮತ್ತು ಗುತ್ತಿಗೆಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಭೂ ಲೆಕ್ಕ ಪರಿಶೋಧನೆ ನಡೆಸಲಾಗುವುದು ಎಂದು ಪ್ರಕಟಿಸಿದರು.

ತೆರಿಗೆ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ನಿರ್ವಹಿಸಲಾಗುವುದು. ಯಾವುದೇ ಬಗೆಯ ತೆರಿಗೆ ವಂಚನೆಯನ್ನು ಕಿಂಚಿತ್ತೂ ಸಹಿಸುವುದಿಲ್ಲ. ಸರ್ಕಾರದ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಸಹಾಯಧನಗಳ ವಿತರಣೆಯಲ್ಲಿ ಪರಿಣಾಮಕಾರಿ ಗುರಿ ನಿಗದಿ ಮಾಡಲಾಗುವುದು. ಆಡಳಿತ ವೆಚ್ಚ ಸುಧಾರಣಾ ಆಯೋಗದ ಶಿಫಾರಸುಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದರು.

ನೀರಾವರಿಗೆ ಆದ್ಯತೆ
ನೆನೆಗುದಿಗೆ ಬಿದ್ದಿರುವ 78 ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು. ಬರಪೀಡಿತ ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ನೀರು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯ ವ್ಯಾಪ್ತಿಗೆ ಸೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೂ ಸರ್ಕಾರ ಬದ್ಧ ಇದೆ. ಈ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ನೆರವು ಕೋರಲಾಗುವುದು ಎಂದು ಹೇಳಿದರು.

ಕೃಷ್ಣಾ ನ್ಯಾಯಮಂಡಳಿಯ ಐತೀರ್ಪಿನ ಅನುಸಾರ 177 ಟಿ.ಎಂ.ಸಿ ಅಡಿ ನೀರನ್ನು ಬಳಸಿಕೊಳ್ಳಲು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತವನ್ನು ಆದ್ಯತೆ ಮೇಲೆ ಆರಂಭಿಸಲಾಗುವುದು. ಕಾವೇರಿ ಜಲಾನಯನ ಪ್ರದೇಶದ ಬಾಕಿ ಇರುವ ವಿಸ್ತರಣಾ, ನವೀಕರಣ ಮತ್ತು ಆಧುನೀಕರಣ ಯೋಜನೆಗಳಿಗೆ ಕೇಂದ್ರದ ಅನುಮೋದನೆ ಪಡೆಯಲಾಗುವುದು ಎಂದು ವಿವರಿಸಿದರು.

ಪ್ರತಿ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ
ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ನಿವೃತ್ತಿಯಿಂದಾಗಿ ತೆರವಾಗುವ ಖಾಲಿ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡುವ ಉದ್ದೇಶದಿಂದ ಸರ್ಕಾರ ಪ್ರತಿ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಿದೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಪ್ರಕಟಿಸಿದರು.

ಕಲಿಕೆಯನ್ನು ಚಟುವಟಿಕೆ ಆಧಾರಿತ, ಮಕ್ಕಳ ಕೇಂದ್ರಿತ ಹಾಗೂ ಸ್ನೇಹಿಯನ್ನಾಗಿಸಲು ಬೋಧನೆಯ ಗುಣಮಟ್ಟಕ್ಕೆ ಒತ್ತು ನೀಡಲಾಗುವುದು. ಬೋಧನೆ ಅಷ್ಟೇ ಅಲ್ಲದೆ ಬೋಧನೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುವುದು. ಶಿಕ್ಷಣ ಹಕ್ಕು ಕಾಯ್ದೆಯನ್ನು ಗಮನದಲ್ಲಿರಿಸಿಕೊಂಡು 8ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣ ವ್ಯಾಪ್ತಿಗೆ ತರಲಾಗುವುದು ಎಂದರು.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನುರಿತ ಕನ್ನಡ ಶಿಕ್ಷಕರನ್ನು ನೇಮಿಸಲಾಗುವುದು. ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕರು - ಮಕ್ಕಳ ಅನುಪಾತಕ್ಕೆ ತಕ್ಕಂತೆ ವಿಷಯ ಬೋಧಕರು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಕರ ಸ್ಥಳ ನಿಯೋಜನೆ ಮಾಡಲಾಗುವುದು. ಮಹಿಳಾ ಸಾಕ್ಷರತೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯ ಸಂಖ್ಯೆಯ ಶಿಕ್ಷಕರು, ಶಾಲಾ ಕೊಠಡಿಗಳು, ಕುಡಿಯುವ ನೀರು, ಬಾಲಕ - ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅನುಪಾತವನ್ನು ಗಮನದಲ್ಲಿಟ್ಟುಕೊಂಡು ಶಾಲಾ ವ್ಯವಸ್ಥೆಯನ್ನು ಪುನರ್‌ರಚಿಸಲಾಗುವುದು ಎಂದರು.

ಕಾಲೇಜುಗಳು, ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಕ್ಷೀಣಿಸಿದೆ. ಹೀಗಾಗಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಾಚಾರ್, ಮಿಶ್ರಾ ಶಿಫಾರಸು ಜಾರಿ
ಧಾರ್ಮಿಕ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗ ಮತ್ತು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಗಳು ನೀಡಿರುವ ವರದಿಗಳಲ್ಲಿನ ಶಿಫಾರಸುಗಳನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರು ಪ್ರಕಟಿಸಿದರು.

ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಉತ್ತೇಜನ ನೀಡಲಾಗುವುದು. ಆರೋಗ್ಯ ಸೇವೆಗಳನ್ನು ಅವರಿಗೆ ತಲುಪಿಸಲು ವಿಶೇಷ ಆದ್ಯತೆ ನೀಡಲಾಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುವುದು. ಬ್ಯಾಂಕ್ ಸಾಲ ಪಡೆಯುವುದಕ್ಕೂ ಅನುಕೂಲ ಕಲ್ಪಿಸಲಾಗುವುದು ಎಂದರು.

ಭಾರದ್ವಾಜ್ ಭಾಷಣದ ಪ್ರಮುಖ ಅಂಶಗಳು
-ಉತ್ತಮ ಆಡಳಿತ ಮತ್ತು ಆವಿಷ್ಕಾರ ಕೇಂದ್ರ ಸ್ಥಾಪನೆ
-ಪ್ರತಿ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ
-ಕೃಷಿ ಬೆಲೆ ಆಯೋಗ ಸ್ಥಾಪನೆ
-ಜವಳಿ ಮತ್ತು ಭೂ ನೀತಿ ರಚನೆ
-ಲೋಕೋಪಯೋಗಿ ಇಲಾಖೆಯಲ್ಲಿ ಪಾರದರ್ಶಕತೆ
-ಮೂಲಸೌಕರ್ಯ ಅಭಿವೃದ್ಧಿ ನೀತಿ-2007ರ ಪುನರ್ ಪರಿಶೀಲನೆ
-ಸಕಾಲ ಯೋಜನೆಯಲ್ಲಿ ಎರಡನೇ ಹಂತದ ಸುಧಾರಣಾ ಕ್ರಮಗಳ ಜಾರಿ
-ಅಂಗವಿಕಲರ ಕಲ್ಯಾಣಕ್ಕೆ ಆದ್ಯತೆ
-ಅರಣ್ಯ ಜಮೀನು ಒತ್ತುವರಿ, ಕಳ್ಳಬೇಟೆ ತಡೆಗೆ ಕಠಿಣ ಕ್ರಮ
-ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನುಅನರ್ಹಗೊಳಿಸಲು ಹೊಸ ಕಾಯ್ದೆ
-ನೆನೆಗುದಿಗೆ ಬಿದ್ದಿರುವ ವಿದ್ಯುತ್ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು
-ನಗರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳ ನಡುವೆ ಸಮನ್ವಯ
-ವಿಶೇಷ ಸ್ಥಾನಮಾನ ಪಡೆದಿರುವ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮಂಡಳಿ ಸ್ಥಾಪಿಸಲು ಮೂರು ತಿಂಗಳೊಳಗೆ ನಿಯಮ ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT