ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಗದ್ದೆಗೆ ಮರುಜೀವ

Last Updated 28 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಗಾರು ಮಳೆಯ ಆರ್ಭಟ ಕಡಿಮೆಯಾಗಿದೆ. ಮಲೆನಾಡು ಈಗ ಹಸಿರು ಹೊತ್ತು ನಗುತ್ತಿದೆ.  ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಪಕ್ಷಿಧಾಮಕ್ಕೆ ಮರುಜೀವ ಬಂದಿದೆ!

ಬೆಳ್ಳಕ್ಕಿ, ಕಪ್ಪು ಕೊಕ್ಕರೆ ಹಕ್ಕಿಗಳು ಮತ್ತೆ ತಮ್ಮ ದರ್ಬಾರ್ ಆರಂಭಿಸಿವೆ. ಆಗುಂಬೆ-ಶಿವಮೊಗ್ಗ ರಸ್ತೆಯಲ್ಲಿ ನಿತ್ಯ ಸಾಗುವ ನೂರಾರು ಜನರು ಹಾಗೂ ಮಂಡಗದ್ದೆ ಪಕ್ಷಿಧಾಮ ವೀಕ್ಷಣೆಗೆ ಬಂದ ಪ್ರವಾಸಿಗರು, ಪಕ್ಷಿ ಪ್ರೇಮಿಗಳು ಇಲ್ಲಿ ನಿಂತು ಇಲ್ಲಿನ ಸುಂದರ ಪರಿಸರದಲ್ಲಿ ಸ್ವಚ್ಛಂದವಾಗಿ ಜೀವನ ನಡೆಸುತ್ತಿರುವ ನೂರಾರು ಪಕ್ಷಿಗಳನ್ನು ಕಂಡು ಕಣ್ಮನ ತಣಿಸಿಕೊಳ್ಳುತ್ತಾರೆ.

ಒಂದಷ್ಟು ಹೊತ್ತು ಇಲ್ಲಿ ನಿಂತು ಹಕ್ಕಿಗಳನ್ನು ವೀಕ್ಷಿಸುವುದೆಂದರೆ ಕಣ್ಣಿಗೊಂದು ಹಬ್ಬ. ಸುಮಾರು 10 ಗುಂಟೆ ಪ್ರದೇಶದ ತುಂಗಾ ಹೊಳೆ ನಡುವಿನ ನಡುಗಡ್ಡೆಯಲ್ಲಿ ಸಾವಿರಾರು ಹಕ್ಕಿಗಳು ಹಾರಾಡುತ್ತಾ ಚಿನ್ನಾಟವಾಡುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತದೆ.

ನೀರಿನ ನಡುವೆ ಬಾಗಿದ ಮರಗಳ ಕೊಂಬೆಯ ಮೇಲೆ ನಿಂತ ತಪೋನಿರತ ಬೆಳ್ಳಕ್ಕಿ, ಯಾರದ್ದೋ ನಿರೀಕ್ಷೆಯಲ್ಲಿರುವಂತೆ ಮರಗಳೆಡೆಯಲ್ಲಿ ಇಣುಕುವ ಮತ್ತೊಂದು ಹಕ್ಕಿ. ಗೂಡುಕಟ್ಟಲು ಹುಲ್ಲು ಕಡ್ಡಿ ತರಲು ಓಡಾಡುತ್ತಿರುವ ಹತ್ತಾರು ಹಕ್ಕಿಗಳು,  ನಿರ್ಮಾಣ ಹಂತದಲ್ಲಿರುವ ಗೂಡುಗಳು, ಬೀಸುವ ಗಾಳಿಗೆ ಸೃಷ್ಟಿಯಾಗುವ ಹೊಳೆಯ ಅಲೆಗಳು ಸೇರಿ ಇಲ್ಲೊಂದು ಮೋಹಕ ಲೋಕ ಸೃಷ್ಟಿಯಾಗಿಬಿಡುತ್ತದೆ.

 ತುಂಗಾ ತೀರದ ಮರಗಳಲ್ಲಿ ಕೋತಿಗಳ ತುಂಟಾಟ. `ಸೀ ದೇರ್ ಬೇಬಿ ಮಂಕಿ, ಡ್ಯಾಡಿ ಮಂಕಿ, ಮಮ್ಮಿ ಮಂಕಿ~ ಎಂದು ಪೇಟೆಯಿಂದ ಬಂದ ಮಕ್ಕಳು ತಮ್ಮ ಅಪ್ಪ-ಅಮ್ಮಂದಿರಿಗೆ ತೋರಿಸಿ ವಿವರಿಸುವುದನ್ನು ನೋಡಿದರೆ ನಗು ಉಕ್ಕಿ ಬರುತ್ತದೆ. ಕೋತಿಗಳೂ ಮಕ್ಕಳಾಟಕ್ಕೆ ಪ್ರತಿಕ್ರಿಯಿಸುತ್ತವೆ.

ಇಲ್ಲಿಗೆ ಬರುವುದು ಜಾಲಪಾದ (ಬೆಳ್ಳಕ್ಕಿ) ಮತ್ತು ಸಮುದ್ರ ಪಕ್ಷಿ (ಲಿಟ್ಲ್ ಕಾರ್ಬೊರೆಂಟ್). ಈಗ ಇಲ್ಲಿ ಸುಮಾರು ನಾಲ್ಕು ಸಾವಿರ ಹಕ್ಕಿಗಳಿರಬಹುದು. ಬೇಸಿಗೆಯಲ್ಲಿ ಇವುಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಅಕ್ಟೋಬರ್ ಕೊನೆಯ ವೇಳೆಗೆ ಹಕ್ಕಿಗಳು ನಿರ್ಗಮಿಸುತ್ತವೆ. ನಡುಗಡ್ಡೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಹೊಳೆಲಕ್ಕಿ ಮರಗಲ್ಲಿ ಈ ಹಕ್ಕಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

ಪ್ರತಿ ವರ್ಷ ಮಳೆಗಾಲದಲ್ಲಿ ತುಂಗೆಯಲ್ಲಿ ಪ್ರವಾಹ ಬರುತ್ತದೆ. ಆಗ ನೂರಾರು ಗೂಡುಗಳು ಮೊಟ್ಟೆಗಳ ಸಹಿತ ಕೊಚ್ಚಿ ಹೋಗುತ್ತವೆ. ಆಗ ತಾಯಿ-ತಂದೆ ಹಕ್ಕಿಗಳ ಸಂಕಟ ಹೇಳತೀರದು. ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿ ತುಂಗಾ ಅಣೆಕಟ್ಟೆಯ ಎತ್ತರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಇಡೀ  ಮಂಡಗದ್ದೆಗೆ ಪ್ರವಾಹ ಭೀತಿ ಎದುರಾಗಿದೆ. ಊರು ಹಂತಹಂತವಾಗಿ ಸ್ಥಳಾಂತರಗೊಳ್ಳುತ್ತಿದೆ. ಹಕ್ಕಿಗಳದೂ ಅದೇ ಪಾಡಾಗಬಹುದು ಎಂದು ಕಳವಳ ವ್ಯಕ್ತಪಡಿಸುತ್ತಾರೆ ಮಂಡಗದ್ದೆಯ ನಿವಾಸಿ ಮಹಾದೇವ.

ಹಿಂದೆ ಇಲ್ಲಿ ಉದ್ಯಾನ ಇತ್ತು. ಪಕ್ಷಿ ವೀಕ್ಷಣೆಗೆ ನಿರ್ಮಿಸಲಾದ ಎತ್ತರದ ಗೋಪುರ ಈಗ ಶಿಥಿಲವಾಗಿದೆ. ಅಲ್ಲಲ್ಲಿ ಉಳಿದ ಕಲ್ಲುಬೆಂಚುಗಳು ಪ್ರವಾಸಿಗರಿಗೆ ಆಶ್ರಯವಾಗಿವೆ. ನದಿ ದಡದಲ್ಲಿ ರಕ್ಷಣಾ ಬೇಲಿ ನಿರ್ಮಿಸಬೇಕಿದೆ.

ಮಂಡಗದ್ದೆಗೆ ನೂರಾರು ಹಕ್ಕಿಗಳು ಬರುವುದು, ಹೋಗುವುದು ನಿರಂತರ ಪ್ರಕ್ರಿಯೆ. ಪ್ರತಿ ವರ್ಷ ನದಿಯಲ್ಲಿ ಪ್ರವಾಹ ಬರುವುದು ಸಾಮಾನ್ಯ ಪ್ರಕ್ರಿಯೆ. ನಿಸರ್ಗವೇ ಮಂಡಗದ್ದೆ ಹಾಗೂ ಅದರ ಸುತ್ತಲಿನ ಪರಿಸರಕ್ಕೆ ಹೊಸ,ಹೊಸ ರೂಪ ನೀಡುತ್ತದೆ. ಪ್ರತಿ ವರ್ಷ ಮಳೆಗಾಲದ ಕೊನೆಯ ವೇಳೆಗೆ ಈ ಪ್ರದೇಶ ಮರು ಜೀವ ಪಡೆದುಕೊಳ್ಳುತ್ತದೆ. ನೂರಾರು ಹಕ್ಕಿಗಳು ಇಲ್ಲಿ ಗೂಡು ಕಟ್ಟಿ, ಮರಿ ಮಾಡಿ ಅವುಗಳೊಂದಿಗೆ ಹಾರಿ ಹೋಗುತ್ತವೆ. ಎಲ್ಲವೂ ನಿತ್ಯ ಹಾಗೂ ನಿರಂತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT