ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಭೂಮಿಯಲ್ಲಿ ಮಿಂಚಿದ ಕನ್ನಡಿಗರು

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಥಾರ್ ಮರುಭೂಮಿ ಸೇರಿದಂತೆ ಉತ್ತರ ಭಾರತದ ದುರ್ಗಮ ಹಾದಿಯಲ್ಲಿ ಕಳೆದ ಆರು ದಿನಗಳ ಕಾಲ ನಡೆದ ಮಾರುತಿ ಸುಜುಕಿ `ಡಸರ್ಟ್ ಸ್ಟಾರ್ಮ್~ ಮೋಟಾರ್ ರ‌್ಯಾಲಿಯಲ್ಲಿ ಕರ್ನಾಟಕದ ಚಾಲಕರು ತಮ್ಮ ಅಸಾಧಾರಣ ಪ್ರತಿಭೆ ಹಾಗೂ ಸಾಹಸ ಮೆರೆಯುವ ಮೂಲಕ ಗಮನಸೆಳೆದರು.

ಮಂಗಳೂರಿನ ಅಶ್ವಿನ್ ನಾಯಕ್, ಮೂಸಾ ಶರೀಫ್, ಮೈಸೂರಿನ ಲೋಹಿತ್ ಅರಸ್, ಪಿವಿಎಸ್ ಮೂರ್ತಿ ಅವರಲ್ಲಿ ಪ್ರಮುಖರಾಗಿದ್ದಾರೆ. ಅಶ್ವಿನ್ ಚಾಂಪಿಯನ್ ತಂಡದ ಭಾಗವಾಗಿದ್ದರೆ, ಅರಸ್-ಮೂರ್ತಿ ಜೋಡಿ ತೃತೀಯ ಸ್ಥಾನ ಪಡೆಯಿತು. ಮೂಸಾ ಪ್ರಶಸ್ತಿ ಪಡೆಯದಿದ್ದರೂ ಅದ್ವಿತೀಯ ಚಾಲಕ ಗೌರವ್ ಗಿಲ್ ಹಿಂದಿನ ಶಕ್ತಿಯಾಗಿದ್ದರು.

ರ‌್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಥಂಡರ್ ಬೋಲ್ಟ್ ತಂಡದ ಸಹ ಚಾಲಕ ಅಶ್ವಿನ್‌ಕಡಲ ಕಿನಾರೆಯಾದ ಮಂಗಳೂರಿನ ಯಡಪದವು ಎಂಬ ಊರಿನವರು. ಸುರೇಶ್ ರಾಣಾ ಅವರ ಯಶಸ್ಸಿನಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ನೆವಿಗೇಟರ್ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಅಶ್ವಿನ್, ತಮ್ಮ ಕರಾರುವಾಕ್ಕಾದ ಲೆಕ್ಕಾಚಾರಗಳ ಮೂಲಕ ಮೋಟಾರ್ ರ‌್ಯಾಲಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ರ‌್ಯಾಲಿ ಸಂದರ್ಭದಲ್ಲಿ ರಾಣಾ ತಮ್ಮ ಜಿಪ್ಸಿ ಚಲಾಯಿಸುವಾಗ ಅವರ ಎಡಬದಿಯಲ್ಲಿ ಕುಳಿತುಕೊಳ್ಳುವ ಅಶ್ವಿನ್, ಥಂಡರ್ ಬೋಲ್ಟ್ ತಂಡದ ಥಿಂಕ್ ಟ್ಯಾಂಕ್ ಎನಿಸಿದ್ದಾರೆ. ನಾವೀಗ ಯಾವ ಹಂತದಲ್ಲಿದ್ದೇವೆ, ಎತ್ತ ಸಾಗಬೇಕು, ಸಮಯ ಎಷ್ಟಿದೆ, ಎದುರಾಳಿಗಳ ಸವಾಲು ಹೇಗಿದೆ ಎಂಬುದನ್ನೆಲ್ಲ ತಿಳಿಸುತ್ತಾ ಚಾಲಕನ ಕೆಲಸ ಹಗುರ ಮಾಡುತ್ತಾರೆ. ಮರಭೂಮಿಯಲ್ಲಿ ಎಲ್ಲಿಯೋ ಸಿಕ್ಕಿಬಿದ್ದು ದಿಕ್ಕುಗಾಣದಂತೆ ಆಗಿದ್ದಾಗ ರಾಣಾಗೆ ಧೈರ್ಯ ತುಂಬಿ ಮುನ್ನಡೆಸಿದ್ದು ಕೂಡ ಇದೇ ಅಶ್ವಿನ್.

`ಅಶ್ವಿನ್ ಇಲ್ಲದಿದ್ದರೆ ಇಷ್ಟೊಂದು ಪ್ರಶಸ್ತಿ ಗೆಲ್ಲುವುದು ನನ್ನಿಂದ ಆಗುತ್ತಿರಲಿಲ್ಲ. ಪಾತ್ರಧಾರಿಯಂತೆ ನಾನು ತೆರೆ ಮೇಲೆ ವಿಜೃಂಭಿಸಿದರೆ, ಸೂತ್ರಧಾರಿಯಂತೆ ಅವರು ನೇಪಥ್ಯದಲ್ಲಿ ಉಳಿಯುತ್ತಾರೆ~ ಎಂದು ರಾಣಾ ಅತ್ಯಂತ ವಿನೀತರಾಗಿ ಹೇಳುತ್ತಾರೆ.

ಮಂಗಳೂರಿನಲ್ಲಿ ನಿರ್ಮಲ ಇನ್ಫೋವರ್ಲ್ಡ್ ಎಂಬ ಐಟಿ ಕಂಪೆನಿ ಹೊಂದಿರುವ ಅಶ್ವಿನ್ ಅವಿವಾಹಿತ. `ಐ ಆ್ಯಮ್ ಹ್ಯಾಪಿಲಿ ಸಿಂಗಲ್~ ಎಂದು ಕಣ್ಣು ಮಿಟುಕಿಸುತ್ತಾರೆ ಈ ಅರ್ಹ ಬ್ಯಾಚುಲರ್. ಅಪ್ಪ-ಅಮ್ಮನ ಜತೆ ಯಡಪದವು ಗ್ರಾಮದ ಫಾರ್ಮ್ ಹೌಸ್‌ನಲ್ಲಿ ವಾಸವಾಗಿರುವ ಅಶ್ವಿನ್, ವಾರಾಂತ್ಯದಲ್ಲಿ ತಪ್ಪದೇ ರ‌್ಯಾಲಿಗೆ ಹೊರಡುತ್ತಾರೆ. ದಕ್ಷಿಣ ಭಾರತದಲ್ಲಿ ಚಾಂಪಿಯನ್‌ಷಿಪ್‌ಗಳನ್ನು ಸಂಘಟಿಸುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸಲು ಅವರು ಶ್ರಮಿಸುತ್ತಿದ್ದಾರೆ.

`ಮಹಾಭಾರತದಲ್ಲಿ ಕೃಷ್ಣನಿದ್ದಂತೆ ನಮ್ಮ ಅಶ್ವಿನ್. ಆತಂಕದ ಸನ್ನಿವೇಶದಲ್ಲಿ ಅವರ ಮಾರ್ಗದರ್ಶನ ನನಗೆ ಸದಾ ಇದ್ದೇ ಇರುತ್ತದೆ. ಅವರ ಕರಾರುವಾಕ್ಕಾದ ಲೆಕ್ಕಾಚಾರದಿಂದ ನನ್ನ ನಿಶ್ಚಿಂತೆಯಿಂದ ಜಿಪ್ಸಿ ಓಡಿಸುವಂತಾಗಿದೆ~ ಎಂದು ರಾಣಾ ತಮ್ಮ ಸಹ ಚಾಲಕನಿಗೆ ಮನಬಿಚ್ಚಿ ಕಾಂಪ್ಲಿಮೆಂಟ್ ಕೊಡುತ್ತಾರೆ.

`ರ‌್ಯಾಲಿಯಲ್ಲಿ ಮೊದಲ ಸ್ಥಾನ ಗಳಿಸಿದಾಗ ಚಾಲಕನೇ ಮಿಂಚುವುದು ಎಂಬುದು ನನಗೆ ಗೊತ್ತು. ಇದರಿಂದ ನನಗೆ ನಿರಾಸೆ ಏನೂ ಆಗಿಲ್ಲ ಇರುತ್ತೇನೆ~ ಎನ್ನುತ್ತಾರೆ ಅಶ್ವಿನ್.

ಇನ್ನು ಮೈಸೂರಿನ ಲೋಹಿತ್ ಮೆಕ್ಯಾನಿಕಲ್ ಎಂಜಿನಿಯರ್. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಕೊನೆಗೆ ರ‌್ಯಾಲಿ ಗೀಳು ಹಚ್ಚಿಕೊಂಡಿದ್ದು ಎಲ್ಲವೂ ಮೈಸೂರಿನಲ್ಲಿಯೇ. ತಮ್ಮ ಹೆಸರಿಗೆ ಅಂಟಿಸಿಕೊಂಡಿರುವ `ಅರಸ್~ ಅವರ ಜೀವನ ಶೈಲಿಗೂ ಸೂಚಕವಾಗಿದೆ. ದೊಡ್ಡ ಉದ್ಯಮಿಯಾಗಿರುವ ಲೋಹಿತ್ ಕೂಡ ಅವಿವಾಹಿತ. ಅಸಾಧಾರಣ ಸಾಹಸ ಪ್ರವೃತ್ತಿ ಹೊಂದಿರುವ ಲೋಹಿತ್, ತಾಂತ್ರಿಕವಾಗಿಯೂ ಪಳಗಿದ ಎಂಜಿನಿಯರ್. ಮಹಿಂದ್ರಾ ಸಂಸ್ಥೆಗಾಗಿ ಅವರು ಅಭಿವೃದ್ಧಿಪಡಿಸುತ್ತಿರುವ ಹೊಸ ವಿನ್ಯಾಸದ ಕಾರನ್ನೇ ರ‌್ಯಾಲಿಗೆ ತಂದಿದ್ದರು.

ಎದುರಾಳಿ ಚಾಲಕನೊಬ್ಬನ ತಪ್ಪಿಗೆ ಗಂಟೆಗಟ್ಟಲೆ ಸಮಯ ಕಳೆದುಕೊಂಡ ಲೋಹಿತ್, ಅಂಪೈರ್‌ಗಳು ಲೆಕ್ಕಾಚಾರ ಮಾಡುವಾಗಲೂ ತುಸು ಅನ್ಯಾಯ ಅನುಭವಿಸಿದಂತೆ. ಆ ಎಲ್ಲ ಸಿಟ್ಟನ್ನು ಅವರು ರ‌್ಯಾಲಿ ಕೊನೆಯ ಎರಡು ದಿನದಲ್ಲಿ ತೋರಿಸಿದರು. ಅಂತಿಮವಾದ ಎರಡು ಲೆಗ್‌ಗಳಲ್ಲಿ ಅವರೇ ಮೊದಲ ಸ್ಥಾನ ಗಳಿಸಿದರೂ, ಮೊದಲ ಮೂರು ಹಂತದ ಹಿನ್ನಡೆಯಿಂದ ಲೋಹಿತ್ ಮೂರನೇ ಸ್ಥಾನಕ್ಕೆ ಜಾರಬೇಕಾಯಿತು. ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ರ‌್ಯಾಲಿಯಲ್ಲಿ ಪ್ರಶಸ್ತಿ ಗೆದ್ದ ಹೆಮ್ಮೆಯ ಕನ್ನಡಿಗ ಅವರು.

ಇನ್ನೂ ಹಲವು ಜನ ಕನ್ನಡಿಗರು ಆರು ದಿನಗಳ ಆ ಮಹಾ ರ‌್ಯಾಲಿಯಲ್ಲಿ ಮರಭೂಮಿ ತುಂಬಾ ತಮ್ಮ ಶರವೇಗದ ಸಂಚಾರದಿಂದ ದೂಳು ಎಬ್ಬಿಸಿದ್ದರು. ಪ್ರಶಸ್ತಿ ಪಡೆಯಲಾಗದಿದ್ದರೂ ಕೆಚ್ಚೆದೆಯಿಂದ ವಾಹನ ಚಲಾಯಿಸಿದ್ದಲ್ಲದೆ ದಾರಿಯುದ್ದಕ್ಕೂ ವಿಶಿಷ್ಟ ಅನುಭವ ಪಡೆದ ಮಧುರ ಸ್ಮರಣೆಗಳನ್ನು ಅವರು ಹೊತ್ತುಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT