ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಕರಡು ಪಟ್ಟಿ ಪ್ರಕಟ

Last Updated 2 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ದಾವಣಗೆರೆ:  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗ ಭಾವಚಿತ್ರ ಹೊಂದಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅ. 1ರಂದು ಮತದಾರರ ಪಟ್ಟಿಯ ಕರಡು ಪ್ರಕಟಿಸಲಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಮತದಾರರನ್ನು ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ಅ. 1ರಿಂದ 31ರ ತನಕ ನಡೆಯಲಿದೆ. ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಲ್ಲಿ, ಆಕ್ಷೇಪಣೆ ಇದ್ದಲ್ಲಿ, ವಿಳಾಸ  ಬದಲಾವಣೆ ಇದ್ದಲ್ಲಿ ಈ ದಿನಾಂಕಗಳಂದು ಅಕ್ಷೇಪಣಾ ಅರ್ಜಿ ಸಲ್ಲಿಸಬಹುದು. ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ  ಕ್ಷೇತ್ರಗಳಲ್ಲಿ ಅ. 16ರಿಂದ ಮತದಾರರ ಕರಡು ಪಟ್ಟಿ ಪರಿಷ್ಕರಣೆ ನಡೆಯಲಿದೆ. ಅ. 6 ಮತ್ತು 9ರಂದು ಪ್ರತಿ ಬೂತ್‌ನಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಆಯಾ ಬೂತ್ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಪ್ರಕಟಿಸುತ್ತಾರೆ. ಈ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ ಅಥವಾ ಆಕ್ಷೇಪಣೆಗಳು ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಮಾಹಿತಿ ನೀಡಿದರು.


ಮುಖ್ಯವಾಗಿ ಜ. 1, 2013ಕ್ಕೆ 18ವರ್ಷ ತುಂಬುವವರಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಅದಕ್ಕಾಗಿ ಕಾಲೇಜು ಮಟ್ಟದಲ್ಲೇ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕಾಲೇಜಿಗೆ ನೋಡೆಲ್ ಅಧಿಕಾರಿ ನೇಮಿಸಲಾಗುವುದು. ಜ. 1, 2013ರಂದು ಮತದಾರರ ಪಟ್ಟಿಯ ತಾತ್ಕಾಲಿಕ ಕರಡು ಪ್ರಕಟವಾಗಲಿದೆ. ಜ. 5ರಂದು ಮತದಾರರ  ಅಂತಿಮ ಪಟ್ಟಿ ಪ್ರಕಟವಾಗಲಿದೆ.
 
ಮತದಾನಕ್ಕೆ ಅರ್ಹರಿರುವವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಹೋದಲ್ಲಿ ಅವರು ನಮೂನೆ- 6ರಲ್ಲಿ ಅರ್ಜಿಯನ್ನು ಸಲ್ಲಿಸಿ, ಅವರ ವಯಸ್ಸು ಮತ್ತು ವಿಳಾಸದ ದಾಖಲೆ ಸಲ್ಲಿಸಬೇಕು. ಕುಟುಂಬದ ಮುಖ್ಯಸ್ಥರು ಅಥವಾ ಕುಟುಂಬದ ಯಾವುದೇ ಸದಸ್ಯರು ತಮ್ಮ ಕುಟುಂಬದ ಸದಸ್ಯರ ಪರವಾಗಿ ಅರ್ಜಿ ಸಲ್ಲಿಸಬಹುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಟಿ. ದಾಸಕರಿಯಪ್ಪ, ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್, ಬಿಜೆಪಿ ಮುಖಂಡರಾದ ವೈ. ಮಲ್ಲೇಶ್, ರಮೇಶನಾಯ್ಕ, ಕಾಂಗ್ರೆಸ್ ಮುಖಂಡ ಪಿ. ರಾಜಕುಮಾರ್, ಚುನಾವಣಾ ತಹಶೀಲ್ದಾರ್ ರೇಷ್ಮಾ ಹಾನಗಲ್ ಮತ್ತು ಚುನಾವಣಾ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT