ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಂದ್ರಕುಮಾರ್ ವಿರುದ್ಧ ದಾಖಲಾಗದ ದೂರು- ಕ್ರೈಸ್ತ ಸಂಘಟನೆಗಳ ಆರೋಪ

Last Updated 2 ಫೆಬ್ರುವರಿ 2011, 18:55 IST
ಅಕ್ಷರ ಗಾತ್ರ

ಬೆಂಗಳೂರು: 2008ರಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದ ಸಂದರ್ಭ ಚಿಕ್ಕಮಗಳೂರಿನ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿಫಾರಸು ಮಾಡಿದ್ದರೂ ಭಜರಂಗದಳದ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ವಿರುದ್ಧ ಗೂಂಡಾ ಕಾಯ್ದೆಯಡಿ ದೂರು ದಾಖಲಾಗಿಲ್ಲ ಎಂದು ರಾಜ್ಯ ಕ್ರೈಸ್ತ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಅನಿಲ್ ಕುಲಾಸೊ ದೂರಿದ್ದಾರೆ.

ಚರ್ಚ್‌ಗಳ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಗೆ ನೇಮಕವಾಗಿದ್ದ ನ್ಯಾ.ಬಿ.ಕೆ. ಸೋಮಶೇಖರ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ‘ದಾಳಿ ಸಂಬಂಧ ಹಿಂದೂ ಮತ್ತು ಕ್ರೈಸ್ತ ಸಮುದಾಯದವರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಿರಿ’ ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.

ಹಿಂದೂ ಮತ್ತು ಕ್ರೈಸ್ತರಲ್ಲಿ ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ಈ ಶಿಫಾರಸು ಮಾಡಲಾಗಿತ್ತು. ಆದರೆ ಸರ್ಕಾರ ಮಹೇಂದ್ರ ಕುಮಾರ್ ಮೇಲಿರುವ ಪ್ರಕರಣಗಳನ್ನು ಮಾತ್ರ ಹಿಂಪಡೆದಿದೆ ಎಂದು ಕುಲಾಸೊ ಆರೋಪಿಸಿದ್ದಾರೆ.

ನ್ಯಾ. ಸೋಮಶೇಖರ ಆಯೋಗವು ಚರ್ಚ್ ದಾಳಿ ಕುರಿತ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಯೋಗಕ್ಕೆ ಪ್ರಮಾಣ ಪತ್ರವೊಂದನ್ನು ಸಲ್ಲಿಸಿದ್ದ ಕುಲಾಸೊ  ಮಹೇಂದ್ರ ಕುಮಾರ್ ವಿರುದ್ಧ ದೂರು ನೀಡಿದ್ದರು.

‘2008ರ ಆಗಸ್ಟ್ ತಿಂಗಳಲ್ಲಿ ಒಡಿಶಾದಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿ ರಾಜ್ಯದ ಎಲ್ಲ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಒಂದು ದಿನ ಬಂದ್ ಆಚರಿಸಿದ್ದವು. ಮಾರನೆಯ ದಿನ ಮಹೇಂದ್ರ ಕುಮಾರ್ ಕೊಪ್ಪದ ಸಂತ ಜೋಸೆಫ್ ಶಾಲೆಗೆ ತರಗತಿ ನಡೆಯುವಾಗ ಪ್ರವೇಶಿಸಿ ಇನ್ನು 15 ದಿನಗಳೊಳಗೆ ನಾನು ಯಾರೆಂದು ತೋರಿಸುತ್ತೇನೆ ಎಂದು ಹೇಳಿದ್ದರು’ ಎಂದು ಕುಲಾಸೊ ಅವರು ದೂರಿನಲ್ಲಿ ತಿಳಿಸಿದ್ದರು.

‘ಅವರು ಈ ರೀತಿ ಹೇಳಿದ ಸುಮಾರು 15 ದಿನಗಳಲ್ಲಿಯೇ ಮೂರು ಜಿಲ್ಲೆಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದಿತ್ತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಭಜರಂಗದಳದ ಕೋಮು ಪ್ರಚೋದನೆಯ ವಿರುದ್ಧ’ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಕ್ರೈಸ್ತ ಒಕ್ಕೂಟ ಮತ್ತು ಭಾವೈಕ್ಯತಾ ವೇದಿಕೆ ಕೊಪ್ಪದಲ್ಲಿ 2003ರ ಅಕ್ಟೋಬರ್ 7ರಂದು ಪ್ರತಿಭಟನಾ ಮೆರವಣಿಗೆ ಆಯೋಜಿಸಿತ್ತು.

ಮೆರವಣಿಗೆಯ ನಂತರ ಪ್ರತಿಭಟನಾಕಾರರು ಕೊಪ್ಪದ ತಹಸೀಲ್ದಾರ್ ಮೂಲಕ ಅಂದಿನ ಮುಖ್ಯಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದರು. ಮಹೇಂದ್ರ ಕುಮಾರ್ ಅವರು ಸಾರ್ವಜನಿಕ ಸಭೆಗಳಲ್ಲಿ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಅಸಭ್ಯವಾಗಿ ನಿಂದಿಸಿ, ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT