ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ: ಪ್ರತಿಭಟನೆ

Last Updated 1 ಜನವರಿ 2011, 8:15 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನಲ್ಲಿ ಶುಕ್ರವಾರ ನಡೆದ ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ವಿವಿಧ ಮತ ಗಟ್ಟೆ ಕೇಂದ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದೆ ಎಂದು ಆರೋಪಿಸಿ ಮತದಾರರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಮತದಾನ ಮಾಡಲು ಬಂದ ಕೆಲವರಿಗೆ ಅಚ್ಚರಿ ಕಾದಿತ್ತು.

ಗುರುತಿನ ಚೀಟಿ ಇದ್ದರೂ ಅಧಿಕಾರಿಗಳ ಬಳಿ ಇದ್ದ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಹೆಸರು ನಾಪತ್ತೆ ಪ್ರಕರಣಗಳು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತಗೊಂಡಿರಲಿಲ್ಲ. ಹಿನಕಲ್, ಹೂಟಗಳ್ಳಿ, ಆಲನಹಳ್ಳಿ ಹಾಗೂ ರಮಾಬಾಯಿ ನಗರದ ಮತಗಟ್ಟೆ ಕೇಂದ್ರಗಳಲ್ಲೂ ಪಟ್ಟಿಯಿಂದ ಹೆಸರು ನಾಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಮತದಾರರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆಲ ಕಾಲ ಮತಗಟ್ಟೆ ಬಳಿ ಗೊಂದಲದ ವಾತಾವರಣವೂ ಉಂಟಾಯಿತು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರಿಂದ ಅಹಿತಕರ ಘಟನೆ ನಡೆಯಲಿಲ್ಲ.

ಮೊದಲು ಪ್ರತಿಭಟನೆ ಆರಂಭಗೊಂಡಿದ್ದು ಹೂಟಗಳ್ಳಿಯ ಕೆಎಚ್‌ಬಿ ಕಾಲೋನಿಯ ಮತಗಟ್ಟೆ ಕೇಂದ್ರದಲ್ಲಿ. ಮತಗಟ್ಟೆ ಕೇಂದ್ರದ ಮುಂಭಾಗದಲ್ಲಿದ್ದ ವಿವಿಧ ಪಕ್ಷಗಳ ಬೂತ್ ಏಜೆಂಟ್‌ಗಳು ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ಪತ್ತೆ ಮಾಡಿ ನಂಬರ್ ಬರೆದು ಮತಹಾಕುವಂತೆ ಕಳುಹಿಸುತ್ತಿದ್ದರು. ಆದರೆ ಮತಗಟ್ಟೆ ಕೇಂದ್ರದಲ್ಲಿದ್ದ ಅಧಿಕಾರಿಗಳು ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದರು. ಪಟ್ಟಿಯಲ್ಲಿ ಹೆಸರು ಇದ್ದರೂ ಭಾವಚಿತ್ರ ಇರುತ್ತಿರಲಿಲ್ಲ. ಈ ಸ್ಥಳದಲ್ಲಿ ಸಂಬಂಧಪಟ್ಟ ವ್ಯಕ್ತಿ ವಾಸವಿಲ್ಲ ಎಂದು ಹೆಸರಿನ ಮುಂದೆ ರೆಡ್ ಇಂಕ್‌ನಿಂದ ಗುರುತು ಹಾಕಿದ್ದರು (ಹೆಸರು ಕೈ ಬಿಡಲಾಗಿದೆ). ಇದರಿಂದ ಆಕ್ರೋಶಗೊಂಡ ಮತದಾರರು ಹಾಗೂ ಪಕ್ಷಗಳ ಕಾರ್ಯಕರ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಭಾರತಿ ಮತ್ತು ತಹಶೀಲ್ದಾರ್ ಮಂಜುನಾಥಸ್ವಾಮಿ ಆಗಮಿಸಿ, ‘ನಿಯಮದ ಪ್ರಕಾರ ಪಟ್ಟಿಯಲ್ಲಿ ಹೆಸರು ಮತ್ತು ಭಾವಚಿತ್ರ ಇಲ್ಲದೆ ಇದ್ದರೆ ಮತದಾನ ಮಾಡಲು ಅವಕಾಶ ಇಲ್ಲ. ಮತದಾನಕ್ಕೆ ತೊಂದರೆ ಮಾಡಬೇಡಿ’ ಎಂದು ಹೇಳಿದರು.

‘ನಮಗೆ ಕೊಟ್ಟ ಪಟ್ಟಿಯಲ್ಲಿ ಮತದಾರರ ಹೆಸರು ಇದೆ. ಆದರೆ ಅಧಿಕಾರಿಗಳ ಬಳಿ ಇರುವ ಪಟ್ಟಿಯಲ್ಲಿ ಹೆಸರು ಇಲ್ಲವೆಂದರೆ ಏನರ್ಥ. ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಲಾಗಿದೆ. ಅಧಿಕಾರಿಗಳು ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸುಮಾರು ಎರಡು ಸಾವಿರ ಮತದಾರರ ಹೆಸರು ನಾಪತ್ತೆಯಾಗಿದೆ’ ಎಂದು ಗ್ರಾ.ಪಂ. ಸದಸ್ಯ ಎಚ್.ಎಸ್.ಮಹೇಶ್ ಆರೋಪಿಸಿದರು.

ಇದೇ ರೀತಿ ಹಿನಕಲ್ ಮತಗಟ್ಟೆ ಬಳಿಯೂ ಪ್ರತಿಭಟನೆ ನಡೆಯಿತು. ವಿಜಯ ಶಾಲೆ, ನಂದೀಶ್ವರ ಶಾಲೆ, ಸರ್ಕಾರಿ ಶಾಲೆಗಳ ಮತಗಟ್ಟೆಗಳು ಸೇರಿದಂತೆ ಒಟ್ಟು ಮೂರು ಸಾವಿರ ಹೆಸರು ನಾಪತ್ತೆಯಾಗಿದೆ. ಇದನ್ನು ಖಂಡಿಸಿ 200ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಹಶೀಲ್ದಾರ್ ಆಗಮಿಸಿ, ‘ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶವಿಲ್ಲ’ ಎಂದು ಹೇಳಿ ಸುಮ್ಮನಿರಿಸಿದರು.

ಹಿನಕಲ್ ಗ್ರಾ.ಪಂ. ಸದಸ್ಯ ಹಿನಕಲ್ ಪ್ರಕಾಶ್ ಮಾತನಾಡಿ, ‘ಸಿದ್ದರಾಮಯ್ಯ ಪ್ರಾಬಲ್ಯ ಕಡಿಮೆ ಮಾಡಲು ಹಾಗೂ ಕುರುಬ ಸಮುದಾಯದವರು ಹೆಚ್ಚು ಇರುವುದರಿಂದ ಬಿಜೆಪಿ ಅಭ್ಯರ್ಥಿಗೆ ಮತ ಬೀಳುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರದ ಆದೇಶದಂತೆ ಅಧಿಕಾರಿಗಳು ಹೆಸರುಗಳನ್ನು ತೆಗೆದು ಹಾಕಿದ್ದಾರೆ’ ಎಂದು ದೂರಿದರು.

ಇನ್ನು ರಮಾಬಾಯಿನಗರದ ಮತಗಟ್ಟೆ ಬಳಿಯೂ ಪಟ್ಟಿಯಿಂದ ಹೆಸರು ನಾಪತ್ತೆಯಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸುಮಾರು 500 ರಿಂದ 800 ಮಂದಿ ಹೆಸರು ನಾಪತ್ತೆಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು’ ಎಂದು ಸೋಮಶೇಖರ್ ತಿಳಿಸಿದರು.

ಆಲನಹಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲೂ 1,200 ಮಂದಿ ಹೆಸರು ನಾಪತ್ತೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಒಟ್ಟಾರೆ ಹೆಸರು ನಾಪತ್ತೆ ಪ್ರಕರಣ ಹೊರತುಪಡಿಸಿದರೆ ಉಳಿದಂತೆ ಮತದಾನ ಶಾಂತಿಯುತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT