ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭೆಯಿಂದ ಅಣ್ಣಿಗೇರಿಗೆ ನೀರು: ಭರವಸೆ

Last Updated 5 ಜುಲೈ 2013, 6:16 IST
ಅಕ್ಷರ ಗಾತ್ರ

ಅಣ್ಣಿಗೇರಿ: `ಊರೊಳಗೆ ಹನಿ ನೀರಿಲ್ಲ. ಯಾವ್ ಬಾವಿನೂ ಸುದ್ದ ಇಲ್ಲ. ಬಾವಿ ನೀರು ಕುಡಿದವ್ರ ಯಾವ ದವಾಖಾನಿಗೆ ಹೋದ್ರೂ ಉಳಿಯಂಗಿಲ್ಲ. ಎಲ್ಲಾ ಹಾಳ ಮಾಡ್ಯಾರ. ರೊಕ್ಕ ಇದ್ದವ್ರ ಎಲ್ಲ್ಯೆರ ನೀರ ತರ‌್ತಾರ. ಇಲ್ದಾರು ಏನ್ ಮಾಡೂದು. ಮಾರಾಕ ಬೇಕಂದ್ರೂ ಊರಾಗ್ ನೀರ ಸಿಗಂಗಿಲ್ಲಾ..'

ಹೀಗೆ ಅಣ್ಣಿಗೇರಿಯ ರೈತ ಯಲ್ಲಪ್ಪ ಮರಬಸಿ ಅವರು ಶಾಸಕ ಎನ್.ಎಚ್. ಕೋನರಡ್ಡಿ ಅವರೆದುರು ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯ ವಾಸ್ತವ ತೆರೆದಿಟ್ಟರು.

ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ಥಿತಿ ತಲುಪಿದೆ. ಜನಸಾಮಾನ್ಯರ ಗೋಳು ಕೇಳುವವರಿಲ್ಲ. ಗಡ್ಡಕ್ಕ ಬೆಂಕಿ ಬಿದ್ದಾಗ ಬಾವಿ ತೋಡಾಕ ಹೊಕ್ಕೀರಿ. ಊರಾನರಿಗೆ ಇದ್ರ ಅರುವು ಇಲ್ಲಾ ಅಂದ್ರೆ ಅಧಿಕಾರಿಗಳಿಗೇನ ಹೊಟ್ಟಿ ಕಡಿತೇತಿ. ಅವ್ರ ಮತ್ತೋಟು ಛೊಲೋ ಆಯ್ತು ಬಿಡು ಅಂತಾರ. ಏನ್ ಮಾಡ್ತೀರೋ ಗೊತ್ತಿಲ್ಲ; ಬಿಟ್ಟಿದ್ನೆಲ್ಲ ಬಿಟ್ಟು ನಮ್ಗೆ ನೀರ ಕೊಡ್ರಿ ಎಂದು ಒತ್ತಾಯಿಸಿದರು.

ನೀರಿನ ಸಂಗ್ರಹಗಾರ ಅಂಬಿಗೇರಿ ಕಲ್ಲು ಕಣಿಯ ಹೂಳು ತೆಗೆಸಿ ಎಂದು ಗುತ್ತಿಗೆದಾರ ಪರಮೇಶ್ವರಪ್ಪ ಹಳ್ಳಿ ಅವರ ಆಗ್ರಹಿಸಿದರು. `ನಾವು ಅಧಿಕಾರದಲ್ಲಿದ್ದಾಗ ಕಣಿ ಸ್ವಚ್ಚಗೊಳಿಸದೇ ತಪ್ಪು ಮಾಡಿದ್ದೇವೆ. ಅತ್ಯಾಧುನಿಕ ಕ್ರೇನ್ ಬಳಸಿ ಆಳವಾದ ಕಣಿಯನ್ನು ಸ್ವಚ್ಚಗೊಳಿಸಬೇಕು ಎಂದು ಪುರಸಭೆಯ ಮಾಜಿ ಅಧ್ಯಕ್ಷ ಚಂಬಣ್ಣ ಹಾಳದೋಟ ವಿನಂತಿಸಿದರು.

ಕರ್ನಾಟಕ ನೀರು ಸರಬರಾಜು ಮಂಡಳಿ ನೀರಿನ ಯೋಜನೆಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಎಸಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನವಲಗುಂದ ಚೆನ್ನಮ್ಮನ ಕೆರೆಯಿಂದ ತಾತ್ಕಾಲಿಕವಾಗಿ ಪೈಪ್‌ಲೈನ್ ಇಲ್ಲವೇ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಎಂದು ಶಿವಶಂಕರ ಕಲ್ಲೂರ ಒತ್ತಾಯಿಸಿದರು. ಪಟ್ಟಣದ ಖಾಸಗಿ ಬೋರ್‌ವೆಲ್‌ಗಳನ್ನು ಸರ್ಕಾರ ತಾತ್ಕಾಲಿಕವಾಗಿ ವಶಕ್ಕೆ ಪಡೆದು ನೀರು ಪೂರೈಕೆ ವ್ಯವಸ್ಥೆ ಕೈಗೊಳ್ಳುವಂತೆ ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಭದ್ರಾಪುರದ ಯರನಾಳ ಹಳ್ಳದ ನೀರಿನ ವ್ಯವಸ್ಥೆ ಉಳಿಸಿಕೊಂಡಿದ್ದರೆ ಪಟ್ಟಣಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು, ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಮಲಪ್ರಭಾ ಅಣೆಕಟ್ಟಿನಿಂದ ಕಾಲುವೆ ಮೂಲಕ ಪಟ್ಟಣಕ್ಕೆ ನೀರು ಪೂರೈಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಇದೊಂದೇ ಶಾಶ್ವತ ಮತ್ತು ಭವಿಷ್ಯದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳ ಪರಿಹಾರದ ಮಾರ್ಗ ಎಂದು ತಿಳಿಸಿದರು.

ಅಂಬಿಗೇರಿಯ ಗರಸು ಮಣ್ಣನ್ನು ಬೇಕಾಬಿಟ್ಟಿಯಾಗಿ ಮಾರಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶಾಸಕರು, ಆ ಮಣ್ಣನ್ನು ಹೊಲಗಳ ದಾರಿಗಾದರೂ ಬಳಸಿಕೊಂಡಿದ್ದರೆ ಸಾರ್ಥಕವಾಗುತ್ತಿತ್ತು ಎಂದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿಡ್ಡಿ ಮಾತನಾಡಿ, ಬಾವಿಗಳಿಗೆ ಮೋಟರ್ ಅಳವಡಿಸಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು. ಕುಡಿಯುವ ನೀರಿಗಾಗಿ ಪುರಸಭೆಯ ಬೋರ್‌ಗಳನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ವಿಶೇಷ ತಹಶೀಲ್ದಾರ್ ನವೀನ ಹುಲ್ಲಾರ, ಜಿ.ಪಂ. ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಡಿ. ಜೋಷಿ ಭಾಗವಹಿಸಿದ್ದರು. ಸಭೆಯಲ್ಲಿ ವೀರೇಶ ಹೊಂಬಾಳಿಮಠ, ಡಾ. ಸಿ.ವಿ. ಯಳವತ್ತಿ, ನಿಂಗಪ್ಪ ಯಳವತ್ತಿ, ಶಶಿಧರ ಮುಖಂಡಮಠ, ಗಾಡಗೋಳಿ, ಭಗವಂತಪ್ಪ ಪುಟ್ಟಣ್ಣವರ, ಗಿರಿಯಪ್ಪ ದ್ಯಾವನೂರ, ವಾಸಪ್ಪ ಹೆಬಸೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT