ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಗಮನದ ಕೊರತೆ

Last Updated 4 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅತಿ ಚಟುವಟಿಕೆಯ ಗಮನದ ಕೊರತೆಯ ತೊಂದರೆ (ಅಟೆನ್ಷನ್-ಡೆಫಿಸಿಟ್/ಹೈಪರ್‌ಆ್ಯಕ್ಟಿವಿಟಿ ಡಿಸಾರ್ಡರ್-ಎಡಿಎಚ್‌ಡಿ) ಅನೇಕ ಮಕ್ಕಳಲ್ಲಿ ಕಂಡುಬರುವ ಸೂಕ್ತವಲ್ಲದ ನಡವಳಿಕೆಯ ರೂಪ. ಅತಿ ಚಟುವಟಿಕೆಯ ಗಮನದ ಕೊರತೆಯ ತೊಂದರೆಯ ಮುಖ್ಯ ವೈಶಿಷ್ಟ್ಯವೆಂದರೆ ಗಮನ ನೀಡದಿರುವುದು ಅಥವಾ ಅತಿಯಾದ ಚಟುವಟಿಕೆ -ಆವೇಗ ಪ್ರವೃತ್ತಿ ಮುಂತಾದವು ಪದೇ ಪದೇ ಕಾಣಿಸಿಕೊಳ್ಳುವುದು. ಈ ವೈಶಿಷ್ಟ್ಯಗಳು ಇತರೆ ಮಕ್ಕಳಿಗೆ ಹೋಲಿಸಿದಲ್ಲಿ ಹೆಚ್ಚು ಹೆಚ್ಚಾಗಿ ಆಗಾಗ್ಗೆ ಕಾಣಿಸಿಕೊಳ್ಳುವುದಲ್ಲದೆ ತೀವ್ರ ರೀತಿಯಲ್ಲಿರುತ್ತವೆ. ಎಡಿಎಚ್‌ಡಿ ಹೊಂದಿರುವ ಮಕ್ಕಳು ಶಾಲೆ, ಮನೆ ಅಥವ ಕೆಲಸಗಳಲ್ಲಿ ಗಮನ ಕೇಂದ್ರೀಕರಿಸಲು ತೊಂದರೆ ಹೊಂದಿರಬಹುದು. ಈ ನಡವಳಿಕೆಗಳು ಸಾಮಾಜಿಕ ಸಂಬಂಧಗಳು ಮತ್ತು ಕಲಿಕೆಯಲ್ಲಿ ಗಮನಾರ್ಹ ತೊಂದರೆಗಳನ್ನುಂಟು ಮಾಡುತ್ತವೆ. ಇದೇ ಕಾರಣದಿಂದ ಎಡಿಎಚ್‌ಡಿ ಹೊಂದಿರುವ ಮಕ್ಕಳು ಕೆಲವೊಮ್ಮೆ ಕಷ್ಟಕರ ವ್ಯಕ್ತಿಗಳೆಂದು ಅಥವ ನಡವಳಿಕೆ ತೊಂದರೆ ಹೊಂದಿರುವವರೆಂದು ನೋಡಲಾಗುತ್ತದೆ. 

 ನಿರ್ದಿಷ್ಟ ಅಂಶಗಳು :
* ಗಮನ ನೀಡದಿರುವುದು
*  ಆವೇಗ ಪ್ರವೃತ್ತಿ
* ಅತಿ ಚಟುವಟಿಕೆ
 ಈ ಲಕ್ಷಣಗಳು ಸತತವಾಗಿದ್ದು, ಅಭಿವೃದ್ಧಿಯಾಗುತ್ತಿರಬೇಕಾಗಿದ್ದು ಕನಿಷ್ಠ ಆರು ತಿಂಗಳವರೆಗೆ ಕಾಣಿಸಿಕೊಂಡಿರಬೇಕು.ಲಕ್ಷಣಗಳು ಎರಡು ಅಥವಾ ಹೆಚ್ಚಿನ ಸ್ಥಳಗಳಲ್ಲಿ (ಉದಾಹರಣೆಗೆ ಶಾಲೆ ಅಥವಾ ಮನೆ) ಕಾಣಿಸಿಕೊಂಡಿರಬೇಕು.

ವೈದ್ಯಕೀಯ ವೈಶಿಷ್ಟ್ಯಗಳು
ಎಡಿಎಚ್‌ಡಿ ಯ ಲಕ್ಷಣಗಳು ಹಂತ ಹಂತವಾಗಿ ಕೆಲವು ತಿಂಗಳುಗಳ ಅವಧಿಯಲ್ಲಿ ಗೋಚರಿಸುತ್ತವೆ. ಆಗಾಗ್ಗೆ ಆವೇಗ ವರ್ತನೆ ಮತ್ತು ಅತಿ ಚಟುವಟಿಕೆಯ ಲಕ್ಷಣಗಳಲ್ಲದೆ  ಗಮನದ ಕೊರತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅತಿ ಚಟುವಟಿಕೆ, ಗಮನವಿಲ್ಲದಿರುವುದು, ಏಕಾಗ್ರತೆಯ ತೊಂದರೆ ಮತ್ತು ಆವೇಗ ಪ್ರವೃತ್ತಿಗಳು ಶಾಲೆ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಮಕ್ಕಳ ಪ್ರದರ್ಶನದ ಮೇಲೆ ಪರಿಣಾಮ ಮಾಡಿದಾಗ ಪೋಷಕರು ಸಹಾಯವನ್ನು ಕೋರಬಹುದು. ರೋಗ ಪತ್ತೆ ಮಾಡುವ ನಿಯಮಗಳಿಗೆ ಹೊಂದಬೇಕಾದಲ್ಲಿ ಅಸಾಧಾರಣ ನಡವಳಿಕೆಗಳು ಅತಿಯಾಗಿರಬೇಕು, ದೀರ್ಘಕಾಲದ್ದಾಗಿರಬೇಕು, ವ್ಯಾಪಕವಾಗಿರಬೇಕು. ಇದನ್ನು ಈ ಕೆಳಗೆ ವಿವರಿಸಲಾಗಿದೆ. ಈ ನಡವಳಿಕೆಗಳು ಏಳು ವರ್ಷಗಳಿಗೆ ಮುನ್ನ ಕಡ್ಡಾಯವಾಗಿ ಕಾಣಿಸಿಕೊಂಡು ಕನಿಷ್ಠ ಆರು ತಿಂಗಳ ಕಾಲ ಮುಂದುವರಿಯಬೇಕು ಎಂದು ಹೇಳಿದರೂ ಎಡಿಎಚ್‌ಡಿ ಎಂಬುದರ ಖಾತ್ರಿ ನೀಡಲು ಮಗು ಕನಿಷ್ಠ ಆರು ವರ್ಷದ್ದಾಗಿರಬೇಕು.

ಎಡಿಎಚ್‌ಡಿನ ಕೆಲವು ಲಕ್ಷಣಗಳು
* ವಿವರಗಳ ಕಡೆಗೆ ಗಮನ ಕೇಂದ್ರೀಕರಿಸಲು ಆಗಾಗ್ಗೆ ವಿಫಲವಾಗುವುದು ಅಥವಾ ಉದಾಸೀನದ ತಪ್ಪುಗಳನ್ನು ಮಾಡುವುದು.
* ನೇರವಾಗಿ ಮಾತನಾಡುವಾಗ ಅದನ್ನು ಕೇಳಿಸಿಕೊಳ್ಳದೆ ಇರುವಂತೆ ಆಗಾಗ್ಗೆ ಭಾಸವಾಗುತ್ತದೆ.
*  ಸೂಚನೆಗಳನ್ನು  ಎಚ್ಚರಿಕೆಯಿಂದ ಮತ್ತು ಸಂಪೂರ್ಣವಾಗಿ ಅನುಸರಿಸುವಲ್ಲಿ ಆಗಾಗ್ಗೆ ವಿಫಲರಾಗುತ್ತಾರೆ.
*  ಪ್ರಮುಖ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ ಅಥವಾ ಮರೆಯುತ್ತಾರೆ.
* ಅಶಾಂತ ಪ್ರವೃತ್ತಿ ಅಥವ ತಳಮಳ
*  ಸೂಕ್ತವಲ್ಲದ ಸಂದರ್ಭಗಳಲ್ಲಿ ಅತಿಯಾಗಿ ಓಡುವುದು ಅಥವ ಮೇಲೆ ಹತ್ತುವುದು.
* ಆಗಾಗ್ಗೆ ಅತಿಯಾದ ಮಾತು
* ಪ್ರಶ್ನೆಯನ್ನು ಆಲಿಸುವ ಮುನ್ನವೇ ಉತ್ತರಿಸುವುದು.
* ಆಟವಾಡುವಾಗ ತನ್ನ ಅವಧಿಗಾಗಿ ಕಾಯುವ ತಾಳ್ಮೆ ಇಲ್ಲದಿರುವುದು

ಆರಂಭದ ಅಂಶಗಳು
* ಚಲನೆಯಲ್ಲಿ ಚಡಪಡಿಕೆ
*  ವಿನಾಶಕಾರಿ ಆಟ,
* ವಾದ ಮಾಡುವ ಪ್ರವೃತ್ತಿ ಮತ್ತು ಅತಿಯಾದ ಸಿಟ್ಟು
* ಪೋಷಕರ/ಶಿಕ್ಷಕರ ಹೆಚ್ಚಿನ ಗಮನಕ್ಕಾಗಿ ಬೇಡಿಕೆ
ಈ ತೊಂದರೆಯೆಡೆಗೆ ಮಗು ಸಾಗುತ್ತಿದೆ ಎಂಬುದನ್ನು ಸೂಚಿಸುವ ಆರಂಭದ ಮಕ್ಕಳ ನಡವಳಿಕೆಗಳಲ್ಲಿನ ಅಸಾಧಾರಣ ವೈಶಿಷ್ಟ್ಯಗಳು ಇಂತಿವೆ.

ಶಿಶುಗಳು ಮತ್ತು
ಶಾಲಾಪೂರ್ವ ಮಕ್ಕಳು

*  ಅತಿ ಚಟುವಟಿಕೆ
* ಚಲನೆಯಲ್ಲಿರುವುದು
* ಯಾವಾಗಲೂ ಓಡಾಡುತ್ತಿರುವುದು
* ಪದೇ ಪದೇ ಚಟುವಟಿಕೆಗಳ ಕಡೆಗೆ ಗಮನಹರಿಸುವುದು.
* ಯಾವುದೇ ಗೊತ್ತುಗುರಿ ಇಲ್ಲದಂತೆ ಕಾಣುವುದು.
* ನಾಜೂಕಿಲ್ಲದೆ ಒಡ್ಡೊಡ್ಡಾಗಿರುವುದು, ಪದೇ ಪದೇ ಅಪಘಾತಕ್ಕೆ ಗುರಿಯಾಗುವುದು.
ಉದಾಹರಣೆಗಳು : ಊಟದ ಸಂದರ್ಭದಲ್ಲಿ ಪದೇ ಪದೇ ಎದ್ದು ಹೋಗುವುದು. ಕಥೆ ಆಲಿಸುವಾಗ ಕುಳಿತುಕೊಳ್ಳಲು ಸಾಧ್ಯವಾಗದೇ ಇರುವುದು. ಟಿವಿ ವೀಕ್ಷಿಸುವಾಗಲೂ ಚಲನೆಯಲ್ಲಿರುವುದು ಮುಂತಾದವು.

ಆವೇಗ ಪ್ರವೃತ್ತಿ
* ಮುಂಚಿತವಾಗಿ ಹೇಳಲು ಸಾಧ್ಯವಾಗದಂತೆ ಚಟುವಟಿಕೆಗಳ ಬದಲಾವಣೆ.
*  ನಡವಳಿಕೆಗಳಲ್ಲಿ ಅಡೆತಡೆಗಳಿದ್ದು ಯಾವುದೇ ಪ್ರಚೋದನೆ ಇಲ್ಲದೆ ಅಪಾಯಕಾರಿ ನಡವಳಿಕೆ.
*  ಪೋಷಕರ ಮಾತು ಕೇಳದಿರುವುದು.
* ತಪ್ಪುಗಳಿಂದ ಕಲಿಯದೇ ಇರುವುದು.
* ಹೊಗಳಿಕೆ ಅಥವಾ ಶಿಕ್ಷೆಗೆ ಪ್ರತಿಕ್ರಿಯಿಸದೇ ಇರುವುದು.

ಉದಾಹರಣೆಗೆ - ಆಟದ ಚಟುವಟಿಕೆ ಸಂದರ್ಭದಲ್ಲಿ ಮಗು ತನ್ನ ಸರದಿಗಾಗಿ ಕಾಯಲು ಸಾಧ್ಯವಾಗದಿರುವುದು.
* ಗಮನವಿಲ್ಲದಿರುವುದು.
* ಸುಲಭವಾಗಿ ಏಕಾಗ್ರತೆಗೆ ಭಂಗವಾಗುವುದು.
* ಚಟುವಟಿಕೆಗಳಲ್ಲಿ ಸ್ಪರ್ಧಿಸದೇ ಇರುವುದು.
*  ಒಬ್ಬರೇ ಆಡಲು ಸಾಧ್ಯವಾಗದೇ ಇರುವುದು.
*  ಬಹಳ ಅಸಂಘಟಿತವಾಗಿರುವುದು.
* ಸಂಕೀರ್ಣ ಪ್ರೇರಣೆಗಳನ್ನು ಯೋಜಿತ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗದೇ ಇರುವುದು.

ಉದಾಹರಣೆ - ಒಂದು ಚಟುವಟಿಕೆಯ ಮೇಲೆ ಕೆಲವು ನಿಮಿಷಗಳಿಗೂ ಹೆಚ್ಚಿನ ಅವಧಿಯ ಕಾಲ ಗಮನ ಕೇಂದ್ರೀಕರಿಸಲು ಮಗುವಿಗೆ ಸಾಧ್ಯವಾಗುವುದಿಲ್ಲ. ಹಾಗೂ  ಪದೇ ಪದೇ ಮತ್ತೊಂದು ಚಟುವಟಿಕೆಗೆ ಬದಲಾಗುವುದು.

  ಎಡಿಎಚ್‌ಡಿಯ ನಿರ್ವಹಣೆ
ಗಮನವಿಲ್ಲದಿರುವುದು ಮತ್ತು ಅತಿಯಾದ ಚಟುವಟಿಕೆಗಳ ಲಕ್ಷಣಗಳಿಗೆ ಹಲವಾರು ಚಿಕಿತ್ಸೆಗಳಿವೆ.  ಇವುಗಳನ್ನು ಒಟ್ಟಿಗೆ ನೀಡಲಾಗುತ್ತದೆ.

ಚಿಕಿತ್ಸೆ
* ದೈನಂದಿನ ಚಟುವಟಿಕೆಗಳ ಚಾರ್ಟ್‌ನಲ್ಲಿ ಹೊಗಳಿಕೆ ಅಥವ ಕೊಡುಗೆಗಳನ್ನು ನೀಡುವುದರ ಮೂಲಕ ಸಕಾರಾತ್ಮಕ ನಡವಳಿಕೆಗಳ ಪುನರ್‌ಸ್ಥಾಪನೆ(ಗೋಲ್ಡ್ ಸ್ಟಾರ್ ಅಥವಾ ಹ್ಯಾಪಿ ಫೇಸ್)
*  ಮನೆ ಮತ್ತು ಶಾಲೆಗಳಲ್ಲಿ ಏಕಾಗ್ರತೆಗೆ ಭಂಗವಾಗದ ವಾತಾವರಣವನ್ನು ಪೂರೈಸುವುದು.
* ಸಾಮಾಜಿಕ ಕೌಶಲ್ಯಗಳ ತರಬೇತಿ.
*  ಮಗುವಿನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸಗಳನ್ನು ಅಳವಡಿಸುವುದು.

* ಔಷಧೀಯ ಚಿಕಿತ್ಸೆ .
    ಸಂಬಂಧಿತ ತೊಂದರೆಗಳು ಮತ್ತು ಇತರೆ ರೋಗಗಳ ನಿರ್ವಹಣೆ
* ನಿರ್ದಿಷ್ಟ ಕಲಿಕೆಯ ವೈಫಲ್ಯ: ವಿಶೇಷ ಶಿಕ್ಷಣ ಮತ್ತು ಪರಿಹಾರಾತ್ಮಕ ಬೋಧನೆ
*  ವಿರುದ್ಧಾತ್ಮಕ ಉದ್ಧಟತನದ ನಡವಳಿಕೆ (ಪಾಲಕರ ವಿರುದ್ಧ ನಕಾರಾತ್ಮಕ, ಉದ್ಧಟತನ, ಅವಿಧೇಯತೆ ಮತ್ತು ಶತೃತ್ವವುಳ್ಳ ನಡವಳಿಕೆ) :

ನಡವಳಿಕೆಯನ್ನು ಬದಲಿಸುವ ತಂತ್ರಗಳು ಮತ್ತು ನಿರ್ವಹಣೆ
* ನಡತೆಯ ತೊಂದರೆ : ನಡವಳಿಕೆಯ ಬದಲಿಸುವುದು ಮತ್ತು ಸೂಕ್ತ ಔಷಧಗಳು.
* ಆತಂಕ ಮತ್ತು ಖಿನ್ನತೆ : ಔಷಧಗಳು ಮತ್ತು ಮಾನಸಿಕ ಚಿಕಿತ್ಸೆ.
* ಮೂರ್ಛೆರೋಗ : ಮೂರ್ಛೆರೋಗ ನಿರೋಧಕ ಔಷಧ ಬಳಸುವುದು.
* ಟಾರೆಟ್ ಸಿಂಡ್ರೋಮ್ (18 ವರ್ಷಕ್ಕಿಂತಲೂ ಮುನ್ನ ವಿವಿಧ ಚಲನೆಯ ತೊಂದರೆಗಳು ಮತ್ತು ಗಂಟಲಿನಿಂದ ಅನಿರ್ದಿಷ್ಟ ಶಬ್ದಗಳು ಕಾಣಿಸಿಕೊಳ್ಳುವುದು.) : ಔಷಧ ನೀಡಿಕೆ.

ತಡೆಯಲು ಕ್ರಮಗಳು
ಪ್ರಾಥಮಿಕ ಹಂತ : ವಾತಾವರಣದಲ್ಲಿ ಅಪಾಯಕಾರಿ ಅಂಶಗಳಾದಂತಹ ಗರ್ಭಾವಸ್ಥೆಯಲ್ಲಿ ತಾಯಂದಿರು ಮತ್ತು ಧೂಮಪಾನ ಮಾಡುವುದನ್ನು ತಡೆಯುವುದು ಹಾಗೂ ಸೀಸದ ಸಂಪರ್ಕವನ್ನು ತಡೆಯುವುದು.
ಎರಡನೇ ಹಂತ : ಲಕ್ಷಣಗಳನ್ನು ಶೀಘ್ರ ಪತ್ತೆ ಮಾಡುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ಶೀಘ್ರವಾಗಿ ಆರಂಭಿಸುವುದು.

ಮೂರನೇ ಹಂತ :
* ಶಾಲೆಯಲ್ಲಿ ಸಮಗ್ರ,ಅಂತರ್ಗತ ಶಿಕ್ಷಣದ ಪೂರೈಕೆ.
* ತರಗತಿಯಲ್ಲಿ ಹತ್ತಿರದ ನಿರೀಕ್ಷಣೆ, ಆದಷ್ಟು ಮುಂದಿನ ಸಾಲಿನಲ್ಲಿ ಕೂರಿಸುವುದು.
* ಮುಂಚಿತವಾಗಿ ಸೂಚಿಸಲಾದ ಕಾರ್ಯಕ್ರಮ ಪಟ್ಟಿ ಮತ್ತು ಅಲ್ಪಕಾಲದ ಅಧ್ಯಯನದ ಪೀರಿಯಡ್‌ಗಳು.
* ವಿಶೇಷ ಶಿಕ್ಷಣ ಮತ್ತು ಪರಿಹಾರಾತ್ಮಕ ಬೋಧನೆ.
       ಮನೆಯಲ್ಲಿ
*  ನಿಯಮಿತವಾದ ದೈನಂದಿನ ಕಾರ್ಯಕ್ರಮಗಳು.
* ಒಳ್ಳೆಯ ನಡತೆಯನ್ನು ಹೇಳಿಕೊಡುವುದು.
*  ಮಗುವಿನೊಂದಿಗೆ ಪ್ರೀತಿಯ ನಡವಳಿಕೆ.
* ಪೋಷಕರು ಇದೇ ರೀತಿಯ ತೊಂದರೆ ಇರುವ ಇತರೆ ಜನರೊಂದಿಗೆ ಸಂಪರ್ಕ ಹೊಂದಲು ಬೆಂಬಲದ ಸಮೂಹವನ್ನು ಸೃಷ್ಟಿಸಿಕೊಳ್ಳುವುದು.
ಲೇಖಕರ ಸಂಪರ್ಕ ಸಂಖ್ಯೆ
 95352 12556

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT