ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಲ ವಿಳಕ್ಕು ಮಹೋತ್ಸವ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವೆಂಬರ್‌ ಮಾಸಾಂತ್ಯದಿಂದ ಡಿಸೆಂಬರ್‌ ಕೊನೆಯ ವಾರದವರೆಗೂ ಅಯ್ಯಪ್ಪ ದೇಗುಲ ಹೆಚ್ಚು ಚಟುವಟಿಕೆಯ ತಾಣವಾಗುತ್ತದೆ. ಇದು ಅಯ್ಯಪ್ಪ ದೇವಸ್ಥಾನಗಳಲ್ಲಿ ಮಂಡಲ ಪೂಜೆಯ ಸಂಭ್ರಮದ ಕಾಲ. ಸಾಮಾನ್ಯವಾಗಿ ಧರ್ನುಮಾಸದಲ್ಲಿ ಬರುವ ಈ ಮಂಡಲ ಪೂಜೆ ಮಾಸದಲ್ಲಿ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ, ಉತ್ಸವ, ಹೋಮ ಹವನಾದಿಗಳನ್ನು ನಡೆಸಲಾಗುತ್ತದೆ. ಸುಮಾರು 40 ದಿನಗಳ ಕಾಲ ಮಂಡಲ ಪೂಜೆ ಮಾಡಿದ ಬಳಿಕ ಕೊನೆಯ ದಿನದ ಮಂಡಲ ಪೂಜೆ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.

ಬನ್ನೇರುಘಟ್ಟ ರಸ್ತೆ ವಿಜಯಾ ಬ್ಯಾಂಕ್‌ ಬಡಾವಣೆಯ ಮುಲ್ಕಿ ಸುಂದರರಾಮ ಶೆಟ್ಟಿ ನಗರದಲ್ಲಿರುವ ಅಯ್ಯಪ್ಪ ದೇವಾಲಯದಲ್ಲಿ ಇದೀಗ ಮಂಡಲೋತ್ಸವ ಸಂಭ್ರಮ. ಭಕ್ತಾದಿಗಳೇ ನಿರ್ಮಿಸಿರುವ ಭವ್ಯವಾದ ಅಯ್ಯಪ್ಪ ದೇವಾಲಯ ಬೆಂಗಳೂರಿನಲ್ಲಿರುವ ಎರಡೇ ಎರಡು ಅಯ್ಯಪ್ಪ ದೇವಾಲಯಗಳಲ್ಲಿ ಒಂದು. (ಇನ್ನೊಂದು ಜಾಲಹಳ್ಳಿಯಲ್ಲಿದೆ) ಇಲ್ಲಿನ ಅಯ್ಯಪ್ಪ ಸ್ವಾಮಿ ಟ್ರಸ್ಟ್‌ ಈ ದೇವಾಲಯವನ್ನು ನಡೆಸುತ್ತಿದ್ದು ವಿಶೇಷ ಸಂದರ್ಭಗಳಲ್ಲಿ ಪೂಜೆ, ಉತ್ಸವ, ಮಂಡಲೋತ್ಸವ, ಮೆರವಣಿಗೆ, ರಥೋತ್ಸವ, ಅನ್ನದಾನ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಈ ಭಾಗದ ಪ್ರಮುಖ ಭಕ್ತಿತಾಣವಾಗಿ ರೂಪುಗೊಂಡಿದೆ.

‘ಈ ದೇವಾಲಯದಲ್ಲಿ ಮಕರ ಸಂಕ್ರಾಂತಿ ಸೇರಿದಂತೆ ಎಲ್ಲ ಹಬ್ಬ, ಧಾರ್ಮಿಕ ಕಾರ್ಯಕ್ರಮಗಳನ್ನೂ ಶ್ರದ್ಧೆಯಿಂದ ಆಚರಿಸುತ್ತೇವೆ. ಪ್ರತೀ ವರ್ಷ ಫೆಬ್ರುವರಿಯಲ್ಲಿ  ವಾರ್ಷಿಕೋತ್ಸವ ಸಂಭ್ರಮವಿರುತ್ತದೆ. ವಾರ್ಷಿಕೋತ್ಸವದಂದು ನಡೆಯುವ ಧ್ವಜಾರೋಹಣ, ಅಭಿಷೇಕ, ದೇವರ ಮೆರವಣಿಗೆ ಭಕ್ತಾದಿಗಳನ್ನು ಸೆಳೆಯುತ್ತದೆ. ಅಯ್ಯಪ್ಪ ಸ್ವಾಮಿಯನ್ನು ರಥದಲ್ಲಿ ಮೆರವಣಿಗೆ ಮಾಡುವುದು ಅಪರೂಪ.

ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿ ಅಯ್ಯಪ್ಪ ಸ್ವಾಮಿಯನ್ನು ಆನೆಯ ಮೇಲೆ ಇಟ್ಟು ಮೆರವಣಿಗೆ ಮಾಡುತ್ತಾರೆ. ಆದರೆ ಇಲ್ಲಿ ರಥದ ಮೇಲೆ ಕೂರಿಸಿ ಮೆರವವಣಿಗೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಈ ಅಯ್ಯಪ್ಪ ಸ್ವಾಮಿ ದೇವಾಲಯ ವಿಭಿನ್ನವಾಗಿ ನಿಲ್ಲುತ್ತದೆ ಎಂದು ಹೇಳುತ್ತಾರೆ ಅಯ್ಯಪ್ಪ ದೇವಾಲಯ ಸಮಿತಿಯ ಕಾರ್ಯದರ್ಶಿ ಕೆ. ಜಯಕರ ಶೆಟ್ಟಿ ಅವರು.

‘ಮಂಡಲ ವಿಳಕ್ಕು ಮಹೋತ್ಸವ ಅಯ್ಯಪ್ಪ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆ. ಇದು ಮಕರ ಸಂಕ್ರಾಂತಿಗೆ ಮುನ್ನುಡಿಯಾಗಿ ನಡೆಯುವ ‘ಪಡಿಪೂಜೆ’. ಶಬರಿಮಲೆಯಲ್ಲಿ ನಡೆಯವ ಅಯ್ಯಪ್ಪ ‘ಮಕರ ವಿಳಕ್ಕು’ ಗೆ ಮುನ್ನುಡಿಯಾಗಿ ಅಲ್ಲೂ 18 ಮೆಟ್ಟಿಲು ಪೂಜೆ ನಡೆಯುತ್ತದೆ. ಅದೇ ಮಾದರಿಯ ಪೂಜೆ ಇಲ್ಲಿಯೂ ನಡೆಯುತ್ತದೆ. ಇದನ್ನು 1998ರಿಂದಲೂ ಈ ದೇವಾಲಯದಲ್ಲಿ ಮಾಡುತ್ತಲೇ ಬಂದಿದ್ದೀವಿ’ ಎಂದು ವಿವರ ನೀಡುತ್ತಾರೆ ಜಯಕರ ಶೆಟ್ಟಿ.

ಈ ಬಾರಿ ನವೆಂಬರ್‌ 16ರಂದು ಮಂಡಲೋತ್ಸವ ಆರಂಭವಾಗಿತ್ತು. ಡಿಸೆಂಬರ್‌ 26ರವರೆಗೂ ನಡೆಯುತ್ತದೆ. ಡಿ.25ರಂದು ಬುಧವಾರ ವಿಶೇಷ ಪೂಜೆ, ಉತ್ಸವ ಇದೆ. ಸಂಜೆ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. 26ರಂದು ಮಂಡಲ ವಿಳಕ್ಕು ಮಹೋತ್ಸವ, ಉತ್ಸವ, ಅನ್ನದಾನವಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT