ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾಯಿಸಿ ಜಾಣರಾಗಿ...!

Last Updated 6 ಏಪ್ರಿಲ್ 2013, 9:07 IST
ಅಕ್ಷರ ಗಾತ್ರ

ಕೋಲಾರ: ನನ್ನದು ಜಾಣ್ಮೆಯ ಆಟ, ನೀವೂ ಮತ ಚಲಾಯಿಸಿ ಜಾಣರಾಗಿ...
-ಹೀಗೆಂದು ಕ್ರಿಕೆಟ್ ಆಟಗಾರ ಮಹೇಂದ್ರಸಿಂಗ್ ಧೋನಿ ಭಾವಚಿತ್ರದೊಡನೆ ಆತ ಹೇಳಿರುವ ಮಾತುಗಳ ಆಕರ್ಷಕ ವಿನ್ಯಾಸದ ವರ್ಣರಂಜಿತ ಫಲಕ ನಗರದ ಡೂಂಲೈಟ್ ವೃತ್ತದಲ್ಲಿ ನಾಗರಿಕರ ಗಮನ ಸೆಳೆಯುತ್ತಿದೆ.

ಶುಕ್ರವಾರ ಮಧ್ಯಾಹ್ನ ಅದೇ ಫಲಕದ ಮುಂದೆ ನಿಂತ ಯುವಕರಿಬ್ಬರು ಆ ಫಲಕವನ್ನೇ ನೋಡುತ್ತಾ ಧೋನಿಯ ಮಾತುಗಳನ್ನೇ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದ್ದರು.
ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಸಿಕ್ಕಿರುವ ಖುಷಿಯಲ್ಲಿದ್ದ ಅವರಿಗೆ ಧೋನಿಯೇ ಮತದಾನ ಮಾಡಿ ಜಾಣರಾಗಿ ಎಂದು ಹೇಳಿರುವುದು ಇನ್ನಷ್ಟು ಉತ್ಸಾಹ ಮೂಡಿಸಿದೆ.

ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವೃತ್ತದಲ್ಲಿ ಅಳವಡಿಸಿರುವ, ಮತದಾನಕ್ಕೆ ಪ್ರೇರಣೆ ನೀಡುವ ಪುನೀತ್‌ರಾಜ್‌ಕುಮಾರ್ ಫಲಕದ ಮುಂದೆಯೂ ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೆರೆದಿದ್ದರು. ಅದೇ ಕಾಲೇಜಿನಲ್ಲಿ ಒಂದು ಮೂಲೆಯಲ್ಲಿ `ಸಬೂಬು ಬೇಡ, ಮತದಾನ ಮಾಡಿ' ಎಂಬ ಬ್ಯಾನರ್ ಕೂಡ ಗಮನ ಸೆಳೆಯುತ್ತಿದೆ.
ಇದೆಲ್ಲವೂ, ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಕೈಗೊಂಡಿರುವ ವಿಶೇಷ ಕ್ರಮಗಳ ಪರಿಣಾಮ. ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಕುರಿತು ಪ್ರಚಾರ ಫಲಕಗಳಷ್ಟೇ ಅಲ್ಲದೆ ಬೀದಿ ನಾಟಕಗಳ ಪ್ರದರ್ಶನವೂ ನಡೆಯುತ್ತಿದೆ.

ಮತದಾನದ ಬಗ್ಗೆ ನಕಾರಾತ್ಮಕವಾಗಿ ಅಥವಾ ನಿರ್ಲಿಪ್ತವಾಗಿ ಆಲೋಚಿಸುವವರನ್ನು ಮತದಾನಕ್ಕೆ ಪ್ರೇರೇಪಿಸುವ ಈ ಬಗೆಯ ವಿಶೇಷ ಪ್ರಯತ್ನಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಭರವಸೆಯನ್ನು ಉಳಿಸುತ್ತವೆ ಎಂದು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT