ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆದ ಕೃಷಿ ಉಪಕರಣಗಳು

Last Updated 20 ಏಪ್ರಿಲ್ 2011, 8:25 IST
ಅಕ್ಷರ ಗಾತ್ರ

ಅಥಣಿ: ಮಹಾತಪಸ್ವಿ ಜಂಗಮಜ್ಯೋತಿ ಶ್ರೀ ಮುರುಘೇಂದ್ರ ಶಿವಯೋಗಿಗಳ 90ನೇ ಜಾತ್ರಾ ಮಹೋತ್ಸವದ ಅಂಗವಾಗಿ ರೋಟರಿ ದಕ್ಷಿಣ ಸಂಸ್ಥೆ ಹಮ್ಮಿಕೊಂಡಿರುವ ಐದು ದಿನಗಳ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಆಧಾರಿತ ಉತ್ಪನ್ನಗಳು ಜನಮನ ಸೆಳೆದವು. ಇದರಲ್ಲಿ ಪ್ರಮುಖವಾಗಿ ಜೈನ್ ಪೈಪ್ಸ್ ಕಂಪೆನಿಯವರು ಪ್ರದರ್ಶನಕ್ಕಿಟ್ಟಿದ್ದ ತುಂತುರು ಹನಿ ನೀರಾವರಿ ಪ್ರಾತ್ಯಕ್ಷಿಕೆ ಜನಮನ ಸೆಳೆಯಿತು.

ಜಲಾನಯನ ಅಭಿವೃದ್ಧಿ ಇಲಾಖೆ ಪ್ರಸ್ತುತ ಪಡಿಸಿದ ಮಳೆ ನೀರು ಸಂಗ್ರಹ ಪ್ರಾತ್ಯಕ್ಷಿಕೆ, ರೇಣುಕಾ ಶುಗರ್ಸ್‌ನವರು ಪ್ರದರ್ಶನಕ್ಕಿಟ್ಟಿದ್ದ ಬೀಟ್ ಶುಗರ್ ಗಡ್ಡೆ, ರೋಹಿಣಿ ಬಯೋಟೆಕ್‌ನವರ ಮಣ್ಣು ಪರೀಕ್ಷೆ, ವಸುಂಧರಾ ಸಾವಯವ ಕೃಷಿ ಪರಿವಾರದ ಸಾವಯವ ಕೃಷಿ ಪ್ರಾತ್ಯಕ್ಷಿಕೆ, ನಂದಿನಿ ಹೈನುಗಾರಿಕೆ ಉತ್ಪನ್ನಗಳ ಪ್ರದರ್ಶನಗಳಿಂದ ಪುಳಕಿತರಾದ ಯಾತ್ರಿಕರು ತಂಡೋಪ ತಂಡವಾಗಿ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ಸಾಮಾನ್ಯವಾಗಿತ್ತು.

ಕೃಷಿ ಮೇಳದ ಆಯೋಜಕರಲ್ಲೊಬ್ಬರಾದ ರಾಮಣ್ಣ ಧರಿಗೌಡರ, ಈಗಾಗಲೇ ಈ ಮೇಳದಲ್ಲಿ ಸುಮಾರು 70 ಪ್ರಾಯೋಜಕರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸುತ್ತಿದ್ದಾರೆ ಎಂದರು. ರೇಣುಕಾ ಶುಗರ್ಸ್‌ನ ಆಡಳಿತ ಮಂಡಳಿ ಪ್ರದರ್ಶನಕ್ಕಿಟ್ಟಿದ್ದ ಬೀಟ್ ಶುಗರ್‌ಗಡ್ಡೆಯ ಬಗ್ಗೆ ಮಾಹಿತಿ ನೀಡಿದ  ಪ್ರಾಯೋಜಕರು, ಇತರೆ  ಬೆಳೆಗಳಿಗೆ ಹೋಲಿಸಿದಲ್ಲಿ ಬೀಟ್ ಶುಗರ್ ಗಡ್ಡಿಯು ಹೆಚ್ಚು ಪರಿಣಾಮಕಾರಿಯಾಗಿದ್ದು, ಇದರಿಂದ ಜಮೀನು ತನ್ನ ಫಲವತ್ತತೆಯನ್ನು ಕಾಪಾಡಿಕೊಂಡು ಹೋಗುವುದಲ್ಲದೇ, ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಪ್ರಸ್ತುತ ಪಡಿಸಿದ ತಾಳೆ ಬೆಳೆ ಅಭಿವೃದ್ಧಿ ಯೋಜನೆಯ ಕುರಿತು ಮಾಹಿತಿ ನೀಡಿದ ಅಧಿಕಾರಿ ಸಂಜಯ ಮಂತ್ರಣ್ಣವರ, ತಾಳೆ ಬೆಳೆಯನ್ನು ಈಗಾಗಲೇ ಬೆಳಗಾವಿ ಜಿಲ್ಲೆಯ ಹತ್ತೂ ತಾಲ್ಲೂಕುಗಳಲ್ಲಿ ಬೆಳೆಯುತ್ತಿದ್ದು, ಈಗಾಗಲೇ 500 ಕ್ಕೂ ಹೆಚ್ಚು ರೈತರು ಸುಮಾರು 6000 ಎಕರೆ ಪ್ರದೇಶದಲ್ಲಿ ತಾಳೆ ಬೆಳೆಯುತ್ತಿದ್ದಾರೆ, ಈ ಯೋಜನೆಯ ಮುಖ್ಯ ಉದ್ದೇಶ ರಾಜ್ಯಕ್ಕೆ ಬೇಕಾದ ಖಾದ್ಯ ತೈಲದ ಉತ್ಪಾದನೆ ತನ್ಮೂಲಕ ಆಮದು ವೆಚ್ಚ ಕಡಿತ ಮಾಡಿ ವಿದೇಶಿ ವಿನಿಮಯ ಉಳಿಕೆ, ಖಾದ್ಯ ತೈಲದ ಕೊರತೆ ನಿವಾರಿಸುವುದು, ಬೆಳೆಯಿಂದ ಈ ಭಾಗದಲ್ಲಿ ನೈಸರ್ಗಿಕ ಬದಲಾವಣೆ ತರುವುದು, ರೈತರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವುದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT