ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತೇನೆಂದರ ಮರೆಯಲಿ ಹ್ಯಾಂಗ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಕರಿಮಾಯಿ~ ಸಿನಿಮಾ ಬಗ್ಗೆ ಛಾಯಾಗ್ರಾಹಕ ಸುಂದರನಾಥ ಸುವರ್ಣರ ನೆನಪುಗಳು...

ಕನ್ನಡ ಸಿನಿಮಾಗಳ ಪ್ರತಿಭಾಶಾಲಿ ಛಾಯಾಗ್ರಾಹಕ, ದೃಶ್ಯ ಸಂಯೋಜಕ ಸುಂದರನಾಥ ಸುವರ್ಣ ತಮ್ಮ ಮಾನಸ ಗುರು, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಸಿನಿಪ್ರಯೋಗಗಳಿಗೆ ಆರಂಭದಲ್ಲಿ ಸಾಥ್ ನೀಡಿದವರು. ಇಲ್ಲಿ ಅವರು ಕಂಬಾರರ ಆರಂಭದ ಸಿನಿಪ್ರಯತ್ನಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾರೆ.

ಸುವರ್ಣ ಅವರಿಗೆ ಕಂಬಾರರು 1976ರಲ್ಲಿ ಸಿದ್ಧವಾದ `ಉಡುಗೊರೆ~ ಸಿನಿಮಾಕ್ಕೆ ಸಂಗೀತ ನೀಡಿದಾಗಿನಿಂದಲೂ ಪರಿಚಯ. `ಕಂಬಾರರು ಅದಕ್ಕೆ ಸಂಗೀತ ನೀಡಿದ್ದಲ್ಲದೆ ಹಾಡುಗಳನ್ನೂ ಬರೆದಿದ್ದರು.

ಇದರ ವಿಶೇಷ ಎಂದರೆ ನಟ ಸುರೇಶ ಹೆಬ್ಳೀಕರ ಅವರಿಂದ ಹಾಡಿಸಿದ್ದು. ಅದಕ್ಕೆ ಮಹೇಶ್ ಸ್ವಾಮಿ ನಿರ್ದೇಶನವಿತ್ತು. ಕಲ್ಯಾಣಕುಮಾರ್ ನಾಯಕರಾಗಿದ್ದರೆ, ಉದಯ ಚಂದ್ರಿಕಾ ನಾಯಕಿಯಾಗಿದ್ದರು.

ನಾನು ಆ ಸಿನಿಮಾಕ್ಕೆ ಛಾಯಾಗ್ರಾಹಕನಾಗಿ ಬಂದೆ. ಬಳಿಕ ಅವರು ತಮ್ಮ ಮೊದಲ ಸಿನಿಮಾ `ಕರಿಮಾಯಿ~ಯನ್ನು ನಿರ್ದೇಶಿಸಿದ್ದರು.

ಆದರೆ, ಕಪ್ಪು ಬಿಳುಪಿನ `ಕರಿಮಾಯಿ~ ಬೆಳ್ಳಿತೆರೆಗೆ ಬರಲೇ ಇಲ್ಲ. ಚಿತ್ರೀಕರಣ ಮಾತ್ರ ಆಗಿತ್ತು~ ಎಂದು ಸುವರ್ಣ ಚಿತ್ರರಂಗದಲ್ಲಿ ಕಂಬಾರರ ಮೊದಲ ಸಿನಿಪ್ರಯತ್ನದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.

`ಮಜಾ ಎಂದರೆ `ಕರಿಮಾಯಿ~ ಸಿನಿಮಾ ಆದ ಮೇಲೆ ಅದು ನಾಟಕ ಆಯಿತು. ಈ ಸಿನಿಮಾದ ಚಿತ್ರೀಕರಣವನ್ನು ನಾವು ಬೆಳಗಾವಿಯ ಗೋಕಾಕ್‌ನ ತವಹ ಎಂಬ ಹಳ್ಳಿಯಲ್ಲಿ ಮಾಡಿದೆವು. ಅದು ಕಂಬಾರರ ಊರು ಘೋಡಗೇರಿಯ ಪಕ್ಕದ ಹಳ್ಳಿ.

ಅಲ್ಲಿ ವಿದ್ಯುತ್ ಇರಲಿಲ್ಲ. ಆಗೆಲ್ಲ ಚಿತ್ರೀಕರಣಕ್ಕೆ ಬೇಕಾದ ಜನರೇಟರ್ ಅನ್ನು ಮದ್ರಾಸ್‌ನಿಂದ ತರಿಸಬೇಕಿತ್ತು. ಸದ್ದು ಮಾಡುವ ಜನರೇಟರ್ ತೆಗೆದುಕೊಂಡು ನಾವು ಚಿತ್ರೀಕರಣಕ್ಕಾಗಿ ಆ ಹಳ್ಳಿಗೆ ಹೋದೆವು.
 
ಅದು ಎಂಥ ಸದ್ದು ಮಾಡುತ್ತಿತ್ತೆಂದರೆ ಅದರ ಯಮ ಸದ್ದಿಗೆ ಊರಿನಲ್ಲಿನ ಹಸುಗಳು, ಕುರಿಗಳು, ನಾಯಿಗಳು, ಕೋಳಿಗಳು ಊರನ್ನು ತೊರೆದು ಓಡಿಹೋದವು! ಜನರೇಟರ್ ಸದ್ದು ನಿಲ್ಲುವವರೆಗೆ ಅವು ಅತ್ತ ತಲೆ ಹಾಕಲಿಲ್ಲ.

ಆ ಸದ್ದು ಕೇಳಿ ಜನರು `ಅದೇನು~ ಎಂದು ನೋಡಲು ಬಂದರು~ ಎನ್ನುವ ಸುವರ್ಣ, ಅದೇ ಸದ್ದಿನಲ್ಲಿ ಕಂಬಾರರು ಚಿತ್ರೀಕರಣ ನಡೆಸಿದ್ದನ್ನು ಹೇಳಿಕೊಳ್ಳುತ್ತಾರೆ.

`ಕರಿಮಾಯಿ~ಗೆ ಮಾನು ನಾಯಕರಾಗಿ ನಟಿಸಿದ್ದರು. ಚಿತ್ರೀಕರಣಲ್ಲಿ ಕೂಡ ಅವರು ಕಲ್ಪಿಸಿಕೊಂಡದ್ದು ಬರಬೇಕಿತ್ತು. ಛಾಯಾಗ್ರಹಣದಲ್ಲಿ ಅವರು ನೆರಳು ಬೆಳಕಿನ ಚೆಲ್ಲಾಟವನ್ನು, ಬೆಳಕಿನ ಲಾಸ್ಯವನ್ನು ಬಯಸುತ್ತಿದ್ದರು.

ದೃಶ್ಯದಲ್ಲಿ ಕೆಲವೆಡೆ ಮಬ್ಬಾಗಿದ್ದು, ಏನೋ ಇದೆ ಎಂದು ಎನಿಸಬೇಕು ಎನ್ನುವ ಬೆಳಕಿನ ಸಂಯೋಜನೆ ಬೇಕು ಎನ್ನುತ್ತಿದ್ದರು. ಹುಡುಗಿಯಬ್ಬಳ ಕೂದಲನ್ನು ಚೆಲ್ಲಿ ತಮಗೆ ಬೇಕಾದ ದೃಶ್ಯವನ್ನು ತೆಗೆದುಕೊಂಡಿದ್ದು ನನಗೆ ಈಗಲೂ ನೆನಪಿದೆ.

ಅವರಿಗೆ ನೈಸರ್ಗಿಕ ಬೆಳಕಿನಲ್ಲಿ ಮೂಡುವ ದೃಶ್ಯಗಳು ಇರಬೇಕಾಗಿತ್ತು~ ಎಂದು ಕಂಬಾರರ ಸಿನಿಕಲ್ಪನೆಯನ್ನು ಸುವರ್ಣ ಮೊನ್ನೆ ನಡೆದದ್ದು ಎಂಬಂತೆ ಹೇಳುತ್ತಾರೆ.
ಕಂಬಾರರು ಸ್ವತಃ ಒಳ್ಳೆಯ ಹಾಡುಗಾರರು.

ಅವರು ಶಿವಮೊಗ್ಗ ಸುಬ್ಬಣ್ಣ ಅವರಿಂದ `ಕಾಡು ಕುದುರೆ ಓಡಿ ಬಂದಿತ್ತಾ...~ ಹಾಡಿಸುವ ಮೊದಲು `ಮುಂಗೋಳಿ ಕೂಗ್ಯಾವು...~ ಹಾಡಿಸಿದ್ದರು~ ಎನ್ನುವ ಸುವರ್ಣ ಮದ್ರಾಸ್‌ನಲ್ಲಿ ಅವರ ಸಿನಿಮಾಗಳ ಹಾಡಿನ ಧ್ವನಿ ಮುದ್ರಣ ಆಗುವಾಗಲೆಲ್ಲ ಸಾಥ್ ನೀಡಿದ್ದಾರೆ.

ಅವರ ಮುಂದಿನ ಪ್ರಯತ್ನಗಳಾದ `ಸಂಗೀತಾ~, `ಕಾಡು ಕುದುರೆ~ಗಳಿಗೆ ತಮ್ಮ ಬೇರೆ ಸಿನಿಮಾಗಳ ಕೆಲಸಗಳಿಂದಾಗಿ ತೊಡಗಿಕೊಳ್ಳಲಾಗಿಲ್ಲ.ಇದಲ್ಲದೆ ಕಂಬಾರರು ನಿರ್ದೇಶಿಸಿದ ಅನೇಕ ಕಿರುಚಿತ್ರಗಳಿಗೆ, ಜಾನಪದ ವಸ್ತು ಆಧಾರಿತ ಸರಣಿಗೆ ಛಾಯಾಗ್ರಹಣ ಮಾಡಿದ್ದಾರೆ.
 
ಸರ್ಕಾರಕ್ಕೆ ಕುಟುಂಬ ಯೋಜನೆ ಕುರಿತಾಗಿ ಮಾಡಿಕೊಟ್ಟ `ಸಾಕು ಮಾಡು ಶಿವನೆ~ ಎಂಬ ಕಿರುಚಿತ್ರ ಅದರ ವ್ಯಂಗ್ಯ, ತಮಾಷೆಯ ಹೆಸರಿನಿಂದಾಗಿ ಅವರ ಮನದಲ್ಲಿ ಉಳಿದುಕೊಂಡಿದೆ!

ಕನ್ನಡದ ಲೇಖಕರಾದ ತೇಜಸ್ವಿ, ಲಂಕೇಶ್ ಅವರಿಗೆ, ಅವರ ಸಾಹಿತ್ಯಕ್ಕೆ ನಿಕಟವಾಗಿದ್ದ ಸುವರ್ಣ ಕಂಬಾರರ ಸಹವಾಸದಲ್ಲಿ ಬೆಳೆದವರು. ಜ್ಞಾನಪೀಠ ಬಂದ ಸಂದರ್ಭದಲ್ಲಿ ತಮ್ಮ ಗುರುವಿನ ಆರ್ದ್ರ ಪ್ರೀತಿಯೊಂದಿಗೆ ತಮಾಷೆ, ವ್ಯಂಗ್ಯ, ಅವರ ಸಾಹಿತ್ಯದ ದೃಶ್ಯ ವೈಭವವನ್ನೂ ನೆನಪಿಸಿಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT