ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್: ಟೂರ್ನಿಯಿಂದ ಹೊರಬಿದ್ದ ಭಾರತ

ಶ್ರೀಲಂಕಾ ತಂಡದವರ ಐತಿಹಾಸಿಕ ಸಾಧನೆ
Last Updated 5 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ತವರಿನಲ್ಲಿಯೇ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಬೇಕು ಎನ್ನುವ ಆತಿಥೇಯ ತಂಡದ ಕನಸು ಭಗ್ನಗೊಂಡಿದೆ. ಇದಕ್ಕೆ ಕಾರಣವಾಗಿದ್ದು ಶ್ರೀಲಂಕಾ ತಂಡದವರ ಆಮೋಘ ಆಟ. ಈ ಗೆಲುವಿನೊಂದಿಗೆ ಸಿಂಹಳೀಯರ ನಾಡಿನ ತಂಡವು ಭಾರತ ವಿರುದ್ಧ ಚೊಚ್ಚಲ ಗೆಲುವು ಪಡೆದು ಐತಿಹಾಸಿಕ ದಾಖಲೆ ಮಾಡಿತು.

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆರಿಸಿಕೊಂಡಿತು. ಈ ತಂಡ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 282 ರನ್‌ಗಳ ಸವಾಲಿನ ಗುರಿ ಪೇರಿಸಿಟ್ಟಿತು. ಬ್ಯಾಟಿಂಗ್‌ಗೆ ನೆರವು ನೀಡುವ ಈ ಪಿಚ್‌ನಲ್ಲಿ ಗುರಿ ಬೆನ್ನಟ್ಟುವುದು ಕಷ್ಟ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆ ಸುಳ್ಳಾಗಲಿಲ್ಲ. ಮಿಥಾಲಿ ರಾಜ್ ನೇತೃತ್ವದ ಭಾರತ 42.2 ಓವರ್‌ಗಲ್ಲಿ 144 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಭಾರತ ತಂಡದ ಹೋರಾಟ ಲೀಗ್ ಹಂತದಲ್ಲಿಯೇ ಅಂತ್ಯ ಕಂಡಿತು.

ನೆರವಾದ ಜೊತೆಯಾಟ: ಲಂಕಾ ತಂಡಕ್ಕೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣವಾಗಿದ್ದು ವೇಗಿ ಜೂಲನ್ ಗೋಸ್ವಾಮಿ. ಈ ಬೌಲರ್ ಮೊದಲ ಓವರ್‌ನ ಐದನೇ ಎಸೆತದಲ್ಲಿ ಚಾಮರಿ ಅಟಪಟ್ಟು ವಿಕೆಟ್ ಕೆಡವಿದರು. ಆದರೆ, ಇನ್ನೊಬ್ಬ ಆರಂಭಿಕ ಆಟಗಾರ್ತಿ ಯಶೋದಾ ಮೆಂಡಿಸ್ (55, 80ಎಸೆತ, 8 ಬೌಂಡರಿ) ಹಾಗೂ ದೀಪಿಕಾ ರಸಂಗಿಕಾ (84, 109ಎಸೆತ, 11 ಬೌಂಡರಿ) ಜೋಡಿ ಎರಡನೇ ವಿಕೆಟ್‌ಗೆ 116 ರನ್‌ಗಳನ್ನು ಕಲೆ ಹಾಕಿತು. ಇದರಿಂದ ಲಂಕಾ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ದೊಡ್ಡ ಮೊತ್ತದತ್ತ ಹೆಜ್ಜೆ ಹಾಕಿತು. ಇನಿಂಗ್ಸ್ ಅಂತ್ಯಗೊಳ್ಳಲು 19 ಎಸೆತಗಳು ಬಾಕಿ ಇದ್ದಾಗ ಲಂಕಾದ ಬ್ಯಾಟ್ಸ್‌ಮನ್‌ಗಳು 36 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು ಇನ್ನಷ್ಟು ಹಿಗ್ಗಿಸಿದರು.

ಈ ಮೊತ್ತವನ್ನು ಬೆನ್ನಟ್ಟಿದ ಆತಿಥೇಯರು ಆರಂಭದಿಂದಲೇ ಕಷ್ಟದ ಹಾದಿಯಲ್ಲಿ ಹೆಜ್ಜೆ ಹಾಕಿದರು. ತಂಡದ ಒಟ್ಟು ಮೊತ್ತ 100 ಆಗುವ ವೇಳೆಗಾಗಲೇ ಪ್ರಮುಖ ಐದು ವಿಕೆಟ್‌ಗಳನ್ನು ಉರುಳಿದ್ದವು. ಮಧ್ಯಮ ಕ್ರಮಾಂಕದ ಆಟಗಾರ್ತಿ ರೀಮಾ ಮಲ್ಹೋತ್ರಾ (38, 51ಎಸೆತ, 4 ಬೌಂಡರಿ) ಭಾರತ ತಂಡದ ಗೆಲುವಿನ ಆಸೆಗೆ ಬೆಂಬಲವಾಗಿ ನಿಂತಿದ್ದರು. ಆದರೆ, ರನ್ ಗಳಿಸಲು ಅವಸರಿಸಿ ರನ್ ಔಟ್ ಆದರು. ಆಗ ಭಾರತದ ಸೋಲು ಖಚಿತವಾಯಿತು.

ಐತಿಹಾಸಿಕ ದಾಖಲೆ: ಶ್ರೀಲಂಕಾ ತಂಡದವರು ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆಯೊಂದಕ್ಕೆ ಕಾರಣರಾದರು. ಎರಡೂ ತಂಡಗಳು ಹಿಂದೆ 17 ಸಲ ಮುಖಾಮುಖಿಯಾಗಿದ್ದವು. ಅದರಲ್ಲಿ 16 ಸಲ ಭಾರತವೇ ಗೆಲುವು ಸಾಧಿಸಿತ್ತು. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿರಲಿಲ್ಲ. ಆದ್ದರಿಂದ ಆತಿಥೇಯರು ಗೆಲುವು ಸಾಧಿಸುವ ನೆಚ್ಚಿನ ತಂಡ ಎನಿಸಿತ್ತು. ಆದರೆ, ಸ್ಥಳೀಯ ಅಭಿಮಾನಿಗಳಿಗೆ ನಿರಾಸೆ ತಪ್ಪಲಿಲ್ಲ.

ಮೂರು ಲೀಗ್ ಪಂದ್ಯಗಳನ್ನಾಡಿರುವ ಭಾರತ ಎರಡರಲ್ಲಿ ಸೋಲು ಕಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿದ್ದು ಮಾತ್ರ ಆತಿಥೇಯರ ಈ ಸಲದ ವಿಶ್ವಕಪ್‌ನಲ್ಲಿನ ಸಾಧನೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನೇ ಮಣಿಸಿದ್ದ ಲಂಕಾ ತನ್ನ ಸಾಮರ್ಥ್ಯ ಎನೆಂಬುದನ್ನು ಕೊನೆಗೂ ತೋರಿಸಿಕೊಟ್ಟಿತು. ಈ ತಂಡ ಒಟ್ಟು ನಾಲ್ಕು ಪಾಯಿಂಟ್‌ಗಳನ್ನು ಹೊಂದಿದೆ. ವಿಶ್ವಕಪ್ ಗೆಲ್ಲುವ ಆಸೆಯಂತೂ ಭಾರತದ ಪಾಲಿಗೆ ಇನ್ನು ಕನಸು ಮಾತ್ರ. ಆದ್ದರಿಂದ ಗುರುವಾರ ಏಳು ಹಾಗೂ ಎಂಟನೇ ಸ್ಥಾನವನ್ನು ನಿರ್ಧರಿಸಲು ಭಾರತ ತಂಡ ಪಾಕಿಸ್ತಾನದ ಎದುರು ಪೈಪೋಟಿ ನಡೆಸಲಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 282. (ಚಾಮರಿ ಅಟಪಟ್ಟು 4, ಯಶೋದಾ ಮೆಂಡಿಸ್ 55, ದೀಪಿಕಾ ರಸಂಗಿಕಾ 84, ಶಶಿಕಲಾ ಸಿರಿವರ್ಧನೆ 59, ಕೌಶಲ್ಯ ಔಟಾಗದೆ 56, ಶ್ರೀಪಾಲಿ ವೀರಾಕೊಬೆ 5, ಚಿಮಾನಿ ಸೇನಾವರತನೆ ಔಟಾಗದೆ 3; ಜೂಲನ್ ಗೋಸ್ವಾಮಿ 63ಕ್ಕೆ3, ಅಮಿತಾ ಶರ್ಮಾ 41ಕ್ಕೆ1); ಭಾರತ 42.2 ಓವರ್‌ಗಳಲ್ಲಿ 144. (ಪೂನಮ್ ರಾವತ್ 5, ಎಂ.ತಿರುಶ್ ಕಾಮಿನಿ 22, ಮಿಥಾಲಿ ರಾಜ್ 20, ಕರುಣಾ ಜೈನ್ 8, ರೀಮಾ ಮಲ್ಹೋತ್ರಾ 38, ಜೂಲನ್ ಗೋಸ್ವಾಮಿ 22, ಗೌಹಾರ್ ಸುಲ್ತಾನಾ ಔಟಾಗದೆ 12, ಏಕ್ತಾ ಬಿಸ್ತ್ 1, ಶುಭಲಕ್ಷ್ಮಿ ಶರ್ಮ 4; ಕೌಶಲ್ಯ 25ಕ್ಕೆ1, ಉದೇಶಿಕಾ ಪ್ರಭೋದಿನಿ 25ಕ್ಕೆ1, ಚಿಮಾನಿ ಸೇನಾವರತನೆ 10ಕ್ಕೆ2, ಶ್ರೀಪಾಲಿ ವೀರಾಕೊಬೆ 10ಕ್ಕೆ1, ಶಶಿಕಲಾ ಸಿರಿವರ್ಧನೆ 20ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 138 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ದೀಪಿಕಾ ರಸಂಗಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT