ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿಲ್ಲದವರ ನೃತ್ಯನುಡಿ!

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಾಯ್, ಪುಟ್ಟಿ... ವಾಟ್ ಈಸ್ ಯುವರ್ ನೇಮ್?

`ನಂದಿನಿ~

ವಿಚ್ ಕ್ಲಾಸ್?

`ಏಟ್ತ್~

ನೌ ವಾಟ್ ವಿಲ್ ಯು ಡೂ ಆನ್ ಸ್ಟೇಜ್?

`ಡ್ಯಾನ್ಸ್ ಅಂಡ್ ಸ್ಪೀಚ್~

ಹೀಗೆ ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಿಸಿದ್ದು ನಮ್ಮ ನಿಮ್ಮಂತೆ ಎಲ್ಲಾ ಅಂಗಗಳೂ ಸರಿ ಇರುವ ಮಗುವಲ್ಲ. ಕಿವಿ ಕೇಳದ ಪುಟ್ಟ ಬಾಲೆ!

ಎದುರಿಗಿದ್ದವರ ಬಾಯಿ ಚಲನೆಯಿಂದಲೇ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲ ಚಾಕಚಕ್ಯತೆ ಆ ಮಕ್ಕಳಲ್ಲಿ. ಜೊತೆಗೊಂದಿಷ್ಟು ಆತ್ಮವಿಶ್ವಾಸದ ನಗು. ನಗುವನ್ನೇ ಮರೆತು ಮಾಲ್‌ಗೆ ಬಂದವರಿಗೂ ಸಾಲಕೊಡುವಂತೆ ಬಿಂಬಿತವಾಗುತ್ತಿತ್ತು ಮಕ್ಕಳ ನಗು.

ಅಂದು ಸಂಜೆ ಫೋರಂ ವ್ಯಾಲ್ಯೂ ಮಾಲ್ ಮುಗ್ಧ ಮಕ್ಕಳ ತುಂಟಾಟಗಳಿಗೆ ಸಾಕ್ಷಿಯಾಗಿತ್ತು. ರೋಟರಿ ಕ್ಲಬ್ ಸಹಯೋಗದೊಂದಿಗೆ ಮಾಲ್ ಹಮ್ಮಿಕೊಂಡಿದ್ದ `ಅಂತರ ಶಾಲಾ ಚರ್ಚಾಕೂಟ~ದಲ್ಲಿ ಭಾಗವಹಿಸಲು ಬಂದಿದ್ದ ಮಕ್ಕಳವರು.

ನಾವೂ ನಿಮ್ಮಂತೆಯೇ, ಅಂದುಕೊಂಡದ್ದನ್ನು ಸಾಧಿಸ ಹೊರಟಿರುವ ಮಕ್ಕಳು, ನಮಗೊಂದಿಷ್ಟು ಸಮಯ ಬೇಕಷ್ಟೆ. ಎಲ್ಲರ ಸಹಕಾರ, ಪ್ರೋತ್ಸಾಹ ಇದ್ದರಷ್ಟೆ ಸಾಕು- ಆ ಮಕ್ಕಳ ಮುಖದಲ್ಲಿ ಇಂಥ ಹಲವು ಭಾವಗಳು ಅಡಗಿದ್ದವು.

ಕಣ್ಣು ಕಾಣಿಸುತ್ತೆ, ಧ್ವನಿಯೂ ಇದೆ. ಆದರೆ ಕಿವಿ ಮಾತ್ರ ಕೇಳುವುದಿಲ್ಲ. ಒಂದರ ವಿಕಲತೆಯ ಪರಿಣಾಮ ಎರಡನೇ ವಿಕಲತೆಯೂ ಅಂಟಿಕೊಂಡಿದೆ. (ಕಿವಿ ಕೇಳದಿದ್ದರೆ ಭಾಷೆ ಅರ್ಥವಾಗದು, ಮಾತು ಬಾರದು)

ನೃತ್ಯದ ಮೂಲಕ ಹೆಣ್ಣಿನ ಶೋಷಣೆ ಬಗ್ಗೆ ಮನಮುಟ್ಟುವಂತೆ ತಲುಪಿಸಿದರು. ಭಾಷಣದಲ್ಲಿ ಅವರಾಡುವ ಭಾಷೆ ಅರ್ಥವಾಗದಿದ್ದರೂ ನೆರೆದವರ ಕರತಾಡನ ಮಾತ್ರ ಮಾಲ್ ತುಂಬಾ ಹರಡಿತ್ತು. ಟೀಚರ್ ಹೇಳಿದ್ದನ್ನು ಚಕಾರವೆತ್ತದೆ ಪಾಲಿಸುತ್ತಾ ತುಂಟ ನಗೆ ಬೀರುತ್ತಿದ್ದವು.  

ಮಾಲ್‌ನಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೇ ಮೊದಲು. ನಮ್ಮ ಮಕ್ಕಳಿಗೆ ಪ್ರತಿಭೆ ಹೊರಹಾಕಲು ಒಳ್ಳೆಯ ಅವಕಾಶವಿದು ಎನ್ನುವ ಗ್ರಾಂಟಿನೇಟ್ ಸ್ಕೂಲ್ ಪ್ರಾಂಶುಪಾಲರಾದ ಜೆಸ್ಸಿ ಸ್ಯಾಮ್ಯುಯಲ್ `ವಿಶೇಷ ಮಕ್ಕಳಿಗೆ ಒಂದು ಪದ ಅರ್ಥಪಡಿಸಲು ವಾರಗಟ್ಟಲೆ ಸಮಯ ಬೇಡುತ್ತದೆ. ಪಾಠ ಹೇಳಿಕೊಡುವವರಿಗೆ ತಾಳ್ಮೆ ಇದ್ದರೆ ಮಾತ್ರ ಕಲಿಸಲು ಸಾಧ್ಯ. ಆ ತಾಳ್ಮೆಯನ್ನು ಕಳೆದುಕೊಳ್ಳದೆ ಹಲವಾರು ಮಕ್ಕಳಿಗೆ ಈಗಾಗಲೇ ಸಮಾಜದ ಪರಿಚಯ ಮಾಡಿಸ್ದ್ದಿದೇವೆ. ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ~ ಎನ್ನುವಾಗ ಸಾರ್ಥಕ್ಯ ಭಾವ.   

ನಟಿ, ರಂಗಭೂಮಿ ಕಲಾವಿದೆ ಪದ್ಮಾವತಿ ರಾವ್ ಮಕ್ಕಳ ತುಂಟಾಟಗಳನ್ನು ಮುಗ್ಧತೆಯಿಂದಲೇ ಕುಳಿತು ನೋಡುತ್ತಿದ್ದರು. `ಸಾಮಾನ್ಯವಾಗಿ ನಾನು ಮಾಲ್‌ಗಳಿಗೆ ಹೋಗುವುದಿಲ್ಲ. ನಿಮ್ಮ ತುಂಟಾಟ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ನಿಮ್ಮ ಕಂಗಳಲ್ಲಿ ಸಮಾಜದ ಮುಂದಿನ ಭವಿಷ್ಯ ಅಡಗಿದೆ. ಆ ಭವಿಷ್ಯ ಉಜ್ವಲವಾಗಿರಲಿ~ ಎಂದು ಮಕ್ಕಳಿಗೆ ಹಾರೈಸಿದರು.

ಪೋಷಕರೂ ತಮ್ಮ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ನೃತ್ಯ, ಸಂಗೀತ ಎಲ್ಲದರಲ್ಲೂ ತೊಡಗಿಕೊಳ್ಳುವಂತೆ ಮಾಡಬೇಕು ಆಗ ಮಕ್ಕಳಲ್ಲಿನ ಏಕತಾನತೆ ದೂರವಾಗುತ್ತದೆಂದು ಕಿವಿಮಾತು ಹೇಳಿದರು.

ಶಾಲಾ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು  ಏರ್ಪಡಿಸಲಾಗಿದ್ದ ಚರ್ಚಾಕೂಟದಲ್ಲಿ ಅನೇಕ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ಪುರಸ್ಕಾರಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT