ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿಗೆ ಕಾಲೇಜುಗಳಲ್ಲಿ ಪ್ರಚಾರ

Last Updated 3 ಏಪ್ರಿಲ್ 2013, 9:26 IST
ಅಕ್ಷರ ಗಾತ್ರ

ಮಂಡ್ಯ: `ಯುವಕರೆ, ಯುವತಿಯರೇ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ' ಹೀಗೆಂದು ಮಂಡ್ಯ ಜಿಲ್ಲೆಯ ಕಾಲೇಜುಗಳಲ್ಲಿ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ.

ಆದರೆ ಇವರ‌್ಯಾರು ರಾಜಕಾರಣಿಗಳಲ್ಲ. ಚುನಾವಣಾ ಆಯೋಗದ ವತಿಯಿಂದ ಹಮ್ಮಿಕೊಂಡಿರುವ `ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಸಹಭಾಗಿತ್ವ' (ಸ್ವೀಪ್) ಯೋಜನೆಯಲ್ಲಿ ರಚಿಸಲಾಗಿರುವ ತಂಡಗಳ ಸದಸ್ಯರು ಯುವ ಜನಾಂಗವನ್ನು ಮತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ ಪ್ರಥಮ ದರ್ಜೆ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ತೆರಳಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವವನ್ನು ಸಾರುತ್ತಿದ್ದಾರೆ. ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಹಾಗೂ ಮುಂದಿನ ದಿನಗಳಲ್ಲಿ ಮತ ಹಾಕದಿದ್ದರೆ ಆಗುವ ಪರಿಣಾಮವನ್ನೂ ಯುವ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದ್ದಾರೆ.

ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಐಎಎಸ್ ಪ್ರೊಬೇಷನರಿ ಅಧಿಕಾರಿ ಹೆಪ್ಸಿಬಾರಾಣಿ ಕೊರ‌್ಲಪಾಟಿ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ.ಮಂಜುಳಾ ಅವರನ್ನು ಒಳಗೊಂಡಿರುವ ತಂಡವು ಮಂಡ್ಯ ಉಪವಿಭಾಗದ ಕಾಲೇಜುಗಳಲ್ಲಿ, ಕೆಎಎಸ್ ಪ್ರೊಬೇಷನರಿ ಅಧಿಕಾರಿ ಶಿವಾನಂದ ಕರಾಳೆ ಹಾಗೂ ನೆಹರೂ ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಸಿದ್ದರಾಮಪ್ಪ ಅವರನ್ನು ಒಳಗೊಂಡಿರುವ ತಂಡವು ಪಾಂಡವಪುರ ಉಪವಿಭಾಗದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಸಲ್ಲಿಸಬೇಕಾದ ದಾಖಲೆಗಳ ಬಗೆಗೂ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವವರು, ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಇಲ್ಲದಿದ್ದರೆ, ಮತ್ತೊಮ್ಮೆ ದಾಖಲಿಸಿ ಕೊಂಡು ಮತದಾನದ ಹಕ್ಕನ್ನು ಪಡೆದುಕೊಳ್ಳುವಂತೆ ತಿಳಿಸಲಾಗುತ್ತಿದೆ.

ಗ್ರಾಮೀಣ ಪ್ರದೇಶದ ಮತದಾರರಲ್ಲಿ ಜಾಗೃತಿಯನ್ನು ಬೀದಿ ನಾಟಕಗಳ ಮೂಲಕ ಮಾಡಲಾಗುತ್ತಿದೆ. ಒಂದು ವಾರ ಕಾಲ ಪ್ರತಿ ಹೋಬಳಿ ಕೇಂದ್ರದಲ್ಲಿಯೂ ಮಂಡ್ಯದ ನಿತ್ಯಸ್ನೇಹಿ ಕಲಾ ತಂಡವು ಪ್ರದರ್ಶನ ನೀಡುತ್ತಿದೆ.

ಬೀದಿ ನಾಟಕದಲ್ಲಿ ಮತದಾನದಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ಇರುವ ಅನುಕೂಲಗಳು, ಮತದಾರ ಚೀಟಿಯ ಮೂಲಕ ಪಡೆದಯಬಹುದಾದ ವಿವಿಧ ಸೌಲಭ್ಯಗಳ ಬಗೆಗೆ ವಿವರಿಸಲಾಗುತ್ತದೆ. ಹಾಡಿನ ಮೂಲಕವೂ ತಿಳವಳಿಕೆ ನೀಡಲಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತರ ಬಳಿ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ, ಇಲ್ಲವೇ ಹಾಗೂ ಇಲ್ಲದಿದ್ದರೆ ನೋಂದಾಣಿಗೆ ಬೇಕಾದ ಅರ್ಜಿಯನ್ನೂ ಪಡೆಯಬಹುದಾಗಿದೆ ಎಂಬುದನ್ನು ತಿಳಿಸುತ್ತಾರೆ ಎಂದು ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಸಹಭಾಗಿತ್ವ    (ಸ್ವೀಪ್) ನೋಡಲ್ ಅಧಿಕಾರಿ ಆರ್.ರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಸ್ವಸಹಾಯ, ಯುವಕ ಸಂಘದ ಸದಸ್ಯರ ತಾಲ್ಲೂಕುವಾರು ಸಭೆ ಕರೆದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಹಾಗೂ ಮತ ಚಲಾವಣೆ ಮಹತ್ವದ ಬಗೆಗೆ ಹೇಳುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT