ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಮಕ್ಕಳು ಕಿತ್ತಾಡಬಾರದು...

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಮೊನ್ನೆ ಬೆಂಗಳೂರಿನಲ್ಲಿ  ನಡೆದ ಕುಂಚಿಟಿಗರ ಸಮಾವೇಶದಲ್ಲಿ ನಂಜಾವಧೂತ ಸ್ವಾಮೀಜಿಯವರು ಕುಂಚಿಟಿಗರು ಒಕ್ಕಲಿಗರೊಂದಿಗೆ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅದನ್ನು ಪ್ರತಿಭಟಿಸಿದ ಶಾಂತವೀರ ಸ್ವಾಮೀಜಿಯವರು ನಾವು ವಕ್ಕಲಿಗರಲ್ಲ, ಕುಂಚಿಟಿಗರು  ಎಂದು ಕೂಗಿ ಕೂಗಿ ಹೇಳಲಾರಂಭಿಸಿದರು.ಈ ಇಬ್ಬರು ಸ್ವಾಮಿಗಳ ಅನುಯಾಯಿಗಳು ಎರಡು ಬಣಗಳಾಗಿ ಕದನಕ್ಕಿಳಿದರು.

ಈ ಕೃತಕ ವಿಭಜನೆ ಹಾಗೂ ಕದನದ ಹಿಂದೆ ಇರುವ ರಾಜಕೀಯ ಒತ್ತಡಗಳು ಹಾಗೂ ಸಂಕುಚಿತ ಜಾತಿಧೋರಣೆಗಳು ಎಲ್ಲರಿಗೂ ಗೊತ್ತಿವೆ. ಆದರೆ ಈಚಿನ ವರ್ಷಗಳಲ್ಲಿ  ಶೂದ್ರ ಜಾತಿಗಳು ಹಾಗೂ ದಲಿತ ಜಾತಿಗಳು ಪ್ರತ್ಯೇಕ ಗುಂಪುಗಳಾಗುತ್ತಿರುವುದರಿಂದ ರಾಜಕೀಯವಾಗಿ ಯಾರಿಗೆ ಲಾಭವಾಗುತ್ತಿದೆ ಎಂಬ ಬಗ್ಗೆ, ಈ ಎಲ್ಲ ಜಾತಿಗಳಲ್ಲಿ ಸಮಚಿತ್ತವುಳ್ಳ ನಾಯಕರು, ಚಿಂತಕರು ಸರಿಯಾಗಿ ಯೋಚಿಸಬೇಕಾಗಿದೆ.

ಈಚಿನ ವರ್ಷಗಳ ಕರ್ನಾಟಕ ರಾಜಕಾರಣದ ಮುಖ್ಯ ಬೆಳವಣಿಗೆಯೆಂದರೆ, ಮೇಲು ಜಾತಿಗಳು ಒಂದಾಗುತ್ತಿವೆ; ಹಿಂದುಳಿದ ಹಾಗೂ ದಲಿತ ಜಾತಿಗಳು ಒಡೆದು ಹೋಗುತ್ತಿವೆ. ಮೇಲುಜಾತಿಗಳು,ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರು ಹಾಗೂ ಲಿಂಗಾಯತರು, ಒಳಪಂಗಡಗಳ ಭೇದವಿಲ್ಲದೆ ಹಲವು ಕಡೆ ಬಿ.ಜೆ.ಪಿ.ಗೆ ಮತ ಹಾಕುತ್ತಿರುವ ಮಾದರಿಯನ್ನು ನೋಡಿದ್ದೇವೆ; ಎಲ್ಲೋ ಕೆಲವೆಡೆ ಮಾತ್ರ ಅದೂ ತಮ್ಮ ಜಾತಿಯ ಅಭ್ಯರ್ಥಿ ಕಣದಲ್ಲಿದ್ದಾಗ ಮಾತ್ರ ಇತರ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿರುವುದನ್ನು ನೋಡಿದ್ದೇವೆ.
ಆದರೆ, ಏಕ ಕಾಲದಲ್ಲಿ ಹೀಗೆ ಮೇಲು ಜಾತಿಗಳು ಒಂದಾಗುತ್ತಿರುವುದಕ್ಕೂ ಕೆಳಜಾತಿಗಳು ಒಡೆಯುತ್ತಿರುವುದಕ್ಕೂ ಸಂಬಂಧವಿದೆ. ಒಂದಾಗುತ್ತಿರುವವರೇ ಒಡೆಯುವುದರಲ್ಲೂ ಭಾಗಿಯಾಗಿದ್ದಾರೆ ಎನ್ನಲು ನಮ್ಮ ದಿನನಿತ್ಯದ ರಾಜಕಾರಣದಲ್ಲಿ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ಪುರಾವೆಗಳಿವೆ. 


 ಅದರ ಜೊತೆಗೇ, ಸಾಮಾಜಿಕವಾಗಿ ತಮಗೆ ಸಮಾನ ಶ್ರೇಣಿಯಲ್ಲಿರುವ ಜಾತಿಗಳ ನಾಯಕರನ್ನು ಸಹಿಸದೆ ಹಾಗೂ ಜಾತಿ ಮೀರಿ ಉತ್ತಮ ದಲಿತ ನಾಯಕತ್ವವನ್ನು ಬೆಂಬಲಿಸದೆ, ಮೇಲು ಜಾತಿಗಳ ಜೀತ ಮಾಡುವ ಪ್ರವೃತ್ತಿ ಶೂದ್ರ ಜಾತಿಗಳಲ್ಲಿ  ಹೆಚ್ಚುತ್ತಿದೆ. ಆದ್ದರಿಂದಲೇ ಇವು ಒಂದಾಗಲಾರದೆ, ಅಧಿಕಾರ ಹಿಡಿಯಲಾಗದೆ ಹೆಚ್ಚು ಹೆಚ್ಚು ಒಡೆದು ಹೋಗುತ್ತಿವೆ. ದಲಿತರಲ್ಲಿನ ಎಡ, ಬಲಗಳ ಒಡಕನ್ನು ಆರ್ಥಿಕ ಪ್ರಶ್ನೆಗೆ ಸೀಮಿತಗೊಳಿಸಿಕೊಳ್ಳದೆ, ಅದರಾಚೆಗೂ ಒಯ್ದದ್ದು ದಲಿತರ ಪ್ರತಿಭಟನೆಯ ರಾಜಕಾರಣವನ್ನೂ ಅಧಿಕಾರ ರಾಜಕಾರಣವನ್ನೂ ದುರ್ಬಲಗೊಳಿಸಿದೆ. ದಲಿತರ ಜೊತೆಗೇ ಮೀಸಲಾತಿ ಪಡೆದ ಇನ್ನಿತರ ದಲಿತ ಜಾತಿಗಳು  ದಲಿತ ರಾಜಕಾರಣದಲ್ಲಿ ಬೆರೆಯದೆ, ಮೇಲುಜಾತಿಗಳ ಅಧಿಕಾರ ರಾಜಕಾರಣದಲ್ಲಿ  ಪಾಲು ಪಡೆಯಹೊರಟು ಅವರ ಬಾಲಂಗೋಚಿಗಳಾಗಿವೆ. ಅತಿ ಹಿಂದುಳಿದ ಜಾತಿಗಳು ಹಲವು ಪಕ್ಷಗಳಲ್ಲಿ ಹಂಚಿಹೋಗಿವೆ. ಒಕ್ಕಲಿಗರು ಕೆಲವು ಭಾಗಗಳಲ್ಲಿ ಜನತಾದಳವನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ  ರಾಜಕೀಯ ಪಕ್ಷವೊಂದರ ಕೆಲವು ನಾಯಕರ ತೆರೆಮರೆ ರಾಜಕಾರಣದಿಂದ ಕೂಡ ಕುಂಚಿಟಿಗರ ಈ ಪ್ರತ್ಯೇಕತೆಯ ಕೂಗು ಎದ್ದಿದೆ. ಅದಕ್ಕೆ ಉತ್ತರವೆಂಬಂತೆ ರಾಜ್ಯಮಟ್ಟದ ಒಕ್ಕಲಿಗರ ಮಹಾ ಸಮಾವೇಶವೂ ನಡೆಯಲಿದೆ.

ಈ ಬಗೆಯ ಉತ್ತರ-ಪ್ರತ್ಯುತ್ತರಗಳ ಸಮಾವೇಶಗಳ ರಾಜಕಾರಣಕ್ಕೆ ದೂರದೃಷ್ಟಿ ಇರುವಂತಿಲ್ಲ. ಕೆಲ ಬಗೆಯ ಹಣಬಲದಿಂದ, ರಾಜಕೀಯ ಬೆಂಬಲಗಳಿಂದ ನಡೆಯುವ ಈ ರೀತಿಯ ಸಮಾವೇಶಗಳಿಂದ ನಿಜಕ್ಕೂ ಶೂದ್ರರಿಗೆ ಅಧಿಕಾರ ಸಿಕ್ಕಲಾರದು. ಇಷ್ಟಾಗಿಯೂ ಈ ಬಗೆಯ ಪ್ರತ್ಯೇಕ ಸಮಾವೇಶಗಳಿಂದ ಈ ಜಾತಿಗಳು ಯಾವ ಬಗೆಯ ಪ್ರತ್ಯೇಕ ಐಡೆಂಟಿಟಿಯನ್ನು ಸ್ಥಾಪಿಸಬಯಸುತ್ತವೆ? ಹಿಂದೊಮ್ಮೆ, ದೇವನೂರ ಮಹಾದೇವ ಅವರು ಹೇಳಿದಂತೆ,  ನಮ್ಮ ಹಳ್ಳಿಗಳಲ್ಲಿರುವ ಬಹುತೇಕ ಶೂದ್ರ, ದಲಿತ ಜಾತಿಗಳು ಸಾಂಸ್ಕೃತಿಕವಾಗಿ ಒಂದೇ ಆಗಿವೆ . ಆದರೆ, ಇವರ ನಾಯಕತ್ವ ವಹಿಸಿ ಲಾಭ ಮಾಡಿಕೊಳ್ಳುತ್ತಿರುವ ರಾಜಕಾರಣಿಗಳು ಹಾಗೂ ಮಠಾಧೀಶರಿಗೆ ಈ ಜಾತಿಗಳ ಪ್ರತ್ಯೇಕ ಐಡೆಂಟಿಟಿಯನ್ನು ಕಾಯ್ದುಕೊಳ್ಳುವುದರಿಂದ ಲಾಭವಿದೆ. ಆದ್ದರಿಂದಲೇ ಅವರು ಈ ಜಾತಿಗಳನ್ನು ಪ್ರತ್ಯೇಕವಾಗಿಯೇ ಇರಿಸಿಕೊಂಡು ಬಂದಿದ್ದಾರೆ. ಕುಂಚಿಟಿಗರ ಪ್ರತ್ಯೇಕ ಅಸ್ತಿತ್ವದ ಬಗ್ಗೆ ಶಾಂತವೀರ ಸ್ವಾಮೀಜಿಯವರ ಏರುದನಿಯ ಘೋಷಣೆ ಕೂಡ ಈ ಮೂಲದಿಂದಲೇ ಹುಟ್ಟಿದೆ. ಕೆಲವು ವರ್ಷಗಳ ಕೆಳಗೆ, ತುಮಕೂರು ಜಿಲ್ಲೆಯಲ್ಲಿ  ಎಲ್ಲ ಜಾತಿಗಳನ್ನೂ ಒಗ್ಗೂಡಿಸಿ ನೀರಾವರಿ ಚಳುವಳಿ ಮಾಡಿದ್ದ ನಂಜಾವಧೂತ ಸ್ವಾಮೀಜಿಯವರು ಇವತ್ತು ಒಕ್ಕಲಿಗರು ಮಾತ್ರ ಒಂದಾಗಬೇಕೆನ್ನುತ್ತಿದ್ದಾರೆ. ಆದರೆ ಈ ಇಬ್ಬರೂ ರೈತಾಪಿ ಜಾತಿಗಳಿಂದ ಬಂದ ಸ್ವಾಮೀಜಿಗಳಿಗೆ ಮಣ್ಣಿನ ಕೆಲಸ ಮಾಡುವ, ಶ್ರಮಜೀವಿಗಳಾಗಿರುವ ಎಲ್ಲ ಶೂದ್ರ ಹಾಗೂ ದಲಿತ ಜಾತಿಗಳು ಒಟ್ಟಾಗಬೇಕೆಂದು ಕರೆಕೊಡಬೇಕೆಂದು ಅನ್ನಿಸದಿರುವುದು ಇವರ ಸೀಮಿತ ಸಾಮಾಜಿಕ, ರಾಜಕೀಯ ದೃಷ್ಟಿಯನ್ನು ಸೂಚಿಸುತ್ತದೆ.

ಜಾತಿ,ಉಪಜಾತಿಗಳಿಗೆ ಸೀಮಿತವಾಗಿರುವ ಸ್ವಾಮೀಜಿಗಳಿಗೆ ವಾಸ್ತವ ಸ್ಥಿತಿಗಳನ್ನು  ಹಾಗೂ ವಿಶಾಲ ರಾಜಕೀಯ ಉದ್ದೇಶಗಳನ್ನು ಕುರಿತು ಯೋಚಿಸಬಲ್ಲ ಕನಿಷ್ಠ ಸಾಮರ್ಥ್ಯ ನಶಿಸಿ ಹೋಗಿರಬಹುದು.  ಆದರೆ, ಕುವೆಂಪುವಿನಿಂದ ಪ್ರಭಾವಿತರಾದ ತಲೆಮಾರು ಇನ್ನೂ ಜೀವಂತವಾಗಿರುವ ಒಕ್ಕಲಿಗ ಸಮಾಜದ ಚಿಂತಕರಿಗೆ ಹಾಗೂ ನಾಯಕರಿಗೆ ಈ ಸೂಕ್ಷ್ಮಗಳು ಮರೆತು ಹೋಗಬಾರದು. ಅಂಥವರಾದರೂ ವಿಶಾಲ ಶೂದ್ರ ಚಿಂತನೆ ಹಾಗೂ ಅವೈದಿಕ ತಾತ್ವಿಕತೆಯ ಮೂಲಕ ಒಕ್ಕಲಿಗ ಹಾಗೂ ಇತರ ಹಿಂದುಳಿದ ಜಾತಿಗಳನ್ನು, ದಲಿತ, ಅಲ್ಪಸಂಖ್ಯಾತರನ್ನು  ಮಾನಸಿಕವಾಗಿ ಹಾಗೂ ರಾಜಕೀಯವಾಗಿ ಹತ್ತಿರ ತರುವ ಕೆಲಸ ಮಾಡಬೇಕು.

ಮುಂಬರಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ  ಈಚೆಗೆ ದೊಡ್ಡ ಮಟ್ಟದಲ್ಲಿ  ಆರಂಭವಾಗಿರುವ  ಸಮಾವೇಶ ರಾಜಕಾರಣದಲ್ಲಿ ಹಿಂದುಳಿದ ಜಾತಿಗಳು  ಮೇಲುಜಾತಿಗಳ ರಾಜಕಾರಣವನ್ನು ಅನುಸರಿಸಿದರೆ ಅಧಿಕಾರ ಹಿಡಿಯಲಾರವು.

ಲಿಂಗಾಯತ ಮಠಗಳನ್ನು ಆಧರಿಸಿದ ರಾಜಕಾರಣದಿಂದ ಬಿಜೆಪಿಗೆ ಲಾಭವಾಗಿರಬಹುದು. ಆದರೆ ಅದು ಇನ್ನುಳಿದ ಜಾತಿಗಳಲ್ಲೂ ಪುನರಾವರ್ತನೆಯಾಗುತ್ತದೆಂದು ಮಧ್ಯಮ ಹಾಗೂ ಕೆಳಜಾತಿಗಳು ತಿಳಿಯಬೇಕಾಗಿಲ್ಲ. ಇವತ್ತು ಈ ಜಾತಿಗಳು ನಿಜಕ್ಕೂ ಮಾಡಬೇಕಾದ ಕೆಲಸವೆಂದರೆ, ಸಮಾನ ದುಃಖವಿರುವ ಎಲ್ಲ ಹಿಂದುಳಿದ ಹಾಗೂ ದಲಿತ ಜಾತಿಗಳು ಬೆರೆತ ಸಮಾವೇಶಗಳನ್ನು ಒಟ್ಟಾಗಿ ನಡೆಸುವುದು ಹಾಗೂ ಸಮಾನ ಸಮಸ್ಯೆಗಳನ್ನು ಗುರುತಿಸಿ ಮುಕ್ತವಾಗಿ ಚರ್ಚಿಸುವುದು, ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಆ ಮೂಲಕ ಈ ಎಲ್ಲ ಜಾತಿಗಳು ಅಧಿಕಾರ ಹಿಡಿಯುವ ಹಾಗೂ ಸಮಾನವಾಗಿ ಅಧಿಕಾರ ಹಂಚಿಕೊಳ್ಳುವ ಸೂತ್ರ ರೂಪಿಸಬೇಕು.

ಈಚೆಗೆ ನಡೆದ ಕುರುಬರ ಸಮಾವೇಶ ಇತರೆ ಹಿಂದುಳಿದ ಜಾತಿಗಳನ್ನು ಒಳಗೊಂಡಿದ್ದರೆ ಈ ದಿಸೆಯಲ್ಲಿ ಹೊಸ ಹಾದಿ ತೋರಿಸಿದಂತಾಗುತ್ತಿತ್ತು.ಹಾಗಾಗಲಿಲ್ಲ.  ಇನ್ನೂ ಕಾಲ ಮಿಂಚಿಲ್ಲ. ಇವತ್ತು ತಮ್ಮ ಏಳಿಗೆಗೆ ಅಗತ್ಯವಿರುವ ಸಾಮಾಜಿಕ ನ್ಯಾಯಕ್ಕೆ ಅಡ್ಡಿಯಾಗಿರುವ ಶತ್ರುಗಳು ಯಾರೆಂಬುದನ್ನು ಅಸ್ಪೃಶ್ಯತೆಯನ್ನು ಅನುಭವಿಸಿದ ದಲಿತರು ಸರಿಯಾಗಿ ಗುರುತಿಸಿಕೊಂಡಿದ್ದಾರೆ.ಆದರೆ ಹಿಂದುಳಿದ ಜಾತಿಗಳಲ್ಲಿ  ಆ ಪ್ರಜ್ಞೆ ಇನ್ನೂ ಸರಿಯಾಗಿ ಮೂಡಿಲ್ಲ. ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಕೆನೆಪದರ ಮೀಸಲಾತಿಯ ವರಮಾನ ಮಿತಿ ಹೆಚ್ಚಿಸಲು ತೀರ್ಮಾನ ತೆಗೆದುಕೊಂಡ ಮೇಲೆ, ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು  ರಾಜ್ಯ ಸರ್ಕಾರ ಮೂರು ವರ್ಷಕ್ಕೂ ಹೆಚ್ಚು ಕಾಲ  ತೆಗೆದುಕೊಂಡಿತು.

ಜೊತೆಗೆ, ಕೇಂದ್ರ ಸರ್ಕಾರ ಸೂಚಿಸಿರುವುದಕ್ಕಿಂತ ಕಡಿಮೆ ವರಮಾನ ಮಿತಿಯನ್ನು ಕೂಡ ನಿಗದಿ ಮಾಡಿತು. ಹಿಂದುಳಿದ ಜಾತಿಗಳ ಬಗೆಗಿನ ಈ ಬಗೆಯ ಧೋರಣೆಗಳು ಹಾಗೂ ಯೋಜಿತ ನಿಧಾನಗತಿಯಿದಾಗಿ ಕಳೆದ ಕೆಲವು ವರ್ಷಗಳಲ್ಲಿ ಶೈಕ್ಷಣಿಕವಲಯದಲ್ಲಿ, ಕೆ.ಪಿ.ಎಸ್.ಸಿ.ಯ ಆಡಳಿತಾತ್ಮಕ ಹುದ್ದೆಗಳಲ್ಲಿ  ಹಾಗೂ ಇನ್ನಿತರ ಆಡಳಿತ ವಲಯಗಳಲ್ಲಿ ಯಾವ ಯಾವ ರೀತಿಯ ಅವಕಾಶಗಳು ಹಾಗೂ ಅಧಿಕಾರಗಳನ್ನು ಕಳೆದುಕೊಂಡಿದ್ದೇವೆ ಎಂಬ ಅರಿವು ಈ ಜಾತಿಗಳಲ್ಲಿ  ಮೂಡಬೇಕು. ಆದ್ದರಿಂದಲೇ ಈ ಜಾತಿಗಳ ಜನ ಉಪಜಾತಿಗಳು ಹಾಗೂ ಕೆಳಜಾತಿಗಳ ನಡುವಣ ಕೃತಕ ಕಾದಾಟದಲ್ಲಿ ನಾಶವಾಗದೆ, ಒಗ್ಗೂಡಿ ಅಧಿಕಾರ ಹಿಡಿಯಲು ಪ್ರಬಲವಾದ ರಾಜಕೀಯ ಪಕ್ಷವೊಂದನ್ನು ಗುರುತಿಸಿಕೊಳ್ಳಬೇಕು; ಜೊತೆಗೆ, ಒಗ್ಗೂಡಿ ಅಧಿಕಾರ ಹಂಚಿಕೊಳ್ಳುವ ಬಗ್ಗೆ ಮುಕ್ತವಾಗಿ ಹಾಗೂ ವಾಸ್ತವಿಕ ಸಾಧ್ಯತೆಗಳ ಆಧಾರದ ಮೇಲೆ ಪ್ರಾಮಾಣಿಕವಾಗಿ ಯೋಚಿಸಬೇಕು. 
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT