ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮನಸ್ಸಿನೊಳಗಿನ ಭಾವನೆ, ಚಿಂತನೆಗಳ ಪಡಿಯಚ್ಚು ಸಾಹಿತ್ಯ'

ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಹುಟ್ಟುಹಬ್ಬ, ಕೃತಿ ಬಿಡುಗಡೆಯಲ್ಲಿ ಡಾ.ಎಂ.ಎಂ.ಕಲಬುರ್ಗಿ
Last Updated 8 ಏಪ್ರಿಲ್ 2013, 6:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ವ್ಯಕ್ತಿಯ ಮನಸ್ಸಿನೊಳಗಿನ ಭಾವನೆಗಳು, ಚಿಂತನೆ ಗಳು ಉತ್ಕಟವಾದ ಸಂದರ್ಭದಲ್ಲಿ ಭಾಷೆಯ ಮೂಲಕ ಹೊರಬರುತ್ತವೆ. ಭಾಷಾ ಮಾಧ್ಯಮದ ಕಲೆ ಸಾಹಿತ್ಯ' ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿ ತಾಲ್ಲೂಕು ಘಟಕ ಮತ್ತು ಬಸವ ಕೇಂದ್ರದ ಜಂಟಿ ಆಶ್ರಯದಲ್ಲಿ ನಗರ ಎಸ್‌ಜೆಎಂವಿಎಸ್ ಮಹಿಳಾ ಕಾಲೇಜಿನಲ್ಲಿ ಭಾನುವಾರ ಜರುಗಿದ ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಅವರ `ಅಪ್ರತಿಮ ಚೇತನ' ನೂರೆಂಟು ವಚನಗಳು ಮತ್ತು `ನಿತ್ಯ ನೂತನ' ಕವನ ಸಂಕಲನ ಬಿಡುಗಡೆ ಮತ್ತು 70ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪಟ್ಟಣಶೆಟ್ಟಿ ಕವಿತ್ವದ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿ ಕೊಂಡವರು. ಭಾಷೆಯನ್ನು ಸಂಸ್ಕರಿಸಿ, ದುಡಿಸಿಕೊಂಡು, ಹದ ವಾಗಿ ಬಳಸಿ ಸಾಹಿತ್ಯ ರಚಿಸುವ ಕಲೆ ಅವರಿಗೆ ಸಿದ್ಧಿಸಿದೆ' ಎಂದ ಅವರು, `ಬೋಧಕ ಮತ್ತು ಲೇಖಕ ಒಂದೇ ನಾಣ್ಯದ ಎರಡು ಮುಖಗಳು. ಪಟ್ಟಣಶೆಟ್ಟಿಯವರು ಒಳ್ಳೆಯ ಬೋಧಕರೂ ಹೌದು, ಲೇಖಕರೂ ಹೌದು' ಎಂದು ಬಣ್ಣಿಸಿದರು.

`ಕವನ ಬರೆಯುವುದು ಕಷ್ಟ. ಬರೆಯುವುದಕ್ಕಿಂತ ಬರೆಯ ದಿರುವುದು ಇನ್ನೂ ಕಷ್ಟ. ಆದರೆ ಈ ಒತ್ತಡ, ಮನಸ್ಸಿನೊಳಗೆ ಕೆಲಸ ಮಾಡಿದಾಗ ಅತ್ಯುನ್ನತ ಕೃತಿ ಹೊರಬರಲು ಸಾಧ್ಯ. ಕವಿತೆ ವಾಚ್ಯವಾಗಿದ್ದರೂ ಕಲಾತ್ಮಕತೆ ಮೈಗೂಡಿಸಿಕೊಂಡಿರಬೇಕು. ಕವಿಗಳಲ್ಲಿ ವಿನಯ, ವೀರತ್ವ ಎರಡೂ ಇರಬೇಕು. ಸಂದರ್ಭಕ್ಕೆ ತಕ್ಕಂತೆ ಈ ಗುಣಗಳನ್ನು ಬಳಸಿಕೊಂಡವರು ಒಳ್ಳೆಯ ಕವನ ರಚಿಸಲು ಸಾಧ್ಯ' ಎಂದರು.
`ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಸಮಾಜದ ಸ್ವಾಸ್ಥ್ಯ ಕೆಡುವಂತಹ ರೀತಿಯಲ್ಲಿ ಬರೆಯಬಾರದು. ಸಾಹಿತ್ಯ ಉದಾತ್ತ ಮೌಲ್ಯಗಳನ್ನು ಹೊಂದಿರಬೇಕು. ಸಾಮಾಜಿಕ ನ್ಯಾಯವನ್ನು ಪೂರೈಸಬೇಕು' ಎಂದ ಅವರು, `ಪಟ್ಟಣಶೆಟ್ಟಿ ಯವರು ರಚಿಸಿದ ವಚನಗಳು ಆತ್ಮ, ಸಮಾಜ, ತತ್ವ ಕೇಂದ್ರಿತವಾಗಿದೆ' ಎಂದರು.

`ಸಾಹಿತ್ಯ ದೊಡ್ಡದು. ಆದರೆ ಸಾಹಿತ್ಯಕ್ಕಿಂತಲೂ ಬದುಕು ದೊಡ್ಡದು. ಬದುಕು ಕಟ್ಟಿಕೊಂಡ ನಂತರ ಸಾಹಿತ್ಯ, ಸಮಾಜ ಇದ್ದದ್ದೆ' ಎಂದರು.

`ಪ್ರಾಚೀನ ಕವಿತೆಗಳು ಈಗ ಬಳಕೆಯಲಿಲ್ಲ. ಯಾಕೆಂದರೆ ಅವು ಸ್ಥಾಯಿ. ಆದರೆ 12ನೇ ಶತಮಾನದ ವಚನಗಳು ಪ್ರಚಲಿತದಲ್ಲಿದ್ದು, ಭವಿಷ್ಯದಲ್ಲೂ ಪ್ರಸ್ತುತವಾಗುತ್ತವೆ. ಕವನಗಳನ್ನು ಬರೆಯುವ ಸಂದರ್ಭದಲ್ಲಿ ಹಿಂದಿನ ಸಾಹಿತಿಗಳ ಪ್ರಭಾವಕ್ಕೆ ಒಳಗಾಗುವುದು ಸಹಜ. ಆದರೆ ಪ್ರತಿಭಾವಂತರು ಆ ಪ್ರಭಾವದ ಮಧ್ಯೆಯೂ ಸ್ವಂತಿಕೆ, ಸತ್ವ ತುಂಬಬಲ್ಲರು' ಎಂದರು.

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, `ಸಮಾಜ ಹಿತದೃಷ್ಟಿಯಿಂದ ಹಿರಿಯರು ತಮ್ಮ ಅನುಭವ, ಅನಿಸಿಕೆಗಳನ್ನು ಬರೆಯಬೇಕು. ಅದರಿಂದ ಮನಸ್ಸು ಹಗರುವಾಗುತ್ತದೆ, ಸ್ವಚ್ಛವಾಗುತ್ತದೆ. ಜೊತೆಗೆ ಚರಿತ್ರೆಯ ಮಹತ್ವದ ಭಾಗವಾಗಿ ಬರವಣಿಗೆ ಲೋಕಕ್ಕೆ ಕೊಡುಗೆಯಾಗುತ್ತದೆ. ತಮ್ಮ ಅನುಭವ ಗಳನ್ನು ಹಂಚಿಕೊಳ್ಳುವ ಉದ್ದೇಶದಿಂದಲೇ ಪಟ್ಟಣಶೆಟ್ಟಿ ಯವರು ಕೃತಿ ರಚಿಸಿದ್ದಾರೆ' ಎಂದರು.

`ಅಪ್ರತಿಮ ಚೇತನ' ನೂರೆಂಟು ವಚನಗಳು ಕೃತಿ ಪರಿಚಯ ಮಾಡಿದ ಡಾ ಸಂಗಮೇಶ ಹಂಡಿಗಿ, `ಅನೇಕ ರೂಪಕ, ಉಪಮೆ, ಅಲಂಕಾರ, ದೃಷ್ಟಾಂತ, ಪ್ರಾಸಗಳಿಂದ ಈ ಕೃತಿ ಕಾವ್ಯಾತ್ಮಕವಾಗಿ ಮೂಡಿಬಂದಿದೆ. ಪಟ್ಟಣಶೆಟ್ಟಿ ಅವರು 70ರ ವಯಸ್ಸಿನಲ್ಲಿ ಎರಡು ಅವಳಿ ಮಕ್ಕಳನ್ನು (ಕೃತಿಗಳು) ನೀಡಿರುವುದು ಹೆಮ್ಮೆಯ ವಿಷಯ' ಎಂದರು.

`ನಿತ್ಯ ನೂತನ' ಕವನ ಸಂಕಲನವನ್ನು ಪರಿಚಯಿಸಿದ ಪ್ರೊ.ಕೆ.ಎಸ್. ಕೌಜಲಗಿ, `ಕೃತಿಯ ಕವನಗಳಲ್ಲಿ  ಪಟ್ಟಣಶೆಟ್ಟಿ ಯವರು ನಿತ್ಯದ ಘಟನೆಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ. ಬದುಕಿನ ಅನಂತ ಆಯಾಮಗಳನ್ನು ಅವರು ತೆರೆದಿಟ್ಟಿದ್ದಾರೆ' ಎಂದರು.

ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಮಾತನಾಡಿ ಜೀವನಾನುಭವ ಬಿಚ್ಚಿಟ್ಟರು. `ಮಾನಸಿಕ ಸಹಜವಾದ ಬೇಗುದಿಯನ್ನು ಪ್ರಕಟ ಮಾಡಲು ಎರಡು ಕೃತಿ ಬರೆದಿದ್ದೇನೆ. ಬದುಕಿಗೆ ಅರ್ಥ- ಹಾದಿ ತೋರಿದ ಗುರುಗಳಾದ ಕಲಬುರ್ಗಿ, ಮೃದುಭಾಷಿಯಾದ ಪತ್ನಿ, ಇಳಿವಯಸ್ಸಿನಲ್ಲೂ ಜೀವನೋತ್ಸಾಹ ತುಂಬಿದ್ದ ಮೊಮ್ಮಕ್ಕಳು, ಮಕ್ಕಳ ಪ್ರೋತ್ಸಾಹದಿಂದ ಈ ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಗಿದೆ' ಎಂದು ಭಾವುಕರಾದರು.  

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಡಾ.ಬಿ.ವಿ. ಶಿರೂರ ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಎಸ್.ವಿ ಪಟ್ಟಣಶೆಟ್ಟಿ- ದಾಕ್ಷಾಯಿಣಿ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು. ಪಟ್ಟಣಶೆಟ್ಟಿಯವರ ಶಿಷ್ಯರು, ಅಭಿಮಾನಿಗಳು ದಂಪತಿಗೆ ಶಾಲು ಹೊದಿಸಿ, ಹೂ ಗುಚ್ಚ ನೀಡಿ ಶುಭ ಹಾರೈಸಿದರು. ನಂದಾ ಕುಲಕರ್ಣಿ ಪ್ರಾರ್ಥಿಸಿದರು. ಸುಶೀಲೇಂದ್ರ ಕುಂದರಗಿ ನಿರೂಪಿಸಿದರು. ಗಿರೀಶ ಪಟ್ಟಣಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT