ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ; ಎಲ್ಲೆಡೆ ಶಿವನಾಮ ಸ್ಮರಣೆ

Last Updated 21 ಫೆಬ್ರುವರಿ 2012, 9:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗದ ಶಿವ ದೇವಾಲಯದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಸೋಮವಾರ ವಿಶೇಷ ಪೂಜೆ ನಡೆದವು.

ಎಲ್ಲೆಡೆ `ಓಂ ನಮಃ ಶಿವಾಯ~ ಮಂತ್ರ
ಬಾಳೆಹೊನ್ನೂರು: ಪಟ್ಟಣ ಹಾಗೂ ಹೋಬಳಿಯಾದ್ಯಂತ ಸೋಮವಾರ ಮಹಾಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದ್ದು, ಎಲ್ಲೆಡೆ `ಓಂ ನಮಃ ಶಿವಾಯ~ ಮಂತ್ರ ಘೋಷಗಳು ಮೊಳಗಿದವು.

ಶಿವರಾತ್ರಿ ಪ್ರಯುಕ್ತ ಸುತ್ತಮುತ್ತಲಿನ ಎಲ್ಲಾ ದೇವ ಸ್ಥಾನಗಳಲ್ಲಿ ವಿಶೇಷ ಪೂಜೆ, ಏಕದಶವಾರ ರುದ್ರಾಭಿಷೇಕ,  ರುದ್ರಹೋಮ ವಿಜೃಂಭಣೆಯಿಂದ ನಡೆದವು. ಇಲ್ಲಿನ  ಮಾರ್ಕಾಂಡೇಶ್ವರ, ರಂಭಾಪುರಿ ಪೀಠದ ವೀರಭದ್ರೇಶ್ವರ, ಹಾಗೂ ಪುರಾಣ ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರಗಳು ನಡೆದವು.   

ಪ್ರತೀ ವರ್ಷದಂತೆ ಈ ವರ್ಷವೂ ಶಿವನ ದೇವಾಲಯದ ಮುಂಭಾಗ ಅಕ್ಕಿ ಹಾಗೂ ಭತ್ತವನ್ನಿಟ್ಟು ಅದರ ಮೇಲೆ ಕುಂಬಳಕಾಯಿ ಕಡಿದು ಎಳ್ಳೆಣ್ಣೆ, ಎಳ್ಳು ಹಾಕಿ ದೀಪ ಹಚ್ಚಿ ಹರಕೆ, ಪ್ರಾರ್ಥನೆ ಸಲ್ಲಿಸಿದರು.

ಸಮೀಪದ ಇಟ್ಟಿಗೆ-ಸೀಗೋಡಿನ ಈಶ್ವರ ಸಪರಿವಾರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಜಾತ್ರಾ ಮಹೋತ್ಸವ, ಏಕದಶವಾರ ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ, ಶಿವಭಜನಾ, ಜಾಗರಣೆ, ಅಡ್ಡಪಲ್ಲಕ್ಕಿ ಉತ್ಸವ, ದೀಪಾ ರಾಧನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.

ಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ಭಕ್ತರ ಮಹಾ ಪೂರವೇ ಹರಿದಿತ್ತು. ಹಲವೆಡೆ ರಾತ್ರಿ ಶಿವರಾತ್ರಿ ಜಾಗರಣೆ ಆಚರಣೆಗೆ ಸಿದ್ಧತೆಗಳು ಭರದಿಂದ ನಡೆದವು. ಹೂ ಹಣ್ಣುಗಳ ಬೆಲೆಯೇರಿಕೆ ನಡುವೆಯೂ ಶಿವರಾತ್ರಿ ಸಂಭ್ರಮ ಕಳೆಗುಂದಿರಲಿಲ್ಲ.  

ಕೊಪ್ಪ: ಸಾಮೂಹಿಕ ರುದ್ರ ಪಠಣ
ಕೊಪ್ಪ:
ಮಹಾಶಿವರಾತ್ರಿಯನ್ನು ಸೋಮವಾರ ತಾಲ್ಲೂಕಿನ ಎಲ್ಲೆಡೆ ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ ನಡೆದವು.

ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಮೌಂಟ್ ಅಬುವಿನಿಂದ ಆಗಮಿಸಿದ್ದ  ಬ್ರಹ್ಮಕುಮಾರ ವಸಂತ ಈಶ್ವರಿ ಧ್ವಜಾರೋಹಣ ನೆರವೇರಿಸಿದರು. 
 

ನಂತರ ಅವರು ಮಾತನಾಡಿ ಜಗತ್ತಿನ ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕು ಹಾಗೂ ರಾಜಯೋಗದ ಶಕ್ತಿಯ ಮೂಲಕ ದೂರ ಮಾಡಲು ಶಿವ ಅವತರಿಸಿದ ನೆನಪಿಗಾಗಿ  ಆಚರಿಸುವ ಹಬ್ಬ ಮಹಾ ಶಿವರಾತ್ರಿ ಎಂದರು. ಈಶ್ವರಿ ಸಮಾಜದ ಬ್ರಹ್ಮ ಕುಮಾರಿ ಪುಷ್ಪಕ್ಕ  ಮಾತನಾಡಿ,  ತಾಲ್ಲೂಕಿನಲ್ಲಿ ಹೆಚ್ಚಿರುವ ರೈತ ಆತ್ಮಹತ್ಯೆ ತಡೆಗೆ  ಈಶ್ವರಿ ಕೇಂದ್ರದಲ್ಲಿ ನಿತ್ಯ ವಿಶೇಷ ಧ್ಯಾನ ಶಿಬಿರ ಏರ್ಪಡಿಸಲಾಗಿದ್ದು ಜಾತಿ ವರ್ಗ, ಮತ,ಲಿಂಗ ಬೇಧವಿಲ್ಲದೆ ಎಲ್ಲರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಪ್ರೇಮಾಶೆಟ್ಟಿ ಇದ್ದರು.

 ಚಿಟ್ಟೆಮಕ್ಕಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪುಷ್ಪಾಲಂಕಾರ, ಅಭಿಷೇಕ ನಡೆಯಿತು. ತಾಲ್ಲೂಕು ವಿಪ್ರ ನೌಕರರ ಸಂಘದ ಸದಸ್ಯರು ಸಾಮೂಹಿಕ ರುದ್ರ ಪಠಣ, ರುದ್ರಹೋಮ ನೆರವೇರಿಸಿದರು.

 ಹುಲುಮಕ್ಕಿ ಗುತ್ತಿಯಮ್ಮ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸಾರ್ವಜನಿಕ ಶಿವಲಿಂಗ ಸ್ಥಾಪಿಸಲಾಗಿತ್ತು. ಜಾತಿ ಲಿಂಗ ಭೇದವಿಲ್ಲದೆ ನೂರಾರು ಭಕ್ತರು ನೇರವಾಗಿ ಶಿವಲಿಂಗಾರ್ಚನೆ ನೆರವೇರಿಸಿದರು. ವೀರಭದ್ರಸ್ವಾಮಿ ದೇವಾಲಯ, ವಾಟರ್ ಟ್ಯಾಂಕ್ ಶಿವಾಲಯ, ಹುಲುಮಗೆಯ ನಾರಾಯಣಗುರು ಸಮಾ ಜದ ಶಿವಗುರು ಮಂದಿರದಲ್ಲಿ ವಿಶೇಷ ಪುಜೆ ನಡೆಯಿತು.

ಮಹಾಶಿವರಾತ್ರಿ ಆಚರಣೆ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಸೋಮವಾರ  ಶಿವರಾತ್ರಿಯನ್ನು ಭಕ್ತರು ಶದ್ಧಾ ಮತ್ತು ಭಕ್ತಿಯಿಂದ ಆಚರಿಸಿದರು.

ಇಲ್ಲಿನ ಪ್ರಮುಖ ಈಶ್ವರ ದೇವಲಾಯಗಳಾದ ಅಗ್ರಹಾರದ  ಉಮಾಮಹೇಶ್ವರ, ಹಳೇ ಮಂಡಗದ್ದೆ ಸರ್ಕಲ್‌ನಲ್ಲಿರುವ  ಈಶ್ವರ ದೇವಾಲಯ, ಮೆಣಸೂರು ಗ್ರಾಮದಲ್ಲಿರುವ  ಮಲ್ಲಿಕಾರ್ಜುನಸ್ವಾಮಿ ದೇವಾಲಯ, ಹೆಬ್ಬೆ ಭವಾನೀ ಶಂಕರ ದೇವಸ್ಥಾನ, ಹಾಗೂ ಆಡುವಳ್ಳಿ ಭವಾನೀಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT