ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಕೆಳಗೆ ಸಂಬಳ ಹಂಚುತ್ತಾರೆ...

ಪೌರ ಕಾರ್ಮಿಕರ ಬವಣೆ ಬದುಕು-2
Last Updated 9 ಜುಲೈ 2013, 6:37 IST
ಅಕ್ಷರ ಗಾತ್ರ

ಆನೇಕಲ್:  ಪಟ್ಟಣದ ಕೊಳೆಯನ್ನೆಲ್ಲಾ ತೊಳೆಯುವ ಪೌರಕಾರ್ಮಿಕರಿಗೆ ಅವರ ಬದುಕಿನಲ್ಲಿ ಮಾತ್ರ ಬೆಳಕು ಮೂಡಿಲ್ಲ. ಆನೇಕಲ್ ಪುರಸಭೆಯಲ್ಲಿ ಕೆಲಸ ಮಾಡುವ ಕಾಯಂ ಮತ್ತು ಗುತ್ತಿಗೆ ಪೌರ ಕಾರ್ಮಿಕರ ಬದುಕು ಬೇರೆ ಊರಿನ ತಮ್ಮ ಸಹೋದ್ಯೋಗಿಗಳಂತೆಯೇ ಇದೆ. ಕಡಿಮೆ ಕೂಲಿ, ಅನಾರೋಗ್ಯ, ದಕ್ಕದ ಕನಿಷ್ಠ ಸವಲತ್ತುಗಳು, ಮಕ್ಕಳ ಬದುಕಿಗೆ ಅದೇ ಬಡತನ ಹೀಗೆ ಹತ್ತಾರು ಸಮಸ್ಯೆಗಳು ಅವರನ್ನು ಕಿತ್ತು ತಿನ್ನುತ್ತಿವೆ.

ಬೆಳ್ಳಂಬೆಳಿಗ್ಗೆ ಪುರಸಭೆಯ ಕಚೇರಿಯ ಮುಂಭಾಗ ಜಮಾವಣೆಗೊಳ್ಳುವ ಪೌರಕಾರ್ಮಿಕರು ಪಟ್ಟಣದಲ್ಲಿನ ಕಸ ಗುಡಿಸುವ, ಚರಂಡಿ ಸ್ವಚ್ಛಗೊಳಿಸುವ, ಗಿಡಗಂಟಿಗಳನ್ನು ತೆಗೆಯುವ ಹಾಗೂ ಟಾಯ್ಲೆಟ್ ಪಿಟ್‌ಗಳನ್ನು ಯಂತ್ರಗಳ ಮೂಲಕ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಳ್ಳುತ್ತಾರೆ. ಸುಮಾರು 10-15 ವರ್ಷ ದುಡಿದರೂ ಇವರ ಕೂಲಿ ಮಾತ್ರ ಹೆಚ್ಚಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಬದುಕು ಸಾಗಿಸುವುದೇ ಇವರಿಗೆ ದುಸ್ತರವಾಗಿದೆ.

ಕಾಯಂಗೊಂಡಿರುವ ಪೌರಕಾರ್ಮಿಕರು ಮಾತ್ರ ಒಂದಿಷ್ಟು ನೆಮ್ಮದಿಯ ವೇತನ ಪಡೆಯುತ್ತಿದ್ದು, ಇದ್ದುದರಲ್ಲೇ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. `ಹಲವಾರು ಹೋರಾಟಗಳು ನಡೆದ ಮೇಲೆ ಸರ್ಕಾರ ಇವರನ್ನು ಕಾಯಂಗೊಳಿಸಿತು. ಹಾಗಾಗಿ ಈಗ ಇವರ ವೇತನ ಮತ್ತು ಭತ್ಯೆ ತೃಪ್ತಿಕರವಾಗಿದೆ' ಎಂಬುದು ಪೌರಕಾರ್ಮಿಕರ ಸಂಘದ ಮುಖಂಡ ಶ್ರೀನಿವಾಸರಾವ್ ಅವರ ಹೇಳಿಕೆ.

ಕಾಯಂಗೊಂಡಿರುವ ನೌಕರರು ಆನೇಕಲ್ ಪುರಸಭೆಯಲ್ಲಿ 16 ಮಂದಿ ಮಾತ್ರ ಇದ್ದಾರೆ. ಉಳಿದಂತೆ 60ಕ್ಕೂ ಹೆಚ್ಚುಮಂದಿ ಪೌರಕಾರ್ಮಿಕರು ಗುತ್ತಿಗೆದಾರನ ಅಡಿಯಲ್ಲಿ ಹಂಗಾಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಗೋಳು ಹೇಳತೀರದು. ಗುತ್ತಿಗೆದಾರ ಟೆಂಡರ್ ಮುಖಾಂತರ ಪಟ್ಟಣದ ಸ್ವಚ್ಛತೆಯ ಗುತ್ತಿಗೆ ಪಡೆದು ದಿನಗೂಲಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಅವರಿಂದ ಕೆಲಸ ಮಾಡಿಸಿಕೊಂಡು, ಸೌಲಭ್ಯಗಳನ್ನು ಮಾತ್ರ ಒದಗಿಸುತ್ತಿಲ್ಲ ಎಂಬುದು ಈ ಗುತ್ತಿಗೆ ಕಾರ್ಮಿಕರ ಅಳಲು.

`ಸಂಬಳವನ್ನು ಬ್ಯಾಂಕ್ ಮುಖಾಂತರ ನೀಡುವುದಿಲ್ಲ. ಎಲ್ಲೋ ಮರದ ಕೆಳಗೆ ಹಂಚಲಾಗುತ್ತದೆ. ಕಾರ್ಮಿಕರಿಗೆ ಸಮವಸ್ತ್ರ, ಶೂ, ಕೈಗವಸು ಇಲ್ಲದೇ ದುಡಿಯಬೇಕಾದ ಪರಿಸ್ಥಿತಿ ಇದೆ. ಆರೋಗ್ಯ ಹಾಳಾದರೂ ವೈದ್ಯಕೀಯ ಭತ್ಯೆ ನೀಡುವುದಿಲ್ಲ. ಅನಾರೋಗ್ಯದಿಂದ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಸಂಬಳವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ' ಎಂದು ಗುತ್ತಿಗೆ ಕಾರ್ಮಿಕ ನಾಗಪ್ಪ ಹೇಳುತ್ತಾರೆ.

`20 ವರ್ಷಗಳಿಂದ ಕಸ ಗುಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರತ್ನಮ್ಮ ಅವರ ಪ್ರಕಾರ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಕೇವಲರೂ160  ದಿನಗೂಲಿಗೆ ದುಡಿಯಬೇಕಾಗಿದೆ. ವರ್ಷಕ್ಕೆರೂ10  ಹೆಚ್ಚಳ ಮಾಡಬೇಕು ಆದರೆ 10 ವರ್ಷಗಳಿಂದಲೂ ಅದೇ ದಿನಗೂಲಿಯನ್ನು ನೀಡಲಾಗುತ್ತಿದೆ. ಎರಡನೇ ಶನಿವಾರ ಮತ್ತು ಸರ್ಕಾರಿ ರಜೆಗಳಂದು ಕೆಲಸ ಮಾಡಿದರೂ ಸಂಬಳವಿಲ್ಲದಂತಾಗಿದೆ. ಭಾನುವಾರ ಅರ್ಧ ಸಂಬಳ ನೀಡಲಾಗುತ್ತದೆ. ನಮಗೆ ಗುತ್ತಿಗೆದಾರರ ಮುಖಾಂತರ ಕೂಲಿ ನೀಡುವುದು ಬೇಡ. ಈ ಹಿಂದೆ ಇದ್ದಂತೆ ಪುರಸಭೆಯಿಂದಲೇ ದಿನಗೂಲಿ ನೀಡಲಿ' ಎನ್ನುತ್ತಾರೆ.

`20 ವರ್ಷಗಳಿಂದ ಪೌರಕಾರ್ಮಿಕಳಾಗಿ ಕಾರ್ಯ ನಿರ್ವಹಿಸುತ್ತಿರುವ ಪಾರ್ವತಮ್ಮ ಅವರು ಹೇಳುವಂತೆ ಶಸ್ತ್ರಚಿಕಿತ್ಸೆಯಾದರೂ ಅವರಿಗೆ ಯಾವುದೇ ವೈದ್ಯಕೀಯ ಭತ್ಯೆ ನೀಡಿಲ್ಲ. ಮಾನವೀಯ ದೃಷ್ಟಿಯಿಂದಲೂ ಪರಿಹಾರ ನೀಡಿಲ್ಲ.ರೂ30 ಕೂಲಿ ಇದ್ದಾಗಿನಿಂದಲೂ ದುಡಿಯುತ್ತಾ ಬಂದಿದ್ದೇನೆ. ಭವಿಷ್ಯ ನಿಧಿ ವಂತಿಗೆ ಹಣಕ್ಕೆ ಹೊಂದಾಣಿಕೆಯಾಗಿ ಗುತ್ತಿಗೆದಾರ ಹಣವನ್ನು ಪಾವತಿಸಬೇಕು. ಆದರೆ ಕಟ್ಟಿದ ಹಣವನ್ನೇ ವಾಪಸ್ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಇದೆ. ಕಾರ್ಮಿಕರ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ. ಗುತ್ತಿಗೆದಾರನ ಉಸಾಬರಿಯೇ ಬೇಡ. ನಮಗೆ ನೇರ ಪುರಸಭೆಯ ವತಿಯಿಂದಲೇ ಹಣ ನೀಡುವಂತಾಗಬೇಕು. ತಿಂಗಳಿಗೆರೂ3800 ಸಂಬಳ ಬರುತ್ತದೆ. ಇದರಲ್ಲಿ ಮನೆ ಬಾಡಿಗೆ ಕಟ್ಟುವುದೋ, ಮಕ್ಕಳನ್ನು ಓದಿಸುವುದೋ, ಜೀವನ ನಿರ್ವಹಣೆ ಮಾಡುವುದೋ ಎಂಬುದೇ ಗೊತ್ತಾಗುವುದಿಲ್ಲ' ಎಂದು ಅಲವತ್ತುಕೊಂಡರು.

ಗುತ್ತಿಗೆ ಕಾರ್ಮಿಕ ನಾಗಪ್ಪ ಅವರು ಹೇಳುವಂತೆ ಬೇರೆ ತಾಲ್ಲೂಕುಗಳಲ್ಲಿ ಮಾಸಿಕ 8,500 ರೂ. ವೇತನ ನೀಡಲಾಗುತ್ತಿದೆ. ಆದರೆ ಗುತ್ತಿಗೆದಾರನಿಂದ ನಮಗೆ ವಂಚನೆಯಾಗುತ್ತಿದೆ. ಪುರಸಭೆಯಲ್ಲಿ ಹೆಚ್ಚಿನ ವೆಚ್ಚಕ್ಕೆ ಟೆಂಡರ್ ಕರೆದು ಗುತ್ತಿಗೆದಾರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆಶ್ರಯ ಮತ್ತಿತರ ಯೋಜನೆಗಳಲ್ಲಿ ಪೌರಕಾರ್ಮಿಕರಿಗೆ ಮನೆ ನೀಡುವಂತಾಗಬೇಕು' ಎಂಬುದು ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT