ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿಗೊಂದು ಹೆಮ್ಮೆ ಈ ದೇವಂಗಿ

Last Updated 21 ಫೆಬ್ರುವರಿ 2013, 8:43 IST
ಅಕ್ಷರ ಗಾತ್ರ

ಎತ್ತ ನೋಡಿದರೂ ಹಸಿರು ಹೊದ್ದ ಬೆಟ್ಟ ಗುಡ್ಡಗಳ ಘಟ್ಟ ಸಾಲು. ಮಲೆನಾಡಿನ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ  ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಗ್ರಾಮ ಪಂಚಾಯ್ತಿ ತನ್ನದೇ ಆದ ಹಿರಿಮೆಯನ್ನು ಒಡಲಲ್ಲಿ ಹುದುಗಿಸಿಟ್ಟುಕೊಂಡಿದೆ. ರಾಷ್ಟ್ರಕವಿ ಕುವೆಂಪು ಕುಪ್ಪಳಿಯಲ್ಲಿ ಆಡಿ ಬೆಳೆದ ಹಿರಿಮೆ ಪಂಚಾಯ್ತಿಯ ಮಹತ್ವವನ್ನು ಹೆಚ್ಚಿಸಿದೆ.

ಮೂರೂವರೆ ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯ್ತಿಯಲ್ಲಿ ಒಕ್ಕಲಿಗರು ಬಹುಸಂಖ್ಯಾತರಾದರೆ ಪರಿಶಿಷ್ಟ ಜಾತಿ, ಜನರು ಗಣನೀಯ ಪ್ರಮಾಣದಲ್ಲಿದ್ದಾರೆ. ಬಿಲ್ಲವರು, ಈಡಿಗರು, ಹಸಲರು, ಕೊರವರು, ಮುಸ್ಲಿಮರು ಮರಾಠಿ, ಮಡಿವಾಳರು, ಕುಂಬಾರರು, ನಾಯರ್ ಸೇರಿದಂತೆ ಅನೇಕ ಸಣ್ಣಪುಟ್ಟ ಜನಾಂಗದ ಜನರನ್ನು ಗ್ರಾಮ ಪಂಚಾಯ್ತಿ ಒಳಗೊಂಡಿದೆ.

ದೇವಂಗಿ ಹೆಸರಿನ ಹಿನ್ನೆಲೆ

ದೇವಂಗಿ ಎಂಬ ಹೆಸರು ಈ ಊರಿಗೆ ಏಕೆ ಬಂತು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. ಆದರೆ, `ದೇವರ ಅಂಗಿ' ಕ್ರಮೇಣ ಜನರ ಆಡುಮಾತಿನಲ್ಲಿ `ದೇವಂಗಿ'ಯಾಯ್ತು ಎಂಬ ಅಭಿಪ್ರಾಯವನ್ನು ದೇವಂಗಿ ರಾಮಪ್ಪಗೌಡ ಅವರು ಸಮಾರಂಭವೊಂದರಲ್ಲಿ ಹೇಳಿದ್ದರು ಎಂಬುದನ್ನು ಗ್ರಾಮ ಪಂಚಾಯ್ತಿ ಸದಸ್ಯ ಬಿ.ಆರ್.ಗೋಪಾಲನಾಯ್ಕ ಅವರು ನೆನಪಿಸಿಕೊಳ್ಳತ್ತಾರೆ.

ಈಗ ಬೆಳೆದಿರುವ ಊರು ದೇವಂಗಿಯಲ್ಲ. ಮೂಲ ದೇವಂಗಿ ಇರುವುದು ದೇವಂಗಿ ಮಾನಪ್ಪ ವೃತ್ತದಿಂದ ಒಂದು ಮೈಲಿ ದೂರದಲ್ಲಿ. ಕುವೆಂಪು ಅವರ ಸೋದರ ಮಾವ ಮಾನಪ್ಪಗೌಡರ ಮನೆಯೇ ದೇವಂಗಿಯಾಗಿತ್ತು. ಅಲ್ಲಿ ಶಾಲೆ, ಆಸ್ಪತ್ರೆ. ಅಂಚೆ ಕಚೇರಿ ಕೂಡಾ ಇತ್ತು ಎಂದು ದೇವಂಗಿ ಮನುದೇವ್ ಹೇಳುತ್ತಾರೆ.

ಒಂಬತ್ತು ಸದಸ್ಯಬಲದ ಗ್ರಾಮ ಪಂಚಾಯ್ತಿಯಲ್ಲಿ ಐದು ಮಂದಿ ಮಹಿಳಾ ಸದಸ್ಯರು ನಾಲ್ಕು ಮಂದಿ ಪುರುಷ ಸದಸ್ಯರಿದ್ದಾರೆ. ದೇವಂಗಿ, ಆಲ್ಮನೆ, ಇಂಗ್ಲಾದಿ, ಬಳಗಟ್ಟೆ, ವಾಟಗಾರು, ಬೆಕ್ಕನೂರು ಕ್ಷೇತ್ರಗಳಿಂದ ಅಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯ್ತಿ ಆಡಳಿತ ಗಮನಿಸಿ 2008ರಲ್ಲಿ ಸಂಪೂರ್ಣ ನೈರ್ಮಲ್ಯ ಪ್ರಶಸ್ತಿಯನ್ನು ನೀಡಲಾಗಿದೆ. ಗ್ರಾಮ ಪಂಚಾಯ್ತಿಗೆ ವಿಶೇಷ ಆದಾಯದ ಮೂಲಗಳಿಲ್ಲ.  ಕುಪ್ಪಳಿಗೆ ಬರುವ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ವಾಹನ ನಿಲುಗಡೆಗೆ ಹಣ ನಿಗದಿಪಡಿಸಿ ಸಂಗ್ರಹಿಸಲಾಗಿತ್ತು.

ಕುಪ್ಪಳಿಯ ಪರಿಸರ ಶುಚಿತ್ವಕ್ಕೆ ಸಂಗ್ರಹವಾದ ಹಣವನ್ನು ಬಳಸಲಾಗಿತ್ತು. ಸಾರ್ವಜನಿಕರಿಂದ ಬಂದ ಟೀಕೆ, ಪ್ರಶಂಸೆಗಳ ನಡುವೆ ಯೋಜನೆಯನ್ನು ಕೈಬಿಡಲಾಯಿತು. ವಾರ್ಷಿಕ 8 ಲಕ್ಷದ ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ನೀಡಿದರೆ ಕೇವಲ ಎರಡು, ಮೂರು ಲಕ್ಷ ಹಣವನ್ನು ಕಂತುಕಂತಾಗಿ ನೀಡಲಾಗುತ್ತದೆ. ಇದು ಅಭಿವೃದ್ಧಿಗೆ ಅಷ್ಟು ಪೂರಕವಾಗಲಾರದು ಎಂಬ ಅಭಿಪ್ರಾಯವನ್ನು ಸದಸ್ಯರು ವ್ಯಕ್ತಪಡಿಸುತ್ತಾರೆ.

ಕುಡಿಯುವ ನೀರಿನ ಸಮಸ್ಯೆ: ದಟ್ಟ ಮಲೆನಾಡಿನ ಪ್ರದೇಶವನ್ನು ಹೊಂದಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು  ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಹಳ್ಳದ ದಂಡೆ, ಕೃಷಿ ಹೊಂಡ, ಕಾಲುವೆಗಳು, ಶಾಲಾ ಕಾಂಪೌಂಡು, ರಾಜೀವ್ ಗಾಂಧಿ ಸೇವಾ ಕೇಂದ್ರ, ಗ್ರಾಮಗಳಲ್ಲಿನ ಮಣ್ಣಿನ ರಸ್ತೆಗಳ ದುರಸ್ತಿ, ಶಾಲೆಗಳ ಆಟದ ಮೈದಾನದ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಕೈಗೊಳ್ಳಲಾಗಿದೆ.

ಸರ್ಕಾರ ಆಶ್ರಯ ಮನೆಗಳನ್ನು ನೀಡಿದರೂ ಸರಿಯಾದ ದಾಖಲೆಗಳನ್ನು ನೀಡದೇ ಇರುವ ಕಾರಣ ಫಲಾನುಭವಿಗಳಿಗೆ ಮನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹಕ್ಕುಪತ್ರ ಇದ್ದವರಿಗೆ, ಸರ್ವ ಕುಟುಂಬ ಸಮೀಕ್ಷೆಯಲ್ಲಿ 30 ಅಂಕಗಳ ಒಳಗೆ ಇರುವವರಿಗೆ ಮಾತ್ರ ಆಶ್ರಯ ಮನೆಗಳನ್ನು ನೀಡಲಾಗುತ್ತದೆ. ಗರಿಷ್ಠ 20 ಮನೆಗಳನ್ನು  ಕೊಡುವ ಅವಕಾಶ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಇದ್ದರೂ ಕೂಡ 5,6 ಮನೆಗಳನ್ನು ನೀಡಲು ಮಾತ್ರ ಸಾಧ್ಯವಾಗಿದೆ.

ಪರಿಶಿಷ್ಟ ಜಾತಿ, ಪಂಗಡದ ಕಾಲೊನಿ ಅಭಿವೃದ್ಧಿಗೆ ಹಣ: ತುಂಗಾ ಮೇಲ್ದಂಡೆ ಯೋಜನೆಯಿಂದ ಗ್ರಾಮ ಪಂಚಾಯ್ತಿಗೆ ರೂ 20 ಕೋಟಿ ಲಭ್ಯವಾಗಿದೆ.

ರಾಷ್ಟ್ರೀಯ ಹೆದ್ದಾರಿ 13ರಿಂದ ಬಳಗಟ್ಟೆ ಪರಿಶಿಷ್ಟರ ಕಾಲೊನಿ ರಸ್ತೆ ಡಾಂಬರೀಕರಣ, ಮೋರಿಗೆ ರೂ 50 ಲಕ್ಷ, ಜಡ್ಡುಗದ್ದೆಗೆ ರೂ 50 ಲಕ್ಷ, ದೇವಂಗಿ ವೃತ್ತದಿಂದ ಹಳೇ ದೇವಂಗಿ ಪರಿಶಿಷ್ಟರ ಕಾಲೊನಿಗೆ ರೂ 1 ಕೋಟಿ, ಕಟ್ಟೆಹಕ್ಕಲು ಮುಖ್ಯ ರಸ್ತೆಯಿಂದ ಹೊಸ್ತೋಟ ಎಸ್‌ಟಿ ಕಾಲೊನಿಗೆ ರೂ 1.5 ಕೋಟಿ, ತಟ್ಟಾಪುರ ಎಸ್‌ಟಿ ಕಾಲೊನಿಗೆ ರೂ 75 ಲಕ್ಷ, ಕುಪ್ಪಳಿ ಮುಖ್ಯ ರಸ್ತೆಯಿಂದ ಬೆಳ್ಳಿಕೂಡಿಗೆ ಎಸ್‌ಸಿ ಕಾಲೊನಿಗೆರೂ50 ಲಕ್ಷ ಹಾಗೂ ಕುಪ್ಪಳಿ ಮುಖ್ಯ ರಸ್ತೆಯಿಂದ ಜಡ್ಡು ಎಸ್‌ಟಿ ಕಾಲೊನಿಗೆ ರೂ 50 ಲಕ್ಷ ಅನುದಾನ ಲಭ್ಯವಾಗಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸುಬೋದ್ ಕುಪ್ಪಳಿ ತಿಳಿಸಿದ್ದಾರೆ.

ಹಿರಿಮೆ ಹೆಚ್ಚಿಸಿದ ಸ್ಮರಣೀಯರು: ಊರಿನ ಹಿರಿಮೆ ಹೆಚ್ಚಿಸಿದ ರಾಷ್ಟ್ರಕವಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ದೇವಂಗಿ ಪ್ರಫುಲ್ಲಚಂದ್ರ, ಬಿ.ಡಿ. ಜಗದೀಶ್, ದೇವಂಗಿ ರತ್ನಾಕರ್, ಬಿ.ಆರ್. ಲಕ್ಷ್ಮಣಗೌಡ, ದೇವಂಗಿ ಮಾನಪ್ಪಗೌಡ, ದೇವಂಗಿ ರಾಮಪ್ಪಗೌಡ, ಡಿ.ವಿ. ರಾಮಮೋಹನ್, ದೇವಂಗಿ ಕವಿರಾಜ್ ಸೇರಿದಂತೆ ಅನೇಕರನ್ನು ಗ್ರಾಮಸ್ಥರು ಸ್ಮರಿಸುತ್ತಾರೆ.

ಅಭಿಪ್ರಾಯಗಳು: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಭಿವೃದ್ಧಿಗೆ ಅನುದಾನ ಸಾಕಾಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳಲಾಗಿದೆ. ಸಾಕಷ್ಟು ಯೋಜನೆಗಳು ನಮ್ಮ ಮುಂದಿವೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರದಾ ವಿಠಲ ಶೆಟ್ಟಿ.

ಹೊಸ್ತೋಟ ಪರಿಶಿಷ್ಟ ಜಾತಿ, ಪಂಗಡದ ಕಾಲೊನಿಗೆ ಕುಡಿಯುವ ನೀರನ್ನು ಒದಗಿಸಬೇಕು. ಅಲ್ಲಿಗೆ ಒಂದು ಅಂಗನವಾಡಿ ಕಟ್ಟಡ ಬೇಕು. ಗ್ರಾಮ ಪಂಚಾಯ್ತಿ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಪಂಚಾಯ್ತಿ ರೂಪಿಸುವ ಯೋಜನೆಗಳಿಗೆ ಸರ್ಕಾರ ಸಮರ್ಪಕ ಅನುದಾನ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದೇವಂಗಿ ಮಹೇಶ್ ಹೇಳುತ್ತಾರೆ.
ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT