ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ ವಿ.ವಿ. ಅರ್ಜಿ ವಿಸ್ತೃತ ಪೀಠಕ್ಕೆ

Last Updated 2 ಡಿಸೆಂಬರ್ 2013, 20:20 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ‘ವಿಶ್ವವಿದ್ಯಾಲಯ’ ಎಂಬ ಹೆಸರು ಬಳಕೆ ಮಾಡುವಂತಿಲ್ಲ ಎಂದು ವಿಶ್ವವಿದ್ಯಾ­ಲಯಗಳ ಅನುದಾನ ಆಯೋಗ (ಯುಜಿಸಿ) ನೀಡಿದ್ದ ಸೂಚನೆ ಪ್ರಶ್ನಿಸಿ ಮಣಿಪಾಲ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಸೋಮವಾರ ಆದೇಶಿಸಿದ್ದಾರೆ.

ಹಿಂದೆ ಮಣಿಪಾಲ್‌ ಅಕಾಡೆಮಿ ಫಾರ್‌ ಹೈಯರ್‌ ಎಜುಕೇಷನ್‌ (ಮಾಹೆ) ಹೆಸರಿನಲ್ಲಿ ಶಿಕ್ಷಣ ನೀಡುತ್ತಿದ್ದ ಸಂಸ್ಥೆಗೆ ಕೇಂದ್ರ ಸರ್ಕಾರ 1993ರಲ್ಲಿ ‘ಪರಿಭಾವಿತ (ಡೀಮ್ಡ್‌) ವಿಶ್ವವಿದ್ಯಾ­ಲಯ’ದ ಸ್ಥಾನಮಾನ ಕಲ್ಪಿ­ಸಿತು. ಡೀಮ್‌್ಡ ಸ್ಥಾನಮಾನ ಹೊಂದಿ­ರುವ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸ­ರನ್ನು ‘ವಿಶ್ವವಿದ್ಯಾಲಯ’ ಎಂದು ಬದ­ಲಾಯಿಸಿಕೊಳ್ಳಬಹುದು ಎಂದು ಯುಜಿಸಿ ಸಮ್ಮತಿ ಸೂಚಿಸಿತು. ನಂತರ ಈ ಸಂಸ್ಥೆ ತನ್ನ ಹೆಸರನ್ನು ‘ಮಣಿಪಾಲ ವಿಶ್ವವಿದ್ಯಾಲಯ’ ಎಂದು ಬದಲಾಯಿ­ಸಿ­ಕೊಂಡಿತು.

ನಂತರ 2009ರಲ್ಲಿ ಸ್ಪಷ್ಟೀಕರಣ ನೀಡಿದ ಯುಜಿಸಿ, ಡೀಮ್‌್ಡ  ವಿಶ್ವ­ವಿದ್ಯಾಲಯಗಳು ತಮ್ಮ ಹೆಸರಿನ ಜೊತೆ ‘ವಿಶ್ವವಿದ್ಯಾಲಯ’ ಪದ ಬಳಕೆ ಮಾಡು­ವಂತಿಲ್ಲ ಎಂದು ಹೇಳಿತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಒಂದು ಬಾರಿ ಒಪ್ಪಿಗೆ ನೀಡಿ, ಕೆಲವು ಕಾಲದ ನಂತರ ಆ ಒಪ್ಪಿಗೆಯನ್ನು ಹಿಂಪಡೆಯು­ವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಇನ್ನೊಂದು ಪ್ರಕರಣದ ವಿಚಾರಣೆ ವೇಳೆ, ಒಂದು ಬಾರಿ ಹೊರಡಿಸಿದ ಅಧಿ­ಸೂಚನೆಯನ್ನು ಹಿಂಪಡೆಯುವ ಅಧಿ­ಕಾರ ಯುಜಿಸಿಗೆ ಇದೆ ಎಂದು ಹೈಕೋರ್ಟ್‌ನ ಇನ್ನೊಂದು ಏಕಸದಸ್ಯ ಪೀಠ ಹೇಳಿತ್ತು. ಎರಡೂ ಆದೇಶಗಳು ಪರಸ್ಪರ ತಾಳೆಯಾಗದಿರುವುದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ಮಣಿಪಾಲ ವಿ.ವಿ. ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದಾರೆ.

ಬಿದಾಯಿ ವಿರುದ್ಧದ ಅರ್ಜಿ ವಜಾ
ಬೆಂಗಳೂರು:
ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿ­ರುವ ಬಿದಾಯಿ ಯೋಜನೆ ತಾರ­ತಮ್ಯಕ್ಕೆ ಎಡೆ ಮಾಡಿಕೊಡುವಂತಿದೆ ಎಂದು ದೂರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಡಾ. ಕೋಡೂರು ವೆಂಕಟೇಶ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ನೇತೃತ್ವದ ವಿಭಾಗೀಯ ಪೀಠ, ‘ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಇಂಥ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ.

ಬಿದಾಯಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ಸೂಕ್ತ ರೀತಿಯಲ್ಲಿ ಅನುವಾದ ಮಾಡಲೂ ಅರ್ಜಿದಾರರಿಗೆ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬಿದಾಯಿ ಯೋಜನೆಯ ಲಾಭವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಬಾರದು. ಎಲ್ಲ ಸಮುದಾಯಗಳಿಗೆ ಅದನ್ನು ವಿಸ್ತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT