ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

Last Updated 18 ಜುಲೈ 2013, 10:29 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಗೌಡಗೆರೆ ಹೋಬಳಿ ಹೇರೂರು, ಮುದ್ದೇನಹಳ್ಳಿ, ಹೊಸೂರು ಗ್ರಾಮಗಳ ವ್ಯಾಪ್ತಿಯ ಸುವರ್ಣಮುಖಿ ನದಿ ಪಾತ್ರದಲ್ಲಿ ಟೆಂಡರ್ ಅನ್ವಯ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು. ಈ ಭಾಗದ ಮರಳು ಗಣಿಗಾರಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ ತಾವರೆಕೆರೆ, ಹುಣಸೆಹಳ್ಳಿ, ಹೊಸೂರು, ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮಂಗಳವಾರ ಹೇರೂರಿನಲ್ಲಿ ಪ್ರತಿಭಟನೆ ನಡೆಸಿದರು.

ಕೆಲ ದಂಧೆಕೋರರನ್ನು ಓಲೈಸುತ್ತಿರುವ ಸರ್ಕಾರ ರೈತರ ಕಷ್ಟ ಆಲಿಸುತ್ತಿಲ್ಲ. ಇಲಾಖೆಗಳೂ ಮರಳು ದಂಧೆಕೋರರ ಪರವಾಗಿವೆ. ಸ್ಥಳೀಯ ರೈತರು, ಸಾಮಾನ್ಯರ ಅರಿವಿಗೆ ಬರದೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಸ್ಥಳೀಯರನ್ನು ಕತ್ತಲಲ್ಲಿ ಇಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
1998ರಿಂದಲೂ ಈ ಭಾಗದಲ್ಲಿ ಟೆಂಡರ್ ಮೂಲಕ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಹಿಂದೆಯೂ ರೈತರೆಲ್ಲ ಸೇರಿ ಪ್ರತಿಭಟನೆ ನಡೆಸಿ ಎಸಿ, ಡಿಸಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮೂರು ಬಾರಿ ಟೆಂಡರ್ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆಗ ಸಚಿವ ಜಯಚಂದ್ರ ಕೂಡಾ ನಮ್ಮಟ್ಟಿಗಿದ್ದರು ಎಂದು ರೈತ ನಾಗರಾಜು ತಿಳಿಸಿದರು.

ಪುರಸಭೆ ಸದಸ್ಯರ ಮನೆಯಲ್ಲಿ ಪೌರ ಕಾರ್ಮಿಕರ ಕೆಲಸ: ಆಕ್ರೋಶ
ಮಧುಗಿರಿ: ಕೆಲ ಪುರಸಭೆ ಸದಸ್ಯರ ಮನೆಯಲ್ಲಿ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಪಟ್ಟಣದ ಸ್ವಚ್ಛತೆಗೆ ತೊಂದರೆ ಉಂಟಾಗುತ್ತಿದೆ ಎಂದು ನಾಗರಿಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು ವೇತನ, ಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಪುರಸಭೆ ಮುಖ್ಯಾಧಿಕಾರಿ ಬಿ.ಶುಭಾ ಕರೆದಿದ್ದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು ಸದಸ್ಯರ ಮನೆ ಕೆಲಸಕ್ಕೆ ಹೋಗದೆ, ಪಟ್ಟಣದ ಸ್ವಚ್ಛತೆ ಕೈಗೊಳ್ಳುವಂತೆ ಕಾರ್ಮಿಕರಿಗೆ ಸೂಚಿಸಿ ಎಂದು ಆಗ್ರಹಿಸಿದರು.

ಸಭೆಯಲ್ಲಿ ಪರಿಸರ ಎಂಜಿನಿಯರ್ ಹಾಗೂ ಕಾರ್ಮಿಕರ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ಏಜೆನ್ಸಿ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಮೂವರು ಡಿ ದರ್ಜೆ ನೌಕರರನ್ನು ಸ್ವಚ್ಛತೆ ಕಾರ್ಯಕ್ಕೆ ನಿಯೋಜಿಸುವಂತೆ ಆರೋಗ್ಯ ನಿರೀಕ್ಷಕ ಶ್ರೀನಾಥ್‌ಬಾಬು ಅವರಿಗೆ ಸೂಚಿಸಿ, ಅಗತ್ಯ ಸೌಕರ್ಯ ಒದಗಿಸುವಂತೆ ಹೇಳಿದರು.

ಸ್ವಚ್ಛತೆ ಗುತ್ತಿಗೆ ಪಡೆದ ಮಂಜುನಾಥ ಮಾತನಾಡಿ ನಮ್ಮ ಒಪ್ಪಂದ ಮುಗಿದಿದೆ. ಪಿ.ಎಫ್ ಹಣ ಕಟ್ಟಿದ್ದೇವೆ. ಹಿಂದಿನ ಗುತ್ತಿಗೆದಾರರು ಮಾಡಿದ ಮೋಸಕ್ಕೆ ನಾವು ಹೊಣೆಗಾರರಲ್ಲ ಎಂದು ತಿಳಿಸಿದರು. ಹೊಸದಾಗಿ ಟೆಂಡರ್ ಕರೆದು ಗುತ್ತಿಗೆ ನೀಡಲಾಗುವುದು. ಅಲ್ಲಿವರೆಗೆ ಸಹಕರಿಸಿ ಎಂದು ಮುಖ್ಯಾಧಿಕಾರಿ ಶುಭಾ ಮನವಿ ಮಾಡಿದರು.

ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಜುಬೇದಾ, ಮಂಜುನಾಥ್, ಶ್ರೀರಾಮು, ಮೂಡ್ಲಗಿರೀಶ್, ನಾರಾಯಣಪ್ಪ, ಪರಿಸರ ಎಂಜಿನಿಯರ್ ಸೌಮ್ಯ, ಆರೋಗ್ಯ ನಿರೀಕ್ಷಕ ಶ್ರೀನಾಥಬಾಬು ಇತರರು ಉಪಸ್ಥಿತರಿದ್ದರು.

ಕೃಷಿ ವಿಮೆ ಅವಧಿ ವಿಸ್ತರಣೆ
ತುಮಕೂರು: ಜಿಲ್ಲೆಯಲ್ಲಿ ಪ್ರಾಯೋಗಿಕ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ ಕೊನೆ ದಿನಾಂಕವನ್ನು ಜುಲೈ 20ರ ವರೆಗೆ ವಿಸ್ತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜುಲೈ 1ರಿಂದ ಜುಲೈ 20ರ ವರೆಗೆ ಬಿತ್ತನೆಯಾದ ಬೆಳೆಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗ ಆರೋಗ್ಯವಂತವಾಗಿರುವ ಬೆಳೆಗಳಿಗೆ ಮಾತ್ರ ವಿಸ್ತರಿಸಿದ ವಿಮೆ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT