ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಕೊರತೆ: ಕಾಮಗಾರಿ ಸ್ಥಗಿತ ಸಾಧ್ಯತೆ

ವಾರ ಕಳೆದರೂ ಬಗೆಹರಿಯದ ಲಾರಿ ಮುಷ್ಕರ
Last Updated 16 ಜುಲೈ 2013, 7:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ` ಎಂಥಾ ಮರುಳಯ್ಯಾ ಇದು ಎಂಥಾ ಮರುಳು...' ಎಂಬ ಹಾಡನ್ನು  ಸ್ವಲ್ಪ ಬದಲಿಸಿ `ಎಂಥಾ ಮರಳಯ್ಯಾ ಇದು ಎಂಥಾ ಮರಳು' ಎಂದು ಕಳೆದೊಂದು ವಾರದಿಂದ ನಡೆಯುತ್ತಿರುವ `ಮರಳು ಲಾರಿ ಮುಷ್ಕರ' ಹಾಗೂ ಅದರಿಂದ ಜನರಿಗೆ ಉಂಟಾದ ಸಮಸ್ಯೆಗಳಿಗೆ ಸ್ವಲ್ಪ ಹೋಲಿಕೆ ಮಾಡಬಹುದೇನೋ?

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜುಲೈ 10ರಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಮರಳು ಲಾರಿ ಮುಷ್ಕರದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿದ್ದ ಮರಳು ಅಭಾವ ಸೃಷ್ಟಿಯಾಗಿ ಕಟ್ಟಡ ನಿರ್ಮಾಣದ ಕೆಲಸ ಕಾರ್ಯಗಳೆಲ್ಲ ಅಯೋಮಯವಾಗಿವೆ. ಹಲವೆಡೆ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ.

ಮಹಾನಗರಗಳಲ್ಲಿ ಪ್ರತಿದಿನ ಹತ್ತಾರು ಕಡೆಗಳಲ್ಲಿ ಮನೆ, ಅಪಾರ್ಟ್‌ಮೆಂಟ್ ಸೇರಿದಂತೆ ಬಗೆ ಬಗೆಯ ಕಟ್ಟಡ ನಿರ್ಮಾಣ ಕಾಮಗಾರಿ ಸಾಮಾನ್ಯ. ಹಳೆ ಕಟ್ಟಡಗಳಿಗೆ ಮುಕ್ತಿ ನೀಡಿ ಹೊಸ ಕಟ್ಟಡಗಳಿಗೆ ಅಡಿಗಲ್ಲು  ಹಾಕುವುದು ನಗರೀಕರಣದಲ್ಲಿ ಸಹಜ. ಆದರೆ ಕಟ್ಟಡ ನಿರ್ಮಾಣಕ್ಕೆ ಮುಖ್ಯಪ್ರಾಣವಾಗಿದ್ದ ಮರಳು, ಅದನ್ನು ಸಾಗಣೆ ಮಾಡಿ ತಂದು ಕೊಡುವ ಲಾರಿ ಮುಷ್ಕರದಿಂದಾಗಿ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಮರಳು ಅಭಾವದಿಂದಾಗಿ ಅಗತ್ಯವಿದ್ದವರು ಕಂಗಾಲಾಗಿದ್ದಾರೆ. 

`ಮಳೆಗಾಲದಲ್ಲಿ ಮನೆ ಕಟ್ಟಲು ಹಾಕಿದರೆ ಸಿಮೆಂಟ್ ಕ್ಯೂರಿಂಗ್‌ಗೆ ಒಂದಿಷ್ಟು ನೀರು ಹಾಕೋದು ತಪ್ಪುತ್ತದೆ ನೋಡಿ. ಆದರೆ ಈಗ ಮರಳು ಲಾರಿಗಳ ಮುಷ್ಕರದಿಂದಾಗಿ ಕಟ್ಟಡ ಕೆಲಸಕ್ಕೆ ಬಹಳ ತೊಂದರೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಅಡೆತಡೆಯಾಗಿದೆ' ಎನ್ನುತ್ತಾರೆ ಬೈಲಪ್ಪನವರ ನಗರದ ನಿವಾಸಿ ಶರಣಪ್ಪ.

ಇದು ಕೇವಲ ಇವರೊಬ್ಬರ ತೊಂದರೆಯೇನೂ ಅಲ್ಲ. ಬಹಳಷ್ಟು ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಈ ಉಸುಕಿನ ಸಮಸ್ಯೆ ಬಹುದ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಿಕೊಡಲು ಗುತ್ತಿಗೆದಾರರ  ಪರದಾಟ ಶುರುವಾಗಿದೆ.

ಆದರೆ ಕೆಲವು ಜಾಣ ಕಟ್ಟಡ ನಿರ್ಮಾಪಕರು ಮೊದಲೇ ಸಾಕಷ್ಟು ಮರಳುಗಳ ಲೋಡುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಹೀಗಾಗಿ ಮರಳು ಲಾರಿ ಮುಷ್ಕರ ಅವರಿಗೆ ದೊಡ್ಡ ತಲೆನೋವೇನೂ ಕೊಟ್ಟಿಲ್ಲ.   `ಇಲ್ಲರೀ ನಮಗೆ ಕಟ್ಟಡ ನಿರ್ಮಾಣಕ್ಕೆ ಅಷ್ಟೊಂದು ಸಮಸ್ಯೆ ಆಗಲಿಲ್ಲ. ನಾವು ಮೊದಲೇ ಮರಳಿನ ಲೋಡುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೆವು. ಹೀಗಾಗಿ ನಮ್ಮ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆಯಾಗಿಲ್ಲ' ಎನ್ನುತ್ತಾರೆ ಗೋಕುಲ್ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರ ಗುತ್ತಿಗೆದಾರ  ಮಹಾಂತೇಶ.

ಹಾಗಂತ ಎಲ್ಲರ ಬಳಿಯೂ ಮರಳಿಲ್ಲ. ನಿರ್ಮಾಣ ಹಂತದಲ್ಲಿರುವ ಬಹಳಷ್ಟು ಕಟ್ಟಡಗಳ ಬಳಿ ಕೆಲಸ ಕಾರ್ಯಗಳು ಬಹಳ ನಿಧಾನಗತಿಯಲ್ಲಿ ಸಾಗಿವೆ. ಈಗಾಗಲೇ ಇದ್ದ ಮರಳು ಬಳಸಿಕೊಂಡು ಕೆಲಸ ಮುಂದುವರಿಸಿದ್ದಾರೆ. ವಾರವೊಂದರಿಂದ ಮರಳು ಸಿಗದ ಕಾರಣ ಇದ್ದ ಮರಳು ಖಾಲಿಯಾಗಿದೆ.

`ಈಗಿರುವ ಮರಳು ಇವತ್ತೊಂದು ದಿನ ಬಂದರೆ ಹೆಚ್ಚು. ಮತ್ತ್ ನಮ್ಮ ಬಳಿ ಸ್ವಲ್ಪಾನೂ ಮರಳು ಇಲ್ರಿ...ಕೆಲಸ ಬಂದ್ ಇಡಬೇಕಾಕೈತ್ರಿ' ಎನ್ನುತ್ತಾರೆ  ವಿದ್ಯಾನಗರದ ಲೋಕಪ್ಪನ ಹಕ್ಕಲಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಸೂಪರ್‌ವೈಸರ್ ಶರಣು.

ಹು-ಧಾ ಮಹಾನಗರದಲ್ಲಿ ದಿನವೊಂದಕ್ಕೆ ಕನಿಷ್ಠ 500ಕ್ಕೂ ಲೋಡ್ ಉಸುಕು ಬೇಕು. ಒಟ್ಟು 600 ಉಸುಕು ಸಾಗಣೆ ಲಾರಿಗಳು ಇದ್ದು ಅವೆಲ್ಲವೂ ಈಗ ಬಂದ್ ಆಗಿವೆ. ಹೀಗಾಗಿ ಉಸುಕಿನ ಅಭಾವವೂ ಸೃಷ್ಟಿಯಾಗಿದೆ. ಮಾಮೂಲು ದಿನಗಳಲ್ಲಿ ಒಂದು ಲೋಡ್ ಉಸುಕಿಗೆ 14-16 ಸಾವಿರವಿದ್ದರೆ ಈಗ ಒಂದು ಲೋಡ್‌ಗೆ 25-30 ಸಾವಿರಕ್ಕೆ ಜಿಗಿದಿದೆ. ಅಷ್ಟು ದುಡ್ಡು ಕೊಟ್ಟರೂ ಒಂದು ಲೋಡ್ ಉಸುಕು ಸಿಗುವುದು ಕಷ್ಟಸಾಧ್ಯ.

`ಮರಳು ನೋಡ್ರಿ ಪೂರಾ ಖಾಲಿ ಆಗೈತ್ರಿ... ಹೆಚ್ಚು ದುಡ್ಡು ಕೊಟ್ಟರೂ ಮರಳು ಸಿಗವಲ್ದು...ಏನು ಮಾಡೋದ್ರಿ ಕೆಲಸಾನೇ ಸ್ವಲ್ಪ ದಿನ ಬಂದ್ ಇಡ್ತೀವ್ರಿ' ಎಂದು ವಿಜಯನಗರದ ಅಪಾರ್ಟ್‌ಮೆಂಟ್‌ವೊಂದರ ಮೇಸ್ತ್ರಿ ದೇವೇಂದ್ರಪ್ಪ ತಮ್ಮ ಕಷ್ಟ ತೋಡಿಕೊಂಡರು.

ಇನ್ನು ಹಲವೆಡೆಗಳಲ್ಲಿ ಮರಳು ಲಾರಿ ಮುಷ್ಕರ ನಡೆಯುತ್ತಿರುವುದು ಕಟ್ಟಡದ ಮೇಸ್ತ್ರಿಗಳಿಗೆ ಗೊತ್ತಿಲ್ಲ. `ಹೆಚ್ಚು ದುಡ್ಡು ಕೊಟ್ರೆ ಮರಳು ಸಿಗ್ತಾವೆ ಬಿಡ್ರಿ...ನಮಗಂತೂ ಏನೂ ತೊಂದ್ರೆ ಆಗಿಲ್ರಿ...ಕೆಲಸ ನಡೆದೈತಿ' ಎಂದು ರಾಜ್‌ನಗರದ ಮೇಸ್ತ್ರಿ ಮುನಿಯಪ್ಪ  ನಿರುಮ್ಮಳವಾಗಿ ಹೇಳುತ್ತಾರೆ.

ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘದ ಅಧ್ಯಕ್ಷ  ಶಶಿಧರ ಕೊರವಿ ಪ್ರಕಾರ ಹು-ದಾ ಅವಳಿ ನಗರದಲ್ಲಿ ಎಲ್ಲಿಯೂ ಹೊರಗಿನಿಂದ ಮರಳು ಲಾರಿ ಪ್ರವೇಶ ಮಾಡುತ್ತಿಲ್ಲ. ಎಲ್ಲೋ 2-3 ಲಾರಿಗಳಷ್ಟು ಮರಳನ್ನು ಮೊದಲೇ ತಂದಿಟ್ಟುಕೊಂಡವರು ಅದನ್ನು ಸ್ವಲ್ಪ ಹೆಚ್ಚಿನ ದರಕ್ಕೆ ಟ್ರ್ಯಾಕ್ಟರ್‌ಗಳಲ್ಲಿ ಲೋಡ್ ಮಾಡಿ ಹಾಕಿ ಕೊಡುತ್ತಿರಬಹುದು.

ಅದರ ಹೊರತಾಗಿ ಎಲ್ಲಿಯೂ ಮರಳು ಲಾರಿಗಳು ಸಾಗಣೆ ಆಗುತ್ತಿಲ್ಲ. ಹಾಗಂತ ಕಟ್ಟಡ ನಿರ್ಮಾಣ ಮಾಡುವವರಿಗೆ ಮಾತ್ರವಲ್ಲ ಸಾವಿರಾರು ಕಾರ್ಮಿಕರಿಗೂ ಬಹಳ ತೊಂದರೆಯಾಗಿದೆ. ಆದರೆ ನಮ್ಮ ಬೇಡಿಕೆ ಈಡೇರುವವರೆಗೆ ಮಣಿಯುವುದಿಲ್ಲ ಎನ್ನುತ್ತಾರೆ.

ಬೇಡಿಕೆ ಈಡೇರುವವರೆಗೂ ಮುಷ್ಕರ
ಹುಬ್ಬಳ್ಳಿ -ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 600-700 ಮರಳು ಸಾಗಣೆ ಲಾರಿಗಳಿವೆ. ಕನಿಷ್ಠ 500 ಲಾರಿಗಳಷ್ಟು ಮರಳಿಗೆ ದಿನವೂ ಬೇಡಿಕೆ ಇದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಗೃಹ ಸಚಿವರು ಮತ್ತು ಲೋಕೋಪಯೋಗಿ ಸಚಿವರೊಂದಿಗೆ ನಮ್ಮ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಿತು. ಆದರೆ ನಮ್ಮ ಎಲ್ಲ ಬೇಡಿಕೆ ಈಡೇರಿಕೆಯಾಗುವ ಭರವಸೆ ಅಲ್ಲಿ ಸಿಗಲಿಲ್ಲ. ಹೀಗಾಗಿ ನಮ್ಮ ಮುಷ್ಕರ ಅನಿಶ್ಚಿತವಾಗಿದೆ.
-ಶಶಿಧರ ಕೊರವಿ, ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘದ ಅಧ್ಯಕ್ಷ .

ಪ್ರಮುಖ ಬೇಡಿಕೆಗಳೇನು?
ಏಕರೂಪದ ಮರಳು ನೀತಿ ಜಾರಿ .
ಮರಳು ಸಾಗಣೆ ವಾಹನಗಳಿಗೆ ಪ್ರತ್ಯೇಕ ಜಿಪಿಎಸ್ ಬೇಡ.
ಲಾರಿ ಮಾಲೀಕರ ಮೇಲೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದನ್ನು ಸರ್ಕಾರ ಕೈ ಬಿಡಬೇಕು.
ಕಂದಾಯ ಇಲಾಖಾ ಕಾನೂನು ಅಡಿಯಲ್ಲಿ ಮರಳು ಸಾಗಣೆದಾರರ ಮೇಲೆ ಕ್ರಮ ಜರುಗಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT