ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ರಸ್ತೆ -ಸೇತುವೆ ಕುಸಿತ, ಸಂಚಾರ ಅಸ್ತವ್ಯಸ್ತ

Last Updated 4 ಆಗಸ್ಟ್ 2013, 6:27 IST
ಅಕ್ಷರ ಗಾತ್ರ

ಸಕಲೇಶಪುರ: ಕಳೆದ ಬುಧವಾರದಿಂದ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮುಂಗಾರು ಮಳೆ ಶನಿವಾರವೂ ಸಹ ಮುಂದುವರೆದಿದ್ದು, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.

ಹೇಮಾವತಿ ನದಿಯ ಪ್ರವಾಹ ಮುಂದುವರೆ ದಿದ್ದು, ಪಟ್ಟಣದ ಆಜಾದ್ ರಸ್ತೆ, ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮಾಚಿ ದೇವರ ದೇವಸ್ಥಾನ ಗಳು ಶನಿವಾರವೂ ಸಹ ಜಲಾವೃತಗೊಂಡಿದ್ದವು.  ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನ ಹಾಗೂ ಆಜಾದ್ ರಸ್ತೆಗಳಲ್ಲಿ ಪೊಲೀಸ್ ಕಾವಲು ಹಾಕಿದೆ. 

ಶನಿವಾರ ಮುಂಜಾನೆ 6ರಿಂದ ಸಂಜೆ 6ರ ವರೆಗೆ ತಾಲ್ಲೂಕಿನಲ್ಲಿ ಸರಾಸರಿ 108 ಮಿ.ಮೀ. ಮಳೆಯಾಗಿರುವುದಾಗಿ ತಿಳಿದು ಬಂದಿದೆ.
ಬೆಳಗೋಡು ಹೋಬಳಿ ವ್ಯಾಪ್ತಿಯ ಮೆಣಸಮಕ್ಕಿ ಹಾಗೂ ಈಶ್ವರಳ್ಳಿ ನಡುವಿನ ಸಂಪರ್ಕ ಸೇತುವೆ, ಹೆಗ್ಗದ್ದೆ-ಆಲುವಳ್ಳಿ, ಕಡಗರವಳ್ಳಿ ನಡುವಿನ ಸಂಪರ್ಕ ರಸ್ತೆ ಸೇರಿದಂತೆ ಹಲವೆಡೆ ರಸ್ತೆ, ಹಾಗೂ ಕಾಲು ಸೇತುವೆಗಳು ತುಂಡಾಗಿವೆ. ಒಂದು ಗ್ರಾಮ ದಿಂದ ಮತ್ತೊಂದು ಗ್ರಾಮಕ್ಕೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ  ಹೋಗುವುದಕ್ಕೆ ಸಮಸ್ಯೆಯಾಗಿದೆ. ಮೆಣಸುಮಕ್ಕಿ ಹಾಗೂ ಈಶ್ವರಳ್ಳಿ ನಡುವಿನ ಸೇತುವೆ ಕೊಚ್ಚಿಹೊಗಿರುವುದರಿಂದ ಗ್ರಾಮಸ್ಥರು 7ಕಿ.ಮೀ. ಬಳಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾಗಿದೆ, ಮನೆಯಿಂದ ತಮ್ಮ ಜಮೀನುಗಳಿಗೂ ಸಹ 7 ಕಿ.ಮೀ. ಬಳಸಿ ಬರುವಂತಹ ಸಮಸ್ಯೆ ಉಂಟಾಗಿದೆ ಎಂದು ಮೆಣಸುಮಕ್ಕಿ ಗ್ರಾಮದ ಉದಯ್‌ಶಂಕರ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಹೆಗ್ಗದ್ದೆ ಯಿಂದ ಆಲುವಳ್ಳಿ, ಕಡಗರವಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ಈ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸುಮಾರು 300 ಕುಟುಂಬಗಳಿರುವ ಈ ಗ್ರಾಮಗಳ ಜನರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ವೆಂಕಟೇಶ್ ಹಾಗೂ ಸಿಬ್ಬಂದಿ ತೆರಳಿ ತುರ್ತು ಕಾಮಗಾರಿ ಕೈಗೊಂಡಿದ್ದಾರೆ.

ದಬ್ಬೇಗದ್ದೆ ವೇದಮೂರ್ತಿ ಅವರ ಕಾಫಿ ತೋಟದಲ್ಲಿ ಸುಮಾರು 200 ಮರಗಳು ಸೇರಿದಂತೆ ತಾಲ್ಲೂಕಿನಾಧ್ಯಂತ ಸಾವಿರಾರು ಮರಗಳು ಧರೆಗುರಳಿವೆ. ಅಗನಿ ಗ್ರಾಮದ ಎ.ಎಸ್.ಸಂಗಪ್ಪ ಅವರ ಕೊಟ್ಟಿಗೆ ಕುಸಿದು ಅವರ ಪತ್ನಿ ಎನ್.ಪಿ. ಪೂರ್ಣ ಅವರ ಕಾಲಿಗೆ ಪೆಟ್ಟಾಗಿದೆ. ಗ್ರಾಮದ ಕಾಳಿ ಚಂದ್ರಯ್ಯ, ಎ.ಎಂ.ಮೋಹನ್, ಜಗದೀಶಾಚಾರ್, ಜಯಪ್ಪಚಾರ್ ಇವರುಗಳ ಮನೆ ಹೆಂಚುಗಳು ಗಾಳಿ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

`ತಾಲ್ಲೂಕಿನಲ್ಲಿ ಸುಮಾರು 175 ಕಿ.ಮೀ. ರಸ್ತೆ ಸಂಪೂರ್ಣವಾಗಿ ಹಾನಿಯಾಗಿದೆ. ಈ ರಸ್ತೆಗಳ ಪುನರ್ ನಿರ್ಮಾಣಕ್ಕೆ ಸುಮಾರು 10 ಕೋಟಿ ರೂಪಾಯಿ ಅಂದಾಜು ಮಾಡಲಾಗಿದೆ. 40 ಮೋರಿಗಳು, 3 ಕಿರು ಸೇತುವೆಗಳು, ಸುಮಾರು 8 ಕಡೆ ತಡೆಗೋಡೆಗಳು ಸೇರಿದಂತೆ 12 ಕೋಟಿ ರೂಪಾಯಿ ನಷ್ಟವನ್ನು ಅಂದಾಜು ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ವೆಂಕಟೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

3 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿ: ಪ್ರಾಥಮಿಕ ವರದಿ ಪ್ರಕಾರ ತಾಲ್ಲೂಕಿನಲ್ಲಿ ಈ ವರೆಗೆ 2500 ಎಕರೆ ಪ್ರದೇಶದಲ್ಲಿ ಶೇ 50 ಕ್ಕಿಂತ ಹೆಚ್ಚಿನ ಪ್ರಮಾಣದ ಭತ್ತದ ಬೆಳೆ ಹಾನಿಗೊಂಡಿದೆ. ತಾಲ್ಲೂಕಿನ ಇನ್ನೂ ಹಲವು ಗ್ರಾಮಗಳಲ್ಲಿ ಉಂಟಾಗಿರುವ ಹಾನಿಯ ಪ್ರಮಾಣದ ದಾಖಲಾಗಿಲ್ಲ ಒಟ್ಟಿನಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದ ಭತ್ತದ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಮಾತ್ರವಲ್ಲಿ ಗದ್ದೆಗಳಿಗೆ ರಭಸವಾಗಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಹಲವೆಡೆ ಮಣ್ಣು ಕೊಚ್ಚಿ ಹೋಗಿದೆ. ಇನ್ನೂ ಹಲವೆಡೆ ಮಣ್ಣು ಹಾಗೂ ಮರಳು ಕೊಚ್ಚಿಕೊಂಡು ಬಂದು ಗದ್ದೆಯ ಮೇಲೆ ನಿಂತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೊಚ್ಚಿ ಹೋದ ಮಣ್ಣು ತಂದು ಹಾಕುವುದಾಗಲಿ, ಗದ್ದೆಯ ಮೇಲೆ ನಿಂತಿರುವ ಮರಳು ಮಣ್ಣು ತೆಗೆದು ಭತ್ತ ಬೆಳೆ ಯುವುದಕ್ಕೆ ಸಾಧ್ಯವೇ ಇಲ್ಲ. ಹೊಸದಾಗಿ ಸಸಿ ಮಡಿ ಮಾಡುವುದಕ್ಕೆ ಭತ್ತದ ಬಿತ್ತನೆ ಬೀಜದ ಕೊರತೆ ಸಹ ಇದೆ ಹೀಗಾಗಿ ನಷ್ಟದ ಪ್ರಮಾಣ ಅಂದಾಜು ಮಾಡುವುದಕ್ಕೆ ಕಾಲಾವಕಾಶಬೇಕಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೇಶ್ ತಿಳಿಸಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು
ಹೊಳೆನರಸೀಪುರ ವರದಿ:ಪಟ್ಟಣದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹೇಮಾವತಿ ನದಿಗೆ ಗೊರೂರು ಅಣೆಕಟ್ಟೆಯಿಂದ ನೀರು ಬಿಟ್ಟಿದ್ದು ಹೊಳೆಯಲ್ಲಿ ನೀರಿನ ಮಟ್ಟ ವ್ಯಾಪಕವಾಗಿ ಹೆಚ್ಚಾಗಿದೆ. ನದಿ ದಡದ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ನೀರಿನಲ್ಲಿ ಹಾವು, ಕಪ್ಪೆ, ಜಲಚರಗಳು ತೇಲಾಡುತ್ತಿದ್ದವು.

ತಡೆಗೋಡೆ ಇಲ್ಲದ ದಡದಲ್ಲಿ ಜಮೀನಿಗೆ ನೀರು ನುಗ್ಗಿದ್ದು ಭತ್ತದ ನಾಟಿಗಾಗಿ ಸಿದ್ದಮಾಡಿಕೊಂಡಿದ್ದ ಸಸಿ ಮಡಿಗಳು ನೀರುಪಾಲಾಗಿವೆ. ನದಿಗೆ ಈಚೆಗೆ ತಡೆಗೋಡೆ ನಿರ್ಮಿಸಲಾಗಿದ್ದು ನೀರು ಎಲ್ಲ ಕಡೆ ನುಗ್ಗಿಲ್ಲ.

ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ 93 ಮಿ. ಮೀ. ಆದರೆ  ಈವರೆಗೆ145.6 ಮಿ. ಮೀ ಮಳೆ ಬಿದ್ದಿದೆ. ಕಳೆದ ಮೂರು ದಿನದಲ್ಲಿ 34.6 ಮಿ. ಮೀ ಮಳೆ ಬಿದ್ದಿದೆ. ಜನವರಿಯಿಂದ ಇದುವರೆವಿಗೂ 135 ಮಿ. ಮೀ ಮಳೆಯಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿ ಭಾನು ಪ್ರಕಾಶ್ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಮಳೆಯಿಂದಾಗಿ ನದಿ ಪಾತ್ರದಲ್ಲಿ ಕೆಲವರ ಜಮೀನಿಗೆ ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. 

ವ್ಯಾಪಕ ಮಳೆ: ಅಪಾರ ಹಾನಿ
ಆಲೂರು ವರದಿ: ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ತಾಲ್ಲೂಕಿನ ವಿವಿಧೆಡೆ ಮರಗಳು ಧರೆಗುರುಳಿವೆ, ಮನೆ ಗೋಡೆಗಳು ಕುಸಿದಿವೆ. ಭತ್ತ, ಕಾಫಿ, ಏಲಕ್ಕಿ, ಮೆಕ್ಕೆ ಜೋಳ, ಆಲೂಗೆಡ್ಡೆ, ಶುಂಠಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಂಡಿವೆ.
ತಾಲ್ಲೂಕಿನ ಶಂಖತೀರ್ಥ ಮತ್ತು ಚಕ್ರತೀರ್ಥ ತುಂಬಿ ಹರಿಯುತ್ತಿವೆ. ವಾಟೇಹೊಳೆ ಜಲಾಶಯ ಭರ್ತಿ ಹಂತ ತಲುಪಿದೆ. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಸಂಬಂಧಪಟ್ಟರು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT