ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೆ ಡಿಮ್ಯಾಂಡು!

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮತ್ತೊಂದು ಚಿತ್ರದ ಪ್ರಸವ ವೇದನೆ ಕೋಮಲ್ ಮುಖದಲ್ಲಿ ತುಂಬಿತ್ತು. `ಕಳ್ ಮಂಜ~ ಚಿತ್ರ ಬಿಡುಗಡೆಯಾದಾಗ ತಮ್ಮ ಚಿತ್ರಕ್ಕಾಗಿ ಥಿಯೇಟರ್‌ಗಳಿಗೆ ಪರದಾಡುವ ಪರಿಸ್ಥಿತಿ ಅವರಿಗೆ ಇತ್ತು. ಈಗ ಕಾಲ ಬದಲಾಗಿದೆ.
 
`ಮರ್ಯಾದೆ ರಾಮಣ್ಣ~ ಚಿತ್ರಕ್ಕಾಗಿ ರಾಜ್ಯದ ಕೆಲವು ಭಾಗಗಳ ಚಿತ್ರಮಂದಿರದ ಮಾಲೀಕರು ದುಂಬಾಲು ಬಿದ್ದಿರುವುದೇ ಇದಕ್ಕೆ ಸಾಕ್ಷಿ. ಖುದ್ದು ಕೋಮಲ್ ಈ ವಿಷಯ ಹಂಚಿಕೊಂಡರು.

ಒಂದಿಲ್ಲೊಂದು ಕಾರಣದಿಂದ ಬಿಡುಗಡೆ ಮುಂದೂಡುತ್ತಲೇ ಬಂದ `ಮರ್ಯಾದೆ ರಾಮಣ್ಣ~ ಇಂದು ತೆರೆಕಾಣುತ್ತಿದೆ. ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು ಎನ್ನುವುದು ತಡವಾಗಿದ್ದರಿಂದ ಬಿಡುಗಡೆ ಭಾಗ್ಯ ಸಿಗಲಿಲ್ಲ. ಹಾಗಾಗಿ ಈ ವಾರ ತೆರೆ ಕಾಣಿಸಲು ಸಿದ್ಧವಾಗಿದ್ದ ಚಿತ್ರತಂಡ ಸುದ್ದಿಮಿತ್ರರ ಮುಂದೆ ಕೆಲ ಮಾತುಗಳನ್ನು ಹಂಚಿಕೊಂಡಿತು.

ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಬೇಕೆಂಬ ಉದ್ದೇಶದಿಂದ ಬರೋಬ್ಬರಿ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಿಸಲಾಗುತ್ತಿದೆ. ಹೈದರಾಬಾದ್, ಮುಂಬೈ, ದೆಹಲಿಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

ಇದು ನಟ ಕೋಮಲ್‌ರಲ್ಲಿ ತಳಮಳವನ್ನೂ ಹುಟ್ಟಿಸಿದೆ. ಚಿತ್ರವನ್ನು ಜನ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬುದು ಅವರ ಅಭಿಪ್ರಾಯ.

`ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಚಿತ್ರವೊಂದು ಬಿಡುಗಡೆಯಾದಾಗ ದಕ್ಷಿಣದ ನಟನ ಚಿತ್ರವೊಂದು ದೇಶದೆಲ್ಲೆಡೆ ಬಿಡುಗಡೆಯಾಗುತ್ತದೆಯೇ ಎಂದು ಆಶ್ಚರ್ಯಪಟ್ಟಿದ್ದೆ.

ಈಗ ನನ್ನ ಚಿತ್ರ ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿದೆ~ ಎಂದು ಭಾವುಕರಾಗಿ ಅರೆಕ್ಷಣ ಮಾತು ನಿಲ್ಲಿಸಿದರು. ಹಂಚಿಕೆದಾರರಾದ ಲೀಡರ್ ಪ್ರೊಡಕ್ಷನ್‌ರವರ ಕೈಗುಣ ಚೆನ್ನಾಗಿದೆ. ಹಾಗಾಗಿ ಖಂಡಿತ `...ರಾಮಣ್ಣ~ ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕೋಮಲ್.

ಹೊರರಾಜ್ಯಗಳಲ್ಲೂ ಸಾಕಷ್ಟು ಕನ್ನಡಿಗರಿದ್ದಾರೆ. ಜೊತೆಗೆ ಕೋಮಲ್‌ಗೆ ಒಳ್ಳೆ ಇಮೇಜ್ ಇದೆ. ಹೀಗಾಗಿ ಜನ ಚಿತ್ರವನ್ನು ಖಂಡಿತ ನೋಡುತ್ತಾರೆ. ಅದೇ ಧೈರ್ಯದ ಮೇಲೆ ಇಷ್ಟೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು ನಿರ್ದೇಶಕ ಗುರುಪ್ರಸಾದ್.

ಮಾತಿಗೆ ನಿಂತವರೆಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಹೊಗಳಲು ಪದಗಳನ್ನು ಮೀಸಲಿಟ್ಟರು. ಸಂಕಲನಕಾರ ಬಸವರಾಜ್ ಅರಸ್ ಒಂದು ಹೆಜ್ಜೆ ಮುಂದೆ ಹೋಗಿ ಕೋಮಲ್ ಅವರ ನಟನೆಯನ್ನು ಹಾಲಿವುಡ್ ನಟ ಆಲಿವರ್ ಹಾರ್ಡಿಗೆ ಹೋಲಿಸಿದರು.
ಕೇಳಿದ್ದಕ್ಕೆಲ್ಲ ಇಲ್ಲ ಎನ್ನದ ನಿರ್ಮಾಪಕ ಕುಮರೇಶ್ ಬಾಬು ಅವರನ್ನು ಎಲ್ಲರೂ ಕೊಂಡಾಡಿದರು. ಸಿನಿಮಾ ಒಂದು ವ್ಯವಹಾರವೆಂಬುದು ಭಾಸವಾಗದಂತೆ ಇಡೀ ಚಿತ್ರತಂಡವನ್ನು ಕುಟುಂಬದಂತೆ ಪ್ರೀತಿಯಿಂದ ನೋಡಿಕೊಂಡರು ಎಂದು ನಟರಾದ ರಾಜೇಶ್, ಮನ್‌ದೀಪ್‌ರಾಯ್, ಶಿವಕುಮಾರ್, ನಟಿ ಪುಷ್ಪಾಸ್ವಾಮಿ ಹೊಗಳಿಕೆಯ ಹೊಳೆ ಹರಿಸಿದರು.

ಚಿತ್ರದಲ್ಲಿ ಕೋಮಲ್ ತುಳಿಯುವ ಸೈಕಲ್‌ಗೆ ನಟ ಉಪೇಂದ್ರ ಧ್ವನಿ ನೀಡಿದ್ದಾರೆ. ಸೈಕಲ್ ಹತ್ತಿ ರಾಜ್ಯದಾದ್ಯಂತ ಪ್ರಚಾರ ಮಾಡುವ ಕೋಮಲ್ ಇರಾದೆ ಅವರು ಬೇರೆ ಚಿತ್ರಗಳಲ್ಲಿ ಬಿಜಿಯಾಗಿರುವ ಕಾರಣ ಇನ್ನೂ ಕೈಗೂಡಿಲ್ಲ.

ಆದರೆ ಚಿತ್ರ ಬಿಡುಗಡೆಯಾದ ಬಳಿಕ ಸೈಕಲ್ ತುಳಿಯುವುದು ಮಾತ್ರ ಶತಃಸಿದ್ಧವಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT