ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಶಂಕರ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶಂಕರಮೂರ್ತಿಗೆ ಬೆಳಗ್ಗೆಯಿಂದ ಏನೋ ಸುಸ್ತು. ನಿನ್ನೆ ರಾತ್ರಿಯಷ್ಟೆ ನೋಡಿದ್ದ ಬೀಪಿ, ಡಯಾಬಿಟೀಸು ಇವತ್ತಿಲ್ಲ. ಮಿತಿಮೀರಿದೆ. ಎರಡೆರಡು ಇನ್ಸುಲಿನ್‌ಗಳನ್ನು ಚುಚ್ಚಿಕೊಂಡರೂ ಸಮಾಧಾನವಿಲ್ಲ.

ಸಾಲದ್ದಕ್ಕೆ ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಬೇರೆ ಮುಗಿಯುತ್ತ ಬಂದಿದೆ. ಈಗಂತೂ ವರ್ಷಕ್ಕೆ ಹತ್ತು ಸಿಲಿಂಡರ್ ಮಾತ್ರ ಕೊಡೋದು ಎಂದು ಬೇರೆ ರೂಲ್ಸು ಮಾಡಿದ್ದಾರೆ ಸರ್ಕಾರದೋರು. ಮೂರನೆಯ ಇನ್ಸುಲಿನ್ ಚುಚ್ಚಿಕೊಳ್ಳುತ್ತ, ಚುಚ್ಚಿಕೊಂಡು ಜಡ್ಡಾದ ಚರ್ಮವನ್ನು ನೋಡಿಕೊಳ್ಳುತ್ತ, ಈ ಬಾರಿ ಆಸ್ಪತ್ರೆಗೆ ಹೋದಾಗ ಹೊಸ ಚರ್ಮ ಹಾಕಿಸಿಕೊಳ್ಳಲು ಮರೆಯಬಾರದು ಎಂದುಕೊಂಡನು.

ಎರಡುಸಾವಿರದ ಎಂಬತೈದನೇ ಫ್ಲೋರಿನ ತನ್ನ ಫ್ಲಾಟಿನ ಬಾಲ್ಕನಿಯಲ್ಲಿ ಕುಳಿತು ಮೂಗಿಗೆ ಪಾಕೆಟ್ ಆಕ್ಸಿಜನ್ ಸಿಕ್ಕಿಸಿಕೊಂಡು ಚಹ ಕುಡಿಯುತ್ತ ಗಾಜಿನಗೋಡೆಯಿಂದ ಕೆಳಗೆ ನೋಡುತ್ತಿದ್ದನು. ಈಗಾಗಲೇ ಆಫೀಸಿಗೆ ಮೂರುದಿನ ರಜೆ ಹಾಕಿ ಆಗಿದೆ. ನಾಳೆ ಎಷ್ಟೊತ್ತಿದ್ದರೂ ಹೋಗಲೇಬೇಕು.
 
`ಹೊಸ ಪ್ರಾಜೆಕ್ಟ್ ಶುರುವಾಗುವುದರಲ್ಲಿದೆ, ಆ ದಿನವಂತೂ ನೀನು ಇರಲೇಬೇಕು~ ಎಂದು ಬಾಸ್ ರಜೆ ಕೊಡುವಾಗಲೇ ತಾಕೀತು ಮಾಡಿದ್ದ. ಈಗ ನೋಡಿದರೆ ಹೀಗೆ. ಇಡೀ ಚೈತನ್ಯವೇ ಸುಂಡಿಹೋದಂತೆ. ಆಫೀಸು, ಬಾಸು, ಪ್ರಾಜೆಕ್ಟುಗಳನ್ನು ನೆನೆಯುತ್ತಿದ್ದಂತೆ ಅವನ ಹೃದಯದ ಬಡಿತ ಹೆಚ್ಚಾಗತೊಡಗಿತು.

ಚಕ್ಕನೆ ಅಂಗಿಬಿಚ್ಚಿದವನೇ ಎದೆಯ ಗೂಡಿನಲ್ಲಿ ಅಳವಡಿಸಿದ್ದ ಸಣ್ಣ ಕ್ಯಾಲ್ಕುಲೇಟರಂಥದ್ದನ್ನು ಒತ್ತಿ ಹೃದಯದ ಸ್ಪೀಡನ್ನು ಕಡಿಮೆ ಮಾಡಿಕೊಂಡ. ಈಗ ಆರು ತಿಂಗಳ ಹಿಂದೆ ಯುಗಾದಿಗೆ ಬಿಟ್ಟಿದ್ದ ಡಿಸ್ಕೌಂಟಿನಲ್ಲಿ ಹೃದಯಕ್ಕೆ ಪೇಸ್‌ಮೇಕರ್ ಅಳವಡಿಸಿಕೊಂಡಿದ್ದ. ಹಾಗಾಗಿ ಇವನು ಒತ್ತಿದ ತಕ್ಷಣ ಅದರ ಸ್ಪೀಡೇನೋ ಸ್ವಲ್ಪ ಕಡಿಮೆಯಾಯಿತು.

ಆದರೆ ಮನಸ್ಸಿನಲ್ಲಿ ಹೊಕ್ಕಿದ್ದ ಹೊಸ ಪ್ರಾಜೆಕ್ಟಿನ ದೈತ್ಯರೂಪ ನೆನೆದು ಬೆವರತೊಡಗಿದ. ತಕ್ಷಣ ಕಿಸೆಯಲ್ಲಿದ್ದ ಹಾಳೆಯಂಥ ಟ್ಯಾಬಲೆಟ್ಟನ್ನು ತೆಗೆದವನೇ ಓಂಕಾರದ ಮೆಡಿಟೇಶನ್ ಮ್ಯೂಸಿಕ್ ಹಾಕಿಕೊಂಡು ಇಯರ್‌ಫೋನನ್ನು ಕಿವಿಗಳಿಗೆ ಚುಚ್ಚಿಕೊಂಡು ಕಣ್ಣುಮುಚ್ಚಿಕೊಂಡನು. ಯಾವಾಗಲೇ ಆಗಲಿ, ಹೃದಯದ ಸ್ಪೀಡನ್ನು ಅಡ್ಜಸ್ಟ್ ಮಾಡಿಯಾದ ತಕ್ಷಣ ಇಂತಿಂಥ ಮ್ಯೂಸಿಕ್ಕನ್ನು ಕೇಳಬೇಕು ಅಂತ ಡಾಕ್ಟರು ಹೇಳಿದ್ದರು.

ಇಂತಿಂಥ ಸ್ಪೀಡಿಗೆ ಇಂತಿಂಥ ಟ್ರ್ಯಾಕ್ ಕೇಳಬೇಕು. ಯಾವುದೋ ಸ್ಪೀಡಿಗೆ ಇನ್ಯಾವುದೋ ಟ್ರ್ಯಾಕು ಕೇಳಿದರೆ ಯಡವಟ್ಟಾದಂತೆಯೇ ಕಥೆ. ಹೋದವಾರ ಹಾಗೆಯೇ ಆಯಿತು; ಪ್ರಾಜೆಕ್ಟು ಮುಗಿದ ಖುಷಿಯಲ್ಲಿ ನಡೆಸಿದ ರತಿಕ್ರೀಡೆಯಲ್ಲಿ ಸ್ವಲ್ಪ ಹುಮ್ಮಸ್ಸು ಇರಲಿ ಎಂದು ಯಾವುದೋ ಜಾಜ್‌ ಮ್ಯೂಸಿಕ್ಕನ್ನು ಹಾಕಿಕೊಂಡು ಮಂಚ ಹತ್ತಿದ್ದವನಿಗೆ ಇದ್ದಕ್ಕಿದ್ದಂತೆ ಹೃದಯ ನಿಂತೇಹೋಯಿತೋ ಎನಿಸಿತ್ತು.

ಕಡೆಗೆ ಆ ಹುಡುಗಿಯೇ ತಕ್ಷಣ ಸ್ಪೀಡು ಚೇಂಜುಮಾಡಿ ಮ್ಯೂಸಿಕ್ ಬದಲಿಸಿದ್ದಳು! ಇಂಥ ಅಚಾತುರ್ಯಗಳು ಸಂಭವಿಸುತ್ತವೆಯೆಂದೇ ಟೀವಿಯಲ್ಲಿ, ಟ್ಯಾಬಿನಲ್ಲಿ, ಪೇಪರಿನಲ್ಲಿ, ಹೊರಗಡೆ ಎಲ್ಲಾ ಕಡೆ ಸರ್ಕಾರ `ನಿಮ್ಮ ಹೃದಯ ನಿಮ್ಮ ಕಯ್ಯಲ್ಲಿ~ ಎಂದು ಜಾಹೀರಾತು ಮಾಡಿತ್ತು. ಯಾವಯಾವ ಸನ್ನಿವೇಶಕ್ಕೆ ಹೃದಯವನ್ನು ಯಾವಯಾವ ಸ್ಪೀಡಿಗೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂಬ ದೊಡ್ಡ ಲಿಸ್ಟೇ ಅದರಲ್ಲಿತ್ತು:

ಮಗು ಹುಟ್ಟಿದಾಗ,
ಪ್ರಿಯತಮೆ ಕಯ್ಕ್‌ಟ್ಟಾಗ,
ಮದುವೆಯಾದಾಗ,
ರಿಸೆಶ್ಶನ್ ಆದಾಗ,
ಕೆಲಸ ಕಳಕೊಂಡಾಗ,
ಬಾಸ್ ಬೈದಾಗ,
ನೋಟೀಸು ಮನೆಗೆ ಬಂದಾಗ,
ಡ್ರೈವ್ ಮಾಡುವಾಗ,
ಸಿನಿಮಾ ನೋಡುವಾಗ,
ಸೆಕ್ಸ್ ಮಾಡುವಾಗ,
ಪ್ರೀತಿಪಾತ್ರರನ್ನು ಕಳೆದುಕೊಂಡಾಗ,

ಹೀಗೆ, ಬದುಕಿನ ಪ್ರತಿ ಸನ್ನಿವೇಶಕ್ಕೂ ಹೃದಯವನ್ನು ಹೇಗೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದು ಪ್ರತಿ ಸಾರ್ವಜನಿಕ ಜಾಗಗಳಲ್ಲೂ ಸ್ಪಷ್ಟವಾಗಿ ಬರೆಯಲಾಗಿತ್ತು. ಜನ ಎಲ್ಲೇ ಓಡಾಡುತ್ತಿರಲಿ, ಯಾರೊಂದಿಗೇ ಮಾತಾಡುತ್ತಿರಲಿ, ಏನೇ ಕೆಲಸ ಮಾಡುತ್ತಿರಲಿ, ಅವರ ಒಂದು ಕಯ್ ಯಾವಾಗಲೂ ಎದೆಗೂಡಿನ ಬಳಿಯೇ ಇರುತ್ತಿತ್ತು!

ಹಾಗಿದ್ದೂ ಜನ ಸಾಯುವುದೇನೂ ಕಡಿಮೆಯಾಗಿರಲಿಲ್ಲ. ಪ್ರಾಣ ಹೋಗುತ್ತಿರಲಿಲ್ಲ ಎಂಬುದು ಬಿಟ್ಟರೆ ದಿನವೂ ಒಮ್ಮಿಲ್ಲೊಮ್ಮೆ ಎಲ್ಲರೂ ಸಾಯುತ್ತಿದ್ದವರೇ; ಸತ್ತು ಬದುಕುತ್ತಿದ್ದವರೇ. ಹಾಗೆ ಸುಮಾರು ಸಾರಿ ಸಾವಿನ ತುದಿಯನ್ನು ಮುಟ್ಟಿಬಂದಿದ್ದನು ಶಂಕರಮೂರ್ತಿ.

ಸರಿ, ಯಾವುದಕ್ಕೂ ಇವತ್ತು ಮತ್ತೊಮ್ಮೆ ಡಾಕ್ಟರ್ ಬಳಿ ಹೋಗಿಬಂದುಬಿಡೋಣ. ಹೊಸ ಪ್ರಾಜೆಕ್ಟ್ ಶುರುವಾದರೆ ಮತ್ತೆ ಸಮಯ ಸಿಗುತ್ತದೋ ಇಲ್ಲವೋ, ಯಾವ ಕ್ಷಣದಲ್ಲಿ ಯಾವ ದೇಶದಲ್ಲಿರುತ್ತೇನೋ ಎಂದು ಸಂಜೆಗೆ ಅಪಾಯಿಂಟ್‌ಮೆಂಟ್ ಗೊತ್ತುಪಡಿಸಿಕೊಂಡ. ವಿಡಿಯೋ ಕಾನ್‌ಫೆರೆನ್ಸ್ ಮೂಲಕವೇ ಚಿಕಿತ್ಸೆ ಪಡೆಯಬಹುದಿತ್ತು.
 
ಆದರೆ ಯಾವುದಕ್ಕೂ ಒಮ್ಮೆ ಸರಿಯಾಗಿ ತೋರಿಸಿಕೊಂಡುಬಿಡೋಣ ಎನಿಸಿದ್ದರಿಂದ ತಾನೇ ಖುದ್ದು ಹೋಗಲು ನಿರ್ಧರಿಸಿದ್ದ.  ಸಂಜೆ ಐದೂವರೆಯ ಹೊತ್ತಿಗೆ ರೆಡಿಯಾದವನು ಮನೆಯ ಒಳಗೇ ಇದ್ದ ಲಿಫ್ಟಿನ ಮೂಲಕ ಕೆಳಗೆ ಹೋಗಿ ಕಾರಿನ ಒಳಹೊಕ್ಕವನೇ ಪಾಕೆಟ್ ಆಕ್ಸಿಜನ್ ಆಫ್ ಮಾಡಿ ಕಾರ್‌ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಆನ್ ಮಾಡಿದನು.

ಆಸ್ಪತ್ರೆಯ ವಿಳಾಸವನ್ನು ಫೀಡ್ ಮಾಡಿದವನೇ ತಾನು ನಿರಂಬಳವಾಗಿ ಕುಳಿತು ತನ್ನ ಮೇಯ್ಲ ಬಾಕ್ಸ್, ಫೇಸ್‌ಬುಕ್, ಹಾರ್ಟ್‌ಬುಕ್ ನೋಡತೊಡಗಿದನು. ಕಾರು ತನ್ನಷ್ಟಕ್ಕೆ ತಾನೇ ಹೊರಟು ಸರಿಯಾಗಿ ಆರುಗಂಟೆಗೆ ಆಸ್ಪತ್ರೆ ತಲುಪಿತು.

ಅಲ್ಲಿಯ ಸೆಕ್ಯುರಿಟಿ ಪ್ರೊಸೀಜರುಗಳನ್ನು ಮುಗಿಸಿಕೊಂಡು ಒಳಬಂದವನಿಗೆ ನಾಕೈದು ಅಡಿ ಎತ್ತರದ ಎರಡುಗಿಡಗಳು ಕಣ್ಣಿಗೆ ಬಿದ್ದವು. ಈಗ ಪ್ರತಿ ಆಸ್ಪತ್ರೆಯಲ್ಲೂ ಒಂದಾದರೂ ಮರ ಇರಬೇಕು ಎಂದು ಕಾನೂನಿರುವುದರಿಂದ ಆಸ್ಪತ್ರೆಯ ಒಳಗಡೆಯೇ ಒಂದೆರಡು ಗಿಡಗಳನ್ನು ಚಿಗುರಿಸುತ್ತಿದ್ದರು. ಅದನ್ನು ನೋಡುತ್ತ, ಮೂಸುತ್ತ, ಅದರ ಸುತ್ತ ಒಂದಷ್ಟು ಜನ ಕುಳಿತಿದ್ದರು.

ಡಾಕ್ಟರ್ ಕ್ಯಾಬಿನ್ನಿಗೆ ಹೊಕ್ಕಾಗ ಡಾಕ್ಟರ್ ಆಗಷ್ಟೇ ವೀಡಿಯೋ ಕಾನ್‌ಫೆರೆನ್ಸ್‌ನಿಂದ ಹೊರಬಂದಿದ್ದರು. ಅವನ ಸಂಪೂರ್ಣ ವಿವರವನ್ನು ತನ್ನ ಗೋಡೆಯಮೇಲೆ ನೋಡಿದ ಡಾಕ್ಟರ್, ಅವನನ್ನು ಹಾಸಿಗೆಯ ಮೇಲೆ ಮಲಗಿಸಿ ಎದೆಯ ಗೂಡಿನ ಬಳಿ ಅಳವಡಿಸಿದ್ದ ಯಂತ್ರದ ಚಿಪ್ಪನ್ನು ತೆಗೆದು ಒಮ್ಮೆ ಸಂಪೂರ್ಣ ಫಾರ್ಮೆಟ್ ಮಾಡಿ ರಿಫ್ರೆಶ್ ಮಾಡಿ ಹಾಕಿದರು.
 
ನಂತರ ದೇಹವನ್ನು ಸಂಪೂರ್ಣ ಸ್ಕ್ಯಾನ್ ಮಾಡಿದರು, ಕಣ್ಣಿನ ಲೆನ್ಸನ್ನು ತೆಗೆದು ಬೇರೆಯದನ್ನು ಹಾಕಿದರು, ಶ್ವಾಸಕೋಶಗಳನ್ನು ಶುಭ್ರ ಆಮದು ಆಕ್ಸಿಜನ್ನಿನಲ್ಲಿ ಸರ್ವೀಸ್ ಮಾಡಿದರು. ಕಿಡ್ನಿ, ಲಿವರ‌್ರುಗಳ ಸ್ಥಿತಿಯನ್ನು ಗಮನಿಸಿದರು. ದೇಹದ ಎಲ್ಲಾ ಚಿಪ್ಪುಗಳು ಸರಿಯಿದೆಯೇ ಪರೀಕ್ಷಿಸಿದರು. ಹಿಂದಿನ ಒಂದೆರಡು ದಿನ ಏನೇನು ಮಾಡಿದಿರಿ, ಏನು ತಿಂದಿರಿ ಬಿಟ್ಟಿರಿ, ಎಂದೆಲ್ಲ ವಿಚಾರಿಸಿದರು. ಮಿದುಳು, ಹೃದಯವನ್ನು ಎರಡೆರಡು ಬಾರಿ ಸ್ಕ್ಯಾನ್ ಮಾಡಿ-

`ಎವರಿಥಿಂಗ್ ಇಸ್ ಫೈನ್, ಬಟ್...~ ಎಂದು ಹುಬ್ಬುಗಂಟಿಕ್ಕಿದರು.
ಡಾಕ್ಟರರ ಮುಖಭಾವ ನೋಡಿದ ಶಂಕರಮೂರ್ತಿಗೆ ಎಲ್ಲಿ ದುಬಾರಿ ಚಿಕಿತ್ಸೆಗೆ ಸೂಚಿಸಿಬಿಡುತ್ತಾರೋ ಎಂದು ಹೆದರಿಕೆಯಾಯಿತು. ಕಯ್ಯನ್ನು ಎದೆಗೂಡಿನ ಬಳಿಯೇ ಇಟ್ಟುಕೊಂಡು ಅವರು ಹೇಳುವ ಮಾತಿಗಾಗಿ ಕಾದುಕುಳಿತನು.

ಒಂದು ಗುಂಡಿ ಒತ್ತಿ ಒಂದು ಶಾಂತಸಂಗೀತದ ಟ್ರ್ಯಾಕನ್ನು ಹಾಕಿ, ದೀರ್ಘ ಉಸಿರುಬಿಟ್ಟು ಕಡೆಗೂ ಡಾಕ್ಟರು ಹೇಳಿದರು.ಯೂ ನೀಡ್ ಎ ಸನ್‌ರೈಸ್. ಲೈವ್! ಲೈವ್ ಸನ್‌ರೈಸ್!~
ಪಟಪಟನೆ ಸ್ಪೀಡು ಅಡ್ಜಸ್ಟು ಮಾಡಿದವನೇ ಶಂಕರಮೂರ್ತಿ, `ವ್ಹಾಟ್~!~ ಎಂದು ಹೌಹಾರಿದನು.

`ಹೌದು. ನೀವು ಇನ್ನೊಂದು ಎರಡು ಮೂರು ದಿನಗಳಲ್ಲಿ ಒಂದು ಸೂರ‌್ಯೋದಯವನ್ನು ನೋಡಬೇಕು. ನನ್ನ ಕಯ್ಯಲ್ಲಾದದ್ದನ್ನೆಲ್ಲ ಮಾಡಿದೆ. ಆದರೆ ಇದು ತುಂಬ ಕಾಂಪ್ಲಿಕೇಟೆಡ್ ಆದದ್ದು. ಮನಸ್ಸಿನ ವಿಚಾರ. ಅದಕ್ಕೆ ಬೇರೆ ಏನೋ ಬೇಕಿದೆ. ಒಂದು ದಿನ ಊಟಿಗೆ ಹೋಗಿಬನ್ನಿ?~

`ಅಯ್ಯೋ ಡಾಕ್ಟರ್, ಮೊನ್ನೆ ನ್ಯೂಸ್ ನೋಡಿಲ್ವ ನೀವು! ಸನ್‌ರೈಸ್ ನೋಡೋಕೆ ಹೋಗಿ ಎಷ್ಟು ಜನ ಕಾಲ್ತುಳಿತದಲ್ಲಿ ಸತ್ರು ಅಂತ!~

`ಆಗುಂಬೇಗೆ ಹೋಗಿ?~
`ಡಾಕ್ಟರ್, ಆ ಸನ್‌ರೈಸನ್ನ ಫಾರಿನ್ ಕಂಪನಿ ಟೇಕೋವರ್ ಮಾಡಿದೆಯಲ್ಲ, ಈಗ ಬುಕ್ ಮಾಡಿದ್ರೆ ಇನ್ನೊಂದು ಆರು ತಿಂಗಳು ಬೇಕು ಅಲ್ಲಿಯ ಸನ್‌ರೈಸ್ ನೋಡೋಕೆ. ಅದೂ ಅಲ್ದೆ ಸಿಕ್ಕಾಪಟ್ಟೆ ಕಾಸ್ಟ್ಲೀ~.

`ಓಹ್! ನೀವು ಇದನ್ನೇ ಕಾಸ್ಟ್ಲೀ ಅಂತೀರಿ. ಇನ್ನು ನಾನು ಡಾರ್ಜಿಲಿಂಗನ್ನೋ, ಸ್ವಿಟ್ಜೆರ್‌ಲ್ಯಾಂಡನ್ನೋ ಹೇಗೆ ರೆಫರ್ ಮಾಡ್ಲಿ. ನೋಡಿ ನೀವು ರೆಡಿ ಅನ್ನೋದಾದ್ರೆ ಇನ್ನೊಂದು ವಾರದಲ್ಲಿ ನಾನು ಆಗುಂಬೆಯಲ್ಲಿ ವ್ಯವಸ್ಥೆ ಮಾಡಬಲ್ಲೆ. ಆದರೆ ಒನ್ ಟು ಡಬಲ್ ಪೇ ಮಾಡಬೇಕಾಗತ್ತೆ. ಏನಂತೀರಿ~.

`ನನಗೆ ಒಂದುದಿನ ಟೈಮ್ ಕೊಡಿ ಡಾಕ್ಟರ್, ನಾನು ನಿಮಗೆ ತಿಳಿಸ್ತೀನಿ~.
`ಓಕೆ. ಯೋಚನೆ ಮಾಡಿ. ಆದರೆ ಜಾಸ್ತಿ ಲೇಟ್ ಮಾಡಬೇಡಿ. ನಿಮಗದರ ಅವಶ್ಯಕತೆ ತುಂಬ ಇದೆ~.

`ಶೂರ್ ಡಾಕ್ಟರ್~.
ಶಂಕರಮೂರ್ತಿಗೆ ಇಷ್ಟು ದೊಡ್ಡ ಬಾಬತ್ತಿನ ಟ್ರೀಟ್‌ಮೆಂಟ್ ಪಡೆಯುವ ದೌರ್ಭಾಗ್ಯ ಇಷ್ಟುಬೇಗ ತನ್ನ ಜೀವನದಲ್ಲಿ ಬರಬಹುದು ಅಂತ ಅನಿಸಿರಲಿಲ್ಲ. ಅಂತಹದ್ದು ಈ ನನ್ನ ಹಾಳು ದೇಹಕ್ಕೆ, ಮನಸ್ಸಿಗೆ ಏನಾಗಿದೆ ಎಂದು ಕಾರಿನಲ್ಲಿ ಮರಳುವಾಗ ಹಳಿದುಕೊಂಡನು.

ಮನಸ್ಸು ಎಷ್ಟೇ ವ್ಯಗ್ರಗೊಂಡಿದ್ದರೂ ಕಯ್ಯಿ ಮಾತ್ರ ಯಾಂತ್ರಿಕವಾಗಿ ಎದೆಗೂಡಿಗೆ ಹೋಗಿ ಹೃದಯದ ಬಡಿತವನ್ನು ಕಂಟ್ರೋಲು ಮಾಡುತ್ತಿತ್ತು. ಹಿಂದೆ ತನ್ನ ತಾಯಿಗೂ, `ಹಕ್ಕಿ ತನ್ನ ಮರಿಗಳಿಗೆ ಉಣ್ಣಿಸುವುದನ್ನ ತೋರಿಸಿ~ ಎಂದು ಬರೆದುಕೊಟ್ಟಿದ್ದರು! ತಂದೆಗೆ `ಕೋಗಿಲೆ ಕೂಗೋದನ್ನ ತೋರಿಸಿ~ ಎಂದು! ಅವನ ಗೆಳೆಯರನೇಕರ ಸಂಬಂಧಿಕರಿಗೆ `ನವಿಲು ಗರಿಬಿಚ್ಚಿ ಕುಣಿಯೋದನ್ನ ತೋರಿಸಿ~, `ಹಾವು ಪೊರೆ ಕಳಚೋದನ್ನ ತೋರಿಸಿ~, ಎಂದೆಲ್ಲ ಬರೆದುಕೊಟ್ಟಿದ್ದರು.

ಇದಾದರೂ ಎಷ್ಟೋ ವಾಸಿ, ಅವನ ಬಾಸಿನ ತಂದೆಗೆ `ಗುಬ್ಬಿ ಕಡ್ಡಿ ಹೆಕ್ಕಿ ಗೂಡುಕಟ್ಟೋದನ್ನ ತೋರಿಸಿ~ ಎಂದು ಬರೆದುಕೊಟ್ಟಿದ್ದರಂತೆ! ತನ್ನ ಜೀವನದಲ್ಲೇ ಒಂದು ಕ್ಷಣ ಇದ್ದ ಕಡೆ ಇರದ ಆ ವ್ಯಗ್ರ ಮುದುಕನಿಗೆ ವರ್ಷಾನುಗಟ್ಟಲೆ ಕೃತಕ ಕಾಡಿನಲ್ಲಿ ಕೂರಿಸಿ ಕಣ್ಣುಮಿಟುಕಿಸುವುದರೊಳಗೆ ಅತ್ತಿಂದಿತ್ತ ಹಾರುವ ಗುಬ್ಬಿಯನ್ನು ಬೊಟ್ಟು ಮಾಡಿ ಮಾಡಿ ತೋರಿಸಿಯೇ ಸಾಕಾಯಿತಂತೆ.

ಬಾಸಿನ ಎಷ್ಟೋ ಶೇರುಗಳು, ಕಂಪನಿ ಬ್ರಾಂಚುಗಳು ಇದೊಂದು ಟ್ರೀಟ್‌ಮೆಂಟಿನ ಸಲುವಾಗಿಯೇ ಮಾರಬೇಕಾಯಿತಂತೆ! ಇದೆಲ್ಲವನ್ನೂ ನೆನಸಿಕೊಂಡು ಶಂಕರಮೂರ್ತಿಗೆ ತೊಡೆ ನಡುಗತೊಡಗಿತು.

ತನ್ನ ಅಪಾರ್ಟ್‌ಮೆಂಟಿಗೆ ಬಂದವನೇ ಲಿಫ್ಟನ್ನು ಹೊಕ್ಕನು. `2085~ ನಂಬರನ್ನು ಒತ್ತಿ ಕನ್ನಡಿಯಲ್ಲಿ ಮುಖ ನೋಡಿಕೊಂಡು ನಿಂತನು. ಮತ್ತೆಮತ್ತೆ ಅದೇ ಸೂರ‌್ಯೋದಯದ ಟ್ರೀಟ್‌ಮೆಂಟೇ ಕಣ್ಣಮುಂದೆ ಬಂದು ಏಸೀ ಲಿಫ್ಟಿನಲ್ಲೂ ಬೆವರತೊಡಗಿದನು.

ತಕ್ಷಣ ಡಾಕ್ಟರು ಹೇಳಿದ ಮಾತು ನೆನಪಿಗೆ ಬಂದು ಮನಸ್ಸನ್ನು ಬೇರೆಡೆ ತಿರುಗಿಸಲು ನೋಡಿದ. ಗಿರ‌್ರನೆ ಓಡುತ್ತಿದ್ದ ಫ್ಲೋರಿನ ನಂಬರುಗಳು ಅವನ ಕಣ್ಣಿಗೆ ಬಿದ್ದವು. ಆ ಕ್ಷಣದಲ್ಲಿ ಇದುವರೆಗೂ ಯೋಚಿಸಿಯೇ ಇರದ ಹೊಸ ಆಲೋಚನೆಯೊಂದು ಹೊಳೆಯಿತು. `ನಿಜವಾಗಿಯೂ ತಾನು ವಾಸಮಾಡುವ ಅಪಾರ್ಟ್‌ಮೆಂಟು ಎಷ್ಟು ಎತ್ತರದ್ದು?~- ಅವನಿಗದು ಗೊತ್ತೇ ಇರಲಿಲ್ಲ!

ಅದನ್ನು ಅವನು ತಿಳಿದುಕೊಳ್ಳಲೂ ಹೋಗಿರಲಿಲ್ಲ. ಅಷ್ಟೇ ಅಲ್ಲ, ಅದರಲ್ಲಿ ವಾಸಮಾಡುವ ಯಾರಿಗೂ ಅಲ್ಲಿ ಎಷ್ಟು ಫ್ಲೋರುಗಳಿವೆ, ಮನೆಗಳಿವೆ, ಹೃದಯಗಳಿವೆ ಒಂದೂ ಗೊತ್ತುಮಾಡುತ್ತಿರಲಿಲ್ಲ. ಇದನ್ನೆಲ್ಲ ಆಲೋಚಿಸುತ್ತಿದ್ದಂತೆ ಶಂಕರಮೂರ್ತಿಗೆ, `ಹೌದಲ್ಲಾ! ನಾನು ಬಂದಾಗಿನಿಂದ ಇಲ್ಲಿಯ ಯಾವ ಫ್ಲೋರನ್ನೂ ನೋಡೇ ಇಲ್ಲವಲ್ಲ?~

ಅನಿಸಿ ಆಶ್ಚರ‌್ಯವಾಯಿತು. `ಸರಿ ಹಾಗಾದರೆ, ಈಗ ಒಂದೊಂದೇ ಫ್ಲೋರಿಗೂ ಹೋಗಿ ನೋಡೇಬಿಡೋಣ~ ಎಂದು ನಿರ್ಧರಿಸಿ, ಮತ್ತೆ ಕೆಳಗೆ ಬಂದು `1~ ಎಂದು ಗುಂಡಿ ಒತ್ತಿದ. ಊಹೂಂ! ಲಿಫ್ಟು ಮೇಲೇರಲಿಲ್ಲ. ಮತ್ತೆ `4~ ಎಂದು ಒತ್ತಿದ. ಲಿಫ್ಟು ನಿಂತಲ್ಲೇ ನಿಂತಿತ್ತು. `150~ ಒತ್ತಿದನು. ಆಗಲೂ ಅಷ್ಟೆ! ಶಂಕರಮೂರ್ತಿಗೆ ರೋಸಿಹೋಯ್ತು.

ಕಯ್ಯಿಗೆ ಸಿಕ್ಕ ನಂಬರನ್ನು ಒತ್ತಿಒತ್ತಿ ಇಟ್ಟನು. ಲಿಫ್ಟಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಲಿಫ್ಟಿನ ನಿರ್ಲಿಪ್ತತೆ ಕಂಡು ಇನ್ನೂ ರೇಗಿ ಸಿಕ್ಕಸಿಕ್ಕ ನಂಬರು ಒತ್ತುತ್ತಲೇ ಇದ್ದನು. ಕಡೆಗೆ ಯಾವುದೋ ಇಷ್ಟುದ್ದದ ನಂಬರಿಗೆ ಒತ್ತಿದಾಗ, ಇದ್ದಕ್ಕಿದ್ದಂತೆ ಲಿಫ್ಟು ಝಗ್ಗನೆ ಮೇಲೇರತೊಡಗಿತು! ಪ್ರತಿ ಫ್ಲೋರು ಬಂದಾಗಲೂ ಲಿಫ್ಟಿನ ವೇಗ ಕೊಂಚ ನಿಧಾನವಾಗುತ್ತಿದ್ದದ್ದನ್ನು ಗಮನಿಸಿದ.

ಅದನ್ನವ ಗಮನಿಸುವ ವೇಳೆಗೇ ಲಿಫ್ಟು ಮುನ್ನೂರು ನಾನ್ನೂರು ಫ್ಲೋರು ದಾಟಿಯಾಗಿತ್ತು. ಪ್ರತಿ ಫ್ಲೋರಿನ ಬಳಿಯೂ ಶಂಕರಮೂರ್ತಿ ಹಾರಿಹಾರಿ ಗಾಜಿನ ಕಿಂಡಿಯ ಮೂಲಕ ಹೊರಗೆ ನೋಡತೊಡಗಿದ. ಚಲಿಸುವ ಆ ಲಿಫ್ಟಿನಿಂದ ಅವನಿಗೆ ಅಸ್ಪಷ್ಟವಾದ ದೃಶ್ಯಗಳೂ, ಅಸ್ಪಷ್ಟವಾದ ಶಬ್ದಗಳೂ ಕೇಳಿಬರತೊಡಗಿದವು. ಕ್ರಮಕ್ರಮೇಣ ಅವನಿಗೆ ಪ್ರತಿ ಲಿಫ್ಟಿನ ಜನರೂ, ಜಗತ್ತೂ, ಬೇರೆಯದೇ ಅನಿಸತೊಡಗಿತು.
 
ಅವರ ಉಡುಗೆತೊಡುಗೆ, ಭಾಷೆ, ಬದುಕು, ಪರಿಸರ ಎಲ್ಲ ಬೇರೆಯದೇ ಅನಿಸಿ ನಿಬ್ಬೆರಗಾದ. ಒಂದು ಫ್ಲೋರು ಶಾಂತಿಯಿಂದ ಸ್ವರ್ಗ ಸದೃಶವಾಗಿದ್ದರೆ ಮತ್ತೊಂದು ರಣರಂಗವಾಗಿತ್ತು. ಈ ಎಲ್ಲ ಅದ್ಭುತಗಳ ನಡುವೆ ಅವನು ತನ್ನ ಹೃದಯವನ್ನೇ ಮರೆತುಬಿಟ್ಟಿದ್ದನು!

ಹಾಗೇ ಮೇಲೇರುತ್ತ ಮೇಲೇರುತ್ತ ಇದ್ದಕ್ಕಿದ್ದ ಹಾಗೆ ಯಾವುದೋ ಫ್ಲೋರಿನ ಬಳಿ ತನ್ನ ಮುತ್ತಜ್ಜಿಯ ದನಿ ಕೇಳಿದಂತಾಯಿತು! ಅವಳ ಚಿತ್ರವೂ ಕಂಡಂತಾಯಿತು! ಮೇಲೇರಿದಂತೆ ಅಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಎಲ್ಲರೂ ಒಬ್ಬೊಬ್ಬರೇ ಸೇರಿಕೊಳ್ಳುತ್ತಿರುವಂತೆ ತೋರತೊಡಗಿತು.

ಒಂದು ಫ್ಲೋರಿನಲ್ಲಂತೂ ಅಳುವ ಒಂದು ಮಗುವಿನ ದನಿ ಬೇಡಬೇಡವೆಂದರೂ ಅವನ ಮನಸ್ಸಿನ ಬೆಂಬತ್ತಿತು. ಹಾಗೇ ಮೇಲೇರುತ್ತ ಆ ಮಗು ಬೆಳೆದುಬೆಳೆದಂತೆಲ್ಲ ನೋಡಿದರೆ, ಅದು ತನ್ನನ್ನೇ- ತನ್ನ ಬಾಲ್ಯದ ಚಹರೆಯನ್ನೇ ಹೋಲುವಂತಾಗಿ ಇನ್ನೂ ಉತ್ಸುಕನಾದ! ತನ್ನ ಗೆಳೆಯರು, ಶಾಲೆ, ಎಲ್ಲರೂ, ಎಲ್ಲವೂ ಬರತೊಡಗಿತು.

ಏರುವ ಆ ವೇಗದಲ್ಲೇ ಅವನಿಗೆ ಅಪ್ಪನ ಅಪ್ಪನ ಅಮ್ಮ- ಮುತ್ತಜ್ಜಿಯು ಜಗಲಿಯ ಮೇಲೆ ಕುಳಿತು ಹುಟ್ಟುವ ಸೂರ‌್ಯನ ತೋರಿಸುತ್ತ ಹೇಳುತ್ತಿದ್ದ ಮಾತುಗಳು ಕೇಳತೊಡಗಿದವು. ಮೂಕಜ್ಜಿ! ಮೂಕಜ್ಜಿ ಅವಳ ಹೆಸರು!

`ನೋಡೋ, ನೋಡೋ, ಶಂಕರಿ! ದೋ... ಅಲ್ಲೊಬ್ಬ ನಿನ್ನಂತಾವ್ನೇ ಮರಳಶಂಕರ ಉಟ್ತಾ ಔನೆ ನೋಡು.. ಭೂಮ್ತಾಯಿಗೆ ಗಂಡನೂ ಅವನೇಯಾ, ಮಗೀನೂ ಅವನೇಯಾ! ಹಗಲೆಲ್ಲ ಆ ತಾಯಿ- ನಮ್ಮಮ್ಮನ್ನ- ಬುಗುರಿ ತರ ತಿರುಗುಸ್ತಾನೆ.
 
ಚಂಜೆ ಆಗತಿದ್ದಂಗೆ ಮುಸುಡೀನೆಲ್ಲ ಕೆಂಪಗ್ ಮಾಡ್ಕಂಡು ನಯಸಾಗಿ ಅವಳ ಕಡಿಕ್ಕೇ ಉಣ್ಣಾಕ್ ಬತ್ತಾನೆ. ಗಡತ್ತಾಗಿ ಉಂಡು ರಾತ್ರಿ ಆಗತಿದ್ದಂಗೆ ಅವಳ ಜೊತಿಗೇ ಮನೀಕೋತಾನೆ ಗಂಡನಾಗಿ! ಬೆಳಿಗ್ಗೆ ಏಳೋವಾಗ ಮಾತ್ರ ಅವಳ ಸೆರಗೀಲೆ ಕೊಸರಕೊಂಡು ಮಗಿ ಆಗಿ ಉಟ್ಟಿಬತ್ತಾನೆ!~ 

ಲಿಫ್ಟು ಮೇಲೆ ಮೇಲೆ ಹೋಗುತ್ತಿದ್ದರೂ ಶಂಕರಮೂರ್ತಿಯ ಮನಸ್ಸು ಮಾತ್ರ ಮೂಕಜ್ಜಿ ತೋರಿಸಿ ಹೇಳುತ್ತಿದ್ದ ಸೂರ‌್ಯನ ಕಡೆಯೇ ನೆಟ್ಟಿತ್ತು. ಮೂಕಜ್ಜಿಯನ್ನು ಸಾಯಲು ಬಿಡದ ಅಪ್ಪ ಆಪರೇಷನ್ ಮಾಡಿಸಿ ಹೃದಯವನ್ನೇ ಬದಲಿಸಿ 180 ವರ್ಷ ಬದುಕಿಸಿದ್ದ! ಮುದುಕಿ ಸಾಯಲೂ ಸ್ವಾತಂತ್ರ್ಯವಿಲ್ಲದೆ ಉಸಿರಾಡುವ ಯಂತ್ರದಂತೆ ಬದುಕಿದ್ದಳು.

`ನಮ್ಮ ಕಾಲದೇಲಿ ನಮ್ನ ಬದುಕಾಕ್ ಬಿಡ್ರೋ ಅಂತ ಕೇಳಕತಿದ್ವಿ... ಆದ್ರೆ ಈಗ ನೆಮ್ದಿಯಾಗ್ ಸಾಯಕ್ ಬಿಡ್ರೋ ಅಂತ ಕೇಳೋ ಕಾಲ ಬಂತಲ್ಲೋ ಶಂಕರಾ...~ ಎಂದು ಹತಾಶಳಾಗಿ ಕಾದುಕಾದು ಒಮ್ಮೆ ತನ್ನ ಎದೆಯ ಗೂಡಿಂದ ಹೃದಯವನ್ನೇ ಕಿತ್ತು ಹೊರತೆಗೆದು-

“ಉಟ್ಟೊ ಜನಾಜಂತು ಸಾಯಲೇಬೇಕು ಕಣ್ರೋ... ಸಾಯದೇ ಮತ್ತೆ ಉಟ್ಟಿಲ್ಲ. ದಿನಾ ಉಟ್ಟಿ ದಿನಾ ಸಾಯೋ ಆ ಮರಳಶಂಕರನ ಹಂಗೆ. ಸಾಯದನ್ನ ಮುಂದುಕ್ಕಾಕ್ಕೊಂಡು ಆಕ್ಕೊಂಡು ಭೂಮ್ತಾಯಿ ದೇಹದ ಮ್ಯಾಗೆ ಗೂಟ ಜಡಕೊಂಡು ಕುಂತಗೊಂಡೀರಿ ಮಕ್ಳಾ... ಉಶಾರು! ಆ ತಾಯಿ, ನಮ್ಮಮ್ಮ ಒಂದು ಸಾರಿ ತನ್ನ ಸೀರೆ ಸೆರಗು ಒಸಿ ಕೊಡುವ್ಕೊಂಡ್ಳಂದ್ರೆ ಮುಗೀತು ನಿಮ್ಮ ಕತೆ... ಆ ಕಾಲಾ ದೂರ ಇಲ್ಲ ಕಣ್ರಲಾ...

ನೀವೆಲ್ಲ ಸೇರಿ ಅರ‌್ದು ಚಿಂದಿ ಮಾಡಿರೋ ಸೀರೆ ಬಿಚ್ಚಾಕಿ ಮದುವಣಗಿತ್ತಿಯಂಗೆ ಭೂಮ್ತಾಯಿ ವಸಾ ಅಸುರು ಸೀರೆ ಉಟ್ಕಂದು ಮಯ್ತುಂಬ ಗಾಯದ್ ಮೊಲೆಗೊಳ್ನ ಚಿಗುರುಸ್ಕೊಂಡು ನಿಂತ್ಕಂತಾಳೆ ನೋಡ್ತಾಯಿರಿ...ತನ್ನ ಮಯ್ಯೆಲ್ಲ ಕಣ್ಣು ಮಾಡಿ ಮೂಡಣ ದಿಕ್ಕನಾಗೆ ಕಾದು ಕುಂತು ನೋಡೇ ನೋಡತಾಳೆ,

ನೋಡ್ತಾಯಿರಿ...
ಆಕಾಸಾನೆಲ್ಲ ಮರಳು ಮರಳು ಮಾಡಿಕೊಂಡು ಬಿಮ್ಮಗೆ ಸೀರೆ ಒಳಗಿಂದ್ಲೇ ಉಟ್ಕೊಂಡು ಉಟ್ಕೊಂಡು ಬತ್ತಾನೆ ಮರಳಶಂಕರ... ನೋಡ್ತಾಯಿರಿ...
ನಿಮ್ಮನ್ನೆಲ್ಲ ಮೆಟ್ಟುಕೊಂಡು ಮೆಟ್ಟುಕೊಂಡು ಓಯ್ತಾನೆ ಮರಳಶಂಕರ... ನೋಡ್ತಾಯಿರಿ...

ಅಸುರುಸೀರೆ ಉಟುಕೊಂಡ ಭೂಮ್ತಾಯಿ- ಮರಳಶಂಕರ!
ಮರಳಶಂಕರ - ಭೂಮ್ತಾಯಿ!

ಮತ್ತೆ ಸೇರ‌್ತಾರೆ ಕಣ್ರೋ! ನೋಡ್ತಾಯಿರಿ...
ಅದನ್ನ ನೋಡಾಕೆ ನೀವ್ಯಾರು ಇರಾದಿಲ್ಲ ಕಣ್ರೋ ನೋಡ್ತಾಯಿರಿ...
ಅಯ್ಯ! ನೀವೇ ಇರಾಕಿಲ್ಲ ಅಂದ್ರೆ ನೀವೇನ್ ನೋಡ್ತೀರೋ, ಗೆಂಡೆ!”
ಎಂದವಳೇ ಕಯ್ಯಲ್ಲಿ ಹಿಡಿದಿದ್ದ ಹೃದಯವನ್ನು ಕಿಚಕ್ಕನೆ ಹಿಚುಕಿಕೊಂಡು ಹಸಿರುನೆತ್ತರು ಚಿಮ್ಮಿಸುತ್ತ ಅಸುನೀಗಿದಳು ಮೂಕಜ್ಜಿ!

ಮೂಕಜ್ಜಿಯ ನೆನಪಿನಲ್ಲಿ ಶಂಕರಮೂರ್ತಿಗೆ ತಾನೀಗ ಯಾವ ಫ್ಲೋರಿನಲ್ಲಿದ್ದೇನೆ ಒಂದೂ ತಿಳಿಯದಂತಾಗಿತ್ತು. ಲಿಫ್ಟು ಮಾತ್ರ ಒಂದೇಸಮನೆ ಸ್ಪೀಡು ತೆಗೆದುಕೊಳ್ಳುತ್ತಿತ್ತು. ಬರುಬರುತ್ತ ಅದು ಲಿಫ್ಟೋ ಕ್ಷಿಪಣಿಯೋ ಒಂದೂ ತಿಳಿಯದ ವೇಗದಲ್ಲಿ ರೊಯ್ಯನೆ ಮೇಲೆಮೇಲೆ ಚಿಮ್ಮತೊಡಗಿತು. ಫ್ಲೋರುಗಳ ನಂಬರುಗಳು ಬುಗುರಿತಿರುಗಿದಂತೆ ಬುರ‌್ರನೆ ಮುಂದೆಮುಂದೆ ಓಡುತ್ತಿದ್ದವು.

ಶಂಕರಮೂರ್ತಿಯ ಹೃದಯಕ್ಕೆ ಅಳವಡಿಸಿದ್ದ ಫೇಸ್‌ಮೇಕರ್ ಯಾವಾಗಲೋ ಅದರ ಕೆಲಸ ಬಂದು ಮಾಡಿತ್ತು. ಅವನೀಗೀಗ ನಿಜಕ್ಕೂ ತನ್ನ ಹೃದಯ ಎದೆಗೂಡಿನಲ್ಲಿದೆಯೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿತು. ಕಡೆಗೆ ಅದೂ ಇಲ್ಲವಾಗಿ ಬರೀ ಮೇಲೆ ಮೇಲೆ ಚಿಮ್ಮುವ ವೇಗದಲ್ಲಿ ತಾನೂ ಲೀನನಾಗಿಬಿಟ್ಟ.

ಬುಗುರಿ ತಿರುಗಿದಂತೆ ತಿರುಗಿದ ಫ್ಲೋರಿನ ಸಂಖ್ಯೆಗಳು ಯಾವುದೋ ಒಂದು ಎಣಿಸಲಾಗದ ಅಗಣಿತದಲ್ಲಿ ಹಠಾತ್ತನೆ ಒಂದುಕ್ಷಣ ನಿಂತು, ಮತ್ತೆ `ಸೊನ್ನೆ~ ತೋರಿಸತೊಡಗಿತು. ಲಿಫ್ಟು ನಿಂತದ್ದಕ್ಕೂ ಶಂಕರಮೂರ್ತಿಯ ಹೃದಯದ ಬಡಿತ ಮತ್ತೆ ಚಾಲೂ ಆಗಿದ್ದಕ್ಕೂ ಒಂದೇ ಆಯಿತು. ಅಷ್ಟು ವೇಗದಲ್ಲಿ ಲಿಫ್ಟು ಚಿಮ್ಮಿದ್ದೇ ಸುಳ್ಳೇನೋ ಎಂಬಂತೆ ಈಗ ಸಾವಕಾಶವಾಗಿ ತನ್ನ ಕದ ತೆರೆಯಿತು.

ಶಂಕರಮೂರ್ತಿ ಹೆಜ್ಜೆ ಕಿತ್ತು ಹೊರಗಿಟ್ಟದ್ದೇ ಲಿಫ್ಟೂ ಇಲ್ಲ, ಏನೂ ಇಲ್ಲ!
ಸ್ವಚ್ಛಂದ ಭೂಮ್ತಾಯಿಯ ಹಸಿರುಸೆರಗಿನ ಮೇಲೆ ನಿಂತಿದ್ದಾನೆ!
ನಿಲ್ಲುತ್ತಿದ್ದಂತೆ ನಿಲ್ಲಲಾರದೆ ಕುಸಿದು, ಕಾಲು ಅಂಬೆಗಾಲಾಗಿ, ಪುಟ್ಟ ಕಂದನಾಗಿ ಹೊಸ ಮಯ್ಯಿ, ಹೊಸ ಹೃದಯ, ಹೊಸ ಹೊಸತು ಹೊತ್ತು ತೆವಳುತ್ತ ಓಡತೊಡಗಿದನು ಕ್ಷಿತಿಜದೆಡೆಗೆ!

ಚಿಗುರುತ್ತಿರುವ ಭೂಮ್ತಾಯಿಯ ಹಸಿರಮೊಲೆಗಳು ಅವನನ್ನ ಕಯ್ಬೀಸಿ ಕರೆದ ಕಡೆಗೆ!
ದೂ...ರದಲ್ಲಿ, ಅದೋ, ಇವನ ಜೊತೆ ತಾನೂ ಮೊಲೆ ಚೀಪಲು ಮಗುವಾಗಿ ಹುಟ್ಟಿ ಬರುತ್ತಿದ್ದಾನೆ ಮರಳಶಂಕರ! 


ತಪಸ್ವಿಯ ಕಲೆ

ಹತ್ತೊಂಬತ್ತನೇ ಶತಮಾನದ ಸುಮಾರಿಗೆ ಭಾರತೀಯ ಕಲಾಭಿತ್ತಿಯಲ್ಲಿ ಮೂಡಿದ ಕನ್ನಡ ಗೆರೆಯೇ ಕಲಾತಪಸ್ವಿ ಕೆ. ವೆಂಕಟಪ್ಪ. ಗುರುಗಳಾದ ಅವನೀಂದ್ರನಾಥರ ಮಾರ್ಗದರ್ಶನದಲ್ಲಿ ದೇಸಿ ಸೊಗಡಿನ ಕಲಾ ಕುಸುಮ ಅರಳಿಸಿದವರಲ್ಲಿ ಇವರು ಪ್ರಮುಖರು. ಜಲವರ್ಣ, ಶಿಲ್ಪ ಹಾಗೂ ಉಬ್ಬು ಶಿಲ್ಪಗಳಲ್ಲಿ ಅಪಾರ ಪರಿಣತಿ ಹೊಂದಿದ್ದ ವೆಂಕಟಪ್ಪ ಕಲಿತದ್ದೆಲ್ಲಾ ಕಲ್ಕತ್ತೆಯಲ್ಲಿ.

ಅವರ ಮನೆತನ ಕೂಡ ಕಲಾಕಾರರದ್ದೇ. ವೆಂಕಟಪ್ಪನವರ ತಂದೆ ಕೃಷ್ಣಪ್ಪನವರು ಮೈಸೂರು ಅರಮನೆಯ ಸಿಂಗಾರಕ್ಕೆ ಚಿತ್ರದುರ್ಗದಿಂದ ಬಂದರು. ಮೈಸೂರಿನಲ್ಲಿಯೇ ವೆಂಕಟಪ್ಪನವರ ಜನನ.

ಮೈಸೂರಿನ ಔದ್ಯಮಿಕ ಕಲಾಶಾಲೆಯಲ್ಲಿ ವಿದ್ಯಾಭ್ಯಾಸ. ಮದ್ರಾಸ್ ಸರ್ಕಾರದ ಕಲಾ ಪರೀಕ್ಷೆಗಳಲ್ಲಿ ಉತ್ತೀರ್ಣ. ನಂತರದ ಪಯಣ ಕಲ್ಕತ್ತೆಯ ಕಲಾಶಾಲೆಗೆ. ಅಲ್ಲಿಯೇ ಸುಮಾರು ಏಳು ವರ್ಷಗಳ ಕಾಲ ಕಲಾಭ್ಯಾಸ. ಗುರು ಅವನೀಂದ್ರರ ಕಣ್ಣಿಗೆ ಬಿದ್ದದ್ದು ಆಗಲೇ. ಜತೆಗೆ ಗಗನೇಂದ್ರ ಠಾಕೂರ್, ಜೇಮ್ ಕಸಿನ್ಸ್, ಆನಂದ ಕುಮಾರಸ್ವಾಮಿ, ನಂದಲಾಲ ಬಸು, ಪ್ರಮೋದ ಕುಮಾರ ಚಟ್ಟೋಪಾಧ್ಯಾಯ ಮುಂತಾದ ಗುರು- ಗೆಳೆಯರ ಸಹವಾಸ.

ವಿದ್ವಾಂಸ ಸಾ.ಕೃ. ರಾಮಚಂದ್ರರಾಯರು ಹೇಳಿದಂತೆ, `ಅವನೀಂದ್ರನಾಥರ ಕನಸು ನನಸಾದದ್ದು ಅವರ ಇಬ್ಬರು ಪ್ರಮುಖ ಶಿಷ್ಯರಿಂದ: ಉತ್ತರದಲ್ಲಿ, ಅದರಲ್ಲೂ ಬಂಗಾಲದ ಕಡೆ ನಂದಲಾಲ ಬಸು, ದಕ್ಷಿಣದಲ್ಲಿ ಅದರಲ್ಲೂ ಕನ್ನಡ ನಾಡಿನಲ್ಲಿ ವೆಂಕಟಪ್ಪ. ಆದರೆ ಅವರ ಚಿತ್ರಗಳಲ್ಲಿ ನಾವು ಕಾಣುವುದು ಪರ್ಶಿಯನ್, ಮುಗಲ್, ರಾಜಸ್ತಾನಿ, ಪದ್ಧತಿಗಳ ಅಷ್ಟಿಷ್ಟು ಪ್ರಭಾವವನ್ನು.

ಅವನೀಂದ್ರನಾಥರ ಶಿಷ್ಯರಾದರೂ ಬಂಗಾಳಿ ಕಲಾಪ್ರಕಾರಕ್ಕೆ ಅವರು ಒಲಿಯಲಿಲ್ಲ. ತಮ್ಮದೇ ಸ್ವತಂತ್ರ ಶೈಲಿಯನ್ನು ಬೆಳೆಸಿಕೊಂಡರು~. 1916ರಲ್ಲಿ ಮೈಸೂರಿಗೆ ಆಗಮನ. ನಾಲ್ವಡಿ ಕೃಷ್ಣರಾಜ ಒಡೆಯರ ಬಯಕೆಯಂತೆ ಅರಮನೆಯಲ್ಲಿ ಕಲಾಕೃತಿಗಳ ರಚನೆ. ಚಿತ್ರಕಲೆಯಂತೆಯೇ ಸಂಗೀತವನ್ನೂ ಧ್ಯಾನಿಸಿದವರು ವೆಂಕಟಪ್ಪ.

ಕಲ್ಕತ್ತೆಯಲ್ಲಿದ್ದಾಗಲೇ ಅವರ ಒಂದು ಮನಸ್ಸು ವೀಣೆಯ ಮೇಲಿತ್ತು. ಮೈಸೂರಿಗೆ ಬರುವ ಮೊದಲು `ಶ್ರುತಿ ವೀಣೆ~ಯೊಂದನ್ನು ತಯಾರಿಸಿದ್ದು ಅವರ ಪ್ರತಿಭೆಗೆ ಸಾಕ್ಷಿ. ನಂತರ ವೀಣೆ ಶೇಷಣ್ಣನವರ ಬಳಿ ಸಂಗೀತಾಭ್ಯಾಸ. ವೀಣೆಯ ಬಗೆಯ ಅವರ ಪ್ರೀತಿ ಎಷ್ಟಿತ್ತೆಂದರೆ `ವೀಣೆಯ ಹುಚ್ಚು~ ಎಂಬ ವರ್ಣ ಕಲಾಕೃತಿ ರಚಿಸಿದರು.

ಜಲವರ್ಣಕ್ಕೆ ಮನಸೋತಿದ್ದ ವೆಂಕಟಪ್ಪನವರು ಕಿರು ಕ್ಯಾನ್‌ವಾಸ್‌ನಲ್ಲಿ ಭಾವಚಿತ್ರಗಳನ್ನು ಸಮರ್ಥವಾಗಿ ಹಿಡಿದಿಡುತ್ತಿದ್ದರು. ಉದಕಮಂಡಲ, ಕೊಡೈಕೆನಾಲುಗಳಿಗೆ ತೆರಳಿ ಪ್ರಕೃತಿಯನ್ನು ಕುಂಚಗಳಲ್ಲಿ ಆರಾಧಿಸಿದರು. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸುತ್ತಿದ್ದ ಉಬ್ಬುಶಿಲ್ಪಗಳಿಗೆ ಮತ್ತೊಂದು ಮೋಹಕತೆ.

ಬಿಳಿ ಬಣ್ಣದ ಫಲಕಗಳನ್ನು ಕೂಡ ವರ್ಣಚಿತ್ರದಂತೆ ವೈವಿಧ್ಯಮಯವಾಗಿ ಮೂಡಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಉಬ್ಬುಶಿಲ್ಪಗಳಲ್ಲಿ ಕಾಲ್ಪನಿಕ ಘಟನೆಗಳಿಗೆ ಒತ್ತು ನೀಡುತ್ತಿದ್ದ ಅವರು ಶಿಲ್ಪಗಳಲ್ಲಿ ಮಾತ್ರ ವಾಸ್ತವವನ್ನು ಬಿಂಬಿಸುತ್ತಿದ್ದರು.
 
ಉಬ್ಬು ಶಿಲ್ಪಗಳಂತೆ ಅವರ ಶಿಲ್ಪ ಕಲಾಕೃತಿಗಳು ಮೂಡಿದ್ದು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿಯೇ. ಹೋಟೆಲು ಮಾಣಿ ನರಸಿಂಹಯ್ಯ, ಕಲಾಗುರುಗಳಾದ ಪರ್ಸಿ ಬ್ರೌನ್, ರವೀಂದ್ರನಾಥ ಠಾಕೂರರ ಪ್ರತಿಮೆಗಳನ್ನು ಅವರು ಕಟೆದ ರೀತಿ ಅಪ್ರತಿಮವಾದದು.

`ಬುದ್ಧ ಮತ್ತು ಅವನ ಶಿಷ್ಯರು~, `ಮಹಾ ಶಿವರಾತ್ರಿ~, `ರಾಧೆ ಮತ್ತು ಜಿಂಕೆ~, `ಶಕುಂತಲೆಯ ನಿರ್ಗಮನ~, `ದ್ರೋಣಾಚಾರ್ಯರ ಶಿಕ್ಷಣ~, `ಪಕ್ಷಿ~, `ಪರಿವ್ರಾಜಕನಾಗಿ ಬುದ್ಧ~ ಅವರ ಮಹತ್ವದ ಕಲಾಕೃತಿಗಳಲ್ಲಿ ಕೆಲವು.

ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ವೆಂಕಟಪ್ಪನವರ ಒಡನಾಟವೂ ಗಮನಾರ್ಹ. ಒಡೆಯರ್ ತರುವಾಯ ವೆಂಕಟಪ್ಪನವರು ಅರಮನೆ ಕಲಾವಿದರಾಗಿ ಉಳಿಯಲಿಲ್ಲ. ತಮ್ಮದೇ ಕಲಾಶಾಲೆ ತೆರೆಯಬೇಕು ಅಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕು ಎಂಬ ಅವರ ಆಸೆಯೂ ಈಡೇರಲಿಲ್ಲ.
 
ಸ್ವತಂತ್ರ ಪ್ರವೃತ್ತಿಯ ವೆಂಕಟಪ್ಪ ಬೆಂಗಳೂರಿಗೆ ಬಂದು ಸ್ಟುಡಿಯೊಸಿದ್ಧಪಡಿಸಿಕೊಂಡರು. ನಂತರ ಕಷ್ಟಕೋಟಲೆಗಳು ಎದುರಾದವು. ಅರಮನೆಯ ವಿರುದ್ಧ ಹೂಡಿದ ದಾವೆಯಲ್ಲಿ ಗೆಲುವು ಕಾಣಲಿಲ್ಲ. ಕೆಲವರ ಕಿರುಕುಳ ಹೆಚ್ಚಿತು. ಜತೆಗೆ ಆರೋಗ್ಯ ಕೂಡ ಕೆಟ್ಟಿತು. 1965ರ ಮೇ 25ರಂದು ಅವರು ಇಹಲೋಕ ತ್ಯಜಿಸಿದರು.
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT