ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವಣಗಿತ್ತಿ ಮಳೆ

Last Updated 27 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಮಳೆಯನ್ನು, ಮಳೆ ಎನ್ನುವ ಮಾಯೆಯನ್ನು ಕ್ಯಾಮೆರಾದಲ್ಲಿ ಹಿಡಿದಿಡಲು ಹೊರಟಾಗ ಗುಂಗಾಗಿ ಜೊತೆಗಿದ್ದುದು- `ಮುಂಗಾರಿನ ಅಭಿಷೇಕಕೆ/ ಮಿದುವಾಯಿತು ನೆಲವು/ ಧಗೆ ಆರಿದ ಹೃದಯದಲ್ಲಿ/ ಪುಟಿದೆದ್ದಿತು ಚೆಲುವು~ ಎನ್ನುವ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಯ ಸಾಲು.

ಅದು ಜಿಟಿಜಿಟಿ ಮಳೆ. ಮಳೆಯ ಬೆನ್ನಿಗೇ ತಂಗಾಳಿ. ಹಚ್ಚಹಸಿರು ಹೊದ್ದ ಬೆಟ್ಟಗುಡ್ಡ ಕಾನನ. ತುಂಬಿ ಹರಿವ ಜಲಪಾತಗಳು. ಕಲ್ಲು ಕಂಬ ಮನೆಗಳನ್ನೆಲ್ಲಾ ಆವರಿಸಿದ ಪಾಚಿ. ಎಲೆಯ ಮೇಲಿನ ನೀರ ಹನಿ. ತೋಯ್ದು ತುಳುಕಿದ ರಸ್ತೆ. ಅಲ್ಲಲ್ಲಿ ರೈತರ ಸಂಭ್ರಮ- ಇವೆಲ್ಲ ಮಳೆಗಾಲದಲ್ಲಿ ಬಯಲಿನಲ್ಲಿ ರೂಪುಗೊಳ್ಳುವ ದೃಶ್ಯಕಾವ್ಯಗಳು.

ಒಂದು ಕೈಯಲ್ಲಿ ಛತ್ರಿಯನ್ನಿಡಿದು ಮತ್ತೊಂದು ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರಿಸುವುದು ರೇಜಿಗೆಯೇ ಸರಿ. ನಾವು ನೆನೆದರೂ ಕ್ಯಾಮೆರಾಗೆ ನೀರು ಬೀಳಬಾರದು ಎಂಬ ಕಾಳಜಿ, ಕಾಲಿಗೆ ಇಂಬಳ ಹತ್ತಿತೇನೋ ಎಂಬ ಭಯ ಹಲವು ಫ್ರೇಮ್‌ಗಳನ್ನು ನಮ್ಮಿಂದ ಕೈತಪ್ಪಿಸುತ್ತವೆ. ಆದರೆ, ಸ್ವರ್ಗಸದೃಶ ದೃಶ್ಯಗಳನ್ನು ಬಂಧಿಸಿಟ್ಟಾಗ ಸಿಗುವ ಸಂತಸ ಇದೆಯಲ್ಲ, ಅದು ಮಾತಿಗೆ ನಿಲುಕದು. ಅಂಥ ಚಿತ್ರಗಳು ನೋಡುಗರನ್ನೂ ತೋಯಿಸುತ್ತವೆ.

ಮಳೆಯ ಸದ್ದು, ಬಣ್ಣದ ಛತ್ರಿಗಳು, ವಿವಿಧ ಹೂಗಳು, ಹಸಿರು ಬಯಲು, ಹಸಿರು ಪೈರು, ಹಸಿರು ಗುಡ್ಡ, ಹಸಿರು ಬಣ್ಣದ ಕಪ್ಪೆ, ಹಾಲಿನಂತೆ ಹರಿಯುವ ಜಲಪಾತ, ಇಬ್ಬನಿ ಕವಿದ ಬೆಟ್ಟ ಗುಡ್ಡಗಳು... ಮಳೆಗಾಲವನ್ನು ಶಾಶ್ವತಗೊಳಿಸುತ್ತವೆ.

ಅಂದಹಾಗೆ, ಮಳೆಗಾಲದಲ್ಲಿ ಫೋಟೊಗ್ರಫಿ  ಕಷ್ಟವೆಂದು ಮನೆಯಲ್ಲಿ ಕೂರುವ ದಿನಗಳು ಈಗಿಲ್ಲ. ಕಾಲ ಬದಲಾಗಿದೆ. ಕೇರಳ ರಾಜ್ಯದವರು ಮಳೆಗಾಲವನ್ನೂ ಮಾರುಕಟ್ಟೆಯ ಸರಕನ್ನಾಗಿಸಿದ್ದಾರೆ. `ಮಳೆಗಾಲದಲ್ಲಿ ಅದ್ಭುತ ಸೌಂದರ್ಯ ಸವಿಯಲು ಕೇರಳಕ್ಕೆ ಬನ್ನಿ~ ಎನ್ನುವುದು ಅವರ ಆಹ್ವಾನ.

ಕೇರಳಕ್ಕೇ ಯಾಕೆ ಹೋಗಬೇಕು, ನಮ್ಮಲ್ಲೂ ಮಳೆಗಾಲದ ಸೌಂದರ್ಯ ಸಮೀಕ್ಷೆಗೆ ಪೊಗದಸ್ತಾದ ವೇದಿಕೆಯಿದೆ ಎನ್ನುವುದು ಅನುಭವಿಗಳ ಮಾತು. `ಸಕಲೇಶಪುರ, ತೀರ್ಥಹಳ್ಳಿ, ಆಗುಂಬೆ, ಕುದುರೆಮುಖ, ಕೆಮ್ಮಣ್ಣುಗುಂಡಿ ಎಲ್ಲ ಹಾದು ಬಂದರೆ ಮಳೆಗಾಲದ ಸುಂದರ ಅನುಭವದ ಜೊತೆಯಲ್ಲಿ ಮಳೆ ಚಿತ್ರಗಳೂ ನಮ್ಮಲ್ಲಿರುತ್ತವೆ.

ಮೂರು ವರ್ಷಗಳಿಂದ ಮಾನ್‌ಸೂನ್ ಫೋಟೋಗ್ರಫಿಯ ದಿವ್ಯ ಅನುಭೂತಿ ಅನುಭವಿಸಿರುವೆ~ ಎನ್ನುವುದು ಹಿರಿಯ ಛಾಯಾಗ್ರಾಹಕ ಬಿ.ಶ್ರೀನಿವಾಸ್‌ರ ಮಾತು. ಈ ಮಾತಿನ ಪರೀಕ್ಷೆಗೆ ಹೊರಟ ನನಗೆ ಮಳೆಗಾಲ ಮದುವಣಗಿತ್ತಿಯಂತೆ ಕಾಣಿಸಿತು. ಎಷ್ಟು ಕ್ಲಿಕ್ಕಿಸಿದರೂ ತಣಿಯದ ಸೌಂದರ್ಯ ನವವಧುವಿನದು. ಕೆಲವು ಚಿತ್ರಗಳಷ್ಟೇ ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT