ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣ ಕಾರಣದ ಪ್ರಮಾಣ ಪತ್ರ ಅಗತ್ಯ

Last Updated 8 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಕೊಪ್ಪಳ: ಯಾವುದೇ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ವೈದ್ಯರು ಮರಣದ ಕಾರಣವನ್ನು ಸ್ಪಷ್ಟವಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಂಶೋಧನೆ ಸೇರಿದಂತೆ ಹಲವು ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.

ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು `ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರ~ ಎಂಬ ವಿಷಯ ಕುರಿತು ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ವೈದ್ಯರು ಮರಣೋತ್ತರ ಪರೀಕ್ಷೆ ಸಂದರ್ಭವನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯ ಮರಣದ ಪ್ರಮಾಣ ಪತ್ರದಲ್ಲಿ ಆ ವ್ಯಕ್ತಿಯ ಮರಣದ ಕಾರಣವನ್ನು ಸ್ಪಷ್ಟವಾಗಿ ನಮೂದಿಸುವುದಿಲ್ಲ. ಇದನ್ನು  ವೈದ್ಯರ ಕರ್ತವ್ಯ ನಿರ್ಲಕ್ಷ್ಯ ಎಂದೇ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕಾರಣಗಳಿಂದ ಸಾವು ಸಂಭವಿಸುತ್ತವೆ. ಈ ಸಾವಿನ ಕಾರಣವನ್ನು ಆಯಾ ಕರ್ತವ್ಯ ನಿರತ ವೈದ್ಯರು ಸ್ಪಷ್ಟವಾಗಿ ನಮೂದಿಸಿದಲ್ಲಿ ಆಯಾ ಪ್ರದೇಶದಲ್ಲಿನ ಭೌಗೋಳಿಕ, ಹವಾಮಾನದ ತೊಂದರೆಗಳು, ಪ್ರಮುಖ ಕಾರಣಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅಲ್ಲದೇ, ಆ ಪ್ರದೇಶದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕಾರ್ಯಗಳಿಗೂ ಅನುಕೂಲವಾಗಲಿದೆ ಎಂದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಬಿ.ಜಿ. ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ವ್ಯಕ್ತಿಯ ಮರಣಕ್ಕೆ ಸಂಬಂಧಿಸಿದಂತೆ ವೈದ್ಯರು ನೀಡುವ ಪ್ರಮಾಣ ಪತ್ರಗಳ ಪೈಕಿ ಶೇ 50ರಿಂದ 60ರಷ್ಟು ಪ್ರಮಾಣ ಪತ್ರಗಳು ಅಸಮರ್ಪಕವಾಗಿರುವುದನ್ನು ಗಮನಿಸಲಾಗಿದ್ದು, ಈ ಕಾರಣದಿಂದಾಗಿಯೇ ವೈದ್ಯಾಧಿಕಾರಿಗಳಿಗೆ ಅರಿವು ಮೂಡಿಸಲು ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವ ಸ್ವಾಮಿ ಸಹ ಮಾತನಾಡಿದರು. 
ಹುಬ್ಬಳ್ಳಿಯ ಕಿಮ್ಸನ ತಜ್ಞ ವೈದ್ಯರಾದ ಡಾ.ಬಿ.ಜಿ.ಶೆಲವಡಿ, ಡಾ.ಎ.ಎ. ನದಾಫ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ  ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಉಪಸ್ಥಿತರಿದ್ದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯ ಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT