ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನೀರು: ಹಿಡಿದದ್ದೆಷ್ಟು!

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

`ಎರಡು ವರ್ಷಗಳ ಹಿಂದೆ ವರ್ಷದಲ್ಲಿ ಆರು ತಿಂಗಳು ಮಾತ್ರ ನಮಗೆ ನೀರು ಪೂರೈಕೆಯಾಗುತ್ತಿತ್ತು. ನಮ್ಮ ಮನೆ ತುಸು ಎತ್ತರ ಪ್ರದೇಶದಲ್ಲಿರುವ ಕಾರಣ ಪಾಲಿಕೆಯ ನಲ್ಲಿಯಲ್ಲಿ ತೊಟ್ಟಿಕ್ಕುತ್ತಿದ್ದ ನೀರು ಮನೆಗೆ ಸಾಲದೆ ಪಕ್ಕದ ಬೀದಿಯಿಂದ ನೀರನ್ನು ಹೊತ್ತೊಯ್ಯಬೇಕಿತ್ತು. ಆದರೀಗ ಆ ಸ್ಥಿತಿ ದೂರವಾಗಿದೆ. ವರ್ಷಪೂರ್ತಿ ನೀರನ್ನು ಧಾರಾಳವಾಗಿ ಬಳಸುತ್ತೇವೆ. ಇದು ಸಾಧ್ಯವಾಗಿದ್ದು ಮಳೆ ನೀರು ಸಂಗ್ರಹದಿಂದ. ಟೆರೇಸ್ ಮೇಲೆ ಬಿದ್ದ ಮಳೆನೀರನ್ನು ಪೋಲಾಗಲು ಬಿಡದೆ ಸಂಗ್ರಹವಾಗುವಂತೆ ಮಾಡಿದರೆ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಕಾಡುವುದಿಲ್ಲ~ ಎನ್ನುತ್ತಾರೆ ಆಡುಗೋಡಿ ನಿವಾಸಿ ರಾಜೇಶ್.

`ಎಷ್ಟು ಬೋರ್‌ವೆಲ್‌ಗಳನ್ನು ಕೊರೆಸಿದರೂ ಅಪಾರ್ಟ್‌ಮೆಂಟ್ ಜನರಿಗೆ ಸಮರ್ಪಕ ರೀತಿಯಲ್ಲಿ ನೀರು ಪೂರೈಸಲಾಗುತ್ತಿರಲಿಲ್ಲ. ಈ ಸಮಸ್ಯೆಯಿಂದಾಗಿ ಪ್ರತಿದಿನವೂ ಬಾಡಿಗೆದಾರರ ಬಳಿ ಬೈಯಿಸಿಕೊಳ್ಳಬೇಕಿತ್ತು. ನೀರು ಇಂಗದೇ ಹೋದರೆ ಬೋರ್‌ವೆಲ್‌ನಿಂದ ನೀರಾದರೂ ಹೇಗೆ ಬರಬೇಕು. ಅದಕ್ಕಾಗಿ ನಾನು ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿದೆ. ಕಳೆದೊಂದು ವರ್ಷದಿಂದ ಅಲ್ಪ ಪ್ರಮಾಣದಲ್ಲಿ ನೀರಿನ ಅಭಾವ ತಗ್ಗಿದೆ~ ಎನ್ನುತ್ತಾ ಜಾಲಹಳ್ಳಿಯಲ್ಲಿರುವ ಪುಟ್ಟ ಅಪಾರ್ಟ್‌ಮೆಂಟ್ ಮಾಲೀಕ ದೇವರಾಜ್ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ದಿನೇದಿನೇ ಹೆಚ್ಚುತ್ತಿರುವ ನೀರಿನ ಬವಣೆಯನ್ನು ಮಳೆನೀರು ಸಂಗ್ರಹದಿಂದ ತುಸು ತಗ್ಗಿಸಬಹುದು ಎನ್ನುತ್ತಿದೆ ಬಿಬಿಎಂಪಿ. ಅದಕ್ಕಾಗಿ 40ಗಿ60 ಹಾಗೂ ಮೇಲ್ಪಟ್ಟ ವಿಸ್ತೀರ್ಣದ ನಿವೇಶನವುಳ್ಳವರು ಕಡ್ಡಾಯವಾಗಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲೇಬೇಕು.

ಇಲ್ಲದಿದ್ದರೆ ಮನೆಯ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದೆ. ಆದರೆ, ಅದೇಕೋ ನಗರದ ಜನತೆ ಮನಸ್ಸು ಮಾಡುತ್ತಿಲ್ಲ. ನಗರಿಗರಿಗೆ ದಿನಕ್ಕೆ 130 ಕೋಟಿ ಲೀಟರ್ ನೀರು ಪೂರೈಕೆಯಾಗಬೇಕು. ಸದ್ಯಕ್ಕೆ 95 ಕೋಟಿ ಲೀಟರ್ ನೀರು ಮಾತ್ರ ಸರಬರಾಜಾಗುತ್ತಿದೆ. ಈ ಕೊರತೆಯನ್ನು ಮಳೆ ನೀರು ಸಂಗ್ರಹದಿಂದ ನೀಗಿಸಬಹುದು ಎಂಬುದು ಬಿಬಿಎಂಪಿ ಲೆಕ್ಕಾಚಾರ.

ಹೀಗೆ ಅಳವಡಿಸಿಕೊಳ್ಳಿ...
ಮಳೆನೀರು ಸಂಗ್ರಹದ ಇಂಗುಗುಂಡಿಗಳನ್ನು ನಿರ್ಮಿಸುವ ಮುನ್ನ ಭೂವೈಜ್ಞಾನಿಕ ಮತ್ತು ಭೌಗೋಳಿಕವಾಗಿ ಸ್ಥಳವನ್ನು ಗುರುತಿಸಬೇಕು. ನಿರ್ಮಿಸುವ ಗುಂಡಿಗಳು ಮಳೆನೀರಿನ ಹರಿವಿಗೆ ಅಭಿಮುಖವಾಗಿರಬೇಕು.
 

ಥೀಮ್ ಪಾರ್ಕ್
ಮಳೆ ನೀರು ಸಂಗ್ರಹ ಮಾಡಲು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ಕಾಗಿ ದೇಶದಲ್ಲೇ ಮೊದಲಬಾರಿಗೆ ನಗರದ ಜಯನಗರದಲ್ಲಿ ಥೀಮ್ ಪಾರ್ಕ್ ರೂಪಿಸಲಾಗಿದೆ (ಮಾರ್ಚ್ 2011). ಇದರಲ್ಲಿ ಅಂತರ್ಜಲ ಮತ್ತು ಮಳೆನೀರು ಸಂಗ್ರಹದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದು.`ವಿವಿಧ ಶಾಲೆಯಿಂದ ಮಕ್ಕಳನ್ನು ಕರೆಸಿ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಇದುವರೆಗೂ 1364 ಪ್ಲಂಬರ್‌ಗಳಿಗೆ ತರಬೇತಿ ಸಹ ಕೊಡಲಾಗಿದೆ. ಆದರೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿಲ್ಲ. ನೀರು ಸಂಗ್ರಹದಲ್ಲಾಗುತ್ತಿರುವ ನೈಜ ತೊಡಕುಗಳನ್ನು ಜನರಿಗೆ ಸಮರ್ಪಕ ರೀತಿಯಲ್ಲಿ ತಿಳಿಸಲಾಗುತ್ತದೆ. ಇಲ್ಲಿ ಮಾಹಿತಿ ಪಡೆದ ಶೇ 90ರಷ್ಟು ಜನ ಮಳೆ ನೀರು ಸಂಗ್ರಹವನ್ನು ಅಳಡಿಸಿಕೊಂಡಿದ್ದಾರೆ~ ಎನ್ನುತ್ತಾರೆ ಮಂಜುನಾಥ್. ಥೀಮ್‌ಪಾರ್ಕ್ ಸಂಪರ್ಕ: 26653666.

ಗುಂಡಿಯ ತಳಭಾಗದಲ್ಲಿ ಅನುಕ್ರಮವಾಗಿ ಎರಡು ಅಡಿ ದಪ್ಪ ಕಲ್ಲುಗುಂಡು, ಎರಡು ಅಡಿ ಸಣ್ಣ ಜಲ್ಲಿ, ಒಂದು ಅಡಿ ಬಟಾಣಿ ಜಲ್ಲಿ ಮತ್ತು ಮೇಲ್ಭಾಗದಲ್ಲಿ ಒಂದು ಅಡಿ ಸಣ್ಣ ಮರಳನ್ನು ಹಾಕಬೇಕು. ಇಂತಹ ರಚನೆಯಡಿ ಮಳೆ ನೀರು ಸಂಗ್ರಹದ ಗುಂಡಿಗಳನ್ನು ನಿರ್ಮಿಸಿದರೆ ಭೂಜಲದ ಸೆಲೆಗೆ ಅಪಾರ ಮಳೆ ನೀರನ್ನು ಇಂಗಿಸಲು ಸಾಧ್ಯವಾಗುತ್ತದೆ.

`ಹಲವರು ನಮ್ಮ ಮನೆಗಳಲ್ಲಿ ಇಂಗುಗುಂಡಿ ತೋಡಲು ಸ್ಥಳವಿಲ್ಲ. ಕಟ್ಟಿರುವ ಮನೆಯನ್ನು ಮತ್ತೆ ಅಗೆಯಬೇಕೆ ಎಂದು ಹಿಂದೇಟು ಹಾಕುತ್ತಾರೆ. ಅದಕ್ಕೂ ಇಲ್ಲಿ ಪರಿಹಾರವಿದೆ. ಮನೆಯ ಸಂಪುಗಳನ್ನೇ ಈ ವ್ಯವಸ್ಥೆಗೆ ಬಳಸಿಕೊಳ್ಳಬಹುದು. ಸಂಪಿನಲ್ಲಿ ಅಳವಡಿಸಲೆಂದೇ ಫಿಲ್ಟರ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ಟೆರೇಸ್ ಮೇಲೆ ಬಿದ್ದ ನೀರು ಪೈಪ್ ಮೂಲಕ ಫಿಲ್ಟರ್‌ಗೆ ಬಂದು ಬೀಳುತ್ತದೆ. ಅಲ್ಲಿಂದ ಫಿಲ್ಟರಾಗಿ ಸಂಪನ್ನು ಸೇರುತ್ತದೆ. ಹೀಗೆ ನೀರನ್ನು ಕಮೋಡ್‌ಗಳ ಫ್ಲಶ್‌ಗೆ, ಗಿಡಗಳಿಗೆ, ವಾಹನ ತೊಳೆಯಲು ಬಳಸಿಕೊಳ್ಳಬಹುದು. ಟೆರೇಸನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಆಗ ಶುದ್ಧವಾದ ನೀರು ಸಂಗ್ರಹವಾಗುತ್ತದೆ. ಇದಕ್ಕೆ 15ರಿಂದ 20 ಸಾವಿರ ವೆಚ್ಚವಾಗುತ್ತದೆ~ ಎನ್ನುತ್ತಾರೆ ವಾಸ್ತುಶಿಲ್ಪಿ ಕೃಷ್ಣಕುಮಾರ್.


`ಜೀವ ಜಲವನ್ನು ನಾವೆಲ್ಲರೂ ಕಳೆದುಕೊಳ್ಳುತ್ತಿದ್ದೇವೆ. ಮನುಷ್ಯನ ಜೀವನಾಡಿಯಾಗಿರುವ ನೀರು ನಮ್ಮನ್ನು ಬಿಟ್ಟು ಹೋಗುವ ಕಾಲ ದೂರವಿಲ್ಲ. ಆಫೀಸು, ಮನೆ, ಅಪಾರ್ಟ್‌ಮೆಂಟ್, ಸರ್ಕಾರಿ ಕಚೇರಿಗಳೂ ಸೇರಿದಂತೆ 40ಗಿ60 ಅಳತೆಯುಳ್ಳ ನಿವೇಶನಗಳು ನಗರದಲ್ಲಿ ಸುಮಾರು 16 ಲಕ್ಷ ಇವೆ. ಇವೆಲ್ಲಕ್ಕೂ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿದರೆ ವರ್ಷದಲ್ಲಿ ನಗರದ ಶೇ 25ರಷ್ಟು ಮಂದಿಗೆ ನೀರುಣಿಸಬಹುದು. ಬಳಕೆಯಾಗಿದ್ದನ್ನು ಪುನರ್ಬಳಕೆ ಮಾಡದ ಹೊರತು ಇದಕ್ಕೆ ಪರಿಹಾರವಿಲ್ಲ~ ಎಂಬುದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾ ಮಂಡಳಿಯ ವಿಜ್ಞಾನಿ ಎ. ಆರ್. ಶಿವಕುಮಾರ್ ಹೇಳುವ ಕಿವಿಮಾತು.

ನಗರದಲ್ಲಿ ಕೇವಲ 42 ಸಾವಿರ ಮನೆಗಳು ಮಾತ್ರ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. 40ಗಿ60 ಅಳತೆಯ ಒಂದು ನಿವೇಶನದಲ್ಲಿ ವರ್ಷಕ್ಕೆ ಸುಮಾರು ಎರಡು ಲಕ್ಷದಿಂದ 2.2 ಲಕ್ಷ ಲೀಟರ್ ನೀರನ್ನು ಸಂಗ್ರಹಿಸಬಹುದು. ಈಗ ಅಳವಡಿಸಿಕೊಂಡಿರುವ ಮನೆಗಳಿಂದಲೇ ಇಡೀ ಬೆಂಗಳೂರಿಗೆ ಹತ್ತು ದಿನಗಳವರೆಗೆ ನೀರುಣಿಸಬಹುದು! ಆದರೆ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ. ಸಾಕಷ್ಟು ಪ್ರಚಾರದ ಅವಶ್ಯಕತೆ ಇದೆ.

`ನಾವು ದಿನನಿತ್ಯ ಮೊಬೈಲ್‌ನಲ್ಲಿ ಮಾತನಾಡುತ್ತೇವೆ. ಚಾರ್ಜ್ ಖಾಲಿಯಾದ ಬಳಿಕ ರೀಚಾರ್ಜ್ ಮಾಡುತ್ತೇವೆ. ಹಾಗೆಯೇ ನೀರನ್ನೂ ಮರುಬಳಕೆ ಮಾಡಿಕೊಂಡರೆ ಮಾತ್ರವೇ ನಮಗೆ ಅದು ಲಭಿಸುವುದು. ವ್ಯಯಿಸಿದರೆ ಮುಂದಿನ ಪೀಳಿಗೆಯ ಪಾಡೇನು~ ಎಂದು ಪ್ರಶ್ನಿಸುತ್ತಾರೆ ಥೀಮ್‌ಪಾರ್ಕ್‌ನ ಗುಣ ಆಶ್ವಾಸನೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್.

ಬೋರ್‌ವೆಲ್ ಕಾರಣ
ಬಿಬಿಎಂಪಿ ನಲ್ಲಿಯಿಂದ ಬರುವ ನೀರಿನ ಪಾಡನ್ನು ಅರಿತಿರುವ ನಗರಿಗರಲ್ಲಿ ಹಲವರು ತಮ್ಮ ಮನೆಗಳಿಗೆ ಸ್ವಂತ ಬೋರ್‌ವೆಲ್ ಅಳವಡಿಸಿಕೊಳ್ಳುತ್ತಾರೆ. ಯಾವುದೇ ಪರವಾನಗಿ ಇಲ್ಲದೆ ಪ್ರತಿ ಮನೆಗೂ ಒಂದೊಂದು ಬೋರ್‌ವೆಲ್ ಕೊರೆಸುವ ಪರಿಪಾಠ ಶುರುವಾಗಿದೆ. ಇದು ಅಂತರ್ಜಲ ಮಟ್ಟ ತಗ್ಗಲು ಪ್ರಮುಖ ಕಾರಣ. ಇದಕ್ಕೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ಜಲಮಂಡಳಿಯ ಮುಖ್ಯ ಎಂಜಿನಿಯರ್.

ಸ್ವಂತಕ್ಕೆ ಬೋರ್‌ವೆಲ್ ಕೊರೆಸಬೇಕೆಂದರೆ ಇನ್ನು ಮುಂದೆ ಸಂಬಂಧಪಟ್ಟ ಇಲಾಖೆಯ ಪರವಾನಗಿ ಪಡೆಯಬೇಕೆಂದು ಷರತ್ತುಬದ್ಧ ನಿಯಮ ರೂಪಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿದೆ. ಸರ್ಕಾರದ ಮುಂದೆ ಇದರ ಪ್ರಸ್ತಾಪ ಸಲ್ಲಿಸಲಾಗಿದೆ. ಅದು ಜಾರಿಯಾಗಬೇಕಿದೆಯಷ್ಟೆ ಎನ್ನುವ ಅವರು ಈ ಪ್ರಸ್ತಾಪಕ್ಕೆ ಅನುಮೋದನೆ ಸಿಗಬಹುದೆಂದು ಆಶಾವಾದಿಯಾಗಿದೆ.

ನಗರದೆಲ್ಲೆಡೆ ಹೆಚ್ಚುತ್ತಿರುವ ನೀರಿನ ಅಭಾವ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಈಚೆಗೆ ಚರ್ಚೆಗೆ ಗ್ರಾಸವಾಗಿರುವ ವಿಷಯ. ನೀರಿನ ಬವಣೆ ನೀಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೊಂಡ ಕಾವೇರಿ ನೀರು ಪೂರೈಕೆ ಯೋಜನೆಯ ಮುಂದಿನ ಹಂತ ಯಾವಾಗ ಜಾರಿಯಾಗುತ್ತದೆ ಎಂಬುದೂ ಈ ಚರ್ಚೆಯ ಒಂದು ಭಾಗ. ನಗರದಲ್ಲಿ ಕೊರೆದಿರುವ ಹಲವಾರು ಬೋರ್‌ವೆಲ್‌ಗಳೂ ಕೆಟ್ಟಿವೆ. ಆದರೆ, ದುರಸ್ತಿ ಕಾರ್ಯವನ್ನು ಯಾವ ಮಂಡಳಿ ಕೈಗೊಳ್ಳಬೇಕು ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ.

2010-11ರಲ್ಲಿ ಬಿಬಿಎಂಪಿ ಸುಮಾರು 1,375 ಬೋರ್‌ವೆಲ್ ಕೊರೆಸಿತ್ತು. 2011-12ರಲ್ಲಿ ನೀರು ಪೂರೈಕೆಗೆಂದು 77 ಕೋಟಿ ರೂ. ಹಣ ನೀಡಿದೆ. ಆದರೂ ಸಮರ್ಪಕ ನೀರು ಪೂರೈಕೆ ಮಾತ್ರ ಇಂದಿಗೂ ಸಾಧ್ಯವಾಗದೇ ಉಳಿದಿದೆ.

ಪರಿಸ್ಥಿತಿ ಹೀಗಿರುವಾಗ, ನಮ್ಮ ನಮ್ಮ ವಾಸಸ್ಥಳಗಳಿಗೆ ನಾವೇ ನೀರು ಪೂರೈಕೆಯ ಪರ್ಯಾಯ ವ್ಯವಸ್ಥೆಯತ್ತ ಚಿಂತನೆ ನಡೆಸಿದರೆ ಎಷ್ಟು ಚೆನ್ನ. ಏನಂತೀರಾ? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT