ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಗುರುತುಪತ್ತೆಗೆ ವಿಶೇಷ ಮುಂಗೈ ಗುರುತಿನ ಪಟ್ಟಿ

Last Updated 14 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಂಡು ಶಿಶುವಿನ ಜಾಗದಲ್ಲಿ ಹೆಣ್ಣು ಮಗುವನ್ನು ಇರಿಸುವವರು, ಹೆಣ್ಣು ಮಗು ಇದ್ದಲ್ಲಿ ಗಂಡು ಮಗುವನ್ನು ಮಲಗಿಸುವವರು, ಮುದ್ದಾದ ಮಗುವನ್ನು ಎತ್ತಿಕೊಂಡು ಹೋಗಿ ತಮ್ಮವರ ಬಳಿ ಮಲಗಿಸುವವರು ನಗರದ ಕಿಮ್ಸ (ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಇನ್ನು ಮುಂದೆ ತಮ್ಮ ಕರಾಮತ್ತು ತೋರಿಸಲು ಸಾಧ್ಯವಿಲ್ಲ. ಮಗುವಿನ ಗುರುತು ಪತ್ತೆಗೆ ಇಲ್ಲಿ ಈಗ `ವಿಬ್~ (ರಿಸ್ಟ್ ಐಡೆಂಟಿಫಿಕೇಷನ್ ಬ್ಯಾಂಡ್-ಮುಂಗೈ ಗುರುತಿನ ಪಟ್ಟಿ) ಜಾರಿಗೆ ಬಂದಿದೆ.

ವೈರಸ್‌ನಿಂದ ಹರಡುವ ರೋಗ ನಿರೋಧಕ ಹಾಗೂ ಸೋಂಕು ನಿವಾರಕ (ಆ್ಯಂಟಿ ಪ್ಯಾಥೋಜೆನಿಕ್ ಆ್ಯಂಡ್ ಇನ್ಫೆಕ್ಷನ್ ಪ್ರೂಫ್) ಸಾಧನದಿಂದ ವಿಬ್ ತಯಾರಿಸಲಾಗುತ್ತದೆ. ಸುಮಾರು ಆರರಿಂದ ಎಂಟು ಇಂಚು ಉದ್ದದ ವಿಬ್‌ನ ಒಂದು ಬದಿಯಲ್ಲಿ ಲಾಕ್ ಮಾಡುವ ಗುಂಡಿಗಳಿದ್ದು ಇನ್ನೊಂದು ಬದಿಯಲ್ಲಿ ಸಣ್ಣ ತೂತುಗಳಿವೆ.

ಇವುಗಳ ಮಧ್ಯೆ ಖಾಲಿ ಜಾಗದಲ್ಲಿ ಮಗುವಿನ ಹೆಸರು, ಹೆತ್ತವರ ಹೆಸರು, ತೂಕ, ಲಿಂಗ ಇತ್ಯಾದಿಗಳನ್ನು ದಾಖಲಿಸಲಾಗುತ್ತದೆ. ಮುಂಗೈಗೆ ಹಾಕಿ ಲಾಕ್ ಮಾಡಿದರೆ ಯಾರಿಗೂ ಬಿಚ್ಚಲು ಸಾಧ್ಯವಿಲ್ಲ.

ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿ ಬೆಳಗಾವಿಯ ಬಿಮ್ಸನಲ್ಲಿ ಕೆಲವು ತಿಂಗಳ ಹಿಂದೆ ಜಾರಿಗೆ ಬಂದಿರುವ ಇದು ಯಶಸ್ಸು ಕಂಡಿದೆ.

ಕಿಮ್ಸನಲ್ಲಿ ಪ್ರಾಯೋಗಿಕವಾಗಿ ಈಗ ಬಳಸಲಾಗುತ್ತದೆ. ಕೆಲವೇ ದಿನಗಳಲ್ಲಿ ಇಲ್ಲಿಯೂ ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಲಿದೆ.

`ಇದು ಶಿಶುವಿನ ಗುರುತು ಪತ್ತೆಗೆ ಉತ್ತಮ ಸಾಧನ. ಯಾವುದೇ ನೋವು ಉಂಟು ಮಾಡದ ಹಾಗೂ ಆರೋಗ್ಯಕ್ಕೆ ಹಾನಿ ಮಾಡದ ವಿಬ್  ಶೇಕಡಾ 100 ರಷ್ಟು ಸುರಕ್ಷಿತ~ ಎಂದು ಕಿಮ್ಸ ನಿರ್ದೇಶಕಿ ಡಾ. ವಸಂತಾ ಕಾಮತ್ `ಪ್ರಜಾವಾಣಿ~ಗೆ ತಿಳಿಸಿದರು.

`ಗಂಡು ಮಗುವಿನ ಮೇಲೆ ಆಸೆ ಇರುವವರು, ಸುಂದರವಾದ ಮಕ್ಕಳ ಮೇಲೆ ಕಣ್ಣಿಡುವವರು ನವಜಾತ ಶಿಶುಗಳನ್ನು ಬದಲಿಸುವ ದುಷ್ಟತನಕ್ಕೆ ಕೈ ಹಾಕುತ್ತಾರೆ. ಅಂಥವರಿಂದ ಹೆತ್ತವರಿಗೆ ವಂಚನೆ ಆಗದಂತೆ ಮಾಡಲು ವಿಬ್ ಸಹಕಾರಿ~ ಎಂದು ಕಿಮ್ಸ ವೈದ್ಯಕೀಯ ಅಧೀಕ್ಷಕ ಡಾ. ಬಿ.ವಿಜಯಚಂದ್ರ ಹೇಳಿದರು.

`ಶಿಶುವಿನ ಹೆಬ್ಬೆಟ್ಟು, ಕಾಲಿನ ಪಾದದ ಅಚ್ಚು ಇತ್ಯಾದಿಗಳನ್ನು ಬಳಸಿ ಈ ಹಿಂದೆ ಗುರುತು ಪತ್ತೆ ಮಾಡಲಾಗುತ್ತಿತ್ತು. ಇದರಿಂದ ಅನೇಕ ತೊಂದರೆಗಳಾಗುತ್ತಿದ್ದವು. ಹೊಸ ಪದ್ಧತಿಯಿಂದ ಸಾಕಷ್ಟು ಅನುಕೂಲಗಳಿವೆ. ಹುಟ್ಟಿದ ಮಕ್ಕಳ ಸಂಖ್ಯೆ ತಿಳಿದುಕೊಳ್ಳುವುದಕ್ಕೂ ಇದು ಸುಲಭ ವಿಧಾನ~ ಎಂದು ಕಿಮ್ಸನ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹಿರೇಮಠ ತಿಳಿಸಿದರು.

ಶುಶ್ರೂಷಕಿಯರು ನಿರಾಳ
ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಗುರುತು ಪತ್ತೆಗಾಗಿ ವಿವಿಧ ವಿಧಾನಗಳನ್ನು ಬಳಸಲಾಗುತ್ತದೆ. ಕಿಮ್ಸ ನಲ್ಲಿ ದಾರಕ್ಕೆ ಕಾಗದದ ತುಂಡು ಕಟ್ಟಿ ಅದರಲ್ಲಿ ಮಾಹಿತಿ ಯನ್ನು ಬರೆಯಲಾಗುತ್ತಿತ್ತು. ಇದು ಕೆಲ ವೊಮ್ಮೆ ಬಿಚ್ಚಿಹೋಗುತ್ತಿತ್ತು. ನೀರು ತಾಗಿದರೆ ಹಾಳಾಗುತ್ತಿತ್ತು.
 
ದಾರವನ್ನು ಬಿಚ್ಚಿ ಅದಲು ಬದಲು ಮಾಡುವ ಸಾಧ್ಯತೆಗಳಿದ್ದವು. ಹೊಸ ಸಾಧನದಿಂದ ಇಂಥ ಯಾವುದೇ ತಪ್ಪುಗಳು ಆಗಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳ ಶುಶ್ರೂಷಕಿಯರು ಕೂಡ ನಿರಾಳರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT