ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದಿ ಮುಖ

Last Updated 20 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ಇವನು ವರ್ಗಿಸ್, ನನ್ನ ಗೆಳೆಯ, ಹಾಯ್ ಹೇಳಿ~ ಎಂದು ನಸುನಕ್ಕರು ರವಿ ಶಾ.
ಅಲ್ಲಿ ಯಾರೂ ಇರಲಿಲ್ಲ. ಮರದಲ್ಲಿ ಕೊರೆದಿಟ್ಟ ಚಿತ್ರವೊಂದಿತ್ತು. `ಹೌದು. ಇದು ನನ್ನ ಗೆಳೆಯನ ಮುಖ ನೋಡಿ ಬರೆದ ಕಲಾಕೃತಿ. ನನಗೆ ಯಾರು ಇಷ್ಟವಾಗುತ್ತಾರೋ ಅವರ ಚಿತ್ರ ಇಂತಹ ಮರದ ತುಂಡಿನಲ್ಲಿ ಜೀವತಳೆಯುತ್ತದೆ~ ಎಂದರು ರವಿ.

`ನಿಮ್ಮ ಗೆಳೆಯ ಇದನ್ನು ನೋಡಿದ್ದಾರಾ...? ತಮಗೆ ಬೇಕೆಂದು ಕೇಳಲಿಲ್ಲವೇ~ ಎಂಬ ಪ್ರಶ್ನೆಗೆ, `ನಾನು ನನ್ನ ಖುಷಿಗಾಗಿ ಚಿತ್ರ ಮಾಡುತ್ತೇನೆ. ಇದನ್ನು ಬಿಟ್ಟು ನನಗೆ ಬೇರೆ ಪ್ರಪಂಚವಿಲ್ಲ~ ಎಂದು ಕ್ಷಣಹೊತ್ತು ಸುಮ್ಮನಾದರು. ಮತ್ತೆ ಮಾತಿಗೆ ಶುರುವಿಟ್ಟುಕೊಂಡರು.

ಚಿಕ್ಕ ವಯಸ್ಸಿನಲ್ಲಿಯೇ ಕಲೆಯತ್ತ ಒಲವು ಮೂಡಿಸಿಕೊಂಡವರು ರವಿ. ಕುಂಚದೊಂದಿಗೆ ಆಟವಾಡುತ್ತ ಕಲೆಯತ್ತ ವಾಲಿದರು. ಆದರೆ ಹೊಸದನ್ನು ಮಾಡಬೇಕು ಎನ್ನುವ ತಹತಹಿಕೆ ಇತ್ತು. ಆಗಲೇ ಕಾಷ್ಠ ಕಲೆ ಗಮನ ಸೆಳೆಯಿತು. ಮರದಲ್ಲಿ ಅಮರವಾಗುವಂಥ ಕಲಾಕೃತಿಯತ್ತ ಒಲವು ಬೆಳೆಯಿತು ಎನ್ನುತ್ತಾರೆ ಅವರು.

 `ಈ ಕಲೆಗಾಗಿ ಹಳ್ಳಿ ಹಳ್ಳಿ ಸುತ್ತಿದ್ದಾರೆ. ದೇಶದ ವಿವಿಧೆಡೆ ಪ್ರದರ್ಶನ ನೀಡಿದ್ದಾರೆ. ಭಾರತದ ಬಹು ಸಂಸ್ಕೃತಿಯ ಬಣ್ಣಗಳು ಪ್ರೇರಣೆ ನೀಡಿವೆ. ಪ್ರಯಾಣದ ಅನುಭವಗಳು ಆಲೋಚನಾ ಶಕ್ತಿಯನ್ನು ಹೆಚ್ಚಿಸಿತು~ ಎಂದು ಹೇಳುತ್ತಾರೆ.

`ಕೊಡಲಿ ಹಿಡಿದು ಹಳೆಯ ಮರದ ಬಳಿ ಹೋದರೆ ನನಗೂ ಅದಕ್ಕೂ ಒಂದು ಆತ್ಮೀಯತೆ ಬೆಳೆಯುತ್ತದೆ. ಅಲ್ಲಿ  ನೋಡಿ ಅದು ಚಂಪಕ ಮರದಿಂದ ಮಾಡಿದ ಕಲಾಕೃತಿ. ನಾನು ಮಾಡಿದ ಕಲಾಕೃತಿಯಲ್ಲಿ ನನಗೆ ಇಷ್ಟವಾದದ್ದು ಇದೇನೆ. ಅದು ಕೇವಲ ಕಲಾಕೃತಿ ಅಲ್ಲ. ಅದರಲ್ಲಿ ಒಂದು ಜೀವವಿದೆ. ತುಂಬಾ ಹಳೆಯದಾಗಿ ಕಾಣಿಸುತ್ತದೆ.

ನೋಡಿ ಇದರಲ್ಲಿರುವ ಗೆರೆ ಒಬ್ಬ ಮನುಷ್ಯನ ಇಡೀ ಜೀವನ ಚಿತ್ರಣವನ್ನು ನೀಡುತ್ತದೆ. ಯೌವನದಲ್ಲಿರುವಾಗ ಮುಖದ ಮೇಲೆ ಒಂದು ಗೆರೆ ಮೂಡಿದರೂ ಕಂಗಾಲಾಗುತ್ತೇವೆ. ಆದರೆ ವಯಸ್ಸಾದಂತೆ ಆ ಗೆರೆಗಳೇ ನಾವು ಕಳೆದ ಜೀವನದ ಪ್ರತಿ ಕ್ಷಣದ ಲೆಕ್ಕವನ್ನು ನೀಡುವಂತೆ ಕಾಣುತ್ತವೆ~ ಎಂದು ಭಾವುಕರಾಗಿ ಒಂದೊಂದು ಗೆರೆಯ ವಿಶ್ಲೇಷಣೆ ನೀಡುತ್ತಾರೆ.

ಯಾವುದೇ ರೀತಿಯ ಕೃತಕ ಬಣ್ಣ ಬಳಸದೆ ಪ್ರತಿಯೊಂದು ಕಲಾಕೃತಿಗೂ ಅದರದೇ ಆಗಿರುವ ಬಣ್ಣ ಪಡೆದುಕೊಳ್ಳುವುದಕ್ಕೆ ಬಿಟ್ಟು ಬಿಡುತ್ತಾರೆ.ಬಿಸಿಲಿನ ಕಾವಿಗೆ ಒಂದು ಬಣ್ಣ, ನೆರಳಿನ ತಂಪಿಗೆ ಇನ್ನೊಂದು ವರ್ಣ. ಈ ಸಹಜ ಬಣ್ಣಗಳನ್ನು ಹೊರತು ಪಡಿಸಿದರೆ ಮತ್ತಾವುದೇ ಬಣ್ಣಗಳೂ ಇವರಲಿಲ್ಲ.

ಬಯಲೇ ಬಣ್ಣವಾಗುತ್ತವೆ, ಒಂದೇ ಮರದಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಅಪ್ಪಿಕೊಂಡಂತೆ ಕೆತ್ತಿರುವ ಕಲಾಕೃತಿ, ಬಾಲ್ಯದ ಗೆಳತಿಯ ಮುಖಭಾವವನ್ನು ನೆನಪಿಸಿಕೊಂಡ ಕಲಾಕೃತಿ ಗಮನ ಸೆಳೆಯುತ್ತದೆ. 

ಒಂದು ಮುಗ್ಧ ಹುಡುಗಿಯ ಕಲಾಕೃತಿಯಲ್ಲಿ ವಿಭಿನ್ನ ಭಾವಗಳು ಅಚ್ಚರಿ ಮೂಡಿಸುತ್ತವೆ. ನೋಡುತ್ತ ಮುದ್ದು ಮಾಡುವುದಕ್ಕೆ ಬರುತ್ತಾಳೇನೋ ಎಂಬ ಹಾಗಿತ್ತು. ಹತ್ತಿರ ಹೋದಂತೆ, ವಿದಾಯ ಹೇಳುತ್ತಿರುವಳೇನೋ  ಎಂಬ ಭಾವ ಮೂಡುತ್ತದೆ.

`ಮರದಲ್ಲಿಯೇ ಯಾಕೆ ಕಲಾಕೃತಿ ಮಾಡುತ್ತೀರಿ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಿಮಗೆ ಅಮ್ಮ ಯಾಕಿಷ್ಟ ಎಂದು ಕೇಳಿದರೆ ಮಗು ಏನು ತಾನೆ ಉತ್ತರ ನೀಡಲು ಸಾಧ್ಯ? ಕಲೆಯೇ ನನ್ನ ಜೀವಾಳ.

ಅದರಲ್ಲೂ ವುಡ್ ನನಗೆ ಫುಡ್ ನೀಡಿದ ಮಾಧ್ಯಮ. ಮರದಲ್ಲಿ ಭಿನ್ನವಾಗಿ ಕಲಾಕೃತಿ ಮಾಡಬಹುದು ಜತೆಗೆ ಮೆದು ಮರ ಸಿಕ್ಕರೆ ಬೇಗ ಮಾಡಬಹುದು. ನನ್ನ ಪ್ರಕಾರ ಗಡಿಬಿಡಿಯಿಂದ ಮಾಡಿದ ಕೆಲಸದಲ್ಲಿ ಜೀವಂತಿಕೆ ಇರುತ್ತದೆ. ನಿಧಾನ ಮಾಡಿದಷ್ಟು ಕೆಲಸ ಹಾಳು~ ಎನ್ನುವುದು ಅವರ ಅನುಭವದ ಮಾತು.

ಮರದ ಜತೆಗೆ ಅವರು ಹಾಳೆಯ ಮೇಲೂ ತಮ್ಮ ಕಲಾಭಿವ್ಯಕ್ತಿ ಪ್ರಕಟಿಸಿದ್ದಾರೆ. 
ಇಂಕ್ ಡ್ರಾಪ್‌ನಲ್ಲಿ ಬಿಡಿಸಿರುವ ಚಿತ್ರದಲ್ಲಿ ಖಾಲಿ ಜಾಗಗಳೇ ಇರುತ್ತವೆ. ಅದನ್ನು ನೋಡುವವರೇ ತುಂಬಿಸಬೇಕು ಎಂಬ ಆಸೆ ಅವರದು. ಕಲಾಕೃತಿ ಜನರನ್ನು ವಿದ್ಯಾವಂತರನ್ನಾಗಿಸಬೇಕು. ಆಗ ಒಬ್ಬ ಕಲಾವಿದನ ಬದುಕು ಸಾರ್ಥಕ ಎನ್ನುತ್ತಾರವರು.

ಮಕ್ಕಳಿಗೆ ಕಲೆಯನ್ನು ಹೇಳಿಕೊಡುವುದು ನನಗೆ ತುಂಬಾ ಪ್ರೀತಿಯ ಕೆಲಸ. ಅವರ ಪುಟ್ಟ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಅವರ ಜತೆಗೆ ನಾನು ಬೆಳೆಯಬಹುದು ಎಂದು ನಗುತ್ತಾರೆ ರವಿ. ಶಾ.

ಸದ್ಯಕ್ಕೆ ಅವರ ಕಲಾಕೃತಿಗಳ ಪ್ರದರ್ಶನವನ್ನು ಆ.31ರವರೆಗೆ ನಂದಿ ದುರ್ಗ ರಸ್ತೆಯ ಮಾಯಾ ಗ್ಯಾಲರಿಯಲ್ಲಿ ಏರ್ಪಡಿಸಿದ್ದಾರೆ. ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT