ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಂಗಳಕ್ಕೆ ಹಾರಿಬರಲಿದೆ ‘ಡ್ರೋನ್‌’!

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇಂದು ತಂತ್ರಜ್ಞಾನ ಇಲ್ಲದ ಕ್ಷೇತ್ರವೇ ಇಲ್ಲ ಎಂಬಂತಾಗಿದೆ. ಅದರಲ್ಲೂ ಅಂತ­ರ್ಜಾಲದ ಸಹಾಯದಿಂದ   ಇ–ಕಾಮರ್ಸ್, ನೆಟ್ ಬ್ಯಾಂಕಿಂಗ್, ಆನ್‌ಲೈನ್ ಷಾಪಿಂಗ್  ಎಲ್ಲವೂ ಸಾಧ್ಯ.

ಆದರೆ ಆನ್‌ಲೈನ್ ಷಾಪಿಂಗ್‌ನಲ್ಲಿ ಖರೀದಿಸಿದ ವಸ್ತುಗಳು ಮನೆ ತಲು­ಪಲು ಕನಿಷ್ಠ ಮೂರ್ನಾಲ್ಕು ದಿನಗಳಾದರೂ ತೆಗೆದುಕೊಳ್ಳುತ್ತಿದೆ.
‘ಇನ್ನು ಕೆಲವೇ ದಿನ ಬಾಕಿ. ನೀವು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳನ್ನು (ಆಯ್ದ ಕೆಲವೇ ನಗರಗಳಲ್ಲಿ) ಕೇವಲ 30 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೇ ತಲುಪಿಸುತ್ತೇವೆ’ ಎನ್ನುತ್ತಿದೆ ಅಮೆಜಾನ್ ಸಂಸ್ಥೆ!

ಡ್ರೋನ್ ಯಂತ್ರದ ಮೂಲಕ ಕೇವಲ 30 ನಿಮಿಷಗಳಲ್ಲಿ ಗ್ರಾಹಕರ ಮನೆಗಳಿಗೆ ನೇರವಾಗಿ ವಸ್ತುಗಳನ್ನು ಪೂರೈಸಲು  ಆನ್‌ಲೈನ್ ವಾಣಿಜ್ಯ ಜಾಲತಾಣಗಳ ಪ್ರಮುಖ ಕಂಪೆನಿ ‘ಅಮೆಜಾನ್ ಡಾಟ್ ಕಾಂ (amazon.com) ಸಿದ್ಧತೆ ನಡೆಸಿದೆ.

‘ಆಕ್ಟೋಕಾಪ್ಟರ್ಸ್’ ಎಂಬ ಹೆಸರಿನ ಈ ಸಣ್ಣ ಯಂತ್ರ ‘ಡ್ರೋನ್’ ಚಿತ್ರವನ್ನು ಸಂಸ್ಥೆಯ ‘ಸಿಇಒ’ (ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ) ಜೆಫ್ ಬೆಜೋಸ್ ಅವರು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದರು.

ಸದ್ಯ ಮಹಾನಗರಗಳಲ್ಲಿನ ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಿದ ಯಾವುದೇ ವಸ್ತು  ಅವರ ಕೈಸೇರಬೇಕಾದರೆ ಕನಿಷ್ಠ ಮೂರು– ನಾಲ್ಕು ದಿನಗಳಾದರೂ ಬೇಕಿದೆ. ಗ್ರಾಹಕರ ನೀಡಿದ ವಿಳಾಸದಲ್ಲಿ ಗೊಂದಲವಿದ್ದರಂತೂ ಮತ್ತಷ್ಟು ವಿಳಂಬವಾಗುತ್ತದೆ. ಹೀಗಾಗಿ ವಸ್ತುಗಳ ಶೀಘ್ರ ಬಟವಾಡೆಗಾಗಿ ಮತ್ತು ಸರಕು ಪೂರೈಕೆ ನಿರ್ವಹಣಾ ವೆಚ್ಚವನ್ನು ತಗ್ಗಿಸುವ ದೃಷ್ಟಿಯಿಂದ ‘ಡ್ರೋನ್’ ಬಳಕೆ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ ‘ಡ್ರೋನ್‌’ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಲಿದೆ ಎನ್ನುವುದು ಸಂಸ್ಥೆಯ ಅಭಿಮತ.

ಬೆಜೋಸ್ ಹೇಳುವಂತೆ ‘ಸಂಸ್ಥೆಯ ಮಹಾತ್ವಾಕಾಂಕ್ಷಿ ಯೋಜನೆಯಾದ  ‘ಡ್ರೋನ್’ 30 ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸಲಿದೆ. ಈ ಯಂತ್ರ ಐದು ಪೌಂಡ್‌ಗಳಷ್ಟು (2.3 ಕೆ.ಜಿ) ತೂಕದ ವಸ್ತುಗಳನ್ನು ಮಾತ್ರ ಹೊತ್ತೊ­ಯ್ಯಬಲ್ಲದು. ಅಂದರೆ ಸದ್ಯ ಆನ್‌ಲೈನ್‌ನಲ್ಲಿ ಮಾರಾಟ­ವಾಗುತ್ತಿರುವ ವಸ್ತುಗಳಲ್ಲಿ ಶೇ 86ರಷ್ಟು ಪದಾರ್ಥಗಳನ್ನು ಡ್ರೋನ್ ಮೂಲಕ ಗ್ರಾಹಕರಿಗೆ ತಲುಪಿಸಬ­ಹುದಾಗಿದೆ’.

‘ಡ್ರೋನ್‌ ಬಳಕೆ ವಿಳಾಸಗಳನ್ನು ಸ್ಪಷ್ಟವಾಗಿ ಗುರುತಿಸಬಹು­ದಾದ ನಗರ ಪ್ರದೇಶಗಳಿಗೆ ಸೂಕ್ತವಾಗಿದೆ. ಡ್ರೋನ್‌ ಯಂತ್ರ ವಸ್ತುಗಳನ್ನು ಪೂರೈಸುವ ಪ್ರತಿ ಕೇಂದ್ರದ ಸುತ್ತಲ 16 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಟ್ರಕ್ ಮೂಲಕ ವಸ್ತುಗಳನ್ನು ತಲುಪಿಸುವುದಕ್ಕಿಂತಲೂ ಇದು ಸರಳ ಹಾಗೂ ಹೆಚ್ಚು ಪ್ರಯೋಜನಕಾರಿ’ ಎನ್ನುತ್ತಾರೆ ಬೆಜೋಸ್.

ಪುಟ್ಟ ಬ್ಯಾಟರಿಯಿಂದ ವಿದ್ಯುಚ್ಛಕ್ತಿ ಪಡೆದುಕೊಳ್ಳುತ್ತಾ ಈ ಡ್ರೋನ್ ಯಂತ್ರ ಹಾರಾಟ ನಡೆಸುತ್ತದೆ. ಇದು ಮಾನವರಹಿತ ವೈಮಾನಿಕ ವಾಹನ. ಹಾಗಿದ್ದರೂ ಗ್ರಾಹಕರ ಮನೆಗೆ ಅಥವಾ ಅವರು ಸೂಚಿಸಿದ ಸ್ಥಳಕ್ಕೆ ತಲುಪಲು ಇದಕ್ಕೆ ನಿಯಂತ್ರಕನ ಅವಶ್ಯಕತೆ ಇದೆ. ತರಬೇತಿ ಪಡೆದ ನಿಯಂತ್ರಕ ಯಂತ್ರಕ್ಕೆ ಅಳವಡಿಸಿರುವ ‘ಜಿಪಿಎಸ್’ ಮತ್ತು ಕ್ಯಾಮೆರಾ ಸಹಾಯದಿಂದಲೇ ಡ್ರೋನ್ ಹಾರಾಟವನ್ನು ನಿಯಂತ್ರಿಸುತ್ತಾನೆ. ಈ ಯೋಜನೆ ಸದ್ಯ ಆರಂಭದ ಹಂತದಲ್ಲಿದೆ.

ಗ್ರಾಹಕರ ಮನೆ ಎದುರು ಡ್ರೋನ್ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಂತೆ ಮಾಡುವುದೇ ಅಮೆಜಾನ್‌ಗೆ ಸದ್ಯ ಎದುರಾಗಿರುವ ದೊಡ್ಡ ಸವಾಲು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮನೆಯ ಅಂಗಳದಲ್ಲಿನ ಮರದ ಕೊಂಬೆಗಳಿಗೆ ಡಿಕ್ಕಿ ಹೊಡೆ­ಯದಂತೆ ಮತ್ತು ವಿದ್ಯುತ್ ತಂತಿಗಳಿಗೆ ತಾಕದಂತೆ ಡ್ರೋನ್‌ ಚಲನೆ­ಯನ್ನು ದೂರದಿಂದಲೇ ನಿಯಂತ್ರಿಸುತ್ತಾ ನೆಲಕ್ಕಿಳಿಸುವುದು ಮತ್ತು ಮೇಲೇರಿಸಿ ವಾಪಸ್‌ ಕಚೇರಿಗೆ ಬರುವಂತೆ ಮಾಡುವುದು ದೊಡ್ಡ ಸವಾಲು. ನಿಯಂತ್ರಣ ಕೇಂದ್ರದಿಂದ ದೂರದಲ್ಲಿ, ಗ್ರಾಹಕರ ಮನೆ ಅಂಗಳದಲ್ಲಿ ಡ್ರೋನ್‌ ಕೆಳಕ್ಕಿಳಿಯುವಾಗ ಮತ್ತು ಮೇಲೇರುವಾಗ ಪಾದಾಚಾರಿಗಳ ಸುರಕ್ಷತೆಯತ್ತಲೂ ಹೆಚ್ಚಿನ ಗಮನ ನೀಡಬೇಕಿದೆ ಎನ್ನುತ್ತಾರೆ ಬಿಜಿಸಿಯ ಕಾಲಿನ್‌ ಗಿಲ್ಲೀಸ್.

ವಿಮಾನಗಳು ಅಥವಾ ಗಾಳಿಯಲ್ಲಿ ಹಾರಾಡುವ ಇತರೆ ವಸ್ತುಗಳು ಅಥವಾ ಪಕ್ಷಿಗಳು ಹತ್ತಿರ ಬರುತ್ತಿರುವುದನ್ನು ವೇಗವಾಗಿ ಗ್ರಹಿಸುವ ಸಂವೇದಕವನ್ನೂ ಡ್ರೋನ್‌ಗೆ ಅಳವಡಿಸಬೇಕಿದೆ. ವೇಗವಾಗಿ ಹಾರಿ ಬರುವ ವಾಹನಗಳಿಗೆ, ಅನ್ಯ ವಸ್ತುಗಳಿಗೆ ಡ್ರೋನ್‌ ಡಿಕ್ಕಿ ಹೊಡೆಯದಂತೆ ನಿಯಂತ್ರಿಸುವುದು ಸವಾಲೇ ಸರಿ. ಇದಕ್ಕಾಗಿ ಯೋಗ್ಯವಾದ ಕ್ಷಿಪ್ರ ಸಂದೇಶ  ರವಾನೆ ವ್ಯವಸ್ಥೆ ಮತ್ತು ವೇಗವಾಗಿ ನಿಯಂತ್ರಣ ಸಾಧ್ಯವಾಗಿಸುವಂತಹ ಸಂಪರ್ಕ ಜಾಲವನ್ನು ಹೊಂದಿರಬೇಕಿದೆ ಎಂದು  ಅಮೆರಿಕದ ವಾಯುಸೇನೆಯ ನಿವೃತ್ತ ಕರ್ನಲ್ ಡಾ. ಜೆರ್ರಿ ಲೆಮಿಯಕ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದೊಂದು ವೈಜ್ಞಾನಿಕ ಕಾದಂಬರಿಯಲ್ಲಿನ ಸಂಗತಿಯಂತೆ ಕಾಣುತ್ತದೆ ಎನಿಸಿದರೂ ಈಗ ವಾಸ್ತವವೇ ಆಗಿದೆ ಎನ್ನುವುದು ಬೆಜೊಸ್ ಹೇಳಿಕೆ.

ಅಮೆಜಾನ್‌ನ ಈ ಮಹಾತ್ವಾಕಾಂಕ್ಷಿ  ಯೋಜನೆಗೆ ಹೆಚ್ಚುವರಿ ಸುರಕ್ಷತಾ ಪರೀಕ್ಷೆ ಮತ್ತು ಅಮೆರಿಕದ ವೈಮಾನಿಕ ಇಲಾಖೆ ಅನುಮತಿ ನೀಡಬೇಕಿದೆ. 2015ರ ವೇಳೆಗೆ ಇದು ಆನ್‌ಲೈನ್ ಕ್ಷೇತ್ರದಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ ಎಂದು ಜೆಫ್ ಬೆಜೊಸ್ ಹೇಳಿದ್ದಾರೆ.
ಪುಸ್ತಕ, ಗಡಿಯಾರ, ಚಿಕ್ಕ ಎಲೆಕ್ಟ್ರಾನಿಕ್‌ ಸಲಕರಣೆ, ಬಟ್ಟೆ-, ಪಾದರಕ್ಷೆ ಮೊದಲಾದ ಪುಟ್ಟ ಗಾತ್ರದ ಸರಕುಗಳ ವಿತರಣೆಗೆ ಡ್ರೋನ್ ಬಳಸಿಕೊಳ್ಳುವ ಆಲೋಚನೆ ಅಮೆಜಾನ್‌ನದ್ದಾಗಿದೆ.

‘ಇದೊಂದು ಅಪರೂಪದ ಕಲ್ಪನೆ.  ಇದರ ಸಾಮರ್ಥ್ಯವನ್ನು ಅಲ್ಲಗಳೆಯಲಾಗದು’ ಎನ್ನುತ್ತಾರೆ ಎಂಐಟಿ ಸೋಲನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಡಿಜಿಟಲ್ ಎಕಾನಮಿ ವಿಭಾಗದ ಆ್ಯಂಡ್ರೀವ್ ಮೆಕಾಫೆ.

ಅಪಾಯ; ಸವಾಲು
ಆದರೆ ಈ ಡ್ರೋನ್ ಗ್ರಾಹಕರ ವಸ್ತುಗಳನ್ನು ಹೊತ್ತು ಚಲಿಸುವಾಗ ಮಾರ್ಗ ಮಧ್ಯದಲ್ಲಿ ಅದನ್ನು ನಾಶಪಡಿಸುವ ಸಾಧ್ಯತೆಯೂ ಇದೆ. ಅಲ್ಲದೆ ಇದು ಮೇಲ್ವರ್ಗದವರಿಗೆ ಮಾತ್ರ ಉಪಯುಕ್ತವಾಗಿದ್ದು, ಜನಸಾಮಾನ್ಯರಿಗೆ ತಲುಪುವುದಿಲ್ಲ. ಹೀಗಾಗಿ ಸಮಾಜದಲ್ಲಿರುವ ವರ್ಗೀಕರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎನ್ನುವುದು ಜರೊನ್ ಲೇನಿಯರ್ ವಾದ.

ಈ ಹಿಂದೆ ಡೊಮಿನೊಸ್ ಪಿಜ್ಜಾ ನೀಡಲು ಡ್ರೋನ್‌ನಂತಹುದೇ  ಯಂತ್ರ ಬಳಸಿಕೊಳ್ಳಲಾಗಿತ್ತು. ಅಲ್ಲದೆ ಆಸ್ಟ್ರೇಲಿಯಾದ ಸ್ಟಾರ್ಟ್ಅಪ್ ಕಂಪೆನಿಯ ‘ಫ್ಲಿಟರಿ’ ಪಠ್ಯ ಪುಸ್ತಕಗಳ ವ್ಯಾಪಾರಕ್ಕೆ ಡ್ರೋನ್ ಅನ್ನು ಬಳಸಿಕೊಳ್ಳುವ ಯೋಜನೆ ರೂಪಿಸಿದ್ದು ಅಲ್ಲಿನ ಸರ್ಕಾರದ ಅನುಮತಿ ಸಹ ಕೋರಲಾಗಿದೆ. ಆದರೆ ವಾಣಿಜ್ಯ ಉದ್ದೇಶಕ್ಕಾಗಿ ಡ್ರೋನ್ ಬಳಕೆಗೆ ಆಸ್ಟ್ರೇಲಿಯಾ ಈ ಹಿಂದೆಯೇ ಅನುಮತಿ ನೀಡಿದೆ. ಆದರೆ ಅಮೆರಿಕದಲ್ಲಿ ಮಾತ್ರ ನಿಷೇಧವಿದೆ. 2015ರ ವೇಳೆಗೆ ಹಿಂಪಡೆಯುವ ನಿರೀಕ್ಷೆ ಮಾಡಲಾಗಿದೆ.

ಹೀಗಿದೆ ಡ್ರೋನ್‌!
ಡ್ರೋನ್‌ ಥಟ್ಟನೆ ನೋಡಿದರೆ ನಾಲ್ಕು ಕಾಲಿರುವ ಪುಟ್ಟ ಟೀಪಾಯ್‌ನಂತೆಯೇ ಕಾಣುತ್ತದೆ. ಮೇಲಿನ ಭಾಗದಲ್ಲಿ ಬ್ಯಾಟರಿ, ಯಂತ್ರವನ್ನು ನಿಯಂತ್ರಿಸುವ ಮತ್ತು ಸಂದೇಶ ರವಾನೆ, ಸ್ವೀಕಾರ ಕೋಶಗಳು ಇವೆ. ಕಿ.ಮೀ.ಗಳಷ್ಟು ದೂರದಿಂದಲೇ ನಿಯಂತ್ರಿಸಲಾಗುವ ಈ ಪುಟ್ಟ ಹಾರಾಡುವ ರೋಬೊಗೆ ತಲೆಯ ಭಾಗದಲ್ಲಿ ನಾಲ್ಕೂ ದಿಕ್ಕುಗಳಿಗೂ ಚಾಚಿಕೊಂಡಂತೆ ಎಂಟು ಪುಟ್ಟ ಮೋಟಾರ್‌ಗಳಿವೆ.

ಪ್ರತಿ ಮೋಟಾರ್‌ನಲ್ಲೂ ತಲಾ ಎರಡು ಪುಟಾಣಿ ರೆಕ್ಕೆಗಳಿವೆ. ಡ್ರೋಣ್‌ ಮೇಲಕ್ಕೆ, ಕೆಳಕ್ಕೆ ಅಥವಾ ಎಡ ಬಲಕ್ಕೆ ಚಲಿಸಲು ಈ ಎಂಟೂ ರೆಕ್ಕೆಗಳು ಸಹಕರಿಸುತ್ತವೆ. ಕೆಳಭಾಗದಲ್ಲಿ 4 ಮೂಲೆಗಳಿಗೆ ಹೊಂದಿಕೊಂಡಂತೆ ಕೊಕ್ಕರೆಗೆ ಇರುವಂತೆ ಉದ್ದವಾದ ಕಾಲುಗಳಿವೆ. ಮನೆಯ ಅಂಗಳದಲ್ಲಿ, ಹುಲ್ಲು ಹಾಸಿನ ಮೇಲೆ, ಸ್ವಲ್ಪ ನೀರು ಇರುವೆಡೆ ಡ್ರೋನ್‌ ಇಳಿದರೂ ಸಮಸ್ಯೆ ಆಗದಂತೆ ನೋಡಿಕೊಳ್ಳಲೆಂದೇ ಹೀಗೆ ಉದ್ದವಾದ ಕಾಲುಗಳನ್ನು ಅಳವಡಿಸಲಾಗಿದೆ.

  ಯಂತ್ರದ ಅಡಿಹೊಟ್ಟೆಗೆ ಅಂಟಿಕೊಂಡಂತೆ ಹಳದಿ ಬಣ್ಣದ ಸಣ್ಣ ಪೈಬರ್ ಪೆಟ್ಟಿಗೆಯನ್ನು ಜೋಡಿಸಲಾಗಿದೆ. ಮನೆ ಅಂಗಳದಲ್ಲಿಳಿದ ಡ್ರೋನ್‌, ‘ನಾನು   ಬಂದಿದ್ದೇನೆ’ ಎಂದು ಸದ್ದು ಮಾಡಿದಾಗ ಗ್ರಾಹಕರು ಮನೆಯಿಂದ ಹೊರಬಂದು, ಯಂತ್ರದ ಹೊಟ್ಟೆಗೆ ಅಂಟಿಕೊಂ­ಡಿರುವ ಫೈಬರ್‌ ಬಾಕ್ಸ್‌ನ ಹುಕ್‌ಗಳನ್ನು ಬಿಚ್ಚಿದರೆ ಅವರು ಆನ್‌ಲೈನ್‌ನಲ್ಲಿ ಖರೀದಿಸಿದ ಸಾಮಗ್ರಿ ಎದುರಿಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT