ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಕೃಷಿ ಚಟುವಟಿಕೆ ಸ್ಥಗಿತ

ಗುಳೆ ಹೊರಟಿರುವ ಜನ
Last Updated 3 ಜುಲೈ 2013, 5:05 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಚಟುವಟಿಕೆ ಸ್ಥಗಿತಗೊಂಡಿದೆ. ಜೂನ್ ತಿಂಗಳ ಪ್ರಾರಂಭದಲ್ಲಿ ಸುರಿದ ಅಲ್ಪ ಸ್ವಲ್ಪ ಮಳೆಗೆ ಭೂಮಿಯನ್ನು ಹದ ಮಾಡಿಕೊಂಡು ಕೊಟ್ಟಿಗೆ ಗೊಬ್ಬರ ಸಂಗ್ರಹಿಸಿ, ಹೊಲದಲ್ಲಿ ಗುಡ್ಡೆ ಹಾಕಿರುವ ರೈತರು ಗೊಬ್ಬರ ಹರಡಿ ಬಿತ್ತನೆ ಮಾಡಲು ಹದ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ನೀರಾವರಿ ಜಮೀನುಗಳು ಸಹ ಖುಷ್ಕಿ ಭೂಮಿಗಳಾಗಿವೆ. ಎಲ್ಲಿಯೂ ಒಂದೇ ಒಂದು ಕಾಳು ಬಿತ್ತನೆಯಾಗಿಲ್ಲ. ನೆಲಗಡಲೆ ಸುಲಿದು ಬೀಜೋಪಚಾರ ಮಾಡಿರುವ ರೈತರು ಆಕಾಶದಿಂದ ಕಣ್ಣು ಕೀಳುತ್ತಿಲ್ಲ.

ಮುಸುಕಿನ ಜೋಳದ ಬಿತ್ತನೆ ಬೀಜ ಮತ್ತು ರಾಸಾಯನಿಕ ಗೊಬ್ಬರವನ್ನೂ ಕೆಲವರು ದಾಸ್ತಾನು ಮಾಡಿಕೊಂಡಿದ್ದಾರೆ.  ವಾಡಿಕೆಯಂತೆ ಜೂನ್ ತಿಂಗಳ ಕೊನೆಯ ವಾರದಲ್ಲಿ ತೊಗರಿ ಬಿತ್ತನೆಯಾಗಬೇಕಿತ್ತು. ಆದರೆ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಯಾವುದೇ ಹೊಲದಲ್ಲಿಯೂ ತೊಗರಿಯ ಚಿಗುರೆಲೆ ಕಂಡು ಬರುತ್ತಿಲ್ಲ. ಜುಲೈ ತಿಂಗಳ ಮೊದಲ ವಾರದಲ್ಲಿ ನೆಲಗಡಲೆ, ಮುಸುಕಿನಜೋಳ ಬಿತ್ತನೆಯಾಗಬೇಕು. ಆದರೆ ಬಿತ್ತನೆಗೆ ಪೂರಕ ಮಳೆ ಬೀಳುತ್ತಿಲ್ಲ. ಈಗಾಗಲೇ ರೈತರು ದನಗಳಿಗೆ ಸಂಗ್ರಹಿಸಿಟ್ಟುಕೊಂಡಿದ್ದ ಮೇವು ಖಾಲಿಯಾಗಿದ್ದು, ರೈತರು ಪರಿತಪಿಸುತ್ತಿದ್ದಾರೆ.

ಮಳೆ ಬಿದ್ದಿದ್ದರೆ ರಾಸುಗಳು ಹಸಿರು ಹುಲ್ಲು ಮೇಯ್ದು ಹೊಟ್ಟೆ ಹೊರೆದುಕೊಳ್ಳುತ್ತಿದ್ದವು. ಆದರೆ ಈಗ ದನಗಳೊಂದಿಗೆ ರೈತರೂ ಮೇವಿಗಾಗಿ ಪರಿತಪಿಸುವಂತಾಗಿದೆ. ಮೇವು ಕೊಳ್ಳುತ್ತೇನೆ ಎಂದರೂ ಮಾರುವವರು ಮಾತ್ರ ಸಿಗುತ್ತಿಲ್ಲ.
ಮೇವಿಲ್ಲದೆ ಬಡಕಲಾಗಿರುವ ತಮ್ಮ ದನಕರುಗಳನ್ನು ಮಾರಾಟ ಅನಿ ವಾರ್ಯ ಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ.

ತಾಲ್ಲೂಕಿನ ಜನರು ಕಳೆದ ಮೂರು ವರ್ಷಗಳಿಂದ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷವೂ ಮಳೆ ಕೈ ಕೊಡುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನ ಬದುಕುವುದಾದರೂ ಹೇಗೆ? ಎಂದು ರೈತ ಲಕ್ಷ್ಮೀನರಸಪ್ಪ ಪ್ರಶ್ನಿಸುತ್ತಾರೆ.

ತಾಲ್ಲೂಕಿನಲ್ಲಿ ಪ್ರತಿದಿನ ಮೋಡ ಮುಚ್ಚಿಕೊಂಡು ತುಂತುರು ಮಳೆ ಬೀಳುತ್ತಿದೆ. ಬಿತ್ತನೆಗೆ ಸಾಕಾಗುಷ್ಟು ಮಳೆ ಮಾತ್ರ ಬೀಳುತ್ತಿಲ್ಲ. ಉತ್ತರ ಭಾರತ ಅಥವಾ ನಮ್ಮದೇ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಬೀಳುವ ಮಳೆ ಪ್ರಮಾಣದ ಶೇ.2ರಷ್ಟು ಮಳೆ ಬಿದ್ದರೂ ಸಾಕು ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಈ ವರ್ಷ ಹೇಗೆ ಜೀವನ ನಿರ್ವಹಿಸುವುದು ಎಂದು ದಿಕ್ಕು ತೋಚದ ಪರಿಸ್ಥಿಯಲ್ಲಿ ಜನ ದಿನದೂಡುತ್ತಿದ್ದಾರೆ. ಕೃಷಿ ಚಟುವಟಿಕೆ ನಡೆಸಲು  ಮಳೆಯಿಲ್ಲದೆ ಇರುವುದರಿಂದ ಕೆಲಸಕ್ಕಾಗಿ ಪಟ್ಟಣಗಳ ಕಡೆ ವಲಸೆ ಹೋಗುತ್ತಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ರೈತ ನಾರಾಯಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT