ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮಹಿಳೆಯರಿಗಿಲ್ಲ ಮಣೆ!

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಹಿಳಾ ಮೀಸಲಾತಿ ಬಗ್ಗೆ ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷಗಳು ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎರಡು ಚುನಾವಣೆಗಳಿಂದ ಮಹಿಳೆಯರಿಗೆ ಅವಕಾಶವನ್ನೇ ನೀಡಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳಿಗೆ ಮತದಾರರೂ ಮಣೆ ಹಾಕಿಲ್ಲ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳು ಪುರುಷ ಪ್ರಧಾನ ಚುನಾವಣಾ ಅಖಾಡಗಳಾಗಿ ಮಾರ್ಪಟ್ಟಿವೆ.

ಚಿಕ್ಕಮಗಳೂರು ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ನಿಂದ ಮೂವರು ಮಹಿಳೆಯರು ಆಯ್ಕೆಯಾಗಿದ್ದಾರೆ. ಶೃಂಗೇರಿ, ಕಡೂರು ಹಾಗೂ ತರೀಕೆರೆ ಕ್ಷೇತ್ರದ ಮತದಾರರು ಮಹಿಳಾ ಅಭ್ಯರ್ಥಿಗಳಿಗೆ ಒಲಿದಿಲ್ಲ.

1972ರ ನಂತರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಚುನಾವಣೆಗಳು ನಡೆದಿವೆ. ಆದರೆ, ಈವರೆಗೂ ಒಬ್ಬರೇ ಒಬ್ಬ ಮಹಿಳೆ ಈ ಕ್ಷೇತ್ರದಿಂದ ಆಯ್ಕೆಯಾಗಿಲ್ಲ. ಹಾಗೆ ನೋಡಿದರೆ ಈ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆ (1952) ಮತ್ತು 1962ರ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಬಿ.ಎಲ್.ಸುಬ್ಬಮ್ಮ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಶಾಸಕಿಯಾಗಿ ಆಯ್ಕೆಯಾದ ದಾಖಲೆ ಇದೆ. 1957ರ ಚುನಾವಣೆಯಲ್ಲಿ ಅವರು ಕಣಕ್ಕಿಳಿದಿರಲಿಲ್ಲ. 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇವಾ ವಾಜ್ ಕೂಡ ಆಯ್ಕೆಯಾಗಿ, ದೇವರಾಜ ಅರಸು ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಖಾತೆ ನಿರ್ವಹಿಸಿದ್ದರು. ಜಿಲ್ಲೆಯ ಮೊದಲ ಸಚಿವೆ ಎನ್ನುವ ಕೀರ್ತಿಗೆ ಇವಾ ಪಾತ್ರರಾಗಿದ್ದರು.

ಆ ನಂತರ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗಿರುವ ಈಗಿನ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಜಿಲ್ಲೆಯ ಮೂರನೇ ಮಹಿಳೆ ಎನಿಸಿಕೊಂಡಿದ್ದಾರೆ. 1978ರ ಚುನಾವಣೆಯಲ್ಲಿ ಮೋಟಮ್ಮ ಇಂದಿರಾ ಕಾಂಗ್ರೆಸ್‌ನಿಂದ, 1989 ಮತ್ತು 1999ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕೂಡ ಆಗಿದ್ದರು. 2004ರ ಚುನಾವಣೆಯಲ್ಲಿ ಸೋಲುಂಡ ಬಳಿಕ ವಿಧಾನ ಪರಿಷತ್ ಸದಸ್ಯೆಯಾಗಿ, ವಿರೋಧ ಪಕ್ಷದ ನಾಯಕಿ ಸ್ಥಾನ ನಿಭಾಯಿಸಿದ್ದಾರೆ. ಈ ಬಾರಿ ಮೂಡಿಗೆರೆ ಮತ್ತು ಸಕಲೇಶಪುರ ಮೀಸಲು ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ.
1984 ಮತ್ತು 1991ರ ಲೋಕಸಭೆ ಚುನಾವಣೆಗಳಲ್ಲಿ ಆಯ್ಕೆಯಾಗಿ ಕೇಂದ್ರ ಸಚಿವೆಯೂ ಆಗಿದ್ದ ಡಿ.ಕೆ.ತಾರಾದೇವಿ ಸಿದ್ಧಾರ್ಥ ಈ ಬಾರಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ.

ಬಿಜೆಪಿ 1994ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿ.ಎಲ್. ಸುಬ್ಬಮ್ಮ ಪುತ್ರಿ ಟಿ.ಶ್ರೀದೇವಿ, 2004ರ ಚುನಾವಣೆಯಲ್ಲಿ ಬೀರೂರು ಕ್ಷೇತ್ರಕ್ಕೆ ಜೆ.ಎಸ್.ರೇಖಾ ಹುಲಿಯಪ್ಪಗೌಡ ಅವರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಕಡೂರು ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿ ಅನುರಾಧಾ, 2008ರ ಚುನಾವಣೆಯಲ್ಲಿ ತರೀಕೆರೆ ಕ್ಷೇತ್ರದಿಂದ ಪಕ್ಷೇತರರಾಗಿ ಮಮತಾ ಮಾತ್ರ ಸ್ಪರ್ಧಿಸಿದ್ದರು.

1994ರ ಚುನಾವಣೆಯಲ್ಲಿ ಮೂಡಿಗೆರೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೋಟಮ್ಮ ಶಾಸಕಿಯಾಗಿ ಆಯ್ಕೆಯಾದರು. ಇದೇ ಕ್ಷೇತ್ರಕ್ಕೆ ಕರ್ನಾಟಕ ಕಾಂಗ್ರೆಸ್ ಪಾರ್ಟಿಯಿಂದ ಕಮಲಮ್ಮ, ಪಕ್ಷೇತರ ಅಭ್ಯರ್ಥಿಯಾಗಿ ಜಯಲಕ್ಷ್ಮಿ ಸ್ಪರ್ಧಿಸಿ ಸೋಲುಂಡಿದ್ದರು. ಕಡೂರು ಕ್ಷೇತ್ರಕ್ಕೆ ಚಂದ್ರಮ್ಮ ಎಂಬುವವರು ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 1999ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಎಡಿಎಂಕೆ ಪಕ್ಷದಿಂದ ಮರಿಯಮ್ಮ ಎಂಬುವವರು ಸ್ಪರ್ಧಿಸಿದ್ದೇ ಕೊನೆ. ಅಲ್ಲಿಂದ ಈವರೆಗೂ ಈ ಕ್ಷೇತ್ರದಲ್ಲಿ ಯಾವುದೇ ಪಕ್ಷವೂ ಮಹಿಳೆಯರಿಗೆ ಅವಕಾಶ ಕಲ್ಪಿಸಿಲ್ಲ.

2008ರ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅವಕಾಶ ನೀಡಲಿಲ್ಲ. ಈ ಬಾರಿಯೂ ಮಹಿಳೆಯರಿಗೆ ಟಿಕೆಟ್ ನೀಡುವ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಎಲ್ಲಿಯೂ ಪ್ರಸ್ತಾಪಿಸಿಲ್ಲ.

ಜೆಡಿಎಸ್, ಸಿಪಿಐ, ಬಿಎಸ್‌ಪಿ ಕೂಡ, ಜಿಲ್ಲೆಯ ಚುನಾವಣಾ ಇತಿಹಾಸದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಒಂದೇ ಒಂದು ನಿದರ್ಶನ ಇಲ್ಲ.  ಈ ಬಾರಿ ಮೋಟಮ್ಮ ಮತ್ತು ತಾರಾದೇವಿ ಮಾತ್ರ ಕಾಂಗ್ರೆಸ್ ಟಿಕೆಟ್ ಬಯಸಿ, ತೀವ್ರ ಪ್ರಯತ್ನ ನಡೆಸುತ್ತಿರುವ ಮುಂಚೂಣಿ ಸಾಲಿನಲ್ಲಿ ಕಾಣುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್‌ಗೆ ಮಹಿಳೆಯರು ಬೇಡಿಕೆ ಇಟ್ಟಿರುವುದು ಕಾಣಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT