ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯ ಹೃದಯ ಮುಟ್ಟಲಿ...

ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ
Last Updated 5 ಡಿಸೆಂಬರ್ 2013, 7:00 IST
ಅಕ್ಷರ ಗಾತ್ರ

ಕೆಜಿಎಫ್: ಮಕ್ಕಳ ಸಾಹಿತ್ಯ ಎನ್ನುವುದು ಕೇವಲ ಪ್ರಾಸಕ್ಕಷ್ಟೇ ಮುಖ್ಯವಾಗಬಾರದು. ಮಕ್ಕಳ ಸಾಹಿತ್ಯದ ಯಾವುದೇ ಪ್ರಕಾರ­ವಾದರೂ ಅದು ಮಕ್ಕಳ ಹೃದಯ ಮುಟ್ಟು­ವಂತಿರ­ಬೇಕು. ಅಲ್ಲಿ ವ್ಯಕ್ತಿಕ್ವ ವಿಕಾಸದ ಪಾಠಗಳೂ ಇರಬೇಕು...

---ರಾಬರ್ಟ್‌ಸನ್‌ಪೇಟೆ ಕನ್ನಡ ಸಂಘದ ಆವರಣದಲ್ಲಿ ಗುರುವಾರ ನಡೆಯಲಿರುವ ಜಿಲ್ಲಾ ಮಟ್ಟದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆ­ಯಾಗಿ­ರುವ ರಾಜಲಕ್ಷ್ಮೀ ಅವರ ಸ್ಪಷ್ಟ ನುಡಿಗಳಿವು. ಮಕ್ಕಳನ್ನು ಕಾಳಜಿ ಮತ್ತು ಪ್ರೀತಿಯಿಂದ ದೊಡ್ಡವರು ನೋಡಿಕೊಳ್ಳುವ ರೀತಿಯಲ್ಲೇ ಮಕ್ಕಳ ಸಾಹಿತ್ಯ ರಚನೆಯಲ್ಲೂ ಮಕ್ಕಳ ಬಗೆಗೆ ಕಾಳಜಿ ಮತ್ತು ಪ್ರೀತಿ ಇರಬೇಕು.

ಮಕ್ಕಳಿಗಿರುವ ಬೆರಗು, ಎಲ್ಲವನ್ನೂ ಮುರಿದು ಕಟ್ಟುತ್ತಲೇ ಅರ್ಥ ಮಾಡಿಕೊಳ್ಳುವ ಅವರ ಹಂಬಲಕ್ಕೆ ಮಕ್ಕಳ ಸಾಹಿತ್ಯವು ನೀರೆರೆಯಬೇಕು ಎಂದೂ ಅವರು ಹೇಳುತ್ತಾರೆ. ಹೀಗಾಗಿ ಮಕ್ಕಳ ಬದುಕು ಮತ್ತು ಮಕ್ಕಳ ಸಾಹಿತ್ಯ ಅಂರ್ತಗತವಾಗಿ ಬೆರೆಯಬೇಕು ಎಂಬುದು ಅವರ ಪ್ರತಿಪಾದನೆ.

ಗಡಿನಾಡಾದ ಕೆಜಿಎಫ್‌ನಲ್ಲಿ ಕನ್ನಡ ಭಾಷೆಯ ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಾಗಿದೆ ಎನ್ನುವ ಮೂಲಕ ಅವರು, ಸಮುದಾಯ ಬಳಸುವ ಕನ್ನಡ ಭಾಷೆಯ ಕಡೆಗೂ ತಮ್ಮ ಗಮನವಿರುವುದನ್ನು ಸ್ಪಷ್ಟಪಡಿಸುತ್ತಾರೆ.

ನಗರದ ಚಾಂಪಿಯನ್‌ರೀಫ್ಸ್‌ನ ಸಂತ ಜೋಸೆಫ್‌ ಕಾನ್ವೆಂಟ್‌ನ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ, ಚರ್ಚಾಪಟುವೂ ಆಗಿರುವ ರಾಜಲಕ್ಷ್ಮೀ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಪ್ರ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಎಂದು ಘೋಷಣೆಯಾದಾಗ ಏನು ಅನಿಸಿತು?
ನಾನಿನ್ನೂ ಹೈಸ್ಕೂಲ್ ವಿದ್ಯಾರ್ಥಿನಿ. ನನ್ನನ್ನು ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದ ಕೂಡಲೇ ತುಂಬಾ ಖುಷಿಯಾಯಿತು. ಕನ್ನಡ ಶಿಕ್ಷಕರಾದ ದೇಶಪಾಂಡೆ, ವೀರಪ್ಪ ಸಾರ್‌, ಮುಖ್ಯ ಶಿಕ್ಷಕರಾದ ಅಮುದಾ ಸಿಸ್ಟರ್‌ ಹುರಿದುಂಬಿಸಿದರು. ಧೈರ್ಯ ತುಂಬಿದರು.

ಪ್ರ: ಮಕ್ಕಳ ಸಾಹಿತ್ಯ ಹೇಗಿರಬೇಕು ಅನಿಸುತ್ತದೆ?
ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಹೃದಯ ಮುಟ್ಟಬೇಕು. ಸಾಹಿತ್ಯದಲ್ಲಿರುವ ವಿಷಯಗಳ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಮಕ್ಕಳ ಸಾಹಿತ್ಯಕ್ಕೂ ದೊಡ್ಡವರ ಸಾಹಿತ್ಯಕ್ಕೂ ಅಗಾಧ ವ್ಯತ್ಯಾಸವಿದೆ. ಗಡಿನಾಡಾದ ಇಲ್ಲಿ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಸ್ಪಷ್ಟತೆ ಬರಬೇಕು. ಬಹುತೇಕ ಮಕ್ಕಳು ಲ ಕಾರ ಮತ್ತು ಳ ಕಾರಕ್ಕೆ ವ್ಯತ್ಯಾಸವನ್ನೇ ತಿಳಿದಿಲ್ಲ. ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಸಾಹಿತ್ಯ ಹೇಗಿರಬೇಕು ಎಂದರೆ ‘ಝಣ ಝಣ ಝಣ, ಜೇಬು ತುಂಬ ಹಣ, ಮೇಲೆಕೆತ್ತಿ ಕೆಳಗೆ ಬೀಳಲು ಠಣ್‌ ಠಣ ಠಣ‘ ಎಂಬ ಸರಳ ಮತ್ತು ಆಸಕ್ತಿದಾಯಕ ಪದ್ಯದಂತಿರಬೇಕು. ಏನೇ ಆದರೂ, ನೇರ ಮತ್ತು ಸರಳ ಭಾಷೆ ಮಕ್ಕಳಿಗೆ ಇಷ್ಟವಾಗುತ್ತವೆ. ಮನಮುಟ್ಟುತ್ತವೆ.

ಪ್ರ: ಸಾಹಿತ್ಯ ಅನ್ನುವಂಥದ್ದನ್ನು ಏನಾದರೂ ಬರೆದಿರುವಿರಾ?
ನಾನು ಇದುವರೆವಿಗೂ ಯಾವುದೇ ಕವಿಗಳನ್ನು ನೋಡಿಲ್ಲ. ಪಠ್ಯದ ಪುಸ್ತಕಗಳನ್ನು ಬಿಟ್ಟರೆ ಬೇರೆ ಓದಿಲ್ಲ. ಹಾಸ್ಟೆಲ್‌ನಲ್ಲಿರುವುದರಿಂದ ವಿಶೇಷ ಪುಸ್ತಕಗಳು ಸಿಗುವುದಿಲ್ಲ. ಆದರೆ ಕವಯತ್ರಿ ಆಗಬೇಕೆಂಬ ತುಡಿತ ನನ್ನಲ್ಲೂ ಇದೆ. ಒಬ್ಬಳೇ ಇದ್ದಾಗ ಏನಾದರೂ ಬರೆಯುತ್ತೇನೆ. ಆದರೆ ಅದನ್ನು ಯಾರಿಗೂ ತೋರಿಸಿಲ್ಲ.

ಪ್ರ: ಸಮ್ಮೇಳನಾಧ್ಯಕ್ಷೆಯಾಗಿ ಭಾಷಣಕ್ಕೆ ಹೇಗೆ ಸಿದ್ಧತೆ ನಡೆಸಿದ್ದೀರಿ?
ಸಮ್ಮೇಳನದಲ್ಲಿ ವಿಷಯ ಮಂಡಿಸಲು, ಸಮ್ಮೇಳನಾಧ್ಯಕ್ಷೆಯಾಗಿ ಮಾತನಾಡಲು ಈಗಾಗಲೇ ಎಲ್ಲ ಬಗೆಯ ತಯಾರಿ ನಡೆಸಿದ್ದೇನೆ. ಶಿಕ್ಷಕರ ಮತ್ತು ಹಿತೈಷಿಗಳ ಸಲಹೆ ಪಡೆದಿದ್ದೇನೆ. ಭಾಷಣವನ್ನು ಸಿದ್ಧಮಾಡಿದ್ದೇನೆ. ಇನ್ನೂ ಅದಕ್ಕೆ ಕೆಲವು ಅಂಶಗಳನ್ನು ಸೇರಿಸಬೇಕು. ಜೊತೆಗೆ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಗಂಭೀರತೆ ಬೇಕು. ನನ್ನ ಭಾಷಣ ಎಲ್ಲರ ಹೃದಯವನ್ನು ಮುಟ್ಟಬೇಕು. ಅದಕ್ಕಾಗಿ ತಯಾರಿ ನಡೆದಿದೆ.

ಪ್ರ: ಮಕ್ಕಳ ಸಾಹಿತ್ಯ ಸಮ್ಮೇಳನದಿಂದ ಯಾವ ರೀತಿ ಪ್ರಯೋಜನ ಆಗಬಹುದು?
ದೊಡ್ಡವರ ಸಾಹಿತ್ಯ ಎಲ್ಲಾ ಕಡೆ ಸಿಗುತ್ತೆ. ಆದರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸುಲಭವಾಗಿ ದಕ್ಕುವುದಿಲ್ಲ. ಮಕ್ಕಳು ಪುಸ್ತಕ ಓದುವ ಪರಿಪಾಠವನ್ನು ಬೆಳೆಸಬೇಕು. ಅದಕ್ಕಾಗಿ ವ್ಯಾಪಕ ಪ್ರಚಾರ ನಡೆಸಬೇಕು. ಆಗ ಮಕ್ಕಳಲ್ಲಿ ಕನ್ನಡಾಭಿಮಾನ ಕೂಡ ತಾನಾಗಿಯೇ ಬೆಳೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT