ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಳೆ'ನಾಡನ್ನೂ ಬಿಡದ ಬರಗಾಲ!

ಬರ ಬದುಕು ಭಾರ-6: ಮಲೆನಾಡಿಗೆ ಅತಿವೃಷ್ಟಿ, ಬಯಲುಸೀಮೆಗೆ ಅನಾವೃಷ್ಟಿ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: `ದೀಪದ ಕೆಳಗೆ ಕತ್ತಲು' ಎಂಬ ಮಾತು ಚಿಕ್ಕಮಗಳೂರು ಜಿಲ್ಲೆಗೆ ಅಕ್ಷರಶಃ ಒಪ್ಪುತ್ತದೆ. ಜಿಲ್ಲೆಯ ಬಹುಭಾಗ ಮಲೆನಾಡು ಅರ್ಥಾತ್ `ಮಳೆ'ನಾಡು ಪ್ರದೇಶ ಹೊಂದಿದೆ. ಇದರ ಸೆರಗಿನಬಯಲು ಸೀಮೆಯ ಕೆಲ ಹೋಬಳಿಗಳಲ್ಲಿ ಮಾತ್ರ ಈ ವರ್ಷವೂ ಬರದ ಛಾಯೆ ಆವರಿಸಿದೆ.

ಮಲೆನಾಡಿನಲ್ಲಿ ವಾಡಿಕೆ ಮೀರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಅತಿವೃಷ್ಟಿಯಿಂದ ಕೋಟ್ಯಂತರ ರೂಪಾಯಿ ಬೆಳೆ ಹಾನಿಯಾಗಿದೆ. ಬಯಲು ಸೀಮೆಯ ಕೆಲವು ಭಾಗಗಳಿಗೆ ಮಳೆ ಇಲ್ಲದೆ ಬರಗಾಲ ಬಂದೊದಗಿದೆ. ಒಂದೆಡೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ತುತ್ತಾದವರು ಪರಿಹಾರಕ್ಕೆ ಕಾಯುತ್ತಿದ್ದರೆ, ಇನ್ನೊಂದೆಡೆ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡವರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲಾ ಕೇಂದ್ರದಿಂದ 30 ಕಿ.ಮೀ ಅಂತರದಲ್ಲಿರುವ ಚಿಕ್ಕಮಗಳೂರು ತಾಲ್ಲೂಕಿನ ಗಡಿಯ 6 ಪಂಚಾಯಿತಿಗಳ ಗ್ರಾಮಗಳಲ್ಲಿ ತೀವ್ರ ಬರ ಕಾಣಿಸಿಕೊಂಡಿದೆ. ಲಕ್ಯಾ ಹೋಬಳಿಯ ಮಾಚೇನಹಳ್ಳಿ, ಬೆಳವಾಡಿ, ಕಳಸಾಪುರ, ಸಿಂದಿಗೆರೆ, ಕೆ.ಬಿ.ಹಾಳ್, ಈಶ್ವರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಮಳೆ ಕೊರತೆಯಿಂದ ಬರಗಾಲಕ್ಕೆ ನಲುಗಿವೆ. ಈ ಹೋಬಳಿಯಲ್ಲಿ 3265 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿರುವುದಾಗಿ ಕೃಷಿ ಇಲಾಖೆ ಅಂದಾಜು ಮಾಡಿದೆ.

ನೂರಾರು ಹೆಕ್ಟೇರ್‌ಗೆ ನೀರು ಒದಗಿಸುವ ಸಾಮರ್ಥ್ಯದ ಮಾಚೇನಹಳ್ಳಿ ಕೆರೆಯಲ್ಲಿ ಕಾಗೆ ಗುಟುಕಿಸಲೂ ಹನಿ ನೀರಿಲ್ಲ. ಜಾನುವಾರುಗಳಿಗೂ ಮೇವಿಲ್ಲ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಮೈಲು ದೂರದ ಜಮೀನುಗಳಲ್ಲಿರುವ ಕೊಳವೆ ಬಾವಿಗಳಿಂದ ನೀರು ತಂದು ಮನೆಯಲ್ಲಿ ಬಾನ (ಅನ್ನ) ಬೇಯಿಸಬೇಕಾದ ಪರಿಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ.

ಸುಮಾರು 2 ಸಾವಿರ ಜನಸಂಖ್ಯೆಯುಳ್ಳ ಮಾಚೇನಹಳ್ಳಿಯಲ್ಲಿ ಅರ್ಧದಷ್ಟು ಜನರು ಬೆಂಗಳೂರಿನ ಗಾರ್ಮೆಂಟ್ಸ್ ಮತ್ತು ಮಲೆನಾಡಿನ ಕಾಫಿ ತೋಟಗಳಿಗೆ ಕೂಲಿ ಅರಸಿ ಗುಳೆ ಹೋಗಿದ್ದಾರೆ ಎನ್ನುತ್ತಾರೆ ಮಾಚೇನಹಳ್ಳಿಯ ರೈತ ಶಿವಲಿಂಗಪ್ಪ.

`ಪ್ರಜಾವಾಣಿ' ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ `ಮಳೆ ಹೋಗಿ ಮೂರು ತಿಂಗಳಾಯ್ತು. ಸತ್ತಿದ್ದೀರಾ? ಬದುಕಿದ್ದೀರಾ? ಅಂಥ ಕೇಳೋಕೆ ಯಾರೊಬ್ಬರೂ ನಮ್ಮೂರ ಕಡೆ ತಲೆ ಹಾಕಿಲ್ಲ. ತಿಂಗಳಿಗೆ 30 ಕೆ.ಜಿ ಅಕ್ಕಿ ಕೊಟ್ಟರೆ ಅದರಲ್ಲಿ ಜೀವನ ಆಗುತ್ತಾ? ಬೆಂಕಿ ಪೊಟ್ಟಣ ಕೊಳ್ಳೋಕೂ ಜನರ ಕೈಯಲ್ಲಿ ದುಡ್ಡಿಲ್ಲ. ಮಳೆ- ಬೆಳೆ ಇಲ್ಲದಿದ್ದರೆ ಬದುಕು ನಡೆಸೋದು ಹೇಗೆ? ಉಪ್ಪು, ಮೆಣಸಿನಕಾಯಿಗೆ ಹಣ ಬೇಕಲ್ಲವಾ? ಮೂರು ವರ್ಷದಿಂದಲೂ ಒಂದು ಪೈರು ಕೈಗೆ ಸಿಕ್ತಿಲ್ಲ...' ಎಂದು ರೈತ ಮಹಿಳೆ ಪುಟ್ಟಲಕ್ಷ್ಮಮ್ಮ ಮಾಚೇನಹಳ್ಳಿ ಹಾಗೂ ಸುತ್ತಮುತ್ತಲಿನ ರೈತ ಕುಟುಂಬಗಳ ವ್ಯಥೆಯನ್ನು ಎಳೆ ಎಳೆಯಾಗಿ ವಿವರಿಸಿದರು.

ರೋಹಿಣಿ ಮಳೆ ಚೆನ್ನಾಗಿ ಸುರಿದಿದ್ದರಿಂದ ಮೆಕ್ಕೆಜೋಳ, ಜೋಳ, ಎಳ್ಳು, ಈರುಳ್ಳಿ ಬಿತ್ತಿದ್ದ ರೈತರು, ಮಳೆ ಇಲ್ಲದೆ ಈಗ ಎಲ್ಲ ಬೆಳೆಗಳು ಒಣಗಿ ಹೋಗಿ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಜೂನ್‌ನಲ್ಲಿ ಮಾಯವಾದ ಮಳೆ, `ಸಾಯುವವರ ಬಾಯಿಗೆ ನೀರು ಬಿಡುವಂತೆ' ಸೆಪ್ಟೆಂಬರ್‌ನಲ್ಲಿ ಒಂದಿನಿತು ಸುರಿದಿದೆ. ಈಗ ಯಾವ ಬೆಳೆಯನ್ನೂ ಬಿತ್ತಿ ಬೆಳೆಯಲಾಗದ ಪರಿಸ್ಥಿತಿ ಇದೆ. ಮುಂಗಾರಿಗೆ ಮಾಡಿದ ಸಾಲವೇ ಹೆಗಲೇರಿದೆ. ಮತ್ತೆ ಹಿಂಗಾರು ಹಂಗಾಮಿಗೆ ಹೊಸ ಸಾಲ ಎಲ್ಲಿ ತರುವುದು? ಎನ್ನುವ ಯೋಚನೆ ರೈತರದು.

ಇನ್ನು ಕಡೂರಿನ ಕೆಲ ಹಳ್ಳಿಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಮುಂಗಾರಿನಲ್ಲಿ ಸುರಿದ ಒಂದೆರಡು ಹದ ಮಳೆ ನಂಬಿ ಈರುಳ್ಳಿ ಬಿತ್ತಿದ್ದ ರೈತರು ಈಗ ಕಣ್ಣೀರು ಸುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಒಳ್ಳೆಯ ಬೆಲೆ ಇದೆ; ಆದರೆ, ಹೊಲದಲ್ಲಿ ಅಸಲು ತಂದುಕೊಡುವಷ್ಟು ಒಳ್ಳೆಯ ಬೆಳೆ ಇಲ್ಲ. ನೀರಾವರಿ ಸೌಲಭ್ಯ ಉಳ್ಳವರು ಮಾತ್ರ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ.

ಪೂರ್ಣ ಹಾನಿ
ಲಕ್ಯಾ ಹೋಬಳಿಯ ಗ್ರಾಮಗಳಲ್ಲಿ ರಾಗಿ, ಜೋಳ, ಉದ್ದು, ಅಲಸಂದೆ, ಶೇಂಗಾ ಇನ್ನಿತರ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣ ಹಾನಿಯಾಗಿವೆ. ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತವಾರು ಜಂಟಿ ಸಮೀಕ್ಷೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ.
-ಎಂ.ರಾಜು, ಜಿಲ್ಲಾ ಕೃಷಿ ಇಲಾಖೆ

ಎರಡೇ ದಿನ ಮಳೆ

ಮಾಚೇನಹಳ್ಳಿ, ಕುರುಬರಹಳ್ಳಿ, ಶಂಕರನಹಳ್ಳಿ, ನರಸಿಪುರ, ಕೆ.ಬಿ.ಹಾಳ್ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ವರ್ಷ ಮಳೆಯಾಗಿದ್ದು ಕೇವಲ ಎರಡೇ ದಿನ. ಜೂನ್ ಮೊದಲ ವಾರದಲ್ಲಿ ರೋಹಿಣಿ ಮಳೆ 2 ಸೆಂ.ಮೀ. ಸುರಿದರೆ, ಸೆಪ್ಟೆಂಬರ್ 4ರಂದು ಕೇವಲ 2 ಮಿ.ಮೀ. ಮಳೆ ಸುರಿದಿದೆ.

ಗುಟುಕು ನೀರಿಲ್ಲ

ಬರಗಾಲ ನಮ್ಮೂರನ್ನು ಬಿಡುವಂತೆ ಕಾಣುತ್ತಿಲ್ಲ. ಎರಡು ಮೂರು ವರ್ಷಗಳಿಂದಲೂ ಇದೇ ಪರಿಸ್ಥಿತಿ. ದನಕರುಗಳಿಗೂ ಗುಟುಕು ನೀರಿಲ್ಲ. ಊರಲ್ಲಿರೋ ಕೊಳವೆ ಬಾವಿಗಳೆಲ್ಲ ಬತ್ತಿ ಹೋಗಿವೆ. ಬಿತ್ತಿದ ಬೆಳೆಗಳೆಲ್ಲ ಒಣಗಿ ಹೋಗಿವೆ. ಮಾಚೇನಹಳ್ಳಿ ಕೆರೆ ತುಂಬಿದಾಗ ನಮಗೆ ಬರಗಾಲದಿಂದ ಮುಕ್ತಿ ಸಿಗಬಹುದೇನೋ.
- ಶಿವಲಿಂಗಮ್ಮಮಾಚೇನಹಳ್ಳಿ.

ಬರಪೀಡಿತ
ಲಕ್ಯಾ ಹೋಬಳಿಯಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಬರಗಾಲಕ್ಕೆ ತುತ್ತಾಗಿರುವ ಗ್ರಾಮಗಳಲ್ಲಿ ಗೋಶಾಲೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ.
-ರೇಖಾ ಹುಲಿಯಪ್ಪಗೌಡ ಜಿ.ಪಂ. ಅಧ್ಯಕ್ಷರು

ಸಾಲ ಮಾಡಿ ಕದ್ದು ತಿರುಗುವಂತಾಗಿದೆ

ಮೆಕ್ಕೆಜೋಳ, ರಾಗಿ, ಜೋಳ ಯಾವ ಬೆಳೆಯೂ ಕೈಗೆ ಬರುವಂತಿಲ್ಲ. ದನಕರುಗಳಿಗೆ ಮೇವು ಎಲ್ಲಿಂದ ತರುವುದು ಎನ್ನುವಂತಾಗಿದೆ. ಬೆಳೆ ಬೆಳೆಯುವ ಭರವಸೆಯಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು, ಈಗ ಕದ್ದು ತಿರುಗುವಂತಾಗಿದೆ.
- ಸೋಮಶೇಖರಪ್ಪ, ಮಾಚೇನಹಳ್ಳಿ ತಾಂಡ್ಯ

ಗೋಶಾಲೆ ತೆರೆಯಲಿ

ಎರೆಮಣ್ಣು ತಿನ್ನುವ ಹಸುಗಳು ಎಷ್ಟು ಹಾಲು ಕೊಡಬಹುದು? ಒಣಗಿ ಹೋಗಿರುವ ಕೆರೆಯಲ್ಲಿ ಕೊನೆ ಪಕ್ಷ ಇಡೀ ಹುಲ್ಲು ಹುಟ್ಟುತ್ತಿಲ್ಲ. ದನಕರುಗಳು ಜೀವ ಉಳಿಸಿಕೊಳ್ಳಲು ಎರೆಮಣ್ಣು ತಿನ್ನುತ್ತಿವೆ. ಕೆಚ್ಚಲಲ್ಲಿ ಹಾಲು ಹಿಂಡುತ್ತಿಲ್ಲ. ಹೈನುಗಾರಿಕೆಗೂ ಹೊಡೆತ ಬಿದ್ದಿದೆ. ಗ್ರಾಮಗಳಲ್ಲಿ ಗೋಶಾಲೆಗಳನ್ನಾದರೂ ತೆರೆದು ದನಕರುಗಳ ಜೀವ ಉಳಿಸಬೇಕು.
-ಪುಟ್ಟಲಕ್ಷ್ಮಮ್ಮ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT