ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ: ಮೀನುಗಾರರಿಗೆ ಸುರಕ್ಷತಾ ತರಬೇತಿ

Last Updated 17 ಜೂನ್ 2011, 9:30 IST
ಅಕ್ಷರ ಗಾತ್ರ

ಉಡುಪಿ: `ಮೀನುಗಾರರು ನಮ್ಮ ದೇಶದ ಕಣ್ಣು ಮತ್ತು ಕಿವಿಗಳಿದ್ದಂತೆ. ಕರಾವಳಿ ತೀರದ ರಕ್ಷಣೆಯಲ್ಲಿ ಮೀನುಗಾರರ ಪಾತ್ರ ಬಹಳಮುಖ್ಯವಾದದ್ದು. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯುವ ಮುನ್ನ ಹಲವು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು~ ಎಂದು ಭಾರತೀಯ ನೌಕಾದಳದ ಅಧಿಕಾರಿ ತುಷಾರ್ ಸೋಕೆ ಇಲ್ಲಿ ಹೇಳಿದರು.

ಭಾರತೀಯ ನೌಕಾಪಡೆಯ ಸಹಯೋಗದಲ್ಲಿ ಮಲ್ಪೆ ಮೀನುಗಾರರ ಸಮುದಾಯ ಸಭಾಭವನದಲ್ಲಿ ಕರಾವಳಿ ತೀರದ ಮೀನುಗಾರರಿಗಾಗಿ ಗುರುವಾರ ಆಯೋಜಿಸಿದ್ದ ರಕ್ಷಣೆ, ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

`ಮಳೆಗಾಲದಲ್ಲಿ ಸಮುದ್ರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ. ಹೀಗಾಗಿ ಈ ಅವಧಿಯಲ್ಲಿ ಮೀನುಗಾರಿಕೆ ಮಾಡಿದರೆ ಮೀನುಗಾರರಿಗೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ.  ಆಗಸ್ಟ್ 10ರವರೆಗೆ ಯಾವ ಮೀನುಗಾರರು ಮೀನುಗಾರಿಕೆಗೆ ಇಳಿಯಬಾರದು~ ಎಂದು ಸಲಹೆ ಮಾಡಿದರು.

`ಮೀನುಗಾರಿಕೆ ಸಂದರ್ಭದಲ್ಲಿ ಎಲ್ಲ ದಾಖಲೆಗಳ ಮೂಲಪ್ರತಿಯನ್ನು ಮೀನುಗಾರರು ಇಟ್ಟುಕೊಂಡಿರಬೇಕು. ನಕಲು ಪ್ರತಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಲಾಗಿದೆ. ಟ್ರಾಲರ್ಸ್ ಏಐಎಸ್ ಅಳವಡಿಸಿಕೊಳ್ಳಬೇಕು. ಮೀನುಗಾರಿಕಾ ನಿಯಂತ್ರಣ ಉಪಕರಣವನ್ನು ಇಟ್ಟುಕೊಳ್ಳಬೇಕು. ನೋಂದಣಿಯಿಲ್ಲದ ಮತ್ತು ಅನುಪಯುಕ್ತ ದೋಣಿಗಳ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ~ ಎಂದರು.

`ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಯಾವುದೇ ಪರಕೀಯ ದೋಣಿ ಕಂಡುಬಂದಲ್ಲಿ, ಅಪರೂಪದ ವ್ಯಕ್ತಿ ಕಣ್ಗಾವಲು ಕೆಲಸದಲ್ಲಿ ನಿರತನಾಗಿದ್ದರೆ, ಫೋಟೋ ತೆಗೆಯುತ್ತಿದ್ದಲ್ಲಿ, ಚಿತ್ರೀಕರಣ ಮಾಡುತ್ತಿದ್ದಲ್ಲಿ ತಕ್ಷಣ ಕರಾವಳಿ ರಕ್ಷಣಾ ಪಡೆಗೆ       (1554) ಕರೆ ಮಾಡಿ ತಿಳಿಸಬೇಕು~ ಎಂದರು.

`ಕಡಲ ತೀರದಲ್ಲಿ ಹಡಗಿನಿಂದ ಸಾಮಾಗ್ರ ಇಳಿಸುತ್ತಿದ್ದಲ್ಲಿ, ಸೂಕ್ಷ್ಮ ಹಾಗೂ ನಿರ್ಬಂಧಿತ ಪ್ರದೇಶದಲ್ಲಿ ಸಂಚಾರ ನಡೆಸುತ್ತಿದ್ದಲ್ಲಿ, ರಾತ್ರಿ ಕಾರ್ಯಾಚರಣೆಯಲ್ಲಿ ತೊಡಗಿದ್ದಲ್ಲಿ, ಯಾರಾದರೂ ಹೆಚ್ಚಿನ ಬೆಲೆ ಕೊಟ್ಟು ಕಡಿಮೆ ಅವಧಿಗೆ ಮನರಂಜನಾ ಹಡಗು ಅಥವಾ ಮೀನುಗಳನ್ನು ಖರೀದಿಸಿದಲ್ಲಿ ಅಥವಾ ಬಾಡಿಗೆಗೆ ಪಡೆದಲ್ಲಿ ತಕ್ಷಣ ತಿಳಿಸಬೇಕು. ಇಂತಹ ಮಾಹಿತಿಗಳನ್ನು ನೀಡುವಲ್ಲಿ ಎಲ್ಲಾ ಮೀನುಗಾರರು ಶಕ್ತರಾಗಿರಬೇಕು~ ಎಂದರು.

ಮಂಗಳೂರಿನ ಭಾರತೀಯ ನೌಕಾಪಡೆಯ ಅಧಿಕಾರಿ ಸುರೇಶ್ ಕುಮಾರ್ ಮಲ್ಲಿಕ್ ಮಾತನಾಡಿ, `ಸಮುದ್ರದಲ್ಲಿ ಭಾರಿ ಮೀನುಗಾರಿಕೆ ನಡೆಸುವ ಪ್ರತೀ ಹಡಗುಗಳಲ್ಲಿ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡಿರಬೇಕು. ಯಾವುದೇ ಹಡಗಿಗೆ ಬೆಂಕಿ ಹತ್ತಿಕೊಂಡರೆ, ಅಪಾಯ ಸಂಭವಿಸಿದರೆ, ಹಡಗು ಬಿರುಕಿನಿಂದ ಒಡೆಯಲು ಆರಂಭಿಸಿದರೆ ಅದು ತಕ್ಷಣಾ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ರವಾನಿಸುತ್ತದೆ.

ಅಲ್ಲಿಂದ ರಕ್ಷಣಾ ಮಾಹಿತಿ ಲಭಿಸುತ್ತದೆ.  ಈ ಸಲಕರಣೆಯನ್ನು ಭಾರಿ ಉಷ್ಣತೆಯಲ್ಲಿ ಇಡಬಾರದು. ಜಲನಿರೋಧಕ (ವಾಟರ್ ಪ್ರೂಫ್) ವ್ಯವಸ್ಥೆ ಇರುವ ಈ ಉಪಕರಣವನ್ನು ತಂಪಾದ ಸ್ಥಳದಲ್ಲಿ ಇಡಬೇಕು. ಇದಕ್ಕೆ ಐದು ವರ್ಷ ವ್ಯಾಲಿಡಿಟಿ ಇದ್ದು 24 ತಾಸು ಕೆಲಸ ಮಾಡುತ್ತದೆ. ಇಂತಹ ಉಪಯುಕ್ತ ಸಲಕರಣೆಯನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು ಪ್ರತಿಯೊಂದು ಹಡಗಿನಲ್ಲಿ ಬಳಸಬೇಕು~ ಎಂದಯ ಹೇಳಿದರು.

ಕಾರ್ಯಾಗಾರದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ಸಿ.ಎಲ್.ದುರ್ಗೇಕರ್, ಮೀನುಗಾರಿಕಾ ಸಂಘದ ಅಧ್ಯಕ್ಷ ಹಿರಿಯಣ್ಣ ಕಿದಿಯೂರು, ಉಡುಪಿ-ದ.ಕ. ಮೀನುಗಾರಿಕಾ ಒಕ್ಕೂಟದ  ಅಧ್ಯಕ್ಷ ಯಶಪಾಲ ಸುವರ್ಣ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT