ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು, ಉತ್ತರ ಕರ್ನಾಟಕದಲ್ಲೂ ಕೆಲವೆಡೆ ಮಳೆ :ಕರಾವಳಿ ಪ್ರವೇಶಿಸಿದ ಮುಂಗಾರು

Last Updated 4 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿಗೆ ಸೋಮವಾರ ಮುಂಗಾರು ಪ್ರವೇಶ ಮಾಡಿದ್ದು, ಕರಾವಳಿ ಜ್ಲ್ಲಿಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ವಿವಿಧೆಡೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ, ಉತ್ತರ ಕರ್ನಾಟಕದ ಹಲವಡೆ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು  ಮಹಿಳೆ ಮೃತಪಟ್ಟಿದ್ದಾಳೆ.ಮಂಗಳೂರು ವರದಿ: ಕರಾವಳಿಯಾದ್ಯಂತ ಮುಂಗಾರು ಮಳೆ ಆರಂಭವಾಗಿದೆ. ಸೋಮವಾರ ದಿನವಿಡೀ ಜಿಟಿ ಜಿಟಿ ಮಳೆಯಾಗಿದೆ.ನಗರದಲ್ಲಿ ಸೋಮವಾರ ನಸುಕಿನ ವೇಳೆಯೇ ಮಳೆಯ ಸಿಂಚನವಾಯಿತು. ದಿನವಿಡೀ ಮೋಡ ಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನತೆ ಮುಂಗಾರು ಪ್ರವೇಶದಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಸುಳ್ಯ ತಾಲ್ಲೂಕು- 9.6 ಮಿ.ಮೀ, ಪುತ್ತೂರು ತಾಲ್ಲೂಕು- 8.0 ಮಿ.ಮೀ, ಮಂಗಳೂರು ತಾಲ್ಲೂಕು- 5.6 ಮಿ.ಮೀ, ಬಂಟ್ವಾಳ ತಾಲ್ಲೂಕು 2.8 ಮಿ.ಮೀ. ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ 1.2 ಮಿ.ಮೀ ಮಳೆ ಸುರಿದಿದೆ. ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಭಾನುವಾರ 8.4 ಮಿಲಿಮೀಟರ್ ಮಳೆಯಾಗಿತ್ತು.ಮಳೆ ಸುರಿಯುತ್ತಲೇ ಕರಾವಳಿಯಲ್ಲಿ ಕೃಷಿ ಕಾರ್ಯವೂ ಚುರುಕು ಪಡೆದಿದೆ.

ಮೊದಲ ಮಳೆಯ ಗಲಿಬಿಲಿ:
ನಗರದಲ್ಲಿ ಸಂಜೆ ವೇಳೆ  ಸುಮಾರು ಅರ್ಧ ತಾಸು ಮಳೆ ಸುರಿದಾಗ ಕೆಲವೆಡೆ ರಸ್ತೆ ಮೇಲೆಯೇ ನೀರು ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೃತಕ ನೆರೆ: ನಗರದ ಕೂಳೂರು ಪ್ರದೇಶದಲ್ಲಿ ಮೊದಲ ಮಳೆಗೇ ಕೃತಕ ನೆರೆ ಉಂಟಾಗಿತ್ತು. ಕೂಳೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಚರಂಡಿಯ ಸಹಜ ಹರಿವಿಗೆ ತೊಡಕು ಉಂಟಾಗಿದ್ದರಿಂದ ಕೃತಕ ನೆರೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಡುಪಿ ವರದಿ: ಉಡುಪಿಯಲ್ಲೂ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 6 ಗಂಟೆ ವರೆಗೆ ಸುರಿಯಿತು. ಚರಂಡಿಗಳು ತುಂಬಿ ಹರಿದವು. ರಸ್ತೆ ಮೇಲೆ ನೀರು ಹರಿದು ವಾಹನ ಸವಾರರು ತುಸು ತೊಂದರೆ ಅನುಭವಿಸಿದರು.

ಉಡುಪಿ ನಗರದಲ್ಲಿ 6.2 ಮಿ.ಮೀ, ಕುಂದಾಪುರದಲ್ಲಿ 5.4 ಮಿ.ಮೀ, ಕಾರ್ಕಳದಲ್ಲಿ ಅತಿ ಹೆಚ್ಚು 14.2 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 8.6 ಮಿ.ಮೀ. ಮಳೆಯಾಗಿದೆ.

ಚಿಕ್ಕಮಗಳೂರು ವರದಿ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರಂಭವಾಗಿದೆ. ಚಿಕ್ಕಮಗಳೂರು, ನರಸಿಂಹರಾಜಪುರ, ಶೃಂಗೇರಿ, ಕಳಸದಲ್ಲಿ ಸಾಧಾರಣ ಮಳೆಯಾಗಿದ್ದರೆ, ಬಾಳೆಹೊನ್ನೂರು  ಮತ್ತು ಮೂಡಿಗೆರೆಯಲ್ಲಿ ದಿನವಿಡೀ ಧಾರಾಕಾರ ಮಳೆಯಾಗಿದೆ. ದಿನವೂ ಮಳೆಗಾಗಿ ಆಕಾಶ ನೋಡುತ್ತಿದ್ದ ಕೃಷಿಕರಿಗೆ ಮಳೆ ಕೃಷಿ ಚಟುವಟಿಕೆ ಆರಂಭಿಸಲು ಆಸಕ್ತಿ ಮೂಡಿಸಿದೆ. ಕಡೂರು ತಾಲ್ಲೂಕಿನ ಕೆಲವೆಡೆ ಏಪ್ರಿಲ್ ತಿಂಗಳಲ್ಲಿ ಮಳೆಯಾದ್ದರಿಂದ ಬೆಳೆ ಹಾಕಿದ್ದ ರೈತರು ಈಗ ಮಳೆ ಬಾರದೆ ಬೆಳೆ ಅಳಿಸಿಹಾಕುತ್ತಿದ್ದಾರೆ.

ಹುಬ್ಬಳ್ಳಿ ವರದಿ: ಬೆಳಗಾವಿ, ಕಾರವಾರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ವಿವಿಧೆಡೆ ಸೋಮವಾರ ಮಳೆ ಸುರಿದಿದ್ದು, ನೈರುತ್ಯ ಮುಂಗಾರಿಗೆ ಮುನ್ನುಡಿ ಬರೆದಿದೆ.

ಕಾರವಾರ ವರದಿ: ಜಿಲ್ಲೆಯ ಕರಾವಳಿ, ಮಲೆನಾಡು ಮತ್ತು ಅರೆ ಬಯಲುಸೀವೆು ತಾಲ್ಲೂಕುಗಳಲ್ಲಿ ಸೋಮವಾರ ಬೆಳಗಿನ ಜಾವ ಮತ್ತು ಸಂಜೆ ಮಳೆಯಾಗಿದೆ. ಮಳೆಯಿಂದ ಯಾವುದೇ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.
ಕಳೆದ 24 ಗಂಟೆ ಅವಧಿಯಲ್ಲಿ ಹೊನ್ನಾವರದಲ್ಲಿ 27.4 ಮತ್ತು ಕಾರವಾರದಲ್ಲಿ 25 ಮಿಲಿಮೀಟರ್ ಮಳೆಯಾಗಿದೆ. ದಾಂಡೇಲಿ, ಕುಮಟಾ, ಸಿದ್ದಾಪುರ, ಶಿರಸಿ, ಮುಂಡಗೋಡ, ಭಟ್ಕಳ ಮತ್ತು ಕಾರವಾರದ ಗ್ರಾಮೀಣ ಭಾಗದಲ್ಲಿ ಸಂಜೆ ಹೊತ್ತು ಬಿರುಸಿನಿಂದ ಕೂಡಿದ ಮಳೆಯಾಗಿದೆ.

`ಮುಂದಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಈ ಮಳೆಯ ಹಿಂದೆಯೇ ನೈರುತ್ಯ ಮುಂಗಾರು ಕರಾವಳಿ ಪ್ರವೇಶ ಮಾಡಲಿದೆ~ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ~ಪ್ರಜಾವಾಣಿ~ಗೆ ತಿಳಿಸಿದರು.

ಗದಗ ವರದಿ: ಬಿಸಿಲ ತಾಪದಿಂದ ಬಳಲಿದ್ದ ಜನತೆಗೆ ಸೋಮವಾರ ನಗರದಲ್ಲಿ ಸುರಿದ ಮಳೆ ತಂಪು ನೀಡಿತು. ಸಂಜೆ 4 ಗಂಟೆಗೆ ಆರಂಭವಾದ ಮಳೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಪ್ರಯಾಸ ಪಡಬೇಕಾಯಿತು.

ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡೇ ಹೋದರು. ಶಾಲಾ-ಕಾಲೇಜುಗಳ ಕ್ರೀಡಾಂಗಣ ನೀರು ನಿಂತು ಕೆಸರು ಗದ್ದೆಯಂತಾಗಿತ್ತು. ಕಳೆದ ಮೂರು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗಿತ್ತು. 37 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿತ್ತು. ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲೂ ಮಳೆಯಾಗಿದೆ.

ಬಾಗಲಕೋಟೆ ವರದಿ: ಕಳೆದ ಮೂರ‌್ನಾಲ್ಕು ತಿಂಗಳಿಂದ ಮಳೆಯಿಲ್ಲದೆ ವರುಣನನ್ನು ಜಪಿಸುತ್ತಿದ್ದ ಜನತೆಗೆ ಸೋಮವಾರ ಮಳೆರಾಯ ಕೃಪೆ ತೋರಿದ್ದರಿಂದ ತಂಪಾದ ವಾತಾವರಣ ನಿರ್ಮಾಣವಾಗಿತ್ತು.
ಸೋಮವಾರ ಸಂಜೆ 5.30ರ ಸುಮಾರಿಗೆ ಗಾಳಿ, ಗುಡುಗು ಮಿಶ್ರಿತ ಮಳೆ 2 ಗಂಟೆಗೂ ಹೆಚ್ಚು ಕಾಲ ಸುರಿಯಿತು.

ರಸ್ತೆ ಹಾಗೂ ಗಟಾರುಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದವು. ಮಾರುಕಟ್ಟೆಗೆ ಬಂದ ಜನತೆ ಮಳೆಯಲ್ಲೇ ತಮ್ಮ ಊರಿಗೆ ಹೋದರೆ ಇನ್ನೂ ಕೆಲವರು ಕೊಡೆಯ ಆಶ್ರಯ ಪಡೆದು ಮನೆಗಳನ್ನು ಸೇರಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲೇ ತೋಯ್ದುಕೊಂಡು ಬಸ್ ನಿಲ್ದಾಣ ತಲುಪಿದರು.

ಬೆಳಗಾವಿ ವರದಿ:
ಗೋಕಾಕ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

ಕಾರ್ಗಲ್ ವರದಿ: ಶರಾವತಿ ಕಣಿವೆಯಲ್ಲಿ ಸೋಮವಾರ ಮಧ್ಯಾಹ್ನ 3ಕ್ಕೆ ಪ್ರವೇಶವಾದ ಮುಂಗಾರು ಮಳೆ ಸಂಜೆ 6ರವರೆಗೆ ರಭಸವಾಗಿ ಸುರಿಯಿತು.ಲಿಂಗನಮಕ್ಕಿ ಜಲಾಶಯದ ನೀರು ತುಂಬಾ ತಳಮಟ್ಟಕ್ಕೆ ತಲುಪಿದ್ದು, ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಉಂಟಾಗುವ ಆತಂಕ ವಿದ್ಯುತ್ ನಿಗಮಕ್ಕೆ ಕಾಡಿತ್ತು.

ಗೋಕಾಕ ವರದಿ: ಜಮೀನಿನಲ್ಲಿ ಕೂಲಿ ಮಾಡುತ್ತಿದ್ದ ಮಹಿಳೆಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ರಾಜಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.ಮೃತರನ್ನು ಸೋಮವ್ವ ವಿಠ್ಠಲ ಕಿಲಾರಿ (32) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ ಹಾಗೂ ತಾಲ್ಲೂಕು ದಂಡಾಧಿಕಾರಿ ಔದ್ರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟಪ್ರಭಾ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT