ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಮುತ್ತಿನ ಹಾರ ಕಟ್ಟಿದವರು...

Last Updated 16 ಜೂನ್ 2012, 19:30 IST
ಅಕ್ಷರ ಗಾತ್ರ

ಅದು 60ರ ದಶಕ. ಶಾಂತವೇರಿ ಗೋಪಾಲಗೌಡರು ಸೋಷಲಿಸ್ಟ್ ಪಕ್ಷದಿಂದ ವಿಧಾನಸಭೆಗೆ ಆರಿಸಿ ಬಂದಿದ್ದರು. ತಮ್ಮ ಉಗ್ರ ಭಾಷಣದಿಂದ ಸರ್ಕಾರಕ್ಕೆ ನಡುಕ ಹುಟ್ಟಿಸಿದ್ದರು.

1952ರಲ್ಲಿ ಆರಂಭವಾದ ಮೊದಲ ಅಧಿವೇಶನದಲ್ಲಿಯೇ ಅವರು ರಾಜಪ್ರಮುಖ ಜಯಚಾಮರಾಜೇಂದ್ರ ಒಡೆಯರ್ ಅವರ ಭಾಷಣದ ಪ್ರತಿಯನ್ನು ಸದನದಲ್ಲಿಯೇ ನೆಲಕ್ಕೆ ಹಾಕಿ ಒಂದಲ್ಲ, ಎರಡಲ್ಲ ಮೂರು ಸಾರಿ ತುಳಿದಿದ್ದರು. ಆ ತಪ್ಪಿಗಾಗಿ ಅವರನ್ನು ಸದನದಿಂದ ಅಮಾನತು ಮಾಡಲಾಗಿತ್ತು. 1962ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದ ಗೋಪಾಲಗೌಡರು ಸಚಿವರೊಬ್ಬರ ಹೇಳಿಕೆಯನ್ನು ಪ್ರತಿಭಟಿಸಿ ತಮ್ಮ ಮುಂದಿನ ಮೈಕ್ ಅನ್ನು ಕಿತ್ತು ಎಸೆದರು.

ಆಗಿನ ವಿಧಾನಸಭಾಧ್ಯಕ್ಷ ವೈಕುಂಠ ಬಾಳಿಗ ಶಿಸ್ತಿಗೆ ಹೆಸರಾದವರು. ತುಂಬ ಕಟ್ಟುನಿಟ್ಟಿನ ಮನುಷ್ಯ. ಗೋಪಾಲಗೌಡರನ್ನು ಸದನದಿಂದ 20 ದಿನಗಳ ಕಾಲ ಅಮಾನತು ಮಾಡಿದರು. ಗೋಪಾಲಗೌಡರು ಇಲ್ಲದೆ ಸದನ ಮಂಕಾಯಿತು. ಅವರೇನೋ ಸಿಟ್ಟಿನಿಂದ ಹಾಗೆ ಮಾಡಿದ್ದಾರೆ. ಮತ್ತೆ ಅವರನ್ನು ಸದನಕ್ಕೆ ಕರೆಸಿ ಎಂಬ ಆಗ್ರಹ ಹೆಚ್ಚಾಯಿತು.

ತೆರೆಮರೆಯ ಸಂಧಾನದ ನಂತರ ಗೋಪಾಲಗೌಡರು ಸದನಕ್ಕೆ ಬಂದರು. ವಿಷಾದ ವ್ಯಕ್ತಪಡಿಸಬೇಕು ಎಂದು ಅವರಿಗೆ ಷರತ್ತು ವಿಧಿಸಲಾಗಿತ್ತು. ಗೋಪಾಲಗೌಡರು ಸದನಕ್ಕೆ ಬಂದು `ಮಾನ್ಯ ಅಧ್ಯಕ್ಷರೇ~ ಎಂದು ತಮ್ಮ ಭಾಷಣ ಆರಂಭಿಸಿದರು. `ನನಗೆ ವಿಷಾದ ವ್ಯಕ್ತಪಡಿಸಲು ಸೂಚಿಸಿದ್ದೀರಿ.

ಆದರೆ, ನನಗೆ ಹಾಗೆ ಮಾಡಲು ನಿಜವಾಗಿಯೂ ಮನಸ್ಸು ಇಲ್ಲ. ತಮ್ಮ ಒತ್ತಾಯಕ್ಕೆ ಮಣಿದು, ಮತ್ತು ಸಂಸದೀಯ ವ್ಯವಸ್ಥೆಗೆ ಗೌರವ ಕೊಡಬೇಕು ಎಂದು ವಿಷಾದ ವ್ಯಕ್ತಪಡಿಸುತ್ತಿರುವೆ. ನಾನು ಅಂದು ನನ್ನ ಮುಂದಿನ ಮೈಕ್ ಅನ್ನು ಸಿಟ್ಟಿನಿಂದ ಕಿತ್ತು ಹಾಕಿದ್ದು ನಿಜ.

ಅಂದೇನಾದರೂ ಆ ಸಚಿವರು ನನ್ನ ಮುಂದೆ ಇದ್ದರೆ ಅವರ ಕತ್ತನ್ನೇ ಮುರಿದು ಹಾಕಿ ಬಿಡುತ್ತಿದ್ದೆ~ ಎಂದು ಹೇಳಿ ಕುಳಿತುಕೊಂಡರು. ಈ ಮನುಷ್ಯ ಸುಧಾರಿಸುವುದಿಲ್ಲ ಎಂದುಕೊಂಡರೇನೋ ಅಧ್ಯಕ್ಷರು. ಆದರೆ ಗೋಪಾಲಗೌಡ ಅಂಥ ಮನುಷ್ಯನೇ ಎಂದು ಎಲ್ಲರಿಗೂ ಗೊತ್ತಿತ್ತು.
*
ಜೆ.ಎಚ್.ಪಟೇಲರು ಮುಖ್ಯಮಂತ್ರಿ ಆಗಿದ್ದ ಕಾಲವದು. ಶಾಸಕ ಆಯನೂರು ಮಂಜುನಾಥ ತಮ್ಮ ಕ್ಷೇತ್ರದ ಸಮಸ್ಯೆ ಕುರಿತು ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಮುಖ್ಯಮಂತ್ರಿ ಸದನಕ್ಕೆ ಬಂದಿರಲಿಲ್ಲ. ಅವರು ಬಂದ ನಂತರ ತಾನು ಒಂಟಿಗಾಲಿನಲ್ಲಿ ನಿಂತು ಪ್ರತಿಭಟನೆ ಮಾಡುತ್ತೇನೆ ಎಂದು ಅವರು ಬೆದರಿಕೆ ಹಾಕಿದ್ದರು.
 
ಪಟೇಲರು ಸದನ ಪ್ರವೇಶಿಸುತ್ತಿದ್ದಂತೆಯೇ ಮಂಜುನಾಥ ಒಂಟಿಗಾಲಿನ ಮೇಲೆ ನಿಂತು ಪ್ರತಿಭಟನೆ ಶುರು ಮಾಡಿದರು. ಪಟೇಲರು ಯಾವುದರಿಂದಲೂ ವಿಚಲಿತರಾಗದ ಅದ್ಭುತ ಸಂಸದೀಯ ಪಟು. `

ಮಂಜಣ್ಣ ನೀನು ಇವೊತ್ತು ಒಂಟಿಗಾಲಿನ ಮೇಲೆ ನಿಂತು ಪ್ರತಿಭಟನೆ ಮಾಡುತ್ತಿ. ನಾಳೆ ನಿನಗೆ ಪತ್ರಿಕೆಗಳಲ್ಲಿ ಒಳ್ಳೆಯ ಪ್ರಚಾರವೂ ಸಿಗಬಹುದು. ಹಾಗೆಂದು ನಾಳೆ ಆ ಶಾಸಕಿ ಶೀರ್ಷಾಸನ ಹಾಕಿ ಪ್ರತಿಭಟನೆ ಮಾಡಿದರೆ ಸದನ ಏನು ಮಾಡಬೇಕು~ ಎಂದು ವಿರೋಧ ಪಕ್ಷದಲ್ಲಿ ಇದ್ದ ಬಿಜೆಪಿ ಶಾಸಕಿಯ ಹೆಸರನ್ನೂ ಹೇಳಿ ಕುಳಿತು ಬಿಟ್ಟರು! ಮಂಜುನಾಥ ಸಭಾಧ್ಯಕ್ಷರ ಅಂಗಳದಿಂದ ನಗುತ್ತ ತಮ್ಮ ಆಸನಕ್ಕೆ ಹೊರಟು ಹೋದರು. ಇಡೀ ಸದನ ನಗೆಯ ಕಡಲಲ್ಲಿ ಮುಳುಗಿತು, ಆ ಶಾಸಕಿಯೂ ಸೇರಿದಂತೆ. ತುಂಟತನಕ್ಕೆ ಪಟೇಲರು ಮತ್ತೊಂದು ಹೆಸರು.
*
1994-99ರ ಅವಧಿಯಲ್ಲಿ ರಮೇಶಕುಮಾರ್ ವಿಧಾನಸಭೆಯ ಅಧ್ಯಕ್ಷರು. ಅವರು ಒಬ್ಬ ಹೆಸರಾಂತ ಸಂಸದೀಯ ಪಟು. ಮಾತುಗಾರಿಕೆಯಲ್ಲಿ ಪಳಗಿದವರು. ಒಂದು ದಿನ ವಾಟಾಳ ನಾಗರಾಜ್ ಅವರಿಗೆ `ನೀವೇಕೆ ಮಹಿಳಾ ಆಯೋಗದ ಅಧ್ಯಕ್ಷರಾಗಬಾರದು~ ಎಂದು ಕೇಳಿದರು. ವಾಟಾಳರೇನೋ ಮಹಿಳೆಯರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಮಾತನಾಡಿದ್ದರು.
 
ಸಭಾಧ್ಯಕ್ಷರ ಸೂಚನೆಗೆ, ವಾಟಾಳರು, `ಆಗಬಹುದು ಅಧ್ಯಕ್ಷರೇ, ಆದರೆ ಆಯೋಗದಲ್ಲಿ ಎಷ್ಟು ಜನ ಮಹಿಳೆಯರು ಇರುತ್ತಾರೆ~ ಎಂದು ಕೇಳಿದರು. `ಒಂದಿಪ್ಪತ್ತು ಜನ ಇರುತ್ತಾರೆ~ ಎಂದರು ಅಧ್ಯಕ್ಷರು. `ಹಾಗಾದರೆ ಕಷ್ಟ ಅಧ್ಯಕ್ಷರೇ. ಮೂರು ನಾಲ್ಕು ಮಂದಿ ಸದಸ್ಯೆಯರು ಇದ್ದರೆ ಹೇಗೋ ನಿಭಾಯಿಸಬಹುದು~ ಎಂದು ವಾಟಾಳರು ಗೊಣಗಿದರು.
 
`ಇಂದು ಸದನದಲ್ಲಿ ಮುಖ್ಯಮಂತ್ರಿ ಪಟೇಲರು ಇಲ್ಲ. ನಾಳೆ ಅವರು ಬರುತ್ತಾರೆ. ಅವರ ಅಭಿಪ್ರಾಯ ಕೇಳೋಣ~ ಎಂದು ಅಧ್ಯಕ್ಷರು ಅಲ್ಲಿಗೆ ವಿಷಯ ಮುಗಿಸಿದರು. ಮರುದಿನ ಪಟೇಲರು ಸದನಕ್ಕೆ ಬಂದರು. ವಾಟಾಳರು ಸುಮ್ಮನೆ ಕುಳಿತುಕೊಳ್ಳದೇ `ಪಟೇಲರು ಸದನಕ್ಕೆ ಬಂದಿದ್ದಾರೆ.

ನೀವು ನನ್ನನ್ನು ಮಹಿಳಾ ಆಯೋಗದ ಅಧ್ಯಕ್ಷರಾಗಿ ಮಾಡುವ ಸಮಾಚಾರ ಎಲ್ಲಿಗೆ ಬಂತು~ ಎಂದು ಕಿಚಾಯಿಸಿದರು. ಸಭಾಧ್ಯಕ್ಷರು ಪಟೇಲರ ಸಲಹೆ ಕೇಳಿದರು. ಪಟೇಲರು, `ಮಾನ್ಯ ಅಧ್ಯಕ್ಷರೆ, ವಾಟಾಳರು ರಾಮನ ವಂಶಜರು. ನಾನು ಮತ್ತು ಎಚ್.ಎನ್.ನಂಜೇಗೌಡರು ಕೃಷ್ಣನ ವಂಶದವರು. ರಾಮಕೃಷ್ಣ ಹೆಗಡೆಯವರನ್ನು ಕೇಳಿಕೊಂಡು ಬಂದು ನಿಮಗೆ ಉತ್ತರ ಕೊಡುತ್ತೇನೆ~ ಎಂದು ಹೇಳಿ ಕುಳಿತುಕೊಂಡರು! ಸದನದಲ್ಲಿ ನಗೆಯ ಕಡಲು ಉಕ್ಕಿತು. ಪಟೇಲರ ಸಮಯಪ್ರಜ್ಞೆಗೆ ಬೆರಗುಪಟ್ಟಿತು.
*
ಎಚ್.ಡಿ.ದೇವೇಗೌಡರು ಪ್ರಧಾನಿಯಾದ ನಂತರ ಪಟೇಲರು ಮುಖ್ಯಮಂತ್ರಿಯಾದರು. ಕೆಲವು ಕಾಲದ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿತು. ದೇವೇಗೌಡರು ಸರ್ಕಾರವನ್ನು ಬೀಳಿಸುತ್ತಾರೆ ಎಂಬ ಸುದ್ದಿ ಹಬ್ಬಿತು. ಸದನದಲ್ಲಿ ಸದಸ್ಯರೊಬ್ಬರು `ಪಟೇಲರೇ, ಗೌಡರು ನಿಮ್ಮ ಸರ್ಕಾರವನ್ನು ಬೀಳಿಸುತ್ತಾರಂತರಲ್ಲ~ ಎಂದು ಕೇಳಿದರು. `

ನೋಡಿ ನನ್ನ ಮನೆ (ಅಶೋಕ ಹೋಟೇಲ್ ಬಳಿಯ ಕಾವೇರಿ) ಹತ್ತಿರ ದೆಹಲಿಯಿಂದ ರೈಲು ನಿತ್ಯವೂ ಹೋಗುತ್ತದೆ. ಆಗ ಧಡಧಡ ಸದ್ದು ಮಾಡುತ್ತದೆ. ಬರುವಾಗಲೂ ಸದ್ದು ಮಾಡುತ್ತದೆ. ಮನೆ ಹತ್ತಿರ ಒಂದಿಷ್ಟು ಗಡ ಗಡ ಸದ್ದಾಗುತ್ತದೆ. ಅಷ್ಟೆ. ನನ್ನ ಸರ್ಕಾರ ಬೀಳುವ ಬಗ್ಗೆ ನಿಮಗೆ ಚಿಂತೆ ಬೇಡ~ ಎಂದರು ಪಟೇಲರು.
*
ಕೋಲಾರದಲ್ಲಿ ವಿದ್ಯುತ್ ಇಲಾಖೆಯ ತಂತಿಗಳನ್ನು ಕದ್ದ ಪ್ರಸಂಗ ಸದನದಲ್ಲಿ ಪ್ರಸ್ತಾಪ ಆಗುತ್ತಿತ್ತು. ಪಟೇಲರೇ ಮುಖ್ಯಮಂತ್ರಿ. ತಂತಿ ಕದ್ದು ಸಿಕ್ಕಿ ಬಿದ್ದವನು ಯಾವನೋ ದಲಿತ ಲೈನ್‌ಮನ್. `ನೋಡಿ ದಲಿತ ತಂತಿ ಕದ್ದಿದ್ದಾನೆ. ಅವನು ಲಿಂಗಾಯತ ಆಗಿದ್ದರೆ ಟ್ರಾನ್ಸ್‌ಫಾರ್ಮರ್ ಕದ್ದಿರುತ್ತಿದ್ದ.

ಒಕ್ಕಲಿಗ ಆಗಿದ್ದರೆ ತಂತಿ ಮತ್ತು ಟ್ರಾನ್ಸ್‌ಫಾರ್ಮರ್ ಎರಡನ್ನೂ ಕದ್ದಿರುತ್ತಿದ್ದ. ಬ್ರಾಹ್ಮಣನಾಗಿದ್ದರೆ ಇಡೀ ಸ್ಟೇಷನ್‌ನನ್ನೇ ಕದ್ದಿರುತ್ತಿದ್ದ ಮತ್ತು ಆತ ಸಿಕ್ಕಿ ಬೀಳುತ್ತಿರಲಿಲ್ಲ. ಈತ ದಲಿತ ಪಾಪ. ಬರೀ ತಂತಿ ಕದ್ದು ಸಿಕ್ಕಿಬಿದ್ದಿದ್ದಾನೆ. ಅವನ ಮೇಲೆ ಕ್ರಮ ಕೈಗೊಂಡಿದ್ದೇವೆ.

ನೀವು ಈಗ ಕುಳಿತುಕೊಳ್ಳಿ~ ಎಂದು ಆ ಸದಸ್ಯರನ್ನು ಪಟೇಲರು ಕೂಡ್ರಿಸಿದರು. ಪಟೇಲರು ಮೂಲತಃ ಒಬ್ಬ ಸಮಾಜವಾದಿ. ಈ ಶ್ರೇಣೀಕೃತ ಸಮಾಜ ಹೇಗೆ ವರ್ತಿಸುತ್ತದೆ ಎಂಬುದಕ್ಕೆ ತಕ್ಷಣದ ಸಮಯಪ್ರಜ್ಞೆಯಿಂದ ಕೊಟ್ಟ ಉತ್ತರ ಸಾಕ್ಷಿಯಾಗಿತ್ತು.
*
1980ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲ. ಅವರು ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಆ ಸದಸ್ಯೆ ಮತ್ತೆ ಮತ್ತೆ ಉಪಪ್ರಶ್ನೆ ಕೇಳಿದರು. ಉತ್ತರ ಹೇಳಿ ಸುಸ್ತಾದ ಹೆಗಡೆ, `ನಾನು ಅವರನ್ನು ತೃಪ್ತಿಪಡಿಸಲಾರೆ~ ಎಂದು ಇಂಗ್ಲಿಷ್‌ನಲ್ಲಿ ಹೇಳಿ ಕುಳಿತುಕೊಂಡರು. ಸದಸ್ಯರೆಲ್ಲ `ಗೊಳ್~ಎಂದು ನಕ್ಕರು. ಹೆಗಡೆಯವರ ಮನಸ್ಸಿನಲ್ಲಿ ಖಂಡಿತ ದ್ವಂದ್ವ ಇರಲಿಲ್ಲ.
*
ಅದೇ ಕಾಲದಲ್ಲಿ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಕೆ.ಎನ್. ನಾಗೇಗೌಡ ಕೂಡ ಒಬ್ಬ ವಾಗ್ಮಿ. ಅವರು ಒಂದು ದಿನ, `ಅಧ್ಯಕ್ಷರೇ ಆಗಾಗ ಹೋಟೆಲ್ ಊಟ ಮಾಡಬೇಕು. ದಿನಾಲು ಮನೆ ಊಟ ಮಾಡುತ್ತಿದ್ದರೆ ಬೇಜಾರು~ ಎಂದರು. ಅವರ ಮಾತಿನಲ್ಲಿ ದ್ವಂದ್ವ ಇತ್ತೇ. ಇತ್ತು ಎಂದು ಕಾಣುತ್ತದೆ! 
*
ಸದನದ ಕಲಾಪವನ್ನು ವರದಿ ಮಾಡಿದವರಿಗೆ ಇಂಥ ನೆನಪುಗಳು ಒಂದು ಗಣಿ ಇದ್ದಂತೆ. 1990ರ ದಶಕದ ಕೊನೆ ಭಾಗದಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಅವಧಿ ಮುಗಿದ ನಂತರ ಇಂಥ ಸದನ ಸ್ವಾರಸ್ಯಗಳು ಕಡಿಮೆಯಾದುವು. ಪಟೇಲರ ಕಾಲದಲ್ಲಿ ಅವರೇ ಸ್ವತಃ ಒಬ್ಬ ದೊಡ್ಡ ವಾಗ್ಮಿಯಾಗಿದ್ದರು.
 
ಆಗ ಸಭಾಧ್ಯಕ್ಷರಾಗಿದ್ದ ರಮೇಶಕುಮಾರ್ ಇನ್ನೊಬ್ಬ ವಾಗ್ಮಿ. ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ ವಿರೋಧಿ ನಾಯಕರಾಗಿದ್ದರು. ಹಿಂದೆ ಕೈಕಟ್ಟಿಕೊಂಡು ಅವರು ಮಾತನಾಡಲು ನಿಂತರೆ ಅವರ ಅನುಭವವೆಲ್ಲ ಅವರ ನೆರವಿಗೆ ಬರುತ್ತಿತ್ತು. ಸಮಯಪ್ರಜ್ಞೆಯಲ್ಲಿ ಅವರೂ ಎತ್ತಿದ ಕೈ. ಒಂದು ಸಂದರ್ಭಕ್ಕೆ ಅವರ ಮನಸ್ಸಿನಲ್ಲಿಯೇ ಹುಟ್ಟಿಕೊಳ್ಳುತ್ತಿದ್ದ ಉತ್ತರ ಕಲಾಪದ ಸ್ವಾರಸ್ಯವನ್ನು ಹೆಚ್ಚಿಸುತ್ತಿತ್ತು.

ಸದನದ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿ.ಎಸ್.ಯಡಿಯೂರಪ್ಪ, ಎಚ್.ಎನ್.ನಂಜೇಗೌಡ, ವಾಟಾಳ ನಾಗರಾಜ್ ಇಂಥ ಘಟಾನುಘಟಿಗಳೂ ವಾಗ್ಮಿಗಳೇ ಆಗಿದ್ದರು. ಒಬ್ಬರು ಒಂದು ಸ್ವಾರಸ್ಯದ ಮಾತು ಹೇಳಿದರೆ ಇವರೆಲ್ಲ ಅದಕ್ಕೆ ಇನ್ನೊಂದನ್ನು ಸೇರಿಸುತ್ತಿದ್ದರು. ಮಾತಿನ ಒಂದು ಮುತ್ತಿನ ಹಾರ ಸಿದ್ಧವಾಗುತ್ತಿತ್ತು! ನಂತರದ ದಿನಗಳಲ್ಲಿ ಇಂಥ ವಾಗ್ಮಿಗಳ ಸಂಖ್ಯೆ ಕಡಿಮೆ ಆಗುತ್ತಾ ಹೋಯಿತು. ಅವರಲ್ಲಿ ಬಹುತೇಕರು ಆಯ್ಕೆಯೇ ಆಗಲಿಲ್ಲ. ಈ ಸಾರಿಯ ಅಧಿವೇಶನದಲ್ಲಿಯಂತೂ ಮಾತುಗಾರರು ಹೆಚ್ಚು ಇದ್ದಂತೆಯೇ ಕಾಣುವುದಿಲ್ಲ. ಇದ್ದರೆ ಇಂಥ ಸ್ವಾರಸ್ಯದ ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದುವು.

ಶಾಸನಸಭೆಗಳು ಮುಖ್ಯವಾಗಿ ಮಾತಿನ ಮನೆಗಳು. ಅಲ್ಲಿ ಮಾತಿಗೇ ಮಹತ್ವ. ಮಾತು ಮಹತ್ವ ಕಳೆದುಕೊಂಡಾಗ ಅಲ್ಲಿ ಜಗಳ, ಹೊಡೆದಾಟ ಇರುತ್ತದೆ. 2008ರಲ್ಲಿ ಆಯ್ಕೆಯಾದ ಸದಸ್ಯರಲ್ಲಿ ಮಾತಿನ ಮಹತ್ವ ಅರಿತವರು ಕಡಿಮೆ ಇದ್ದರು. ಅವರ ಗದ್ದಲದಲ್ಲಿ ಮಾತಿನ ಮಹತ್ವ ಅರಿತವರೂ ಕಳೆದು ಹೋದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸದನದಲ್ಲಿ ಗಲಾಟೆ ನಡೆದುದೇ ಹೆಚ್ಚು. ಕಲಾಪಕ್ಕೆ ಬಹಿಷ್ಕಾರ ನಡೆದುದು ಹೆಚ್ಚು.
 
ಇದು ಇಡೀ ಸಂಸದೀಯ ವ್ಯವಸ್ಥೆ ಅರ್ಥ ಮತ್ತು ಮಹತ್ವ ಕಳೆದುಕೊಳ್ಳುತ್ತಿರುವ ಒಂದು ಘಟ್ಟ. ಈ ಸಮಸ್ಯೆಗೆ ಅಭ್ಯರ್ಥಿಯ ಗೆಲುವಿನ ಸಾಮರ್ಥ್ಯ ಮಾತ್ರ ನೋಡಿ ಟಿಕೆಟ್ ಕೊಡುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದು ಮುಖ್ಯ ಕಾರಣ. ಇಲ್ಲವಾದರೆ ಗಣಿ ಉದ್ಯಮಿಗಳು ಸದನದ ಸದಸ್ಯರಾಗಲು ಸಾಧ್ಯವಾಗುತ್ತಿರಲಿಲ್ಲ.

ಚುನಾವಣೆಯಲ್ಲಿ ಹಣದ ಪಾತ್ರ ಹೆಚ್ಚುತ್ತಿರುವುದೂ ಈಗಿನ ಸಮಸ್ಯೆಗೆ ಇನ್ನೊಂದು ಕಾರಣ. ಜನರು ಮೊದಲು ಒಬ್ಬ ಅಭ್ಯರ್ಥಿಯ ವರ್ಚಸ್ಸು, ಘನತೆ ನೋಡಿ ಮತ ಹಾಕುತ್ತಿದ್ದರು. ಈಗ ಆತನ ಕೈಯಲ್ಲಿರುವ ಹಣ ನೋಡಿ ಮತ ಹಾಕುತ್ತಿದ್ದಾರೆ. ಹಾಗೆ ಆದಾಗ ಸದನದ ಕಲಾಪ ಮಟ್ಟ ಕೆಳಕ್ಕೆ ಇಳಿಯುತ್ತಾ ಹೋಗುತ್ತದೆ.

ಕರ್ನಾಟಕದ ವಿಧಾನಸಭೆಗೆ ಒಂದು ದೊಡ್ಡ ಇತಿಹಾಸ ಇದೆ. ಇಲ್ಲಿ ಅದ್ಬುತ ಮಾತುಗಾರರು ಆಗಿ ಹೋಗಿದ್ದಾರೆ. ಎ.ಕೆ.ಸುಬ್ಬಯ್ಯ ಒಂದು ಪ್ರಶ್ನೆ ಕೇಳಿದರೆ ಅವರು ಏನು ಉಪ ಪ್ರಶ್ನೆ ಕೇಳುತ್ತಾರೋ ಎಂದು ಆಗಿನ ನಗರಾಭಿವೃದ್ಧಿ ಸಚಿವ ಎಂ.ಚಂದ್ರಶೇಖರ್ ಹೆದರಿ ಎರಡು ಗಂಟೆ ಕಾಲ ಕುಳಿತು ತಯಾರಿ ಮಾಡಿಕೊಂಡಿದ್ದರು. ಅವರನ್ನು ಭೇಟಿ ಮಾಡಲು ಹೋದ ನನ್ನ ಸ್ನೇಹಿತರೊಬ್ಬರಿಗೆ `ನೀನು ಈಗ ಬರಬೇಡ.
 
ನಾನು ಸುಬ್ಬಯ್ಯ ಅವರ ಪ್ರಶ್ನೆಗೆ ಉತ್ತರ ಕೊಡಲು ಸಿದ್ಧನಾಗುತ್ತೇನೆ~ ಎಂದು ಅವರು ಹೇಳಿದ್ದರು. ಈಗ ಸದನದ ಲಾಬಿಯಲ್ಲಿ ತಮ್ಮ ಸಹಾಯಕ ಬಂದು `ಇಂದು ನೀವು ಇಂಥಿಂಥ ಪ್ರಶ್ನೆಗಳಿಗೆ ಉತ್ತರ ಕೊಡಬೇಕು~ ಎಂದು ಹೇಳಿದರೆ `ನಾನು ಮ್ಯಾನೇಜ್ ಮಾಡುತ್ತೇನೆ ಬಿಡು~ ಎಂದು ಸಚಿವರು ಹೇಳುವುದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಮ್ಯಾನೇಜ್ ಮಾಡುವುದು ಎಂದರೆ ಏನು?

ಕಳೆದ ಎಂಟು ಹತ್ತು ವರ್ಷಗಳಲ್ಲಿ ಸದನದ ಕಲಾಪದಲ್ಲಿ ಪಾಲುಗಾರಿಕೆ ಎಂಬುದೂ ಕಡಿಮೆಯಾಗಿದೆ. ರಮೇಶಕುಮಾರ್ ಅವರು ಅಧ್ಯಕ್ಷರಾಗಿದ್ದಾಗ ಈ ಪಾಲುಗಾರಿಕೆ ಎಷ್ಟು ಮುಖ್ಯ ಎಂದು ಅವರು ಅರಿತುಕೊಂಡಿದ್ದರು. ಎಲ್ಲ 225 ಸದಸ್ಯರ ಹೆಸರುಗಳು ಅವರಿಗೆ ನೆನಪು ಇದ್ದುವು. ಯಾರು ಪ್ರಶ್ನೆ ಕೇಳಿಲ್ಲ, ಯಾರು ಕಲಾಪದಲ್ಲಿ ಪಾಲುಗೊಂಡಿಲ್ಲ ಎಂದು ಅವರಿಗೆ ಗೊತ್ತಾಗುತ್ತಿತ್ತು.

ಅವರ ಹೆಸರು ಕರೆದು ಪಾಲುಗೊಳ್ಳಲು ಹುರಿದುಂಬಿಸುತ್ತಿದ್ದರು. ಇದನ್ನು ಎಲ್ಲ ಪಕ್ಷಗಳ ಮುಖಂಡರೂ ಮಾಡಬೇಕು. ತಮ್ಮ ಪಕ್ಷದಿಂದ ಆಯ್ಕೆಯಾದ ಹೊಸ ಸದಸ್ಯರಿಗೆ ಮಾತನಾಡಲು ಅವಕಾಶ ಕೊಡಬೇಕು. ಐದು ವರ್ಷಗಳ ಅವಧಿಯಲ್ಲಿ ಆತ / ಆಕೆ ಒಬ್ಬ ಒಳ್ಳೆಯ ಮಾತುಗಾರರಾಗಿ ರೂಪುಗೊಳ್ಳಬಹುದು. ಈಗ ಮಾತುಗಾರರು ಎನಿಸಿರುವ ಎಲ್ಲರೂ ಹುಟ್ಟುತ್ತಲೇ ಮಾತುಗಾರರು ಎನಿಸಿದವರಲ್ಲವಲ್ಲ.

ಅವರೂ ಹೀಗೆಯೇ ಅವಕಾಶಗಳನ್ನು ಬಳಸಿಕೊಂಡರು. ಇಡೀ ಕಲಾಪದಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳಲು ಹೊಸ ಶಾಸಕರು ಮೊದಲು ಕಲಿಯಬೇಕು. ಆ ಅನುಭವವೇ ಅವರನ್ನು ಉತ್ತಮ ಶಾಸಕರಾಗಿ ರೂಪಿಸುತ್ತದೆ. ಎ.ಕೆ.ಸುಬ್ಬಯ್ಯ, ಮಲ್ಲಿಕಾರ್ಜುನ ಖರ್ಗೆ, ವಾಟಾಳ ನಾಗರಾಜ, ಯಡಿಯೂರಪ್ಪ, ಎಂ.ಪಿ.ಪ್ರಕಾಶ್, ಪಿ.ಜಿ.ಆರ್ ಸಿಂಧ್ಯ ಮುಂತಾದವರೆಲ್ಲ ಹೀಗೆ ಪಟ್ಟಾಗಿ ಇಡೀ ಕಲಾಪದಲ್ಲಿ ಕುಳಿತುಕೊಳ್ಳುತ್ತಿದ್ದರು.

ಮಾತುಗಾರಿಕೆ ಜತೆಗೆ ಉತ್ತಮ ಸಂಸದೀಯ ನಡವಳಿಕೆಯನ್ನು ಗುರುತಿಸಿ ಗೌರವಿಸುವ ರೂಢಿಯನ್ನೂ ಸದನ ಮಾಡಬೇಕು. ಲೋಕಸಭೆಯಲ್ಲಿ ಅತ್ಯುತ್ತಮ ಸಂಸದೀಯ ಪಟುವನ್ನು ಗುರುತಿಸಿ ಗೌರವಿಸಲಾಗುತ್ತದೆ. ಶಾಸನಸಭೆಯಲ್ಲಿ ಮಾದರಿಯಾಗಿ ನಡೆದುಕೊಳ್ಳಲು ಇದು ಯುವ ಪೀಳಿಗೆಯ ಶಾಸಕರಿಗೆ ಒಂದು ಪ್ರೇರಣೆಯನ್ನೂ ಒದಗಿಸುತ್ತದೆ. ಹಳೆಯದೆಲ್ಲ ಚೆನ್ನಾಗಿತ್ತು ಎಂಬುದು ಒಂದು ಹಳವಂಡ.
 
ಹೊಸ ಕಾಲದಲ್ಲಿ ಭರವಸೆ ಇಟ್ಟುಕೊಳ್ಳಬೇಕಾದುದು ಭವಿಷ್ಯದ ದೃಷ್ಟಿಯಿಂದ ಅಗತ್ಯ. ಕರ್ನಾಟಕದ ವಿಧಾನಮಂಡಲ ವಜ್ರಮಹೋತ್ಸವ ಆಚರಿಸುವ ಈ ಗಳಿಗೆಯಲ್ಲಿ ಸದನ ಮತ್ತೆ ಮಾತಿನ ಮಂಟಪವಾಗಿ ವಿಜೃಂಭಿಸಲಿ ಎಂದು ಆಶಿಸುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT