ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಆರ್ಭಟ: ಜನಜೀವನ- ಸಂಚಾರ ಅಸ್ತವ್ಯಸ್ತ

Last Updated 6 ಆಗಸ್ಟ್ 2013, 5:54 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ, ಭಾಗಮಂಡಲ, ಸಂಪಾಜೆ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಆಶ್ಲೇಷಾ ಮಳೆಯ ಆರ್ಭಟ ಮತ್ತಷ್ಟು ಜೋರಾಗಿದೆ.

ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿ ಸಮೀಪದ ಕೊಯಿನಾಡು ಬಳಿ ಬಿರುಕು ಬಿಟ್ಟಿದ್ದ ಮಡಿಕೇರಿ- ಮಂಗಳೂರು ರಾಜ್ಯ ಹೆದ್ದಾರಿ ಮಳೆಯ ಆರ್ಭಟಕ್ಕೆ ಈಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಈ ಹಿನ್ನೆಲೆಯಲ್ಲಿ ಮಡಿಕೇರಿಯಿಂದ ಪುತ್ತೂರು, ಸುಳ್ಯ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಭಾಗಕ್ಕೆ ಇರುವ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಸುಳ್ಯ, ಮಂಗಳೂರಿನಿಂದ ಬರುವ ಬಸ್ಸುಗಳು ರಸ್ತೆ ಕುಸಿತದ ಸ್ಥಳದ ವರೆಗೆ ಆಗಮಿಸಲಿದ್ದು, ನಂತರ ಪ್ರಯಾಣಿಕರು ಬಸ್ಸಿನಿಂದ ಇಳಿದು ನಡೆದುಕೊಂಡು ರಸ್ತೆಯ ಇನ್ನೊಂದು ತುದಿಗೆ ತೆರಳಿ ಅಲ್ಲಿಂದ ಮಡಿಕೇರಿಗೆ ತೆರಳುವ ಬಸ್‌ನಲ್ಲಿ ಹೋಗಲು ಅವಕಾಶ ಕಲ್ಪಿಸಲಾಗಿದೆ. ಮಡಿಕೇರಿಯಿಂದ ಸುಳ್ಯ, ಮಂಗಳೂರು ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೂ ಕೂಡ ಇದೇ ರೀತಿ ವ್ಯವಸ್ಥೆ ಮಾಡಲಾಗಿದೆ.

ಮಡಿಕೇರಿ ಭಾಗಕ್ಕೆ ಬರುವ ಎಲ್ಲಾ ಭಾಗದ ರಸ್ತೆಗಳು ಒಂದೊಂದಾಗಿ ಕಡಿತಗೊಳ್ಳುತ್ತಿದ್ದು, ಮಡಿಕೇರಿ ನಗರ ಮುಂದಿನ ದಿನಗಳಲ್ಲಿ ದ್ವೀಪವಾಗಿ ಮಾರ್ಪಾಡಾಗುವ ಆತಂಕ ಎದುರಾಗಿದೆ.

ನಗರದಲ್ಲಿ ಆಶ್ಲೇಷಾ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಮಳೆಯಿಂದಾಗಿ ಜನರು ತತ್ತರಿಸಿದ್ದಾರೆ. ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ದಿನವಿಡೀ ತನ್ನ ಆರ್ಭಟ ಮುಂದುವರೆಸಿದ್ದು, ನಗರದ ಹಲವೆಡೆ ಬರೆ, ಮನೆ ಕುಸಿತ, ಮರ ಧರೆಗುರುಳಿ ಬಿದ್ದಿರುವುದು, ವಿದ್ಯುತ್ ಸಮಸ್ಯೆ, ಉಂಟಾಗಿದೆ.

ಇದರ ಜೊತೆಗೆ ಅತ್ಯಧಿಕ ಮಳೆ ಬಿದ್ದರೂ ಕೂಡ ಮಡಿಕೇರಿಯಲ್ಲಿ ಜನರಿಗೆ ಕುಡಿಯಲು ನೀರು ಇಲ್ಲವಾಗಿದೆ. ನಗರ ವ್ಯಾಪ್ತಿಯಲ್ಲಿ ನೀರಿನ ಪೈಪ್ ಲೈನ್‌ಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ನಾಪೋಕ್ಲು, ವಿರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ, ಕುಶಾಲನಗರದ ಭಾಗಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಮಳೆ ಹಾನಿ: ಕೊಡಗು ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಮಳೆ ಹಾನಿ ಪ್ರಕರಣಗಳು ಕೂಡ ಹೆಚ್ಚಾಗಿವೆ.

ಸೋಮವಾರಪೇಟೆ ತಾಲ್ಲೂಕಿನ ಯಡಿಯೂರು ಗ್ರಾಮದ ಪುಟ್ಟಸ್ವಾಮಿ, ಚೌಡ್ಲು ಗ್ರಾಮದ ಜಯಲಕ್ಷ್ಮಿ, ತಂಗಮ್ಮ, ಗಿರಿಜಾ, ಬಿಳಿಕೊಪ್ಪ ಗ್ರಾಮದ ಲೀಲಾ ಅವರ ಮನೆಗಳು ಮಳೆಯಿಂದಾಗಿ ಜಖಂಗೊಂಡಿವೆ.

ಸೋಮವಾರಪೇಟೆಯ ಬಸವೇಶ್ವರ ರಸ್ತೆಯಲ್ಲಿನ ಶಿವಮೂರ್ತಿ ಅವರ ಮನೆ ಕುಸಿದಿದ್ದು, ಪಟ್ಟಣದ ಚೆನ್ನಯ್ಯ ಅವರ ಮನೆಯ ಶೌಚಾಲಯ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮಳೆ ವಿವರ:
ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತ 24 ಗಂಟೆಯಲ್ಲಿ 34.82 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 33.5 ಮಿ.ಮೀ. ಮಳೆ ಸುರಿದಿತ್ತು. ಜನವರಿಯಿಂದ ಇಲ್ಲಿಯವರೆಗೆ 2,616.46 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.021.54 ಮಿ.ಮೀ. ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 91.3 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 6.88 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 6.27 ಮಿ.ಮೀ. ಮಳೆ ಸುರಿದಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 100.8 ಮಿ.ಮೀ., ನಾಪೋಕ್ಲು 28.6 ಮಿ.ಮೀ., ಸಂಪಾಜೆ 136.2 ಮಿ.ಮೀ., ಭಾಗಮಂಡಲ 99.6 ಮಿ.ಮೀ., ವೀರಾಜಪೇಟೆ ಕಸಬಾ 9.2 ಮಿ.ಮೀ., ಹುದಿಕೇರಿ 7.9, ಶ್ರಿಮಂಗಲ 16.8 ಮಿ.ಮೀ., ಪೊನ್ನಂಪೇಟೆ 3.4 ಮಿ.ಮೀ., ಅಮ್ಮತ್ತಿ 2 ಮಿ.ಮೀ., ಬಾಳಲೆ 2 ಮಿ.ಮೀ., ಸೋಮವಾರಪೇಟೆ ಕಸಬಾ 4.8 ಮಿ.ಮೀ., ಶನಿವಾರಸಂತೆ 4.6 ಮಿ.ಮೀ., ಶಾಂತಳ್ಳಿ 8 ಮಿ.ಮೀ., ಕೊಡ್ಲಿಪೇಟೆ 3 ಮಿ.ಮೀ., ಕುಶಾಲನಗರ 1.2 ಮಿ.ಮೀ., ಸುಂಟಿಕೊಪ್ಪ 16 ಮಿ.ಮೀ. ಮಳೆಯಾಗಿದೆ. 

ಹಾರಂಗಿ ಜಲಾಶಯದ ನೀರಿನ ಮಟ್ಟ:  ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2,857.58 ಅಡಿಗಳು, ಕಳೆದ ವರ್ಷ ಇದೇ ದಿನ 2,856.66 ಅಡಿ ನೀರು ಸಂಗ್ರಹವಾಗಿತ್ತು.

ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 9.2 ಮಿ.ಮೀ. ಮಳೆ ಸುರಿದಿದೆ. ಇಂದಿನ ನೀರಿನ ಒಳ ಹರಿವು 10,441 ಕ್ಯೂಸೆಕ್ ಆಗಿದೆ.  ಇಂದಿನ ನೀರಿನ ಹೊರ ಹರಿವು ನದಿಗೆ 9,900, ನಾಲೆಗೆ 800 ಕ್ಯೂಸೆಕ್ ಆಗಿದೆ.

ಕುಶಾಲನಗರ ವರದಿ: ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಸೋಮವಾರ ಧಾರಾಕಾರವಾಗಿ ಸುರಿಯಿತು.
ಭಾನುವಾರ ಸಂಪೂರ್ಣ ಬಿಡುವು ನೀಡಿದ್ದ ಮಳೆ ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ರಭಸವಾಗಿ ಸುರಿಯಿತು. ಬೆಳಿಗ್ಗೆಯಿಂದ ಮಳೆ ಇರಲಿಲ್ಲವಾದರೂ ದಟ್ಟವಾದ ಮೋಡಕವಿದ ವಾತವಾರಣವಿತ್ತು. ಮಳೆಯಿಂದಾಗಿ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT