ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ವಿ ಮನಿ ಖಾಲಿ ಆದ್ಹಂಗ ಆಗೈತಿ...

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: `ಅಕ್ಷರ ಜಾತ್ರೆ' ನಡೆದ ಮೂರು ದಿನಗಳ ಕಾಲವೂ ವಿಜಾಪುರ ಜನರಿಂದ ತುಂಬಿ ತುಳುಕುತ್ತಿತ್ತು.  ಈಗ ಪ್ರವಾಹ ಬಂದು ಒಮ್ಮೆಲೆ ಇಳಿದುಹೋದ ಅನುಭವ. ಸಮ್ಮೇಳನ ನಡೆದ ಸೈನಿಕ ಶಾಲೆಯ ಆವರಣದಲ್ಲಂತೂ ನೀರವ ಮೌನ. ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ `ಅತಿಥಿ'ಗಳು ಹೊರಟು ಹೋಗಿದ್ದರೂ, `ಏನ್ ಜನ, ಏನ್ ಸಮ್ಮೇಳನ' ಎನ್ನುತ್ತ ಜಿಲ್ಲೆಯ ಜನ ಇನ್ನೂ ಸಮ್ಮೇಳನದ ಗುಂಗಿನಲ್ಲಿಯೇ ಇದ್ದಾರೆ.

`ಇಂತಹ ಜನಪ್ರವಾಹ ನಾವು ನೋಡಿಯೇ ಇರಲಿಲ್ಲ', `ಹಿಂದಿನ ಯಾವ ಸಮ್ಮೇಳನಗಳಲ್ಲಿಯೂ ಇಷ್ಟೊಂದು ಜನ ಸೇರಿರಲಿಲ್ಲ. ಮುಂದೆಯೂ ಸೇರೋದಿಲ್ಲ' ಎಂದು ಬೀಗುತ್ತಿದ್ದಾರೆ. `ಸಮ್ಮೇಳನದ ಹೆಸರಲ್ಲಾದ್ರೂ ವಿಜಾಪುರ ನಗರ ಅಭಿವೃದ್ಧಿ ಆತು ಬಿಡ್ರಿ..' ಎಂದು ಖುಷಿ ಪಡುತ್ತಿದ್ದಾರೆ.
ಲಕ್ಷ ಲಕ್ಷ ಜನರನ್ನು ಒಡಲಲ್ಲಿ ಇಟ್ಟುಕೊಂಡು `ಜೇನುಗೂಡು' ತರಹ ಕಾಣುತ್ತಿದ್ದ ಸಮ್ಮೇಳನ ನಡೆದ ಸೈನಿಕ ಶಾಲೆಯ ಆವರಣಕ್ಕೆ ಮಂಗಳವಾರ ಭೇಟಿ ನೀಡಿದರೆ, ಅಲ್ಲಿ ಮಂಟಪ ಬಿಚ್ಚಿ, ಕುರ್ಚಿ ಹೊಂದಿಸಿ ಒಯ್ಯುವ ಕಾರ್ಮಿಕರ ಗಡಿಬಿಡಿಯಷ್ಟೇ ಕಾಣುತ್ತಿತ್ತು. `ಬೀಗರು ಬಂದಿದ್ದ ಮದ್ವಿ ಮನಿ ಒಮ್ಮೆಲೇ ಖಾಲಿ ಆದ್ಹಂಗ ಆಗೈತಿ ನೋಡ್ರಿ...' ಎಂದು ಕಾರ್ಮಿಕ ಕಲ್ಲಪ್ಪ ಹಳಹಳಿಸುತ್ತಿದ್ದ.

7 ಲಕ್ಷ ಊಟ: `ಮೂರು ದಿನಗಳಲ್ಲಿ ಒಟ್ಟಾರೆ 3.5 ಲಕ್ಷ ಜನ ಊಟ ಮಾಡಿದ್ದು, ಎರಡೂ ಹೊತ್ತು ಸೇರಿ ಒಟ್ಟಾರೆ ಏಳು ಲಕ್ಷ ಊಟಗಳನ್ನು ಕೊಟ್ಟಿದ್ದೇವೆ' ಎಂದು ದಾಸೋಹ ಸಮಿತಿಯ ವಿಜಯಕುಮಾರ ಹಲಕುಡೆ ಹೇಳಿದರು. `25 ಸಾವಿರಕ್ಕೂ ಹೆಚ್ಚು ಖಡಕ್ ರೊಟ್ಟಿ, ತಲಾ 25 ಕೆ.ಜಿ. ತೂಕದ 223 ಚೀಲ ಅಕ್ಕಿ ದಾಸ್ತಾನಿದೆ. ಸೇರಿದ್ದ ಜನಸಮುದಾಯಕ್ಕೆ ಇನ್ನೊಂದು ದಿನಕ್ಕೆ ಆಗುವಷ್ಟು ದಿನಸಿ ವಸ್ತುಗಳು, ರೊಟ್ಟಿ ಉಳಿದಿವೆ' ಎಂದು ಬಾಣಸಿಗರು ತಿಳಿಸಿದರು.

ಅಸಮಾಧಾನ: `ನಮ್ಮದು ಸ್ವಚ್ಛ ಮತ್ತು ಸುಂದರ ಪರಿಸರದ ಶಾಲೆ. ಅದಕ್ಕೆ ಧಕ್ಕೆ ಬರದ ಹಾಗೆ ಎಚ್ಚರಿಕೆ ವಹಿಸಬೇಕು ಹಾಗೂ ಶಾಲೆಯ ಆವರಣ ಸ್ವಚ್ಛಗೊಳಿಸಬೇಕು ಎಂಬ ಷರತ್ತಿನ ಮೇರೆಗೆ ಜಾಗೆ ಕೊಡಲಾಗಿತ್ತು. ಆದರೆ, ಶಾಲೆಯ ಆವರಣ- ಕಂಠಿ ಸಭಾಂಗಣದಲ್ಲಿ ಕಸದ ರಾಶಿ ತುಂಬಿದೆ' ಎಂದು ಸೈನಿಕ ಶಾಲೆಯವರು ಅಸಮಾಧಾನ ವ್ಯಕ್ತಪಡಿಸಿದರು.

ಕುಬುಸದ ಖಣ: ಮಹಿಳಾ ಪ್ರತಿನಿಧಿಗಳಿಗೆ ಕುಬುಸದ ಖಣ ವಿತರಣೆಗೆ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, `ಸಮ್ಮೇಳನಕ್ಕೆ ಆಗಮಿಸಿದ್ದ ನೋಂದಾಯಿತ ಮಹಿಳಾ ಪ್ರತಿನಿಧಿಗಳಿಗೆ ಕುಬುಸದ ಖಣ ವಿತರಸಿದೆವು' ಎಂದು ಸಮ್ಮೇಳನದ ಮಹಿಳಾ ಸಮಿತಿಯ ಅಧ್ಯಕ್ಷೆ ಡಾ.ಮೀನಾ ಚಂದಾವರಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT