ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ನಗರ ವಿಸ್ತರಣೆಗೆ ತೀವ್ರ ವಿರೋಧ

Last Updated 4 ಡಿಸೆಂಬರ್ 2012, 8:13 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿಕೊಂಡು ಮಡಿಕೇರಿ ನಗರವನ್ನು ವಿಸ್ತರಿಸಲು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿರುವುದಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಹಲವು ಸಂಘಟನೆಗಳ ಕಾರ್ಯಕರ್ತರು ಮುಡಾದ ಯೋಜನೆಯನ್ನು ವಿರೋಧಿಸಿದರು.

ನಗರ ವಿಸ್ತರಣೆ ಮಾಡುವುದರಿಂದ ಮಡಿಕೇರಿಯ ಹಸಿರು ಪರಿಸರ ನಾಶವಾಗುತ್ತದೆ. ಗಿರಿಕಂದರಗಳು ನಾಶವಾಗುತ್ತವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಕೊಡಗಿನಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೆ, ಮೈಸೂರು, ಬೆಂಗಳೂರು ಅಲ್ಲದೇ, ಪಕ್ಕದ ತಮಿಳುನಾಡು ಹಾಗೂ ಕೇರಳ ರಾಜ್ಯಗಳು ತೀವ್ರವಾಗಿ ನೀರಿನ ಕೊರತೆಯನ್ನು ಎದುರಿಸುತ್ತವೆ ಎಂದು ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿಯ ಉಪಾಧ್ಯಕ್ಷ ಪೂಣಚ್ಚ ಹೇಳಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಸುರೇಶ ಚಂಗಪ್ಪ ಮಾತನಾಡಿ, ಈ ಯೋಜನೆಯನ್ನು ತರಲು ಮುಡಾ ಆತುರಪಡುವುದು ಬೇಡ. ಸಾಕಷ್ಟು ಯೋಚಿಸಿ, ಚರ್ಚಿಸಿ ಹಾಗೂ ಜನರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದರು.
ಕೊಡಗು ಮುಸ್ಲಿಮ್ ಹಿತರಕ್ಷಣಾ ವೇದಿಕೆಯ ಮೊಹಿಸಿನ್ ಮಾತನಾಡಿ, ನಾವು ಅಭಿವೃದ್ಧಿಗೆ ವಿರೋಧ ಇಲ್ಲ ಆದರೆ, ಈ ಯೋಜನೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗಲಿದೆ. ಆದ್ದರಿಂದ ಈ ಯೋಜನೆಯನ್ನು ಕೈಬಿಡುವುದೇ ಒಳಿತು ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ- ಜನರಲ್ ತಿಮ್ಮಯ್ಯ ಫೋರಂನ ಮೇಜರ್ (ನಿವೃತ್ತ) ಬಿ.ಎ. ನಂಜಪ್ಪ ಮಾತನಾಡಿ, ಈ ಯೋಜನೆಯ ಬಗ್ಗೆ ಜನರ ಅಭಿಪ್ರಾಯ ಪಡೆಯಬೇಕು ಹಾಗೂ ಅದಕ್ಕಾಗಿ ಸಾಕಷ್ಟು ಕಾಲಾವಕಾಶ ನೀಡಬೇಕು. ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ಇದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದರು.

ಕಾವೇರಿ ಸೇನೆಯ ಸಂಚಾಲಕ ರವಿ ಚೆಂಗಪ್ಪ ಮಾತನಾಡಿ, ಮಡಿಕೇರಿಯ ಪರಿಸರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಹಲವು ವೈವಿಧ್ಯಮಯ ಸಸ್ಯಗಳು ಹಾಗೂ ಪ್ರಾಣಿ ಪ್ರಭೇದಗಳು ವಾಸಿಸುತ್ತವೆ. ಇಲ್ಲಿರುವ ಕಾಡನ್ನು ಕಡಿದು ನಗರ ವಿಸ್ತರಿಸಿದರೆ ಪರಿಸರದ ಮೇಲೆಯೇ ಹಾನಿಯಾಗಲಿದೆ ಎಂದರು.

ಸುಮಾರು 15 ಸಂಘಟನೆಗಳ ಜೊತೆ ಚರ್ಚಿಸಿದ್ದು, ಎಲ್ಲರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಮುಡಾ ಹಿಂದಕ್ಕೆ ಸರಿಯದಿದ್ದರೆ ಶೀಘ್ರದಲ್ಲಿಯೇ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಬಾಬಿ ಚಿಯಣ್ಣ ಉಪಸ್ಥಿತರಿದ್ದರು.

ಸೇವ್ ಕೊಡಗು ಫೋರಂ ವಿರೋಧ: ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿದ ಸೇವ್ ಕೊಡಗು ಫೋರಂನ ಅಧ್ಯಕ್ಷ ಮಧು ಬೋಪಣ್ಣ ಕೂಡ ಮುಡಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.

ಈ ಯೋಜನೆ ಅನುಷ್ಠಾನಗೊಂಡರೆ ಸ್ಥಳೀಯರು ಎತ್ತಂಗಡಿಯಾಗುವ ಭೀತಿ ಇದೆ. ಭೂಗಳ್ಳರಿಗೆ, ರೆಸಾರ್ಟ್ ಹೋಟೆಲ್ ಮಾಲೀಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇದನ್ನು ಮುಡಾ ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT