ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಾಗಣೆ ಲಾರಿಗೆ ಜಿಪಿಎಸ್ ಕಡ್ಡಾಯ

ಜ. 10ರೊಳಗೆ ಅಳವಡಿಕೆಗೆ ಡಿಸಿ ಸೂಚನೆ
Last Updated 13 ಡಿಸೆಂಬರ್ 2012, 11:05 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮರಳು ಸಾಗಣೆ ಮಾಡುವ ಲಾರಿಗಳು ಜಿಪಿಎಸ್ ವ್ಯವಸ್ಥೆಯನ್ನು ಜ. 10ರೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮರಳು ಸಾಗಣೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಎನ್. ಜಯರಾಂ ಬುಧವಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಅಕ್ರಮ ಮರಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮರಳು ಸಾಗಣೆ ಲಾರಿಗಳಿಗೆ ಜಿಪಿಎಸ್ ವ್ಯವಸ್ಥೆ ಯನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಿ, ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮರಳು ಸಾಗಣೆ ಮಾಡುವ ಲಾರಿಗಳು ತಪ್ಪದೇ ಜಿಪಿಎಸ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಲಾರಿ ಮುಂಭಾಗದಲ್ಲಿ ಹಳದಿ ಬಣ್ಣದಿಂದ ಅಳವಡಿಸಿರುವ ಸಂಬಂಧ ಮಾಹಿತಿ ನಮೂದು ಮಾಡಬೇಕು. ಅಲ್ಲದೆ ಆರ್.ಟಿ.ಓ. ಬಳಿ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ಈ ಹಿಂದೆ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್‌ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಿ ಪಹರೆ ಬಿಗಿಗೊಳಿಸಬೇಕು. ಅಕ್ರಮ ಮರಳು ಸಾಗಣೆಗೆ ಅಧಿಕಾರಿಗಳ ಸಮನ್ವಯ ಅಗತ್ಯವಾಗಿದೆ. ಅಕ್ರಮ ಮರಳು ಸಾಗಣೆ ಕಾರ್ಯಕ್ಕೆ ಸಹಕರಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮರಳು ಸಾಗಾಣಿಕೆಗೆ ನಿಗಾ ವಹಿಸಲು ಪ್ರಸ್ತುತ ಇರುವ ಚೆಕ್ ಪೋಸ್ಟ್‌ಗಳ ಜತೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ಗಳನ್ನೂ ಸಹ ಬಳಸಿಕೊಳ್ಳಬೇಕು. ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿ ಮರಳು ಸಾಗಣೆ ಪರಿಶೀಲನೆ ಉಸ್ತುವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು

ಜಿಲ್ಲೆಯ ಯಾವುದೇ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆ ನಡೆಸಬೇಕು. ಪೊಲೀಸರ ಸಹಾಯವನ್ನು ಪಡೆಯಬೇಕು. ಅಕ್ರಮ ಸಾಗಣೆಗೆ ಬಳಸುವ ವಾಹನಗಳನ್ನು ವಶಪಡಿಸಿಕೊಳ್ಳಬೇಕು. ಕಾರ್ಯಾಚರಣೆ ಬಳಿಕ ಕಡ್ಡಾಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಮುಂದಿನ ಕ್ರಮ ಜರುಗಿಸಬೇಕು ಎಂದರು.

ಮರಳು ವಿತರಣೆ ಸಂಬಂಧ ನೀಡಿರುವ ಪರ್ಮಿಟ್‌ಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಪರ್ಮಿಟ್ ತಿದ್ದುಪಡಿ ಇನ್ನಿತರ ಅನುಮಾನ ಅಂಶಗಳು ಕಂಡು ಬಂದರೆ ಮರಳು ಸಾಗಣೆಗೆ ಅನುಮತಿ ಕೊಡಬಾರದು. ಕೂಲಂಕಷ ಪರಿಶೀಲನೆ ನಡೆಸಿ, ಅಧಿಕೃತ ಪರ್ಮಿಟ್ ಪಡೆಯಲಾಗಿದೆಯೇ ಎಂದು ಖಾತರಿ ಮಾಡಿಕೊಂಡ ಬಳಿಕವೇ ಮರಳು ಸಾಗಣೆಗೆ ಅವಕಾಶ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಪದ್ಮನಾಭಾಚಾರ್, ತಹಶೀಲ್ದಾರರಾದ ಸುರೇಶ್ ಕುಮಾರ್, ಚಂದ್ರಕಾಂತ ಭಜಂತ್ರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಜಯ್ ಕುಮಾರ್, ಜಿಲ್ಲಾ ಪರಿಸರ ಅಧಿಕಾರಿ ಶಕುಂತಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT