ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ಊರಿನ ಕುಸ್ತಿ ಕಂಪು

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಲ್ಲಿಗೆ ಹೂವಿನ ಸುವಾಸನೆಗೆ ಹೆಸರಾದ ಮೈಸೂರಿನ ಮಣ್ಣಿನಲ್ಲಿ ಕುಸ್ತಿಯ ಬೇರುಗಳೂ ಗಟ್ಟಿಯಾಗಿವೆ.

ಪ್ರತಿ ಓಣಿಯಲ್ಲಿಯೂ ಅಸಾಧಾರಣ ಕುಸ್ತಿ ಪ್ರತಿಭೆಗಳಿದ್ದರೂ, ವಿಶ್ವಚಾಂಪಿಯನ್ನರನ್ನು ಬೆಳೆಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ. ಆಗಿನ ಮಹಾರಾಜರಂತೆ ಈಗ ರಾಜಕೀಯ ಧುರೀಣರು ಔದಾರ‌್ಯ ಮೆರೆದರೆ ಆ ಕನಸೂ ಕೈಗೂಡಬಹುದು...

ದುಡ್ಡು ಕೊಟ್ಟು ಟಿಕೆಟ್ ಕೊಂಡು ಕುಸ್ತಿ ನೋಡುವ ಸಾವಿರಾರು ಜನ ಇನ್ನೂ ಮೈಸೂರಿನಲ್ಲಿದ್ದಾರೆ. ಗೋವಾ, ಕೋಲ್ಕತ್ತದಲ್ಲಿ ಫುಟ್‌ಬಾಲ್‌ಗೆ ಇರುವಷ್ಟೇ ಕ್ರೇಜ್ ಇಲ್ಲಿ ಕುಸ್ತಿಗೆ ಇದೆ.

`ಗರಡಿಗಳ ನಗರಿ~ ಎಂದೇ ಖ್ಯಾತಿ ಪಡೆದಿರುವ ಈ ನಾಡನ್ನು ಆಳಿದ ಮಹಾರಾಜರು ಹಾಕಿದ ಕುಸ್ತಿ ಸಂಸ್ಕಾರದ ಫಲ ಇದು. ಕಲಿಭೀಮ ಎಂದೇ ಹೆಸರಾಗಿದ್ದ ನರಸರಾಜ ಒಡೆಯರು, ಮುಮ್ಮಡಿ ಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು ಕುಸ್ತಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹ ಅವಿಸ್ಮರಣೀಯ.

ದಸರಾ ಸಂದರ್ಭದಲ್ಲಿ ಬೇರೆ ಸಂಸ್ಥಾನಗಳಿಂದ ಪೈಲ್ವಾನರನ್ನು ಕರೆಸಿ ಒಂದು ತಿಂಗಳು ಅವರಿಗೆ ಊಟ, ವಸತಿ, ಉಪಚಾರಗಳನ್ನು ನೀಡುತ್ತಿದ್ದರು. ದರ್ಬಾರ್ ಭಕ್ಷಿ. ಕಿಲ್ಲೇದಾರ್ ಭಕ್ಷಿ ಸ್ಥಾನಗಳಲ್ಲಿರುವವರು ಕುಸ್ತಿ ಮಾಡಬೇಕಾದ ಸೂಕ್ತ ಜೋಡಿಗಳನ್ನು ನಿರ್ಧರಿಸುತ್ತಿದ್ದರು.

ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವೇ ಇರಲಿಲ್ಲ. ಒಂದು ತಿಂಗಳ ಅವಧಿಯಲ್ಲಿ ಪೈಲ್ವಾನರ ಅಭ್ಯಾಸ, ವ್ಯಾಯಾಮದ ರೀತಿಗಳನ್ನು ಗಮನಿಸಿ ಜೋಡಿಗಳನ್ನು ನಿರ್ಧರಿಸುತ್ತಿದ್ದರು.

ಅರಮನೆ ಮುಂದೆ ವಿಜಯದಶಮಿಯಂದು ನಡೆಯುತ್ತಿದ್ದ ಕುಸ್ತಿ ವೀಕ್ಷಿಸಲು ದೇಶವಿದೇಶಗಳಿಂದಲೂ ಪ್ರೇಕ್ಷಕರು ಬರುತ್ತಿದ್ದರು. ಅತ್ಯಂತ ತುರುಸಿನ ಕುಸ್ತಿ ನಡೆಯುತ್ತಿದ್ದವು. ಅಂತ್ಯದಲ್ಲಿ ಗೆದ್ದವರಿಗೆ ಮತ್ತು ಸೋತವರಿಗೆ ಇಬ್ಬರಿಗೂ ಸಮಾನ ಗೌರವ ಸಿಗುತ್ತಿತ್ತು.

ಇಲ್ಲಿ ಕ್ರೀಡಾ ಮನೋಭಾವವೇ ಶ್ರೇಷ್ಠ ಎಂದು ತಿಳಿದಿದ್ದ ಮಹಾರಾಜರು ಇಬ್ಬರಿಗೆ ಸಮಪ್ರಮಾಣದ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸುತ್ತಿದ್ದರು. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಅದರ ಹಿಂದಿನ ಶ್ರಮ ಮಾತ್ರ ಒಂದೇ ಎಂಬ ಭಾವ ಅವರದ್ದಾಗಿತ್ತು. 

ಪ್ರೀತಿ ಉಳಿಯಿತು; ಕುಸ್ತಿ?: ಇದೆಲ್ಲದರ ಪರಿಣಾಮವಾಗಿ ಇಲ್ಲಿಯ ಜನರ ರಕ್ತದಲ್ಲಿ ಕುಸ್ತಿ ಪ್ರೀತಿಯು ಗಟ್ಟಿಯಾಗಿ ಉಳಿಯಿತು. ಆದರೆ, ಇಂದಿನ ಆಡಳಿತ ವ್ಯವಸ್ಥೆಯ ಅನಾದರದಿಂದ ಎಷ್ಟು ಎತ್ತರಕ್ಕೆ ಈ ಕಲೆ ಬೆಳೆಯಬೇಕಿತ್ತೋ ಅಷ್ಟು ಬೆಳೆಯಲಿಲ್ಲ.

ಕೇವಲ ಸಂಪ್ರದಾಯ ಮತ್ತು ಕಲೆಯಾಗಿಯೇ ಉಳಿದ ಕುಸ್ತಿಯನ್ನು ಅಂತರರಾಷ್ಟ್ರೀಯ ಕ್ರೀಡೆಯ ಮಟ್ಟಕ್ಕೆ ಬೆಳೆಸುವಲ್ಲಿ ಮೈಸೂರು ಇನ್ನೂ ಸಫಲವಾಗಿಲ್ಲ. ಪೈಲ್ವಾನರ ಕಣಜಗಳೇ ಆಗಿರುವ ಹರಿಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಕುಸ್ತಿಯನ್ನು ಕಲೆಯಂತೆ ಆರಾಧಿಸಿದರೂ ಕ್ರೀಡೆಯಾಗಿ ಬೆಳೆಸುವಲ್ಲಿ ಹಿಂದೆ ಬೀಳಲಿಲ್ಲ.

ಆ ಕೆಲಸ ಉತ್ತರ ಕರ್ನಾಟಕದಲ್ಲಿ ಸ್ವಲ್ಪಮಟ್ಟಿಗೆ ಆಯಿತು. ಒಲಿಂಪಿಯನ್ ಎಂ.ಆರ್. ಪಾಟೀಲ, ದೋಹಾ ಏಷ್ಯನ್ ಗೇಮ್ಸನಲ್ಲಿ ಕಂಚು ಗೆದ್ದ ವಿನಾಯಕ ದಳವಿ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಕುಸ್ತಿಪಟುಗಳು. 

ದಾವಣಗೆರೆ ಕೂಡ ಉತ್ತಮ ಕುಸ್ತಿಪಟುಗಳನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿ ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿಯನ್ನು ಗಂಭೀರವಾಗಿ ಅಳವಡಿಸಿಕೊಂಡಿರುವುದು.

ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್ (ಫಿಲಾ) ಮತ್ತು ಒಲಿಂಪಿಕ್ಸ್‌ನಿಂದ ಮಾನ್ಯತೆ ಪಡೆದ ಈ ಎರಡೂ ಪ್ರಕಾರಗಳನ್ನು ಮ್ಯಾಟ್ ಮೇಲೆ ಆಡಲಾಗುತ್ತದೆ.

ಮನೆಗೊಬ್ಬ ಕುಸ್ತಿಪಟು ಸಿಗುವ ಮೈಸೂರಿನಲ್ಲಿ ಮಾತ್ರ ಇವೆರಡೂ ವಿಧಗಳನ್ನು ಬೆಳೆಸುವ ಕಾರ್ಯ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ಮ್ಯಾಟ್ ಕುಸ್ತಿಗೆ ಆದ್ಯತೆ ಸಿಕ್ಕಿದೆ.
 
ಆದರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಥಳೀಯ ಕುಸ್ತಿಪ್ರೇಮಿಗಳು ಈ ಬಗ್ಗೆ ಹೆಚ್ಚು ಪ್ರಯತ್ನ ಮಾಡಿಲ್ಲ. ಇಡೀ ಮೈಸೂರು ಜಿಲ್ಲೆಯಲ್ಲಿ ಇರುವ 244 ಗರಡಿಮನೆಗಳ ಪೈಕಿ 72 ಗರಡಿಗಳು ಮೈಸೂರು ನಗರದಲ್ಲಿಯೇ ಇವೆ.

ಆದರೂ ಕ್ರೀಡಾ ಇಲಾಖೆಗೆ ಒಬ್ಬ ಕುಸ್ತಿ ಕೋಚ್ ಇಲ್ಲದೇ ಐದು ವರ್ಷಗಳೇ ಕಳೆದುಹೋಗಿವೆ.

`ನಾಡಕುಸ್ತಿಗೆ (ಮಟ್ಟಿಯ ಮೇಲೆ) ಹೆಸರುವಾಸಿಯಾದ ಮೈಸೂರಿನಲ್ಲಿ ಅಪ್ರತಿಮ ಕುಸ್ತಿಪಟುಗಳು ಇದ್ದರು. ಈಗಲೂ ಸಾಕಷ್ಟು ಪ್ರತಿಭೆಗಳಿವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿ ಕಲಿಯಬೇಕು.

ಅದಕ್ಕಾಗಿ ನುರಿತ ತರಬೇತುದಾರರ ಅಗತ್ಯವಿದೆ. ಈ ಕುರಿತು ಹಲವಾರು ಬಾರಿ ಇಲಾಖೆಗೆ ಪತ್ರ ಬರೆದರೂ ಫಲ ನೀಡಿಲ್ಲ~ ಎಂದು ಗರಡಿ ಸಂಘದ ಅಧ್ಯಕ್ಷ ಯಜಮಾನ್, ಪೈಲ್ವಾನ್ ಮಹಾದೇವ್ ಹೇಳುತ್ತಾರೆ.

ದಾವಣಗೆರೆ, ಧಾರವಾಡ, ಬೆಳಗಾವಿ ಮಾದರಿಯಲ್ಲಿ ಕುಸ್ತಿಗಾಗಿಯೇ ಇಲ್ಲೊಂದು ಕ್ರೀಡಾ ವಸತಿ ಶಾಲೆ ಬೇಕು ಎನ್ನುವ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ.ನಗರಪ್ರದೇಶದಲ್ಲಿ, ಅಕ್ಕಪಕ್ಕದ ಹಳ್ಳಿಗಳಲ್ಲಿ ಇವತ್ತಿಗೂ ಸಾಕಷ್ಟು ಕುಸ್ತಿ ಪ್ರತಿಭೆಗಳಿವೆ.

ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳಲ್ಲಿ ಅವರು ತೊಳಲಾಡುತ್ತಿದ್ದಾರೆ. ಜಾತ್ರೆ, ಉತ್ಸವಗಳ ಕುಸ್ತಿಯಲ್ಲಿ ಮಿಂಚಿ ಒಂದಿಷ್ಟು ಗೌರವ-ಧನ ಸಂಪಾದಿಸಿದರೆ ಸಾಕು ಎನ್ನುವ ಸೀಮಿತಕ್ಕೆ ಒಳಗಾದವರೇ ಹೆಚ್ಚು.

ಈ ಪ್ರತಿಭೆಗಳ ಸಮೂಹದಲ್ಲಿ ವಿಶ್ವಚಾಂಪಿಯನ್ ಸುಶೀಲಕುಮಾರ್ ಅವರಂತಹ ಒಬ್ಬರಾದರೂ ಸಿಕ್ಕೇ ಸಿಗುತ್ತಾರೆ. ಆದರೆ ಹುಡುಕುವ ಪ್ರಯತ್ನ ಆಗಬೇಕು. ಏಕೆಂದರೆ ಯಾವುದೇ ಆಟದ ಬೆಳವಣಿಗೆಗೆ ಚಾಂಪಿಯನ್ನರೇ ಕಾರಣ.

ಅವರ ಪ್ರೇರಣೆಯಿಂದಲೇ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ದಸರೆಯ ಪರಂಪರೆಯಾಗಿ ಬೆಳೆದ ಕುಸ್ತಿ ಪ್ರತಿಭೆಗಳು ಅಂತರರಾಷ್ಟ್ರೀಯ ಪದಕಗಳ ಬೇಟೆಗೆ `ಸೀಮೋಲ್ಲಂಘನ~ ಮಾಡಿದಾಗ ಮಾತ್ರ ನಾಡಿಗೂ, ಕ್ರೀಡೆಗೂ ಶ್ರೇಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT